ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ
ಶ್ರೀವೈಷ್ಣವರಿಗೆ ತಮ್ಮ ದೈನಂದಿನ ಜೀವನದಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಈ ಕೆಳಗಿನ ಅಂಶಗಳು ಪ್ರಯೋಜನಕಾರಿಯಾಗಿವೆ:
೧. ಶ್ರೀವೈಷ್ಣವರನ್ನು, ಅವರ ವರ್ಣ, ಆಶ್ರಮ, ಜ್ಞಾನ, ಇತ್ಯಾದಿಗಳನ್ನು ಪರಿಗಣಿಸದೆ ಗೌರವದಿಂದ ಕಾಣುವುದು. ಭಗವಂತನು ತನ್ನ ಭಕ್ತರಿಂದ ಮೊದಲು ನಿರೀಕ್ಷಿಸುವುದು ಇತರ ಭಾಗವತರನ್ನು ಗೌರವದಿಂದ ಕಾಣುವುದು.
೨. ಪ್ರತಿಷ್ಠೆ ಮತ್ತು ಸ್ವಂತಿಕೆಯಿಲ್ಲದೆ ಸರಳವಾದ ಜೀವನವನ್ನು ನಡೆಸುವುದು. ನಾವು ಆತ್ಮದ ಸೂಕ್ಷ್ಮ ರೂಪ ಮತ್ತು ಭಗವಂತನ ಮಹತ್ತಾದ ರೂಪವನ್ನು ಒಮ್ಮೆ ಅರಿತರೆ, ನಾವು ನಮ್ಮನ್ನು ಅತಿಶಯವಾಗಿ ಪರಿಗಣಿಸುವುದಿಲ್ಲ.
೩. ಒಬ್ಬರ ಸ್ವಂತ ಆಚಾರ್ಯರೊಂದಿಗೆ ನಿಯತವಾದ ಸಂಪರ್ಕವನ್ನು ಇಟ್ಟುಕೊಳ್ಳುವುದು ಬಹು ಮುಖ್ಯವಾದ ಅಂಶ. ಶಿಷ್ಯರು ತಮ್ಮ ಆಚಾರ್ಯರ ಭೌತಿಕ, ಆರ್ಥಿಕ ಅವಶ್ಯಕತೆಗಳಲ್ಲಿ ಸಹಾಯ ಮಾಡುವುದು ಮುಖ್ಯವಾದದ್ದು ಮತ್ತು ಕಡ್ಡಾಯವಾದದ್ದು.
೪. ಒಬ್ಬರ ಸ್ವಂತ ಆಶ್ರಮ ಮತ್ತು ವರ್ಣದ ಅನುಸಾರವಾಗಿ ನಿತ್ಯ ಕರ್ಮಾನುಷ್ಠಾನಗಳಾದ ಸ್ನಾನ, ಊರ್ಧ್ವಪುಂಡ್ರ ಧಾರಣ, ಸಂಧ್ಯಾವಂದನ, ಇತ್ಯಾದಿಗಳನ್ನು ಆಚರಿಸುವುದು. ಈ ರೀತಿ ನಿಯಮಿತವಾದ ಕರ್ಮಗಳನ್ನು ಆಚರಿಸುವುದರಿಂದ, ಒಬ್ಬರ ಆಂತರಿಕ ಮತ್ತು ಬಾಹ್ಯ ಶುಚಿತ್ವದ ಅಭಿವೃದ್ಧಿಯಾಗುತ್ತದೆ ಮತ್ತು ಅದರಿಂದ ನಿಜವಾದ ಜ್ಞಾನದ ಪಾಲನೆ ಮತ್ತು ಪೋಷಣೆಗೆ ಮಾರ್ಗದರ್ಶಿಯಾಗುತ್ತದೆ.
೫. ಯಾವಾಗಲೂ ತಿರುಮಣ್ ಮತ್ತು ಶ್ರೀಚೂರ್ಣವನ್ನು (ತಿಲಕ). ಧರಿಸಬೇಕು – ಇದು ಭಗವಂತನಿಗೆ ನಮ್ಮ ಅಧೀನತೆಯ ಪ್ರಾಥಮಿಕ ಸ್ವರೂಪ. ಇದನ್ನು ಎಲ್ಲಾ ಸಂದರ್ಭಗಳಲ್ಲಿಯೂ ದಿಟ್ಟವಾಗಿ ಧರಿಸುವುದು ಬಹು ಮುಖ್ಯವಾದದ್ದು ಮತ್ತು ಅದಕ್ಕೆ ನಾಚಬೇಕಾದ್ದಿಲ್ಲ.
