ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಅರ್ಥಪಂಚಕಮ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ತತ್ತ್ವ ತ್ರಯಮ್

 

ಪರಮ ಪ್ರಾಪ್ಯನಾದ ಭಗವಂತನು ಆರು ರೂಪಗಳನ್ನು ತಾಳುತ್ತಾನೆ. ಅವೇ ಪರತ್ತ್ವ (ಪರಮಪದದಲ್ಲಿ), ವ್ಯೂಹ (ಕ್ಷೀರಾಬ್ಧಿಯಲ್ಲಿ), ವಿಭವ (ಅವತಾರಗಳು), ಅಂತರ್ಯಾಮಿ (ಎಲ್ಲರಲ್ಲಿಯೂ ಇರುವವನು), ಅರ್ಚಾವತಾರ (ದೇವಸ್ಥಾನಗಳಲ್ಲಿ, ಮಠಗಳಲ್ಲಿ ಮತ್ತು ಮನೆಗಳಲ್ಲಿರುವ ರೂಪಗಳು), ಮತ್ತು ಆಚಾರ್ಯನೆಂಬ ಈ ಆರು ರೂಪಗಳು.

ಮಿಕ್ಕವಿರೈನಿಲೈಯುಂ ಮೆಯ್ಯಾಮ್ ಉಯಿರ್ ನಿಲೈಯುಂ

ತಕ್ಕ ನೆರಿಯುಂ ತಡೈಯಾಗಿತ್ತೊಕ್ಕಿಯಲುಂ ಊೞ್ವಿನೈಯುಂ

ವಾೞ್ವಿನೈಯುಮ್ ಓದುಮ್

ಕುರುಕೈಯರ್ಕೋನ್ ಯಾೞಿನ್ ಇಶೈ ವೇದತ್ತಿಯಲ್

  • ತಿರುವಾಯ್ಮೊೞಿಗೆ ಶ್ರೀ ಪರಾಶರಭಟ್ಟರು ಅನುಗ್ರಹಿಸಿರುವ ತನಿಯನ್

ಅರ್ಥ ತಾತ್ಪರ್ಯ: ಆಳ್ವಾರ್  ತಿರುನಗರಿ-ವಾಸಿಗಳ ದೊರೆಯಾದ ನಮ್ಆಳ್ವಾರ್ ಅನುಗ್ರಹಿಸಿರುವ ವೀಣಾನಾದದಂತೆ ಸುಮಧುರವಾಗಿರುವ ತಿರುವಾಯ್ಮೊೞಿಯು ಐದು ವಿಷಯಗಳ ಬಗೆಗೆ ವಿವರ ನೀಡುತ್ತದೆ. ಅವೇ – ಪರಮಾತ್ಮ ಸ್ವರೂಪ, ಜೀವಾತ್ಮ ಸ್ವರೂಪ, ಉಪಾಯ ಸ್ವರೂಪ, ವಿರೋಧಿ ಸ್ವರೂಪ ಮತ್ತು ಫಲ ಸ್ವರೂಪ.

ಅರ್ಥಪಂಚಕವೆಂದರೆ ಅವಶ್ಯಕವಾಗಿ ನಾವು ತಿಳಿಯಲೇಬೇಕಾದ ಐದು ವಿಷಯಗಳು. ಪಿಳ್ಳೈಲೋಕಾಚಾರ್ಯರು ಈ ಐದು ವಿಷಯಗಳ ಬಗೆಗಿನ ವಿವರಗಳನ್ನು ನಮಗೆ ’ಅರ್ಥಪಂಚಕ’ವೆಂಬ ರಹಸ್ಯಗ್ರಂಥದ ಮೂಲಕ ಅನುಗ್ರಹಿಸಿದ್ದಾರೆ. ಈ ಅಂಕಣವು ಆ ದಿವ್ಯಗ್ರಂಥದ ಆಧಾರದಲ್ಲಿ ಬರೆಯಲ್ಪಟ್ಟಿದೆ.

