ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರ ಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ಮುನ್ನುಡಿ:
ಸರ್ವೇಶ್ವರ , ಶ್ರೀ ಮಹಾಲಕ್ಷ್ಮಿಯ ದಿವ್ಯ ಪತಿಯಾಗಿರುವವನು , ಆಳ್ವಾರರನ್ನು ಸ್ಪಷ್ಟವಾದ ಜ್ಞಾನದಿಂದಲೂ ಮತ್ತು ಪರಿಮಿತಿಯಿಲ್ಲದ ಭಕ್ತಿಯನ್ನು ಅವನ ಮೇಲೆ ಹೊಂದುವಂತೆಯೂ ಆಶೀರ್ವದಿಸಿದನು. ಅವರಲ್ಲಿ, ಕುರುಗೂರ್ ಚಡಗೋಪನ್ ಎಂಬ ದಿವ್ಯ ನಾಮವನ್ನು ಹೊಂದಿರುವ ನಮ್ಮಾಳ್ವಾರರು ಮುಖ್ಯಸ್ಥರು. ನಮ್ಮಾಳ್ವಾರರು ನಮಗೆ ನಾಲ್ಕು ವೇದದ ಸಾರವಾಗಿರುವ ನಾಲ್ಕು ಪ್ರಬಂಧಗಳನ್ನು ಕೊಟ್ಟು ಆಶೀರ್ವದಿಸಿದ್ದಾರೆ. ನಮ್ಮ ಪೂರ್ವಾಚಾರ್‍ಯರು ತಿರುವಾಯ್ಮೊೞಿಯನ್ನು ಅತ್ಯಂತ ಉತ್ಕೃಷ್ಟವೆಂದು ಹೊಗಳಿದ್ದಾರೆ.
ಈ ತಿರುವಾಯ್ಮೊೞಿಯು ಅದರ ಪರಮ ಸಾರವಾದ ‘ಅರ್ಥ ಪಂಚಕಮ್’ ನನ್ನು ನಮಗೆ ಬಹಿರಂಗ ಪಡಿಸುತ್ತದೆ. ನಾಯನಾರ್‌ರವರು ತಮ್ಮ ಆಚಾರ್‍ಯ ಹೃದಯಮ್ ನಲ್ಲಿ ಬೆಳಕು ಚೆಲ್ಲಿದ್ದಾರೆ, “ಭಾಷ್ಯಕಾರರ್ ಇದು ಕೊಣ್ಡು ಸೂತ್ರ ವಾಕ್ಯಂಗಳೈ ಒರುಂಗ ವಿಡುವರ್” ಎಂದರೆ ಭಾಷ್ಯಕಾರರಾದ ಎಂಪೆರುಮಾನಾರರು ವೇದಾಂತ ಸೂತ್ರವನ್ನು ಶ್ರೀಭಾಷ್ಯಮ್‍ನಲ್ಲಿ ಈ ತಿರುವಾಯ್ಮೊೞಿಯನ್ನು ಉಪಯೋಗಿಸಿಕೊಂಡು ವಿವರಿಸಿದ್ದಾರೆ. ಪರಾಶರ ಭಟ್ಟರ್ ತಿರುವಾಯ್ಮೊೞಿಯ ತನಿಯನ್‌ನಲ್ಲಿ ಇದೇ ತತ್ತ್ವಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. “ಮಿಕ್ಕ ಇಱೈ ನಿಲೈಯುಮ್ ಮೆಯ್ಯಾಮ್ ಉಯಿರ್ ನಿಲೈಯುಮ್, ತಕ್ಕ ನೆಱಿಯುಮ್ ತಡೈಯಾಗಿ ತೊಕ್ಕಿಯಲುಮ್, ಊೞ್ ವಿನೈಯುಮ್ ವಾೞ್ ವಿನೈಯುಮ್ ಓದುಮ್ ಕುರುಗೈಯರ್ ಕೋನ್ ಯಾೞಿನ್ ಇಸೈ ವೇದತ್ತಿಯಲ್”. ಅತ್ಯಂತ ಕರುಣಾಮಯಿಯಾದ ಪಿಳ್ಳೈ ಲೋಕಾಚಾರ್‍ಯರು ‘ತಿರುಮಂತ್ರಮ್’ ಈ ಅರ್ಥ ಪಂಚಕವನ್ನು ಎರಡು ಸೂತ್ರಗಳಲ್ಲಿ ಬಹಿರಂಗ ಪಡಿಸುತ್ತಾರೆ ಎಂದು ಕರುಣೆಯಿಂದಲಿ ವಿವರಿಸಿದ್ದಾರೆ, ಅವರು ಹೇಳಿದ್ದಾರೆ, “ಮಱ್ಱೆಲ್ಲಾಮ್ ಪೇಸಿಲುಮ್ ಎನ್ಗಿಱಪಡಿಯೇ ಅಱಿಯ ವೇಣ್ಡುಮ್ ಅರ್ಥಮ್ ಎಲ್ಲಾಮ್ ಇದುಕ್ಕುಳ್ಳೇ ಉಣ್ಡು” ಮತ್ತು “ಅದಾವದು – ಅನ್‍ಜರತ್ತಮ್”.
ಮಣವಾಳ ಮಾಮುನಿಗಳ್ “ವಿಷದವಾಕ್ ಶಿಕಾಮಣಿ” ಎಂದೂ ಹೆಸರಾದವರು ಈ ಸೂತ್ರಗಳನ್ನು ಅತಿ ಸುಂದರವಾಗಿ ವ್ಯಾಖ್ಯಾನಿಸುವಾಗ ‘ಹಾರಿತ ಸಂಹಿತ’ದಿಂದ ಈ ಕೆಳಗಿನ ಶ್ಲೋಕವನ್ನು ಮುಖ್ಯೀಕರಿಸಿದ್ದಾರೆ ಮತ್ತು ಅದನ್ನು ವಿವರಿಸಿದ್ದಾರೆ. “ಪ್ರಾಪ್ಯಸ್ಯ ಬ್ರಹ್ಮಣೋ ರೂಪಮ್ ಪ್ರಾಪ್ತುಶ್ಚ ಪ್ರತ್ಯಕಾತ್ಮನಃ ಪ್ರಾಪ್ತ್ಯುಪಾಯಮ್ ಪಲಮ್ ಪ್ರಾಪ್ತೇಸ್ ತದಾ ಪ್ರಾಪ್ತಿ ವಿರೋಧಿಚ ವದಂತಿ ಸಕಲಾ ವೇದಾಸೇತಿಹಾಸ ಪುರಾಣಕಾ; ಮುನಯಶ್ಚ ಮಹಾತ್ಮನೋ ವೇದವೇದಾರ್ಥವೇದಿನಃ” . ಐದು ತತ್ತ್ವಗಳು ಇದರಲ್ಲಿ ವಿವರಿಸಿದ್ದಾರೆ, ಅವುಗಳು :
- ಜೀವಾತ್ಮ ಸ್ವರೂಪಮ್ – ನಮ್ಮ ನಿಜ ಸ್ವರೂಪ, ಆತ್ಮಗಳದ್ದು
- ಪರಮಾತ್ಮ ಸ್ವರೂಪಮ್ – ಬ್ರಹ್ಮಮ್ ಆಗಿರುವ ಭಗವಂತನ ನಿಜ ಸ್ವರೂಪ
- ಉಪಾಯ ಸ್ವರೂಪಮ್ – ಅಂತಹ ಭಗವಂತನನ್ನು ಪಡೆಯಲು ನಮಗೆ ಇರುವ ನಿಜ ಮಾಧ್ಯಮ
- ಪಲ ಸ್ವರೂಪಮ್ – ಭಗವಂತನನ್ನು ಪಡೆದ ಮೇಲೆ ಇರುವ ನಿಜ ಫಲ
- ವಿರೋಧಿ ಸ್ವರೂಪಮ್ – ನಮಗೆ ಭಗವಂತನನ್ನು ಪಡೆಯಲು ಇರುವ ತೊಂದರೆಗಳ ನಿಜ ಸ್ವರೂಪ .