೬. ಸಾಂಪ್ರದಾಯಿಕ ವಸ್ತ್ರಗಳಾದ ಪಂಚಕಚ್ಚೆ, ಮಡಿಶಾರ್, ಇತ್ಯಾದಿಗಳನ್ನು ಒಬ್ಬರ ಲಿಂಗ, ವರ್ಣ ಮತ್ತು ಆಶ್ರಮಕ್ಕೆ ಅನುಸಾರವಾಗಿ ಧರಿಸುವುದು. ನಾವು ಯಾರು ಮತ್ತು ನಮ್ಮ ಸಂಸ್ಕೃತಿ ಯಾವುದು ಎಂಬುದರ ಬಗ್ಗೆ ನಾಚಿಕೆಪಡಬೇಕಾದ ಅವಶ್ಯಕತೆಯಿಲ್ಲ – ವಿಶೇಷವಾಗಿ ಶ್ರೇಷ್ಠವಾದ ಆಚಾರ್ಯ ಪರಂಪರೆಯಿಂದ ಬಂದಿರುವುದರಿಂದ.
೭. ಸದಾಕಾಲವೂ ಶ್ರೀಮನ್ನಾರಾಯಣ, ಆಳ್ವಾರುಗಳು ಮತ್ತು ಆಚಾರ್ಯರುಗಳ ಆರಾಧನೆಯಲ್ಲಿ ತೊಡಗಿರುವುದು. ತದ್ವಿರುದ್ಧಾಗಿ ದೇವತಾಂತರಗಳನ್ನು (ರುದ್ರ ಪರಿವಾರ, ಇಂದ್ರ, ವರುಣ, ಅಗ್ನಿ, ನವಗ್ರಹಗಳು, ಇತ್ಯಾದಿ) ಪೂಜಿಸುವುದನ್ನು ಬಿಡಬೇಕು. ಇದು ನಮ್ಮ ಪೂರ್ವಾಚಾರ್ಯರುಗಳು ಎತ್ತಿತೋರಿಸಿರುವ ಮುಖ್ಯವಾದ ವಿಧಿಗಳಲ್ಲಿ ಒಂದು. ಭಗವಂತ ಮತ್ತು ಜೀವಾತ್ಮರ ನಡುವಿನ ಮುಖ್ಯವಾದ ಸಂಬಂಧಗಳಲ್ಲಿ ಒಂದು ಭರ್ತ – ಭಾರ್ಯಾ (ಗಂಡ-ಹೆಂಡತಿ) ಸಂಬಂಧ. ಎಲ್ಲಾ ಜೀವಾತ್ಮರೂ ಸ್ತ್ರೀ ಸ್ವಭಾವದವರಾಗಿದ್ದು ಭಗವಂತನೊಬ್ಬನು ಮಾತ್ರವೇ ಪುರುಷ ರೂಪಿಯಾದ್ದರಿಂದ, ಎಲ್ಲಾ ಜೀವಾತ್ಮರೂ ಭಗವಂತನೊಂದಿಗೆ ಈ ಸಾಮಾನ್ಯ ಸಂಬಂಧವನ್ನು ಹೊಂದಿರುವರು. ಆದ್ದರಿಂದ ಪ್ರತಿಯೊಬ್ಬರೂ ಎಲ್ಲಾ ಕಾಲದಲ್ಲಿಯೂ ಭಗವಂತನಿಗೆ ನಿಷ್ಠಾವಂತರಾಗಿರುವುದು ಅತ್ಯಗತ್ಯ ಮತ್ತು ದೇವತಾಂತರಗಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದರಿಂದ ದೂರವಿರಬೇಕು.