ಈ ಗ್ರಂಥದ ಕೆಲವು ಮುಖ್ಯಾಂಶಗಳನ್ನೀಗ ನೋಡೋಣ:

  • ಜೀವಾತ್ಮಾ – ಇದನ್ನೂ ಐದು ವಿಧಗಳಾಗಿ ವಿಂಗಡಿಸಬಹುದಾಗಿದೆ:
    • ನಿತ್ಯಸೂರಿಗಳು – ಸಂಸಾರ ಸಂಬಂಧಲೇಶವೂ ಇಲ್ಲದೆ ನಿತ್ಯವೂ ಶ್ರೀವೈಕುಂಠವಾದ ಪರಮಪದದಲ್ಲಿ ವಾಸಿಸುವವರು
    • ಮುಕ್ತಾತ್ಮಾಗಳು – ಹಿಂದೊಮ್ಮೆ ಈ ಸಂಸಾರದಲ್ಲಿದ್ದುಕೊಂಡು ಈಗ ಪರಮಪದವನ್ನು ಹೊಂದಿರುವವರು
    • ಬದ್ಧಾತ್ಮಾಗಳು – ಇನ್ನೂ ಈ ಸಂಸಾರ ಮಂಡಲದಲ್ಲೇ ಬಂಧಿಸಲ್ಪಟ್ಟವರು
    • ಕೇವಲರು – ಕೈವಲ್ಯವೆಂಬ ಮೋಕ್ಷವನ್ನು ಹೊಂದಿದವರು; ಸಂಸಾರವನ್ನು ಸಂಪೂರ್ಣವಾಗಿ ಬಿಸುಟು, ಅನಂತಕಾಲದವರೆಗೂ ತನ್ನನ್ನು ತಾನೇ ಅನುಭವಿಸುತ್ತ, ಭಗವಂತನ ಸೇವೆಗೆ ಆಸ್ಪದವೇ ಇಲ್ಲದಂತಿರುವವರು. ಈ ಸ್ಥಿತಿಯನ್ನು ಭಗವತ್ಕೈಂಕರ್ಯಕ್ಕಿಂತ ಕೆಳಮಟ್ಟದ್ದೆಂದು ಗುರುತಿಸಲಾಗಿದೆ.
    • ಮುಮುಕ್ಷುಗಳು – ಇನ್ನೂ ಸಂಸಾರಮಂಡಲದಲ್ಲೇ ಇದ್ದು, ಭಗವಂತನ ನಿತ್ಯಕೈಂಕರ್ಯಕ್ಕೆ (ಪರಮಪದದಲ್ಲಿ) ಹಂಬಲಿಸುತ್ತಿರುವವರು.
  • ಪರಬ್ರಹ್ಮ (ಪರಮಾತ್ಮಾ) – ಭಗವಂತನ ಐದು ನೆಲೆಗಳನ್ನು ಇಲ್ಲಿ ವಿವರಿಸಲಾಗಿದೆ:
    • ಪರತ್ವ – ಪರಮಪದದಲ್ಲಿರುವ ಭಗವಂತನ ಅತ್ಯಂತ ದೊಡ್ಡ ರೂಪ/ ಸರ್ವೋಚ್ಚ ನೆಲೆ.
    • ವ್ಯೂಹ – ಕ್ಷೀರಾಬ್ಧಿಯಲ್ಲಿರುವ ಭಗವಂತನ ನೆಲೆ; ಪ್ರದ್ಯುಮ್ನ, ಅನಿರುದ್ಧ, ಸಂಕರ್ಷಣರೆಂಬ ರೂಪದಲ್ಲಿ ಕ್ರಮಶಃ ಸೃಷ್ಟಿ, ಸ್ಥಿತಿ ಮತ್ತು ಸಂಹಾರಗಳಿಗೆ ಕಾರಣವಾಗಿರುವವನು.
    • ವಿಭವ – ಶ್ರೀ ರಾಮ, ಕೃಷ್ಣಾದ್ಯವತಾರವಿಶೇಷಗಳು
    • ಅಂತರ್ಯಾಮಿತ್ವ – ಎಲ್ಲರಲ್ಲೂ/ಎಲ್ಲಾದರಲ್ಲೂ ಒಳಹೊಕ್ಕ ವ್ಯಾಪಕಸ್ಥಿತಿ; ಇದರಲ್ಲಿ ಎರಡು ವಿಧ: ಪ್ರತಿಯೊಂದು ಜೀವಾತ್ಮಾಗಳಲ್ಲಿಯೂ ಅಂತರ್ಭೂತನಾದ ನೆಲೆ, ಮತ್ತು ಹೃದಯಪುಂಡರೀಕದಲ್ಲಿ ಶ್ರೀ ಮಹಾಲಕ್ಷಿಯೊಂದಿಗೆ ವಿಭ್ರಾಜಮಾನನಾಗಿರುವ ನೆಲೆ.