ಎಲ್ಲಾ ವೇದ ಶಾಸ್ತ್ರಗಳು ಈ ಐದು ತತ್ತ್ವಗಳನ್ನೇ ಪ್ರತಿಪಾದಿಸುತ್ತವೆ. ಆದ್ದರಿಂದ ಎಲ್ಲಾ ಆತ್ಮಗಳೂ ಇದನ್ನು ಕಲಿತು ಉದ್ಧಾರವಾಗಬೇಕು.
ಈ ಲೇಖನವು ಎಲ್ಲರಿಗೂ ತಿಳಿಯಲೇ ಬೇಕಾದ ಈ ಅರ್ಥ ಪಂಚಕವನ್ನು ವಿವರಿಸಲು ಒಂದು ಸಣ್ಣ ಪ್ರಯತ್ನವಾಗಿದೆ.
ತಿರುಪ್ಪಾವೈ – ಅರ್ಥ ಪಂಚಕಮ್
ತಿರುಪ್ಪಾವೈ ಉಭಯ ವೇದಾಂತದ ಸಾರವಾಗಿದೆ. ಯಾವಾಗ ಒಬ್ಬರು ತಿರುಪ್ಪಾವೈಯ ನಿಗೂಢ ಅರ್ಥಗಳನ್ನು ಮನಗಾಣುತ್ತಾರೋ, ಅವರ ಎಂಪೆರುಮಾನರತ್ತ ಇರುವ ಪಯಣದಲ್ಲಿರುವ ಎಲ್ಲಾ ತೊಂದರೆಗಳು ಸುಲಭವಾಗಿ ನಿರ್ಮೂಲನೆಯಾಗುತ್ತದೆ.
ಮುಮುಕ್ಷುಪ್ಪಡಿಯಲ್ಲಿ ಪಿಳ್ಳೈ ಲೋಕಾಚಾರ್‍ಯರು ವಿವರಿಸಿರುವ ಪ್ರಕಾರ ಮುಮುಕ್ಷು (ಯಾರು ಸಂಸಾರದಿಂದ ಮುಕ್ತವಾಗಲು ಬಯಸುತ್ತಾರೋ ಮತ್ತು ಪರಮಪದದಲ್ಲಿ ಎಂಪೆರುಮಾನರಿಗೆ ಶಾಶ್ವತ ಸೇವೆ ಮಾಡಲು ಇಚ್ಛಿಸುತ್ತಾರೋ) ಅವರಿಗೆ “ಅರ್ಥ ಪಂಚಕ”ದ ಸರಿಯಾದ ಅರ್ಥವಾಗಿರಬೇಕು. (ಐದು ರೀತಿಯ ವಿಷಯಗಳು). ‘ಅರ್ಥ ಪಂಚಕಮ್’ ಇವುಗಳನ್ನು ಒಳಗೊಂಡಿದೆ:
- ಪರಮಾತ್ಮ ಸ್ವರೂಪಮ್ (ಶ್ರೇಷ್ಠನಾದ ಭಗವಂತನ ಸ್ವರೂಪ)
- ಜೀವಾತ್ಮ ಸ್ವರೂಪಮ್ (ಪ್ರತಿಯೊಂದು ಆತ್ಮದ ನಿಜ ಸ್ವರೂಪ)
- ಉಪಾಯ ಸ್ವರೂಪಮ್ (ಪ್ರತಿಯೊಂದು ಆತ್ಮವು ಭಗವಂತನನ್ನು ಪಡೆಯಲು ಇರುವ ಮಾಧ್ಯಮದ ಸ್ವರೂಪ)
- ಉಪೇಯ ಸ್ವರೂಪಮ್ (ಶ್ರೇಷ್ಠನಾದ ಭಗವಂತನನ್ನು ಹೊಂದಿದ ಮೇಲೆ ಆತ್ಮದ ಗುರಿ) ಮತ್ತು
- ವಿರೋಧಿ ಸ್ವರೂಪಮ್ (ಪರಮ ಗುರಿಯನ್ನು ತಲುಪಲು ತಡೆಯಾಗುವಂತೆ ಪ್ರತಿಯೊಂದು ಆತ್ಮವು ಎದುರಿಸುವ ಅಡೆತಡೆಗಳು )
ತಿರುಪ್ಪಾವೈಯ ಮೊದಲನೆಯ ಪಾಸುರದಲ್ಲಿಯೇ ಆಣ್ಡಾಳ್ ಅರ್ಥ ಪಂಚಕಮ್‍ನನ್ನು ಚಿಕ್ಕದಾಗಿ ವಿವರಿಸಿದ್ದಾಳೆ. ಇಲ್ಲಿ ಅವಳು ಘೋಷಿಸುತ್ತಾಳೆ, “ನಾರಾಯಣನೇ ನಮಕ್ಕೇ ಪಱೈ ತರುವಾನ್” , ಇಲ್ಲಿ ನಾವು ಅರ್ಥೈಸಬಹುದಾಗಿದೆ, ಏನೆಂದರೆ:
- ನಾರಾಯಣನು ಪರಮಾತ್ಮ ಸ್ವರೂಪವನ್ನು ವಿವರಿಸಿದ್ದಾರೆ.
- ಇಲ್ಲಿ ನಾರಾಯಣನ್ ಶಬ್ದವು ಎರಡು ಅರ್ಥಗಳನ್ನು ಹೊಂದಿದೆ.
- ಅವನ ಪರತ್ವಮ್ (ಶ್ರೇಷ್ಠತೆ) – ಎಂಪೆರುಮಾನರು ಆಧಾರವು. (ಬೆಂಬಲಿಸುವ ಪ್ರದೇಶ ಅಥವಾ ಅಡಿಪಾಯ) ಮತ್ತು ಎಲ್ಲಾ ಜೀವಾತ್ಮಗಳೂ ಆಧೇಯಮ್ (ಆ ಅಡಿಪಾಯದಲ್ಲಿ ವಿಶ್ರಮಿಸುವವರು).
- ಅವನ ಸೌಲಭ್ಯಮ್ (ಎಲ್ಲಾ ಕಡೆಯಲ್ಲಿಯೂ ಇರುವುದರಿಂದ ಸುಲಭವಾಗಿ ದೊರಕುವ ) – ಎಂಪೆರುಮಾನರು ಎಲ್ಲಾ ಜೀವಾತ್ಮಗಳಿಗೂ ಅಂತರ್ಯಾಮಿ (ಒಳಗಿರುವ ಆತ್ಮ).