೮. ಮನೆಯಲ್ಲಿ ತಿರುವಾರಾಧನೆ ಮಾಡುವುದು ಒಬ್ಬ ಶ್ರೀವೈಷ್ಣವರ ದಿನಚರಿಯಲ್ಲಿ ಒಂದು ಮುಖ್ಯವಾದ ಅಂಶ. ಭಗವಂತನು ನಮ್ಮ ಪೂಜೆಯನ್ನು ಸ್ವೀಕರಿಸಲು ಕಾರುಣ್ಯದಿಂದ ನಮ್ಮ ಮನೆಗಳಿಗೆ ಇಳಿದು ಬಂದಿದ್ದಾನೆ. ಆತನನ್ನು ಅಲಕ್ಷಿಸುವುದು ಒಂದು ದೊಡ್ಡ ಅಪಮಾನ ಮತ್ತು ಭಗವಂತನನ್ನು ಸ್ವಗೃಹದಲ್ಲಿ ಕಡೆಗಣಿಸುವುದು ಒಬ್ಬರ ಸ್ವಂತ ಆಧ್ಯಾತ್ಮಿಕ ಪ್ರಗತಿಗೆ ಹಾನಿಕರವಾದದ್ದು. ನಾವು ಪ್ರಯಾಣ ಮಾಡುವಾಗಲೂ ಸಹ ನಮ್ಮ ತಿರುವಾರಾಧನ ದೇವರನ್ನು ನಮ್ಮೊಂದಿಗೆ ಕೊಂಡೊಯ್ಯುವುದು ಉಚಿತವಾದದ್ದು ಅದಾಗದ ಪಕ್ಷದಲ್ಲಿ, ಶ್ರೀವೈಷ್ಣವರಿಂದ ನಮ್ಮ ಸ್ವಗೃಹದಲ್ಲಿ ಭಗವಂತನಿಗೆ ಸೂಕ್ತ ತಿರುವಾರಾಧನವು ನಡೆಯಲು ತಕ್ಕ ಏರ್ಪಾಡುಗಳನ್ನು ಮಾಡಬಹುದು ಅಥವಾ ಇತರ ಶ್ರೀವೈಷ್ಣವರ ಮನೆಯಲ್ಲಿ ಕೊಂಡೊಯ್ಯುವುದು. ಆತನನ್ನು ದಿನನಿತ್ಯದ ತಿರುವಾರಾಧನವಿಲ್ಲದೆ ಮನೆಯಲ್ಲಿ ಬೀಗ ಹಾಕಿಡುವುದು ಸಂಪೂರ್ಣವಾಗಿ ಅಗೌರವಯುತವಾದದ್ದು. ತಿರುವಾರಾಧನವನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ:
https://granthams.koyil.org/2012/07/srivaishnava-thiruvaaraadhanam/
೯. ಸದಾಕಾಲವೂ ಒಬ್ಬರ ಸ್ವಂತ ವರ್ಣ ಮತ್ತು ಆಶ್ರಮದ ಆಧಾರದ ಮೇಲೆ ಶಾಸ್ತ್ರದಲ್ಲಿ ಅನುಮತಿಸಲ್ಪಟ್ಟ ಆಹಾರ ಪದಾರ್ಥಗಳನ್ನು ಸೇವಿಸುವುದು. ಈ ಆಹಾರ ಪದಾರ್ಥಗಳನ್ನು ಮೊದಲು ಭಗವಂತ, ಆಳ್ವಾರುಗಳು ಮತ್ತು ಆಚಾರ್ಯರುಗಳಿಗೆ ಅರ್ಪಿಸಿ ನಂತರ ಸೇವಿಸಬೇಕು. ಭಗವಂತನಿಗೆ ಅರ್ಪಿಸದ ಆಹಾರವನ್ನು ನಾವು ಎಂದಿಗೂ ಸೇವಿಸಬಾರದು. ಆಹಾರ ನಿಯಮಗಳನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ:
https://granthams.koyil.org/2012/07/srivaishnava-aahaara-niyamam_28/ ಮತ್ತು
https://granthams.koyil.org/2012/08/srivaishnava-ahara-niyamam-q-a/
೧೦, ಶ್ರೀವೈಷ್ಣವರ ಸಹವಾಸವನ್ನು ಬಯಸುವುದು. ನಮ್ಮನ್ನು ಉದ್ಧರಿಸುವ ಅರ್ಥಗರ್ಭಿತವಾದ ಆಧ್ಯಾತ್ಮಿಕ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾದದು ಮತ್ತು ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಸಹಕಾರಿಯಾದದು.
೧೧. ದಿವ್ಯದೇಶಗಳು, ಆಳ್ವಾರ್/ಆಚಾರ್ಯರ ಅವತಾರ ಸ್ಥಳಗಳು ಮತ್ತು ಅಭಿಮಾನ ಸ್ಥಳಗಳು ನಮ್ಮ ಜೀವನದ ಮುಖ್ಯವಾದ ಅಂಗಗಳು. ದಿವ್ಯದೇಶಗಳು ಮತ್ತಿತರ ಸ್ಥಳಗಳಲ್ಲಿ ಸೇವೆಯನ್ನು ಮಾಡುವ ಜೀವನವನ್ನು ನಡೆಸಬೇಕು. ಈ ರೀತಿಯ ಸೇವೆಯಲ್ಲಿ ತೊಡಗುವುದಕ್ಕೆ ಪ್ರಸಕ್ತ ಪರಿಸ್ಥಿತಿಯು ಸೂಕ್ತವಾಗಿರದ ಪಕ್ಷದಲ್ಲಿ ಈ ಪವಿತ್ರ ಸ್ಥಳಗಳಿಗೆ ಪುನಃಪುನಃ ಭೇಟಿಕೊಡಲು ಪ್ರಯತ್ನಿಸಬೇಕು ಮತ್ತು ಭವಿಷ್ಯದಲ್ಲಿ ಅಲ್ಲಿ ಸೇವೆಯನ್ನು ಮಾಡಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು.
೧೨. ದಿವ್ಯಪ್ರಬಂಧಗಳು ಶ್ರೀವೈಷ್ಣವರಿಗೆ ಬಹು ಮುಖ್ಯವಾದ ವಿಷಯಗಳು. ಪಾಶುರಗಳನ್ನು ಕಲಿಯುವುದು, ಅವುಗಳ ಅರ್ಥಗಳನ್ನು (ಪೂರ್ವಾಚಾರ್ಯರುಗಳ ವಿವರಣೆಯ ಮೇರೆಗೆ) ತಿಳಿದುಕೊಳ್ಳುವುದು ಮತ್ತು ಆ ತತ್ತ್ವಗಳನ್ನು ಆಚರಣೆಗೆ ತರುವುದು ಇವುಗಳು ಶ್ರೀವೈಷ್ಣವರ ಲಕ್ಷಣವನ್ನು ನಿರೂಪಿಸುವ ೩ ಬಹು ಮುಖ್ಯವಾದ ಅಂಶಗಳು. ದಿವ್ಯಪ್ರಬಂಧಗಳು ಲೌಕಿಕ ವಿಷಯಗಳಲ್ಲಿ ಅನಾಸಕ್ತಿ, ಮತ್ತು ಭಗವಂತ ಮತ್ತು ಭಾಗವತರ ಕಡೆಗೆ ಆಸಕ್ತಿಯನ್ನು ಬೆಳೆಸುತ್ತವೆ.
೧೩. ಸ್ವತಃ ನಮ್ಮ ಪೂರ್ವಾಚಾರ್ಯರುಗಳ ಜೀವನ ಶೈಲಿಯೇ ನಮ್ಮ ಕಲಿಕೆಗೆ ಮೂಲ ಮತ್ತು ಪ್ರೇರಕವಾಗಿವೆ. ಅವರು ಎಲ್ಲಾ ಜೀವಿಗಳ ಕಡೆಗೂ ಅತ್ಯಧಿಕ ಗೌರವ ಮತ್ತು ಸಹಾನುಭೂತಿಯನ್ನು ಪ್ರದರ್ಶಿಸಿದ್ದಾರೆ ಮತ್ತು ನಾವು ಇಂದು ಕಾಣುವ ಎಲ್ಲಾ ಸಂದರ್ಭಗಳು /ಸಂದಿಗ್ಧತೆಗಳು ಅವರ ಜೀವನದಲ್ಲಿ ಸ್ಪಷ್ಟವಾಗಿ ಸಂಬೋಧಿಸಲ್ಪಟ್ಟಿವೆ.
೧೪. ಪೂರ್ವಾಚಾರ್ಯ ಸಾಹಿತ್ಯವನ್ನು ಅಧ್ಯಯನ ಮಾಡುವುದು ಬಹು ಮುಖ್ಯವಾದುದು. ಪ್ರತಿಯೊಬ್ಬರೂ ಪ್ರತಿದಿನವೂ ಲಭ್ಯವಿರುವ ಅತಿ ದೊಡ್ಡ ನಿಧಿ ಅರ್ಥಾತ್ ಪೂರ್ವಾಚಾರ್ಯ ಸಾಹಿತ್ಯಗಳಾದ ವೇದಾಂತ, ದಿವ್ಯಪ್ರಬಂಧಗಳು, ಸ್ತೋತ್ರಗ್ರಂಥಗಳು, ವ್ಯಾಖ್ಯಾನಗಳು, ಐತಿಹಾಸಿಕ ನಿರೂಪಣೆಗಳು, ಇತ್ಯಾದಿಗಳಲ್ಲಿ ಮುಳುಗುವುದಕ್ಕೆ ಸ್ವಲ್ಪ ಸಮಯವನ್ನು ನಿಯೋಜಿಸಬೇಕು. ನಮ್ಮ ಜಾಲತಾಣಗಳಲ್ಲಿ (https://koyil.org/index.php/portal/) ಇಂತಹ ಮಾಹಿತಿಗಳು ಅಧ್ಯಯನ ಮಾಡಲು ಹೇರಳವಾಗಿ ಲಭ್ಯವಿದೆ.