    • ಅರ್ಚಾವತಾರ – ದೇವಾಲಯ, ಮಠ ಮತ್ತು ಮನೆಗಳಲ್ಲಿ ವಿರಾಜಮಾನನಾಗಿರುವ ಭಗವಂತನ ದಿವ್ಯಮಂಗಳ ವಿಗ್ರಹಗಳು.
  • ಪುರಷಾರ್ಥ (ಧ್ಯೇಯ) – ಪುರುಷನೆಂದು ಕರೆಯಲ್ಪಡುವ ಆತ್ಮಾ ತಾನಿಚ್ಛಿಸುವ ಫಲ. ಇದರಲ್ಲಿಯೂ ಐದು ಭೇದಗಳಿವೆ:
    • ಧರ್ಮ – ಎಲ್ಲಾ  ಜೀವಿಗಳ ಕ್ಷೇಮಕ್ಕಾಗಿ/ರಕ್ಷಣೆಗಾಗಿ ಪಾಲಿಸಲ್ಪಡುವ ಆಚಾರಗಳು.
    • ಅರ್ಥ – ಹಣಸಂಪಾದನೆ ಮತ್ತು ಶಾಸ್ತ್ರೀಯವಾದ ಮಾರ್ಗಗಳಲ್ಲಿ ಅದರ ಸದ್ವಿನಿಯೋಗ.
    • ಕಾಮ – ಭೂಮಿಯಲ್ಲೂ ಸ್ವರ್ಗಾದಿ ಲೋಕಗಳಲ್ಲಿಯೂ ಒಂದು ಜೀವವು ಇಚ್ಛಿಸುವ ವಿಷಯಸುಖಾನುಭವ.
    • ಆತ್ಮಾನುಭವ – ಸಂಸಾರದಿಂದ ಮುಕ್ತಿ ಹೊಂದಿ ತನ್ನನ್ನು ತಾನೇ ಅನಂತಕಾಲದವರೆಗೂ ಅನುಭವಿಸುವ ವಾಂಛೆ.
    • ಭಗವತ್ಕೈಂಕರ್ಯ (ಪರಮಪುರುಷಾರ್ಥ) – ಪರಮಪದದಲ್ಲಿ ಭಗವಂತನನ್ನು ನಿತ್ಯಕಾಲವೂ ಪರಿಚರಿಸುವುದು. ಇದು ಈ ಸಂಸಾರ ಮಂಡಲದಲ್ಲಿ ಲೌಕಿಕವಾದ ಈ ಶರೀರವನ್ನು ಬಿಟ್ಟು ಪರಮಪದವನ್ನು ಹೊಂದಿ ದಿವ್ಯ ಶರೀರವನ್ನು ಪರಿಗ್ರಹಿಸಿ ನಿತ್ಯಸೂರಿಗಳೂ ಮುಕ್ತಾತ್ಮರುಗಳೂ ಸುತ್ತುವರೆದಿರಲು, ನಾವು ಭಗವಂತನಿಗೆ ಮಾಡುವ ಕೈಂಕರ್ಯವಿಶೇಷಗಳೇ ಆಗಿದೆ.
  • ಉಪಾಯ (ಪ್ರಾಪ್ತಿಗಾಗಿ ಇರುವ ಮಾರ್ಗ) – ಇದರ ಐದು ಭೇದಗಳು ಈ ಕೆಳಕಂಡಂತೆ:
    • ಕರ್ಮಯೋಗ – ಶಾಸ್ತ್ರದಲ್ಲಿ ಹೇಳಲಾಗಿರುವ ಯಜ್ಞ, ದಾನ, ತಪಸ್ಸು, ಧ್ಯಾನ ಮುಂತಾದುವುಗಳಲ್ಲಿ ತೊಡಗಿಸಿಕೊಳ್ಳುವಿಕೆ, ತನ್ಮೂಲಕ ಇಂದ್ರಿಯ ನಿಗ್ರಹ, ಅಷ್ಟಾಂಗಯೋಗದಲ್ಲಿ ತೊಡಗಿಸಿಕೊಳ್ಳುವಿಕೆ, ಇತ್ಯಾದಿಗಳ ಮೂಲಕ ತನ್ನ ಬಗೆಗಿನ ಅರಿವು (ಆತ್ಮಜ್ಞಾನ) ಮೂಡಿಸಿಕೊಳ್ಳುವುದು; ಇದು ಜ್ಞಾನಯೋಗಕ್ಕೆ ಅಂಗವಾಗಿದ್ದು, ಮುಖ್ಯತಃ ಲೌಕಿಕ ಸಂಪತ್ತು ಗಳಿಕೆಯು ಇದರ ಉದ್ದೇಶವಾಗಿರುತ್ತದೆ.