- ನಮಕ್ಕು ಎಂಬುದು ಜೀವಾತ್ಮ ಸ್ವರೂಪವನ್ನು ವಿವರಿಸುತ್ತದೆ – ಎಲ್ಲಾ ಜೀವಾತ್ಮವೂ ಎಂಪೆರುಮಾನರನ್ನು ಅವಲಂಬಿಸಿರುತ್ತದೆ. ‘ಏ’ಕಾರಮ್ (ನಮಕ್ಕೇ) ನಿಂದ ಆಣ್ಡಾಳ್ ,ಎಂಪೆರುಮಾನರಿಗೆ ಶರಣಾಗಲು ಸಿದ್ಧವಿರುವ ವ್ಯಕ್ತಿಯ ನಿಜ ಸ್ವರೂಪವನ್ನು ಗುರುತಿಸುತ್ತಾಳೆ. ಅದೇನೆಂದರೆ ಆಕಿಂಚನ್ಯಮ್ (ತನಗೇನೂ ಅರ್ಪಿಸಲು ಇಲ್ಲ ಎಂಬ ತಿಳುವಳಿಕೆ) , ಅನನ್ಯ ಗತಿತ್ವಮ್ (ಬೇರೆ ಆಶ್ರಯವಿಲ್ಲ) ಮತ್ತು ಅವರು ಸಂಪೂರ್ಣವಾಗಿ ಎಂಬೆರುಮಾನರಿಗೆ ಶರಣಾಗುತ್ತಾರೆ.
- ನಾರಾಯಣನೇ ತರುವಾನ್ ಎಂಬುದು ಉಪಾಯ ಸ್ವರೂಪವನ್ನು ವಿವರಿಸುತ್ತದೆ – ನಾರಾಯಣನೇ ತರುವಾನ್ ಎಂದರೆ “ನಾರಾಯಣನು ಮಾತ್ರ ಜೀವಾತ್ಮಗಳಿಗೆ ಪರಮ ಆಶೀರ್ವಾದವನ್ನು (ವರವನ್ನು) ಕೊಡುತ್ತಾನೆ (ಕೊಡಬಲ್ಲ) “
- ಪಱೈ ಎಂಬುದು ಉಪೇಯ ಸ್ವರೂಪಮ್ ನನ್ನು ವಿವರಿಸುತ್ತದೆ – ಪಱೈ ಎಂದರೆ ಎಂಪೆರುಮಾನರಿಗೆ ಕೈಂಕರ್‍ಯಮ್ ಮಾಡುವುದು ಮತ್ತು ನಮಗಾಗಿ ಏನನ್ನೂ ಅಪೇಕ್ಷಿಸದೇ ಇರುವುದು..
- ವಿರೋಧಿ ಸ್ವರೂಪಮ್ ಎಂಬುದು ನಮ್ಮ ಸ್ವ ಸ್ವಾತಂತ್ರ್ಯಮ್ (ಸ್ವಾತಂತ್ರ) ಅದು ನಮಗೆ ಎಂಪೆರುಮಾನರು ಸಹಾಯ ಮಾಡುವುದನ್ನು ನಿಲ್ಲಿಸುತ್ತದೆ. (ಅಡಚಣೆಯಾಗುತ್ತದೆ ).
ಇದನ್ನು ಅನೇಕ ಪೂರ್ವಾಚಾರ್‍ಯರು ಅವರ ವಿಸ್ತಾರ ವ್ಯಾಖ್ಯಾನಗಳಲ್ಲಿ ಮತ್ತೂ ವಿವರಿಸಿದ್ದಾರೆ.
ತಿರುಪ್ಪಾವೈ ವ್ಯಾಖ್ಯಾನ ಕರ್ತರು :
ಪರಮಾತ್ಮ ಸ್ವರೂಪಮ್ ನನ್ನು ಇನ್ನೂ ಇಲ್ಲಿ ವಿವರಿಸಲಾಗಿದೆ:
- “ಪಾಱ್‌ಕಡಲುಳ್ ಪೈಯ ತುಇನ್ಱ ಪರಮನ್” – ಶ್ರೇಷ್ಠನಾದ ಎಂಪೆರುಮಾನರು ಕ್ಷೀರ ಸಮುದ್ರದ ಮೇಲೆ ಮಲಗಿರುವುದು.
- “ಓನ್ಗಿ ಉಲಗಳಣ್ದ ಉತ್ತಮನ್” – ಮಹಾ ಉತ್ತಮನಾದ ಎಂಪೆರುಮಾನರು ಮೂರು ಲೋಕಗಳನ್ನು ಅಳೆದರು.
- “ಪಱ್‍ಬನಾಭನ್ “ – ಯಾರಿಗೆ ನಾಭಿಯಲ್ಲಿ ಕಮಲದ ಹೂವಿನಿಂದ ಬ್ರಹ್ಮನು ಹುಟ್ಟುವನೋ
- “ತೂಯ ಪೆರುನೀರ್ ಯಮುನೈತ್ತುಱೈವನ್” – ಶುದ್ಧವಾದ ಯಮುನೆಯ ನದಿಯ ತೀರದಲ್ಲಿ ವಾಸವಾಗಿರುವವನು.
- “ಗೋವಿಂದನ್” – ಗೋವುಗಳನ್ನು ರಕ್ಷಿಸುವವನು, ಅವುಗಳಿಗೆ ಸಂತೋಷವನ್ನು ಕೊಡುವವನು, ಭೂಮಿ ತಾಯಿಗೆ ಸಂತೋಷವನ್ನು ನೀಡುವವನು.
ಜೀವಾತ್ಮ ಸ್ವರೂಪವನ್ನು 6 ರಿಂದ 15 ನೆಯ ಪಾಸುರದವರೆಗೂ ವಿವರಿಸಿದ್ದಾರೆ. ಇಲ್ಲಿ ಜೀವಾತ್ಮಗಳು ಇತರ ಶ್ರೀವೈಷ್ಣವರ ಜೊತೆಗೆ ಸಂಬಂಧವನ್ನು ಯಾವಾಗಲೂ ಹುಡುಕಬೇಕು. ಮತ್ತು ಎಂಪೆರುಮಾನರನ್ನು ಅವರ ಮೂಲಕ ಸಮೀಪಿಸಬೇಕು ಎಂದು ಈ ಪಾಸುರಗಳಲ್ಲಿ ಸ್ಥಾಪಿಸಲಾಗಿದೆ. ಮತ್ತೂ ಮುಂದೆ 16ನೆಯ ಮತ್ತು 17ನೆಯ ಪಾಸುರದಲ್ಲಿ ಜೀವಾತ್ಮಗಳು ಎಂಪೆರುಮಾನರಿಗೆ ಅತ್ಯಂತ ಪ್ರೀತಿಪಾತ್ರರಾದ ನಿತ್ಯಸೂರಿಗಳನ್ನು ವೈಭವೀಕರಿಸಬೇಕು ಎಂದು ವಿವರಿಸಲಾಗಿದೆ. 18ನೆಯ ಮತ್ತು 20ನೆಯ ಪಾಸುರಗಳಲ್ಲಿ ಜೀವಾತ್ಮಗಳು ಪಿರಾಟ್ಟಿಯ ಪುರುಷಕಾರದ ಸಮೇತ ಎಂಪೆರುಮಾನರನ್ನು ಸಮೀಪಿಸಬೇಕು ಎಂದು ಸ್ಥಾಪಿಸಲಾಗಿದೆ. (ನಪ್ಪಿನ್ನೈ ಪಿರಾಟ್ಟಿ ನಾಚ್ಚಿಯಾರ್ ಅವರು ನೀಳಾ ದೇವಿಯ ಅವತಾರ ಮತ್ತು ಅವರು ಕೃಷ್ಣನ ಅತ್ಯಂತ ಪ್ರೀತಿಯ ಮಡದಿ ವೃಂದಾವನದಲ್ಲಿ ).