೧೫. ವಿದ್ವಾಂಸರ ಅಡಿಯಲ್ಲಿ ಕಾಲಕ್ಷೇಪಗಳನ್ನು (ಮೂಲ ಕೃತಿಯೊಂದಿಗೆ ವ್ಯಾಖ್ಯಾನಗಳ ಉಪನ್ಯಾಸಗಳು) ಕೇಳುವುದು ಅವಶ್ಯಕ ತತ್ವಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಪಡೆಯಲು ಬಹಳ ಮುಖ್ಯವಾದುದು. ಇಂದು, CD ಗಳು ಮತ್ತು ಜಾಲತಾಣಗಳಲ್ಲಿ ಅನೇಕ ಉಪನ್ಯಾಸಗಳು ಲಭ್ಯವಿವೆ. ವೈಯಕ್ತಿಕವಾಗಿ ಈ ಉಪನ್ಯಾಸಗಳಿಗೆ ಹಾಜರಾಗಲು ಸಾಧ್ಯವಾಗದವರು ಈ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು. ಮನೆಯಲ್ಲಿ ಕೇಳುವಾಗಲೂ, ಸಮರ್ಪಕವಾದ ಉಡುಪಿನಲ್ಲಿರಲು ಪ್ರಯತ್ನಿಸಬೇಕು ಮತ್ತು ಭೌತಿಕ ಉಪಸ್ಥಿತಿಯಲ್ಲಿ ಮಾಡುವಂತೆ ಈ ಉಪನ್ಯಾಸಗಳನ್ನು ಅದೇ ರೀತಿಯಲ್ಲಿ ಗಮನವಿಟ್ಟು ಕೇಳಬೇಕು.
೧೬. ಕೆಲವು ಅರ್ಥಪೂರ್ಣ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಶಾಸ್ತ್ರಗಳು ಹೇಳುವಂತೆ “ಸೇವೆ ಸಲ್ಲಿಸದಿದ್ದಾಗ ಸೇವಾಧಿಕಾರವು ನಿರರ್ಥಕವಾಗುತ್ತದೆ” – ಶ್ರೀಮನ್ನಾರಾಯಣನ, ಆಳ್ವಾರುಗಳ ಮತ್ತು ಆಚಾರ್ಯರುಗಳ ಸೇವಕರಾಗಿ ಒಬ್ಬರು ಯಾವಾಗಲೂ ಕೆಲವು ಸೇವೆಯಲ್ಲಿ ತೊಡಗಬೇಕು. ಅದು ಭೌತಿಕ, ಆರ್ಥಿಕ, ಬೌದ್ಧಿಕ, ಇತ್ಯಾದಿಯಾಗಿರಬಹುದು. ಸೇವೆಯಲ್ಲಿ ತೊಡಗಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಕೈಂಕರ್ಯದಲ್ಲಿ ಆಸಕ್ತಿ ಹೊಂದಿರುವವರಿಗೆ ಬಹುವಾದ ಬೇಡಿಕೆ ಕೂಡ ಇದೆ. ಒಬ್ಬರು ಯಾವಾಗಲೂ ಪುನರಾವರ್ತಿಸುವ ಕೆಲವು ಸೇವೆಗೆ ಬದ್ಧರಾಗಬೇಕು ಮತ್ತು ಅದನ್ನು ಸಹ ಪೂರೈಸಬೇಕು. ಈ ರೀತಿಯಾಗಿ ಭಗವಂತ ಮತ್ತು ಭಾಗವತರೊಂದಿಗೆ ನಿರಂತರವಾದ ಸಂಬಂಧವಿರುತ್ತದೆ.