    • ಜ್ಞಾನಯೋಗ – ಕರ್ಮಯೋಗದ ಮೂಲಕ ಗಳಿಸಿದ ಜ್ಞಾನವನ್ನು ಮೂಲವನ್ನಾಗಿಸಿಕೊಂಡು ಹೃದಯಸ್ಥಿತನಾದ ಭಗವಂತ ಶ್ರೀಮನ್ನಾರಾಯಣನನ್ನು ಕುರಿತು ಸತತ ಧ್ಯಾನಮಾಡುವುದು; ಇದು ಭಕ್ತಿಯೋಗಕ್ಕೆ ಅಂಗವಾಗಿದ್ದು, ಇದರ ಮುಖ್ಯ ಉದ್ದೇಶ ಕೈವಲ್ಯಮೋಕ್ಷವೇ ಆಗಿರುತ್ತದೆ.
    • ಭಕ್ತಿಯೋಗ – ಇಂತಹ ಜ್ಞಾನಯೋಗದ ಸಹಕಾರದೊಂದಿಗೆ ನಿರಂತರ ಧ್ಯಾನ ಮಾಡಿ ಆನಂದಾನುಭವ ಹೊಂದಿ, ಕೂಡಿಟ್ಟಿರುವ ಪುಣ್ಯಪಾಪರೂಪ ಕರ್ಮಗಳನ್ನು ಹೋಗಲಾಡಿಸಿಕೊಂಡು, ತನ್ನ ನಿಜವಾದ ಗುರಿಯನ್ನೂ ಉಪಾಯವನ್ನೂ ಯಥಾರ್ಥವಾಗಿ ತಿಳಿದು ಅದರ ದಿಸೆಯಲ್ಲಿ ಸಾಗುವುದು.
    • ಪ್ರಪತ್ತಿ – ಭಗವಂತನಲ್ಲಿ ಶರಣು ಹೊಂದುವುದು; ಇದು ಅನುಷ್ಠಿಸಲು ಬಹಳ ಸುಲಭವೂ, ಮನೋಲ್ಲಾಸಕರವೂ ಆಗಿರುತ್ತದೆ. ಇದು ಕ್ಷಿಪ್ರ ಪ್ರಸಾದಕಾರಿಯಾಗಿರುತ್ತದೆ. ಒಂದೇ ಬಾರಿ ಪ್ರಪತ್ತಿ ಮಾಡಬೇಕಾಗಿರುವುದರಿಂದ ತದನಂತರ ಮಾಡುವ ಪ್ರತಿಯೊಂದು ಕರ್ಮವೂ ಭಗವತ್ಕೈಂಕರ್ಯವಾಗಿ ಬಿಡುತ್ತದೆ. ಇದು ಕರ್ಮ-ಜ್ಞಾನ-ಭಕ್ತಿಯೋಗಗಳಲ್ಲಿ ತೊಡಗಿಸಿ ಕೊಳ್ಳಲಾರದವರಿಗೂ(ತಾವು ಭಗವಂತನಿಗೆ ಶೇಷಭೂತರೆಂಬ ಆತ್ಮಯಾಥಾತ್ಮ್ಯ ಜ್ಞಾನವನ್ನು ಹೊಂದಿದ ಮೇಲೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಯಾವ ಉಪಾಯಾಂತರಗಳನ್ನೂ ನಂಬದವರಿಗೂ) ಅನುಷ್ಠಿಸಲು ತಕ್ಕವಾದ ಕ್ರಿಯೆಯಾಗಿದೆ. ಈ ಪ್ರಪತ್ತಿಯೂ ಎರಡು ವಿಧವಾದದ್ದು: ೧) ಆರ್ತಪ್ರಪತ್ತಿ – ಇಲ್ಲಿ ಪ್ರಪನ್ನನು ಪ್ರಪತ್ತಿ ಅನುಷ್ಠಿಸಿದ ನಂತರ ಒಂದು ಕ್ಷಣಮಾತ್ರವೂ ಸಂಸಾರದಲ್ಲಿರಲು ಸಹಿಸಲಾರದೆ ತತ್ಕ್ಷಣವೇ ಮೋಕ್ಷಕ್ಕೆ ತೆರಳಬೇಕೆಂಬ ಹಂಬಲವುಳ್ಳವನಾಗಿರುತ್ತಾನೆ; ೨) ದೃಪ್ತ ಪ್ರಪತ್ತಿ – ಇಲ್ಲಿ ಪ್ರಪನ್ನನು ಪ್ರಪತ್ತಿ ಅನುಷ್ಠಿಸಿದ ನಂತರ ತಾನು ಸಹಜವಾಗಿಯೇ ಮೋಕ್ಷವನ್ನೆಯ್ದುವ ತನಕ ಈ ಸಂಸಾರದಲ್ಲೇ ಇದ್ದುಕೊಂಡು ಭಗವದ್ಭಾಗವತಾಚಾರ್ಯರುಗಳಿಗೆ ನಿತ್ಯ ಕೈಂಕರ್ಯವನ್ನು ಮಾಡಿ, ಶರೀರಾವಸಾನದಲ್ಲಿ ಮೋಕ್ಷವನ್ನು ಹೊಂದುತ್ತಾನೆ.
    • ಆಚಾರ್ಯಾಭಿಮಾನ – ಈ ಮೇಲ್ಕಂಡ ಯಾವ ಉಪಾಯಗಳಲ್ಲಿಯೂ ತೊಡಗಿಸಿ ಕೊಳ್ಳಲಾರದವರನ್ನು ಪರಮ ಕೃಪಾಳುವಾದ ಆಚಾರ್ಯನು ಸ್ವತಃ ತನ್ನ ಶಿಷ್ಯರ ಉಜ್ಜೀವನಾರ್ಥವಾಗಿ ಅವರಿಗೆ ಸದರ್ಥಗಳನ್ನು ಬೋಧಿಸುತ್ತ ಅವರನ್ನು ಮುನ್ನಡೆಸುವುದು; ಇಲ್ಲಿ ಶಿಷ್ಯನು ತಾನು ಆಚಾರ್ಯನನ್ನು ಸಂಪೂರ್ಣ ವಿಶ್ವಾಸದಿಂದ ಅನುವರ್ತಿಸುವನಷ್ಟೇ. ಟಿಪ್ಪಣಿ: ಇಲ್ಲಿ ನಾವು ಶ್ರೀ ರಾಮಾನುಜಾಚಾರ್ಯರನ್ನು ಉತ್ತಾರಕಾಚಾರ್ಯರೆಂದೂ (ನಮ್ಮನ್ನು ಸಂಸಾರದಿಂದ ಪಾರುಮಾಡಿ ಮೋಕ್ಷಕ್ಕೆ ಕರೆದೊಯ್ಯುವ ಆಚಾರ್ಯರೆಂದೂ), ನಮ್ಮ ಸಮಾಶ್ರಯಣಾಚಾರ್ಯರನ್ನು ಉಪಕಾರಕಾಚಾರ್ಯರೆಂದೂ (ಶ್ರೀರಾಮಾನುಜರ ಸಂಬಂಧ ಕಲ್ಪಿಸಿಕೊಡುವವರೆಂದೂ) ಕರೆಯುವ ಸಂಪ್ರದಾಯ ರೂಢಿಯನ್ನು ಸ್ಮರಿಸಬಹುದು, ನಮ್ಮೆಲ್ಲ ಪೂರ್ವಾಚಾರ್ಯರುಗಳೂ ಎಂಪೆರುಮಾನಾರ್ ಶ್ರೀ ರಾಮಾನುಜಾಚಾರ್ಯರ ಶ್ರೀಪಾದಪದ್ಮಗಳನ್ನೇ ನಂಬಿ ಬದುಕಿದ ಅನೇಕ ನಿದರ್ಶನಗಳು ನಮಗೆ ಕಾಣಸಿಗುತ್ತವೆ. ಇದರ ಬಗೆಗಿನ ಹೆಚ್ಚಿನ ಓದಿಗೆ ಈ ವಿಳಾಸಕ್ಕೆ ಹೋಗಬಹುದು: https://granthams.koyil.org/charamopaya-nirnayam-english/. ನಮ್ಮ ಮಣವಾಳ ಮಾಮುನಿಗಳೂ ಸಹ ತಮ್ಮ ಆರ್ತಿಪ್ರಬಂಧದಲ್ಲಿ ತಾವು ವಡುಗನಂಬಿಗಳಂತೆಯೇ ಆಚಾರ್ಯನಿಷ್ಠರಾಗಿರಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ.