ವಿರೋಧಿ ಸ್ವರೂಪಮ್ ನನ್ನು 2ನೆಯ ಪಾಸುರದಲ್ಲಿ ವಿವರಿಸಲಾಗಿದೆ, ಮುಖ್ಯವಾಗಿ ನೆಯ್ಯುಣ್ಣೋಮ್, ಪಾಲುಣ್ಣೋಮ್ ಎಂದು. ಇದರ ಅರ್ಥ ನಾವು ಎಂಪೆರುಮಾನರನ್ನು ಬಿಟ್ಟು ಬೇರೆ ಯಾವ ಆನಂದಕೊಡುವ ವಸ್ತುಗಳನ್ನು ಸ್ವೀಕರಿಸುವುದಿಲ್ಲ ಭಗವಂತನನ್ನು ಹೊಂದುವ ಇಚ್ಛೆಯಿರುವುದರಿಂದ ಎಂದು ಹೇಳಲಾಗಿದೆ. ಆಣ್ಡಾಳ್ ಮತ್ತೂ ಹೇಳುತ್ತಾಳೆ “ಸೈಯ್ಯಾದನ ಚೆಯ್ಯೋಮ್” ಇದರ ಅರ್ಥ ನಮ್ಮ ಪೂರ್ವಾಚಾರ್‍ಯರು ಯಾವುದನ್ನು ವರ್ಜ್ಯ ಎಂದು ಹೇಳಿ ಯಾವುದನ್ನು ಮಾಡುವುದಿಲ್ಲವೋ ಅವುಗಳನ್ನು ನಾವೂ ಮಾಡುವುದಿಲ್ಲ.
ಇದೆಲ್ಲದರ ಮೇಲೆ, ಉಪಾಯ ಸ್ವರೂಪಮ್ ಮತ್ತು ಉಪೇಯ ಸ್ವರೂಪಮ್ ಗಳು ನಮಗೆ ಅತ್ಯಂತ ಮುಖ್ಯವಾಗಿ ಅರ್ಥವಾಗಬೇಕು. ಆಣ್ಡಾಳ್ ಈ ಪ್ರಮುಖ ತತ್ತ್ವಗಳನ್ನು ತಿರುಪ್ಪಾವೈನ 28ನೆಯ ಮತ್ತು 29ನೆಯ ಪಾಸುರಗಳಲ್ಲಿ ಗೋಪಿಕೆಯರ ಭಾವದಲ್ಲಿ ಹೇಳಿದ್ದಾರೆ. ಪೆರಿಯವಾಚ್ಚಾನ್ ಪಿಳ್ಳೈ ಮತ್ತು ನಾಯನಾರ್ ರವರು ಅತಿ ಸುಂದರವಾಗಿ ಈ ಪಾಸುರಗಳನ್ನು ವ್ಯಾಖ್ಯಾನಿಸಿದ್ದಾರೆ. ನಾಯನಾರ್ ರವರ ವ್ಯಾಖ್ಯಾನವು ಅತ್ಯಂತ ವಿಸ್ತಾರವಾಗಿ ಅನೇಕ ವಿವರಣೆಗಳ ಸಮೇತವಾಗಿದೆ. ನಾವು ಈ ಪಾಸುರಗಳ ಸಾರವನ್ನು ನೋಡೋಣ ಬನ್ನಿ:
ಉಪಾಯ ಸ್ವರೂಪಮ್ – ಕಱವೈಗಳ್ ಪಿನ್ಚೆನ್‍ಱು – 28ನೆಯ ಪಾಸುರದಲ್ಲಿ ಆಣ್ಡಾಳ್ , ಎಂಪೆರುಮಾನರೇ ಸಿದ್ಧ ಸಾಧನಮ್ (ಸ್ಥಾಪಿತವಾದ ಉಪಾಯವು , ನಮ್ಮ ಸ್ವಂತ ಪ್ರಯತ್ನದಿಂದ ಸಾಧಿಸಲು ಸಾಧ್ಯವಿಲ್ಲ) ಎಂದು ಈ ಪಾಸುರದಲ್ಲಿ ಹೇಳಿದ್ದಾಳೆ.
- ಮೊದಲು ಅವಳು ತನಗೆ ಯಾವ ಅನ್ವಯವೂ ಇಲ್ಲವೆಂದು ಘೋಷಿಸುತ್ತಾಳೆ -ಕರ್ಮ ಯೋಗ, ಜ್ಞಾನ ಯೋಗ ಮತ್ತು ಭಕ್ತಿ ಯೋಗದಲ್ಲಿ.
- ನಮಗೆ ಕರ್ಮ ಯೋಗವಿಲ್ಲ ಏಕೆಂದರೆ ಈ ಕೆಳಗಿನ ಯಾವ ಕರ್ಮಯೋಗದ ಅವಶ್ಯಕತೆಗಳೂ ನಮ್ಮಿಂದ ಪೂರ್ತಿಯಾಗಿಲ್ಲ.
- ಮೇಧಾವಿಯಾದ ಪಂಡಿತರನ್ನು ಹಿಂಬಾಲಿಸಬೇಕು, ಆದರೆ ಇಲ್ಲಿ ನಾವು ಗೋವುಗಳ ಹಿಂದೆ ಹೋಗುತ್ತಿದ್ದೇವೆ , ಪಂಡಿತರನ್ನು ಬಿಟ್ಟು.
- ದಿವ್ಯದೇಶಗಳಿಗೆ ಹೋಗಬೇಕು, ಆದರೆ ಇಲ್ಲಿ ನಾವು ಅರಣ್ಯಕ್ಕೆ ಹೋಗುತ್ತಿದ್ದೇವೆ. ಕಾಡಿಗೆ ಹೋಗಿ ತಪಸ್ಸನ್ನು ಮಾಡಿದರೆ ಅದು ಕರ್ಮ ಯೋಗದ ಭಾಗವಾಗಿ ಪರಿಗಣಿಸಬಹುದು. ಆದರೆ ನಾವು ಕಾಡಿಗೆ ಹೋಗುತ್ತಿರುವುದು ಗೋವುಗಳನ್ನು ಮೇಯಿಸಲು. ಆದರೂ ಗೋವುಗಳನ್ನು ಮೇಯಿಸುವುದು ಅವರವರ ವರ್ಣ ಧರ್ಮದ ಭಾಗವಾಗಿರಬಹುದು. ಆದರೆ ನಾವು ಹಸುಗಳನ್ನು ಮೇಯಿಸುತ್ತಿರುವುದು ಅದು ಕೊಡುವ ಹಾಲಿಗಾಗಿ (ಕಱವೈ), ಮತ್ತೆ ಯಾವುದಕ್ಕಾಗಿಯೂ ಅಲ್ಲ.
- ನಾವು ತಿನ್ನುವ ಆಹಾರಕ್ಕೂ ಅನೇಕ ನಿಬಂಧನೆಗಳಿವೆ. ಆದರೆ ನಾವು ಯಾವ ನಿಬಂಧನೆಗಳನ್ನೂ, ಕಟ್ಟುಪಾಡುಗಳನ್ನೂ ಪಾಲಿಸುತ್ತಿಲ್ಲ. ನಾವು ನಡೆಯಬೇಕಾದರೆ ತಿನ್ನುತ್ತೇವೆ, ನಾವು ಎರಡೂ ಕೈಗಳಲ್ಲಿ ತಿನ್ನುತ್ತೇವೆ, ಮತ್ತು ನಾವು ಸ್ನಾನ ಮಾಡದೇ ತಿನ್ನುತ್ತೇವೆ.
- ನಮಗೆ ಜ್ಞಾನ ಯೋಗವೂ ಇಲ್ಲ ಏಕೆಂದರೆ “ಅಱಿವೊನ್‍ಱುಮ್ ಇಲ್ಲಾದ ಆಯ್‍ಕ್ಕುಲಮ್” ನ ಒಂದು ಭಾಗ. ಇದರ ಅರ್ಥ ನಮಗೆ ಯಾವ ನಿಜವಾದ ಬುದ್ಧಿಯೂ ಇಲ್ಲ.
- ಭಕ್ತಿಯು ಜ್ಞಾನ ವಿಷೇಶಮ್ (ಜ್ಞಾನದ ವಿಕಸಿತ ಸ್ಥಿತಿ) . ನಮಗೆ ಜ್ಞಾನವೇ ಇಲ್ಲದಿರುವುದರಿಂದ, ಭಕ್ತಿ ಯೋಗವನ್ನು ಮಾಡುವ ಪ್ರಶ್ನೆಯೇ ಬರುವುದಿಲ್ಲ.
- ಆದರೆ ನಮಗೆ ಒಂದು ಪುಣ್ಯವಿದೆ. ಅದು ನಾವು ಪರಮ ಧರ್ಮವಾದ ಭಗವಂತನನ್ನು ಉಪಚರಿಸಿ, ಪೋಷಿಸುತ್ತಿರುವೆವು. (ಕೃಷ್ಣಮ್ ಧರ್ಮಮ್ ಸನಾತನಮ್ – ಕಣ್ಣನ್ ಎಂಪೆರುಮಾನರೇ ನಿರಂತರ ಧರ್ಮದ ತತ್ತ್ವ). ಮತ್ತು ಈ ಭಾಗ್ಯ ನಮ್ಮ ಸ್ವಯಂ ಪ್ರಯತ್ನದಿಂದ ಸಾಧಿಸಿದ್ದಲ್ಲ. – ನೀನೇ ನೀನಾಗಿ ಸ್ವತಃ ನಮ್ಮನ್ನು ಆಯ್ಕೆ ಮಾಡಿ, ನಮ್ಮಲ್ಲಿಗೆ ಬಂದು ನಮ್ಮೊಡನೆ ವಾಸವಾಗಿರುವೆ. ಆದ್ದರಿಂದ ನಮಗೆ ಹೊರಗಿನ ವೈರಿಗಳು (ಕರ್ಮ/ಜ್ಞಾನ/ಭಕ್ತಿ ಯೋಗಗಳೆಂಬ) ಮತ್ತು ಒಳಗಿನ ವೈರಿಗಳಾದ (ಸ್ವಗತ ಸ್ವೀಕಾರಮ್ – ನಾವು ನಾವಾಗಿಯೇ ಎಂಪೆರುಮಾನರನ್ನು ಸಮೀಪಿಸಿ ನಮ್ಮ ಪ್ರಯತ್ನವನ್ನೇ ಉಪಾಯವಾಗಿ ಪರಿಗಣಿಸುವುದು) ಇವು ಯಾವುವೂ ನಮ್ಮ ಹತ್ತಿರ ಇಲ್ಲ.
- ನಮಗೆ ಯಾವ ಅರಿವೂ ಇಲ್ಲದಿರುವ ಹಾಗೆ, ನಿನ್ನಲ್ಲಿಯೂ ಯಾವ ಕೊರತೆಯೂ ಇಲ್ಲ. ನೀನು ಕಲ್ಯಾಣ ಗುಣಗಳಿಂದ ಸಂಪೂರ್ಣವಾಗಿರುವೆ. ಅದರಲ್ಲೂ ನೀನು ಗೋವಿಂದನ ರೂಪದಲ್ಲಿ ಗೋಪಿಕೆಯರ/ ಗೋಪರ ಮಧ್ಯದಲ್ಲಿರುವಾಗ ನಿನ್ನ ಕಲ್ಯಾಣ ಗುಣಗಳು ಸಂಪೂರ್ಣವಾಗಿ ತೋರಿಕೆಯಾಗುತ್ತದೆ. ನೀನು ನಿತ್ಯಸೂರಿಗಳ ಜೊತೆಗೆ ಇರುವಾಗ, ನಿನ್ನ ಶ್ರೇಷ್ಠತೆ ಮಾತ್ರ ತೋರಿಕೆಯಾಗುತ್ತದೆ, ಆದರೆ ನೀನು ಹಸು, ದನ ಕಾಯುವ ಹುಡುಗರ/ಹುಡುಗಿಯರ ಮಧ್ಯದಲ್ಲಿದ್ದಾಗ ನಿನ್ನ ಸೌಲಭ್ಯಮ್ (ಸುಲಭವಾಗಿ ದೊರಕುವ) ಸಂಪೂರ್ಣವಾಗಿ ಬಹಿರಂಗವಾಗುತ್ತದೆ.
- ನೀನು ಬರಿಯ ಶುಭ ಗುಣಗಳು ಮಾತ್ರವಲ್ಲದೇ ನೀನು ಸಿದ್ಧ ಸಾಧನಮ್ (ಸ್ಥಾಪನೆಯಾಗಿರುವ ಉಪಾಯಮ್, ಒಬ್ಬರ ಪ್ರಯತ್ನದಿಂದ ಸಾಧಿಸಲು ಸಾಧ್ಯವಿಲ್ಲ. ) ಪ್ರತಿಯೊಂದು ಜೀವಾತ್ಮದೊಂದಿಗೂ ನಿನಗೆ ಸಂಬಂಧವಿದೆ. ನೀನು ಪ್ರತಿಯೊಂದು ಜೀವಾತ್ಮದ ಮನಸ್ಸಿನೊಳಗಿರುವ ಪರಮಾತ್ಮಾ , ನಿನ್ನ ಅಸ್ತಿತ್ವವಿಲ್ಲದೇ, ಯಾವ ಜೀವಗಳೂ ಅವರೇ ಬದುಕಲು ಸಾಧ್ಯವಿಲ್ಲ. ನೀನೇ ಹೇಳಿಕೊಟ್ಟ ‘ತಿರುಮಂತ್ರಮ್’ ಪರಮಾತ್ಮನಿಗೂ ಜೀವಾತ್ಮನಿಗೂ ಒಂಭತ್ತು ವಿಧದ ಸಂಬಂಧವನ್ನು ಗುರುತಿಸುತ್ತದೆ. ಅವುಗಳು ಪಿತಾ-ಪುತ್ರ (ತಂದೆ-ಮಗ), ರಕ್ಷಕ-ರಕ್ಷ್ಯ (ರಕ್ಷಿಸುವವನು – ರಕ್ಷಿಸಲ್ಪಡುವವನು), ಶೇಷಿ – ಶೇಷ (ಯಜಮಾನ-ಸೇವಕ), ಭರ್ತೃ-ಭಾರ್ಯ (ಗಂಡ-ಹೆಂಡತಿ), ಜ್ಞೇಯ–ಜ್ಞಾತ (ತಿಳಿದವನು-ತಿಳಿಯುವವನು), ಸ್ವಾಮಿ-ಸ್ವಮ್ (ಒಡೆಯ-ವಸ್ತು), ಆಧಾರ-ಆಧೇಯ (ಆಧಾರವಾಗಿರುವವನು – ಆಧಾರವನ್ನು ಅವಲಂಬಿಸಿರುವುದು), ಆತ್ಮ-ಶರೀರ (ಶ್ರೇಷ್ಟ ಆತ್ಮ- ಪ್ರತಿಯೊಂದು ಆತ್ಮ), ಭೋಕ್ತಾ-ಭೋಗ್ಯ (ಆನಂದಿಸುವವನು – ಆನಂದಿಸಲ್ಪಡುವುದು). ಆದ್ದರಿಂದ ನಿನಗೆ ನಮ್ಮನ್ನು ರಕ್ಷಿಸುವ ಹೊಣೆಯಿದೆ ನಾವು ನಿನಗೆ ಶರಣಾಗಿರುವೆವು.