೧೭. ಸಹಭಾಗವತರು ಮತ್ತು ಇತರರಿಗೆ ಭಗವಂತ, ಆಳ್ವಾರುಗಳು ಮತ್ತು ಆಚಾರ್ಯರುಗಳ ಬಗ್ಗೆ ಈ ಅದ್ಭುತವಾದ ಜ್ಞಾನವನ್ನು ಪಡೆದುಕೊಳ್ಳಲು ಸಹಕರಿಸುವುದು. ಈ ರೀತಿಯ ಜ್ಞಾನವನ್ನು ಹಂಚಿಕೊಳ್ಳುವುದರಲ್ಲಿ ನಿರಂತರವಾಗಿ ತೊಡಗುವುದರಿಂದ ಹೇಳುವವರಿಗೆ ಮತ್ತು ಕೇಳುಗರಿಗೆ ಪರಸ್ಪರ ಪ್ರಯೋಜನಕಾರಿ ಮತ್ತು ಸಂತೋಷಕರವಾಗಿರುತ್ತದೆ. ನಿಜವಾದ ಜ್ಞಾನದ ಮೂಲಕ ಪ್ರತಿಯೊಬ್ಬರನ್ನೂ ಉದ್ಧರಿಸುವ ಏಕೈಕ ಉದ್ದೇಶಕ್ಕಾಗಿ ಅನೇಕ ದೈವಿಕ ಸಾಹಿತ್ಯವನ್ನು ಹಂಚಿಕೊಳ್ಳುವ ಮೂಲಕ ನಮ್ಮ ಪುರ್ವಾಚಾರ್ಯರು ಅದ್ಭುತವಾದ ಪೂರ್ವನಿದರ್ಶನವನ್ನು ಪ್ರದರ್ಶಿಸಿದ್ದಾರೆ. ಸರಿಯಾದ ಮಾರ್ಗದರ್ಶನದಲ್ಲಿ ಅವುಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಲು ಮತ್ತು ನಮ್ಮ ಕುಟುಂಬ, ಸಂಬಂಧಿಕರು, ಸ್ನೇಹಿತರು ಮತ್ತು ಅಂತಹ ಜ್ಞಾನವನ್ನು ಅಪೇಕ್ಷಿಸುವ ಎಲ್ಲಾರೊಂದಿಗೆ ಅದೇ ರೀತಿಯಲ್ಲಿ ಹಂಚಿಕೊಳ್ಳುವುದು ನಮ್ಮ ಎಲ್ಲರ ಕರ್ತವ್ಯವಾಗಿದೆ.
೧೮. ಅಂತಿಮವಾಗಿ, ಪ್ರತಿಯೊಬ್ಬರೂ ಆತ್ಮದ ನಿಜವಾದ ಸ್ವಭಾವಕ್ಕೆ ಅನುಗುಣವಾಗಿ, ಪರಮಪದದಲ್ಲಿ ಆನಂದಮಯ ಜೀವನಕ್ಕಾಗಿ ನಿರಂತರವಾಗಿ ಹಂಬಲಿಸಬೇಕು. ಒಬ್ಬ ನಿಜವಾದ ಶ್ರೀವೈಷ್ಣವನು ಮರಣಕ್ಕೆ ಎಂದಿಗೂ ಭಯಪಡುವುದಿಲ್ಲ, ಏಕೆಂದರೆ ಅದು ಅತ್ಯಂತ ಭವ್ಯವಾದ ಶ್ರೀವೈಕುಂಠದಲ್ಲಿ ಭಗವಂತನ ಶಾಶ್ವತವಾದ ಸೇವೆಯನ್ನು ಮಾಡುವುದಕ್ಕೆ ದಾರಿಯಾಗುತ್ತದೆ. ನಮ್ಮ ಆಳ್ವಾರುಗಳು ಮತ್ತು ಆಚಾರ್ಯರುಗಳು ಇಲ್ಲಿ ಜೀವಿಸಿದಾಗೆ ಯಾವಾಗಲೂ ಭಗವಂತನ ಮತ್ತು ಭಾಗವತರ ಸೇವೆಯನ್ನು ಮಾಡುತ್ತಿದ್ದರು, ಮತ್ತು ಪರಮಪದವನ್ನು ಸೇರಿದ ನಂತರವೂ ಅದನ್ನು ಮುಂದುವರಿಸಲು ಅಪೇಕ್ಷಿಸಿದರು.
ಅಡಿಯೇನ್ ಸಾರಥಿ ರಾಮಾನುಜ ದಾಸನ್
ಮೂಲ: https://ponnadi.blogspot.sg/2016/01/simple-guide-to-srivaishnavam-important-points/
ರಕ್ಷಿತ ಮಾಹಿತಿ: https://granthams.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org
1 thought on “ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿನಚರಿಯಲ್ಲಿ ಪ್ರಮುಖವಾದ ಅಂಶಗಳು”