  • ವಿರೋಧಿ – ನಾವು ನಮ್ಮ ಗುರಿಯನ್ನು ತಲುಪುವುದರಿಂದ ತಡೆಯುವ ಸಂಗತಿಗಳು. ಇದರ ಐದು ಬಗೆಗಳು:
    • ಸ್ವರೂಪವಿರೋಧಿ – ದೇಹವನ್ನೇ ಆತ್ಮಾ ಎಂದು ತಪ್ಪಾಗಿ ತಿಳಿಯುವಿಕೆ, ಭಗವಂತನ ಹೊರತಾಗಿ ಮತ್ತೊಬ್ಬರಿಗೆ ಆಳಾಗಿರುವುದು, ನಮ್ಮನ್ನು ನಾವೇ ಸ್ವತಂತ್ರರನ್ನಾಗಿ ಭಾವಿಸುವುದು, ಇತ್ಯಾದಿ
    • ಪರತ್ವ ವಿರೋಧಿ – ಇತರ ದೇವತೆಗಳನ್ನು ಪರದೇವತೆಗಳೆಂದು ಭಾವಿಸುವುದು, ಇತರ ದೇವತೆಗಳನ್ನು ಭಗವಂತನಿಗೆ ಸಮನಾಗಿ ಭಾವಿಸುವುದು, ಆ ಕ್ಷುದ್ರದೇವತೆಗಳನ್ನು ಶಕ್ತಿವಂತರಾಗಿ ಭಾವಿಸುವುದು, ಭಗವಂತನ ಅವತಾರಗಳನ್ನು ಮನುಷ್ಯ ಮಾತ್ರರನ್ನಾಗಿ ಭಾವಿಸುವುದು, ಭಗವಂತನ ಅರ್ಚಾವಿಗ್ರಹಗಳಲ್ಲಿ ಭಗವಂತನ ಶಕ್ತಿ ಇಲ್ಲದಿರುವುದಾಗಿ ಪರಿಗಣಿಸುವುದು, ಇತ್ಯಾದಿ.
    • ಪುರುಷಾರ್ಥ ವಿರೋಧಿ – ಭಗವಂತನ ಸೇವೆಯ ಹೊರತಾಗಿ ಇತರ ಪುರುಷಾರ್ಥಗಳನ್ನು ಅಪೇಕ್ಷಿಸುವುದು, ಭಗವಂತನ ಸೇವೆಯಲ್ಲಿ ಅವನ ಇಚ್ಛೆಯನ್ನಲ್ಲದೆ ಸ್ವೇಚ್ಛೆಯಾನುಸಾರ ವರ್ತಿಸುವುದು.
    • ಉಪಾಯ ವಿರೋಧಿ – ಇತರ ಉಪಾಯಗಳನ್ನು ಮಹತ್ತಾಗಿ ಪರಿಗಣಿಸುವುದು, ಶರಣಾಗತಿಯನ್ನು ನಾವಡೆವ ಪುರುಷಾರ್ಥಕ್ಕೆ ಬಹಳ ಅಲ್ಪವಾಗಿ ಪರಿಗಣಿಸುವುದು, ಪರಮಪದದಲ್ಲಿ ಭಗವಂತನ ಸೇವೆಯನ್ನು ಅರಿದಾಗಿ ಭಾವಿಸುವುದು, (ಆಚಾರ್ಯನ/ಭಗವಂತನ ಅನುಗ್ರಹ ಶಕ್ತಿಯನ್ನು ಮರೆತು) ಅಂತಹ ಸೇವೆಗಿರುವ ಅನೇಕ ತಡೆಗಳನ್ನು ಕಂಡಂಜುವುದು.
    • ಪ್ರಾಪ್ತಿವಿರೋಧಿ – ನಾವು ನಮ್ಮ ಗುರಿಯನ್ನು ಶೀಘ್ರದಲ್ಲಿ ಮುಟ್ಟಲು ಬಿಡಗೊಡದ ಸಂಗತಿಗಳು: ನಮ್ಮ ಕರ್ಮಕಳೆದ ಮಾತ್ರಕ್ಕೆ ಬಿದ್ದುಹೋಗುವ ಈ ಶರೀರದ ಸಂಬಂಧ, ನೀಚತನದ ಕಾರ್ಯಗಳು, ಭಗವದಪಚಾರಗಳು, ಭಾಗವತಾಪಚಾರಗಳು, ಇತ್ಯಾದಿ.