- ಅಜ್ಞಾನದಿಂದ ಮತ್ತು ಪ್ರೀತಿಯಿಂದ ನಾವು ನಿನ್ನನ್ನು ನಾರಾಯಣಾ ಎಂದು ಕರೆದಿದ್ದೇವೆ. ನೀನು ಇಲ್ಲಿ ಬಂದಿರುವುದು ಗೋವಿಂದನೆಂದು ನಿನ್ನ ಸರಳತೆಯನ್ನು ಪ್ರತಿಷ್ಠಾಪಿಸಲು, ಆದರೆ ನಾವು ನಿನ್ನನ್ನು ನಾರಾಯಣಾ ಎಂದು ಕರೆದಿದ್ದನ್ನು ಮರೆತಿರುವೆ. ಆದ್ದರಿಂದ ನಮ್ಮನ್ನು ಮನ್ನಿಸು. (ನಾಯನಾರ್ ರವರು ಇಲ್ಲಿ ವಿವರಿಸಿದ್ದಾರೆ : ಆಣ್ಡಾಳ್ ಇದನ್ನು ನಮಗೆ ತೋರಿಸುತ್ತಿದ್ದಾಳೆ ನಾವು ಎಂಪೆರುಮಾನರಿಗೆ ಶರಣಾಗುವಾಗ ನಾವು ನಮ್ಮ ತಪ್ಪುಗಳಿಗೆ ಕ್ಷಮೆಯನ್ನು ಕೇಳಿಕೊಳ್ಳಬೇಕು ಎಂದು).
- ನೀನೇ ಅಂತಿಮ ಉಪಾಯವಾದುದರಿಂದ ,ಮತ್ತು ನಮಗೂ ಆಕಿಂಚನ್ಯಮ್ (ನಮ್ಮ ಕೈಯಲ್ಲಿ ಏನೂ ಇಲ್ಲದಿರುವುದು) ಮತ್ತು ಅನನ್ಯ ಗತಿತ್ವಮ್ (ಬೇರೆ ಆಶ್ರಯವಿಲ್ಲದಿರುವುದು) ಇರುವುದರಿಂದ ಮತ್ತು ನಮಗೆ ವಿಲಕ್ಕಾಮೈ (ಎಂಪೆರುಮಾನರು ನಮ್ಮನ್ನು ರಕ್ಷಿಸುವಾಗ ತಡೆಯಿಲ್ಲದಿರುವುದು) ಇರುವುದರಿಂದ, ದಯವಿಟ್ಟು ನಮಗೆ ಪರಮ ಕೈಂಕರ್‍ಯಮ್‍ನನ್ನು ಕೊಡು.
ಆದ್ದರಿಂದ ಆಣ್ಡಾಳ್ ಎಂಪೆರುಮಾನರ ನಿರಪೇಕ್ಷಾ ಉಪಾಯತ್ವಮ್ (ನಮ್ಮನ್ನು ರಕ್ಷಿಸುವುದು ಏನೂ ಅಪೇಕ್ಷೆಯಿಲ್ಲದೆ) ನನ್ನು ಈ ಪಾಸುರದಲ್ಲಿ ಸ್ಥಾಪಿಸುತ್ತಾಳೆ. ಆಕಿಂಚನ್ಯಮ್, ಅನನ್ಯ ಗತಿತ್ವಮ್ ಮತ್ತು ವಿಲಕ್ಕಾಮೈಗಳು ಎಂಪೆರುಮಾನರು ನಮ್ಮನ್ನು ರಕ್ಷಿಸಲು ಬೇಕಾದ ಅವಶ್ಯಕ ಗುಣಗಳೆಂದು ನಾವು ಇನ್ನೂ ತಿಳಿಯಬೇಕಾಗಿದೆ. – ಇವು ಉಪಾಯಮ್‍ನ ಭಾಗವಲ್ಲದೇ , ಇವುಗಳು ಸರಳವಾಗಿ ಅಧಿಕಾರಿ ವಿಶೇಷಣಮ್ (ಮುಮುಕ್ಷುವಿನ ಗುಣಗಳು). ಈ ಗುಣಗಳು ಯಾವ ಜೀವಾತ್ಮಗಳು ಎಂಪೆರುಮಾನರಿಗೆ ಶರಣಾಗಬೇಕೆಂದು ಬಯಸುತ್ತಾರೋ ಅವರಿಂದ ಯಾವ ಜೀವಾತ್ಮಗಳು ಎಂಪೆರುಮಾನರಿಗೆ ಶರಣಾಗಲು ಬಯಸುವುದಿಲ್ಲವೋ ಅವರನ್ನು ಬೇರ್ಪಡಿಸುತ್ತದೆ.
ಉಪೇಯ ಸ್ವರೂಪಮ್ – ಚಿಱ್ಱಮ್ ಚಿಱುಕಾಲೇ – 29ನೆಯ ಪಾಸುರಮ್
ಎಂಪೆರುಮಾನರಿಗೆ ಸಂತೋಷ ಕೊಡುವ ಕೈಂಕರ್‍ಯವು ಪರಮ ಗುರಿ ಎಂದು ಆಣ್ಡಾಳ್ ಈ ಪಾಸುರದಲ್ಲಿ ಸ್ಥಾಪಿಸುತ್ತಾಳೆ.
- ನಾವು ಇಲ್ಲಿ ಮುಂಜಾನೆಯ ಸಮಯದಲ್ಲಿ ನಿನ್ನಲ್ಲಿ ಶರಣಾಗಲು ಬಂದಿದ್ದೇವೆ. ನಾಯನಾರ್‌ರವರು ಮುಂಜಾನೆಯ ಸಮಯವನ್ನು ಮುಮುಕ್ಷುವಾಗಲು ಪ್ರಾರಂಭದ ದಿನಗಳಿಗೆ ಹೋಲಿಸಿದ್ದಾರೆ. – ಈ ಸ್ಥಿತಿಯು ನಾವು ನಮ್ಮ ಅಜ್ಞಾನದಿಂದ ಹೊರಗೆ ಬಂದು , ಆದರೆ ಎಂಪೆರುಮಾನರ ಮೇಲೆ ಪೂರ್ತಿಯಾಗಿ ಪ್ರೀತಿಯನ್ನು ಬೆಳೆಸಿಕೊಳ್ಳದ ಸ್ಥಿತಿ. ಏಕೆಂದರೆ ಬೆಳಗ್ಗೆಯು ಪೂರ್ತಿಯಾಗಿ ಜಾಗ್ರತವಾದ ಮತ್ತು ಜ್ಞಾನದ ಸ್ಥಿತಿ.