ಪಿಳ್ಳೈಲೋಕಾಚಾರ್ಯರು ತಮ್ಮ ಅರ್ಥಪಂಚಕವೆಂಬ ಗ್ರಂಥದಲ್ಲಿ ಈ ಕೆಳಕಂಡಂತೆ ನಿರ್ಣಯಿಸಿರುತ್ತಾರೆ:

ಈ ಐದು ವಿಷಯಗಳ ಬಗೆಗಿನ ಜ್ಞಾನವನ್ನು ಹೊಂದಿದ ಮುಮುಕ್ಷುವು ಈ ಕೆಳಕಂಡ ಜೀವನಶೈಲಿಯನ್ನು ಅಳವಡಿಸಿಕೊಳ್ಳತಕ್ಕದ್ದು: ವರ್ಣಾಶ್ರಮಧರ್ಮಕ್ಕನುಸಾರವಾಗಿ, ವೈಷ್ಣವ ನಿಯಮಗಳನ್ನು ಮೀರದೆ ಮಾಡುವ ಸಂಪಾದನೆಯಲ್ಲಿ ಎಲ್ಲವನ್ನೂ ಭಗವಂತನಿಗೂ ಭಾಗವತರುಗಳಿಗೂ ವಿನಿಯೋಗಿಸಿ, ತನ್ನ ಜೀವನೋಪಾಯಕ್ಕೆ ಅವಶ್ಯಕವಾದ ಮೊತ್ತವನ್ನು ಮಾತ್ರವೇ ಉಳಿಸಿಕೊಂಡು, ತನಗೆ ಜ್ಞಾನವನ್ನುಪದೇಶಿಸಿದ ಆಚಾರ್ಯನ ಕೈಂಕರ್ಯವನ್ನು ನಿಷ್ಠೆಯಿಂದ ಮಾಡುತ್ತ ಅವರ ಮುಖೋಲ್ಲಾಸಕ್ಕಾಗಿಯೇ ಜೀವಿಸುವುದು.

ಪ್ರತಿಯೊಬ್ಬ ಶ್ರೀವೈಷ್ಣವನೂ ಭಗವಂತನ ಮಹಿಮೆಯನ್ನರಿತು ಅವನ ಮುಂದೆ ವಿನಯದಿಂದಿರಬೇಕು. ತನ್ನ ಆಚಾರ್ಯನ ಜ್ಞಾನವನ್ನರಿತು ಅವರ ಮುಂದೆ ತನ್ನ ಅಜ್ಞಾನವನ್ನು ತೋರಿಸಿಕೊಳ್ಳಬೇಕು. ಶ್ರೀವೈಷ್ಣವರ ಸ್ವಾಮಿತ್ವವನ್ನರಿತು ಅವರ ಮುಂದೆ ತನ್ನ ಪಾರತಂತ್ರ್ಯವನ್ನು ತೋರಿಸಿಕೊಳ್ಳಬೇಕು. ಹಾಗೆಯೇ ಸಂಸಾರಿಗಳ ವಿಷಯ ಸುಖಾಪೇಕ್ಷೆಯನ್ನರಿತು ಅವರಿಂದ ದೂರವುಳಿಯಬೇಕು.

ಪ್ರತಿಯೊಬ್ಬ ಶ್ರೀವೈಷ್ಣವನಿಗೂ ತನ್ನ ಪುರುಷಾರ್ಥವಡೆಯುವ ವಾಂಛೆಯೂ, ಉಪಾಯದ ಬಗೆಗೆ ದೃಢವಾದ ಆಸೆಯೂ, ತಡೆಗಳ ಬಗೆಗೆ ಭಯವೂ, ಸ್ವಶರೀರದ ಬಗೆಗೆ ಜುಗುಪ್ಸೆ-ವೈರಾಗ್ಯಗಳೂ, ಸ್ವಸ್ವರೂಪದ ಅರಿವೂ, ತನ್ನನ್ನು ತಾನೇ ರಕ್ಷಿಸಿಕೊಳ್ಳುವಲ್ಲಿ ಅಶಕ್ತಿಯೂ, ಭಾಗವತರ ಬಗೆಗೆ ಒಲವು-ಗೌರವಗಳೂ, ಸ್ವಾಚಾರ್ಯನಲ್ಲಿ ವಿಶ್ವಾಸವೂ ಕೃತಜ್ಞತೆಯೂ ಇರಬೇಕು.

ಯಾರು ಇಂತಹ ಜ್ಞಾನವನ್ನು ಹೊಂದಿರುವರೋ, ಮತ್ತು ಯಾರು ಈ ಜ್ಞಾನವನ್ನು ಅನುಷ್ಠಾನ ಪರ್ಯಂತವಾಗಿ ಅರಿತಿದ್ದಾರೆಯೋ, ಅಂತಹವರು ಭಗವಂತನಿಗೆ ನಿತ್ಯ-ಮುಕ್ತರಿಗಿಂತಲೂ, ತನ್ನ ಮಹಿಷಿಯರಿಗಿಂತಲೂ ಪ್ರಿಯರಾಗಿರುತ್ತಾರೆ.

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಪಿಳ್ಳೈಲೋಕಾಚಾರ್ಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೇನ್ ಶ್ರೀನಿವಾಸ ರಾಮಾನುಜ ದಾಸನ್

 

ಮೂಲ: https://granthams.koyil.org/2015/12/artha-panchakam/

ರಕ್ಷಿತ ಮಾಹಿತಿ:  https://granthams.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org

ಪ್ರಮಾತಾ (ಬೋಧಕರು) – https://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

Leave a Comment