- ನೀನೇ ನಮ್ಮಲ್ಲಿಗೆ ಬಂದು ನಮ್ಮನ್ನು ರಕ್ಷಿಸಬೇಕು. (ಏಕೆಂದರೆ ನೀನು ಒಡೆಯ ಮತ್ತು ನಾವು ನಿನ್ನ ಒಡೆತನದಲ್ಲಿರುವ ವಸ್ತುಗಳು), ಆದರೆ ನಾವು ನಾವಾಗಿಯೇ ನಿನ್ನಲ್ಲಿಗೆ ಬಂದಿರುವೆವು. ಯಾವಾಗ ದಂಡಕಾರಣ್ಯದ ಋಷಿಗಳು ಶ್ರೀರಾಮನಲ್ಲಿಗೆ ಬಂದು ಕಾಣುವಾಗ, ರಾಮನು ಅತ್ಯಂತ ಶೋಕಪಡುತ್ತಾನೆ. ಏಕೆಂದರೆ ತಾನು ಅವರನ್ನು ತನ್ನಲ್ಲಿಗೆ ಬರುವಂತೆ ಮಾಡಿದೆನು ಅದಕ್ಕೆ ಬದಲಾಗಿ ಮೊದಲೇ ತಾನು ಅವರಲ್ಲಿಗೆ ಹೋಗಿ ಅವರ ಕಷ್ಟಗಳನ್ನು ಕೇಳಬೇಕಿತ್ತು ಎಂದು. ಸ್ವಗತ ಸ್ವೀಕಾರ ಎಂಬುದು ಎಂಪೆರುಮಾನರ ಹೃದಯಕ್ಕೆ ಶೋಕವನ್ನು ತರುವಂಥದ್ದು ಏಕೆಂದರೆ ಅದು ಸಾಮಾನ್ಯವಾಗಿ ಇರುವಂಥದ್ದಲ್ಲ.
- ನಾವು ಬಂದಿದ್ದಲ್ಲದೇ, ನಾವು ಈಗ ನಿನಗೆ ನಮ್ಮ ಪ್ರಣಾಮಗಳನ್ನೂ ಮಾಡಿದ್ದೇವೆ. ದೇವತಾಂತರಮ್‍ಗಳು (ಬೇರೆ ದೇವತೆಗಳು) ಅವರ ಆರಾಧಕರು ಅವರನ್ನು ನಿರಂತರ ಪೂಜಿಸುತ್ತಿರಲಿ ಎಂದು ಅಪೇಕ್ಷಿಸುತ್ತಾರೆ, ಆದರೆ ಎಂಪೆರುಮಾನರು ಸ್ವಾರಾಧ್ಯನ್ (ಸುಲಭವಾಗಿ ಪೂಜಿಸಲ್ಪಡುವವನು) ಆದ್ದರಿಂದ ಅವನು ತನ್ನ ಭಕ್ತರು ತನಗೆ ನಮಸ್ಕಾರಗಳನ್ನು ಮಾಡಲಿ ಎಂದು ಕೂಡಾ ಅಪೇಕ್ಷಿಸುವುದಿಲ್ಲ. – ಅವನು ಭಕ್ತರು ತನ್ನ ಕಡೆಗೆ ಬಂದರೆ ಸಾಕು ಸಂತೋಷ ಪಡುತ್ತಾನೆ. ಅಂತಹದು ಎಂಪೆರುಮಾನರ ಶ್ರೇಷ್ಠತೆ. – ಅವನು ಒಬ್ಬ ತಂದೆಯಂತೆ, ತನ್ನ ಮಕ್ಕಳನ್ನು ನೋಡಿಯೇ ಸಂತೋಷ ಪಡುತ್ತಾನೆ, ಅವರಿಂದ ಏನನ್ನೂ ಅಪೇಕ್ಷಿಸುವುದಿಲ್ಲ.
- ನಾವು ಎಲ್ಲಾ ವೈದಿಕರಿಗೂ ಪ್ರಿಯವಾದ ನಿನ್ನ ಕಮಲದಂತಹ ಪಾದಗಳನ್ನು ವೈಭವೀಕರಿಸಿದ್ದೇವೆ. ನಾವು ನಿನ್ನನ್ನೂ ನಿನ್ನ ಕಮಲಪಾದಗಳನ್ನೂ ವೈಭವೀಕರಿಸಿದ್ದು ಏನನ್ನಾದರೂ ಪಡೆಯಲು ಅಲ್ಲ – ನಮ್ಮ ಉದ್ದೇಶವೇನೆಂದರೆ ಅವುಗಳನ್ನು ವೈಭವೀಕರಿಸುವುದು , ಅದೇ ಒಂದು ಕಾರ್ಯ ಮತ್ತು ಗುರಿ.
- ಈಗ ನಾವು ಹೇಳುವುದನ್ನು ಕೇಳು, ನಾವು ಈಗ ಪಱೈ(ಗುರಿ) ಎಂದರೆ ಏನು ಎಂದು ವಿವರಿಸಲಿದ್ದೇವೆ. ನೀನು ವೃಂದಾವನಕ್ಕೆ ಇಳಿದು ಬಂದಿದ್ದು ಸಾಕಾಗುವುದಿಲ್ಲ. ಈಗ ನೀನು ನಮ್ಮ ಆಸೆಗಳನ್ನು ಪೂರೈಸಬೇಕು. ನೀನು ನಮ್ಮ ಈ ಸಂತತಿಯಾದ ಗೋವುಗಳನ್ನು ಕಾಯುವ ಜನಗಳ ಜಾತಿಯಲ್ಲಿ ಸ್ವಂತ ಇಚ್ಛೆಯಿಂದ ಹುಟ್ಟಿದ್ದೀಯ. ನೀನು ನಮ್ಮನ್ನು ಆಪ್ತವಾದ ಮತ್ತು ಸೂಕ್ತವಾದ ಕೈಂಕರ್‍ಯದಲ್ಲಿ ನಿಯಮಿಸಬೇಕು. ಇದು ನಿನಗೆ ನಿರ್ದೇಶಣ. ಏಕೆಂದರೆ ನೀನು ನಮ್ಮನ್ನು ಒಳ್ಳೆಯ ರೀತಿಯಲ್ಲಿ ಪರಿವರ್ತನೆ ಮಾಡಿ, ನಮಗೆ ನಿನ್ನಲ್ಲಿ ಅತ್ಯಂತ ಪ್ರೀತಿ ಉಂಟಾಗುವಂತೆ ಮಾಡಿದ್ದೀಯ. ಈಗ ನೀನು ನಮಗೆ ಕೈಂಕರ್‍ಯವನ್ನೂ ಸಹ ನೀಡಬೇಕು ಎಂದು ಕೇಳುತ್ತಾರೆ.
- ಎಂಪೆರುಮಾನರು “ನಾನು ನಿಮಗೆ ವ್ರತದ (ನೋಂಬು) ಫಲವನ್ನು ಕೊಡುತ್ತೇನೆ ಎಂದು ಹೇಳಿದಾಗ, ಅವರು ಇನ್ನೂ ವಿವರಿಸುತ್ತಾರೆ. ವ್ರತ ಒಂದು ನೆಪ ಮಾತ್ರ ನಿನ್ನಲ್ಲಿ ಸಂಪೂರ್ಣವಾಗಿ ವ್ಯಸ್ತವಾಗಲು. ನಾವು ಕೈಂಕರ್‍ಯಕ್ಕೆ ಬದಲಾಗಿ ಏನನ್ನೂ ಸ್ವೀಕರಿಸಲು ಇಲ್ಲಿಗೆ ಬಂದಿಲ್ಲ.
- ಅವಳು ಹೇಳುತ್ತಾಳೆ, -ಅವನು ಎಲ್ಲಿದ್ದರೂ ,ಪರಮಪದದಲ್ಲಿಯೋ ಅಥವಾ ಸಂಸಾರದಲ್ಲಿಯೋ ಇದ್ದರೂ , ಅವಳು ಎಂಪೆರುಮಾನರ ಜೊತೆಯಲ್ಲಿಯೇ ಇರಬೇಕೆಂದು. ಹೇಗೆ ಇಳೈಯ ಪೆರುಮಾಳ್ (ಲಕ್ಷ್ಮಣನ್) ಪೆರುಮಾಳ್ (ಶ್ರೀರಾಮನ್) ಜೊತೆಯಲ್ಲಿಯೇ ಕಾಡಿಗೆ ಹೋಗುತ್ತಾನೆಯೋ ಮತ್ತು ಅವನನ್ನು ಎಂದೂ ಯಾವ ಬೆಲೆಗೂ ಯಾವ ರೀತಿಯಲ್ಲಿಯೂ ಬಿಟ್ಟಿರಲಾರನೋ ಆಣ್ಡಾಳ್ ಕೂಡಾ ಕಣ್ಣನ್ ಎಂಪೆರುಮಾನರನ್ನು ಹಾಗೆಯೇ ಬಿಟ್ಟಿರಲಾರಳು. ಅವಳು ಹೇಳುತ್ತಾಳೆ ಅವನೇ ಒಡೆಯ ಮತ್ತು ತಾನು ಅವನ ಒಡೆತನವನ್ನು ಹೊಂದಿರುವ ವಸ್ತು. ಮತ್ತು ಈ ರೀತಿಯ ಸಂಬಂಧವು ನಿರಂತರವಾದದ್ದು. ಅವಳು ಅಂತಹ ಸಂಬಂಧವನ್ನು ನೋಡಲು ಸಿಗುವಂತಹ ಸಂಬಂಧದಿಂದ ಸ್ಥಾಪಿಸಲು ಕೇಳಿಕೊಳ್ಳುತ್ತಾಳೆ.
- ಅವಳು ಕೊನೆಯಲ್ಲಿ ಪರಮಗುರಿಯಾದ ಎಂಪೆರುಮಾನರಿಗೆ ಮಾತ್ರವೇ ಸೇವೆ ಸಲ್ಲಿಸಲು ಮತ್ತು ಅದನ್ನು ಅವನ ಸಂತೋಷಕ್ಕಾಗಿ ಮಾತ್ರ ಮಾಡಲು ಇಚ್ಛಿಸುತ್ತಾಳೆ. ಅವಳು ಹೇಳುತ್ತಾಳೆ ಅವಳು ಲಕ್ಷ್ಮಣನಂತೆ ಎಂದೂ ಅವನನ್ನು ಬಿಡದೆ ಸೇವೆ ಸಲ್ಲಿಸುವಂತೆ, ಭರತಾಳ್ವಾನನಂತೆ ಅಲ್ಲ, ಏಕೆಂದರೆ ಭರತನು ರಾಮನಿಂದ ಅಗಲಿ ಕೆಲ ಸಮಯವಿರುತ್ತಾನೆ. “ಮಱ್ಱೈ ನಮ್ ಕಾಮಂಗಳ್ ಮಾಱ್ಱು” ಎಂದರೆ ನಮ್ಮ ಅನೇಕ ಬೇರೆ ಬೇರೆ ಕಾಮನೆಗಳನ್ನು ದೂರಮಾಡು. ಆಣ್ಡಾಳ್ ತನಗೆ ಬೇರೆ ಯಾವ ಸಂತೋಷವೂ ಬೇಡ, ಮತ್ತು ಎಂಪೆರುಮಾನರು ಅವಳಿಗೆ ಬೇರೆ ಏನೋ ಸಂತೋಷವಿದೆ ಎಂದು ತಿಳಿದುಕೊಳ್ಳುವುದೂ ಬೇಡ. ಈ ತತ್ತ್ವವನ್ನೇ ನಮ್ಮಾಳ್ವಾರ್ ರವರು ಎಮ್ಮಾ ವೀಡು (2.9) ಪದಿಗೆಯಲ್ಲಿ ವಿವರಿಸಿದ್ದಾರೆ. “ತನಕ್ಕೇಯಾಗ ಎನೈಕ್ಕೊಳ್ಳುಮೀದೇ” . ಇದರ ಅರ್ಥ ಎಂಪೆರುಮಾನರು ಅವರನ್ನು ತನ್ನ ಸಂತೋಷಕ್ಕಾಗಿ ಮಾತ್ರ ತನ್ನ ಸೇವೆಯಲ್ಲಿ ನಿರತಗೊಳ್ಳಿಸಬೇಕು ಎಂದು.
ಆದ್ದರಿಂದ ಆಣ್ಡಾಳ್ ಪರಮಗುರಿಯನ್ನು ಈ ಪಾಸುರದಲ್ಲಿ ಸ್ಥಾಪಿಸಿದ್ದಾಳೆ. ಮತ್ತು, “ಮಱ್ಱೈ ನಮ್ ಕಾಮಂಗಳ್ ಮಾಱ್ಱು” ಎಂಬುದು ವಿರೋಧಿ ಸ್ವರೂಪಮ್ ನನ್ನೂ ಸಹ ವಿವರಿಸುತ್ತದೆ. ನಾವು ನಮ್ಮ ಸಂತೋಷಕ್ಕಾಗಿ ಕೈಂಕರ್‍ಯದಲ್ಲಿ ನಿರತವಾಗಬಾರದು. ಅದರ ಬದಲು ಎಂಪೆರುಮಾನರ ಸಂತೋಷಕ್ಕಾಗಿಯೇ ನಿರತವಾಗಬೇಕು.
ಆದ್ದರಿಂದ ನಾವು ಅರ್ಥ ಪಂಚಕವನ್ನು ಆಣ್ಡಾಳ್ ನಾಚ್ಚಿಯಾರ್‌ನ ದಿವ್ಯ ಶಬ್ದಗಳಾದ ತಿರುಪ್ಪಾವೈನಿಂದ ಮತ್ತು ಈ ದಿವ್ಯ ಪ್ರಭಂಧಕ್ಕೆ ಆಚಾರ್‍ಯರ ಸುಂದರ ವರ್ಣನೆಯಿರುವ ವ್ಯಾಖ್ಯಾನದ ಸಹಾಯದಿಂದ ಅರಿತುಕೊಳ್ಳಬಹುದು.
ಶ್ರೀಮತೇ ರಮ್ಯಜಾಮಾತೃ ಮುನೀ಼ಂದ್ರಾಯ ಮಹಾತ್ಮನೇ
ಶ್ರೀರಂಗವಾಸಿನೇ ಭೂಯಾತ್ ನಿತ್ಯಶ್ರೀರ್ ನಿತ್ಯ ಮಂಗಳಮ್॥
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://granthams.koyil.org/2013/01/thiruppavai-artha-panchakam/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ತಿರುಪ್ಪಾವೈ – ಅರ್ಥ ಪಂಚಕಮ್”