ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ
<< ಗೋಪಿಕೆಯರ ವಸ್ತ್ರಾಪಹರಣ ಮತ್ತು ಅದರ ಸಾರ

ಒಂದು ದಿನ ಕೃಷ್ಣ, ಬಲರಾಮ ಮತ್ತು ಅವರ ಸ್ನೇಹಿತರಾದ ಗೋಪಾಲಕರು ವೃಂದಾವನದ ಕಾಡಿನಲ್ಲಿ ಕುಳಿತಿದ್ದರು. ಆ ಗೋಪಾಲಕರಿಗೆ ಹಸಿವಾಗಲಾರಂಭಿಸಿತು. ಅವರು ಕೃಷ್ಣ ಮತ್ತು ಬಲರಾಮರನ್ನು ನೋಡಿ, ತಮಗಾಗಿ ಊಟದ ವ್ಯವಸ್ಥೆ ಮಾಡುವಂತೆ ಪ್ರಾರ್ಥಿಸಿದರು.
ಆಗ ಕೃಷ್ಣನು ಅವರೊಡನೆ, “ನಮಗೆ ಈಗ ಆಹಾರ ಎಲ್ಲಿಂದ ಸಿಗುತ್ತದೆ? ನಾವು ನಮ್ಮ ಮನೆಗಳಿಂದ ಬಹಳ ದೂರದಲ್ಲಿದ್ದೇವೆ. ಸರಿ, ಇಲ್ಲಿ ಕೆಲವರು ಋಷಿಗಳು ಆಶ್ರಮಗಳನ್ನು ನಿರ್ಮಿಸಿಕೊಂಡು ಭಗವಂತನನ್ನು ಕುರಿತು ತಪಸ್ಸು ಮಾಡುತ್ತಿದ್ದಾರೆ. ನೀವು ಅವರ ಬಳಿಗೆ ಹೋಗಿ ಆಹಾರವನ್ನು ಕೇಳಿರಿ. ನಾವೆಲ್ಲರೂ ಅದನ್ನು ಹಂಚಿಕೊಂಡು ಊಟ ಮಾಡೋಣ” ಎಂದು ಹೇಳಿದನು.
ಕೂಡಲೇ ಆ ಹುಡುಗರು ಕಾಡಿನಲ್ಲಿ ಹುಡುಕಾಟ ನಡೆಸಿ ಒಂದು ಆಶ್ರಮವನ್ನು ಕಂಡುಕೊಂಡರು. ಅಲ್ಲಿ ಋಷಿಗಳು ಯಾಗವನ್ನು ಮಾಡುತ್ತಿದ್ದರು. ಅವರು ನೇರವಾಗಿ ಋಷಿಗಳ ಬಳಿಗೆ ಹೋಗಿ, ತಾವು ಕೃಷ್ಣ ಮತ್ತು ಬಲರಾಮರೊಂದಿಗೆ ಬಂದಿರುವುದಾಗಿ, ತಮಗೆ ಹಸಿವಾಗಿದೆ ಮತ್ತು ಆಹಾರವನ್ನು ಹುಡುಕುತ್ತಿರುವುದಾಗಿ ತಿಳಿಸಿದರು. ಆ ಋಷಿಗಳು ಯಾಗದಲ್ಲಿ ಮಗ್ನರಾಗಿದ್ದರಿಂದ, ಅವರು ಹುಡುಗರಿಗೆ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಹುಡುಗರು ದುಃಖದಿಂದ ಕೃಷ್ಣನ ಬಳಿಗೆ ಹಿಂತಿರುಗಿ ಅಲ್ಲಿ ನಡೆದದ್ದನ್ನು ತಿಳಿಸಿದರು.
ಕೃಷ್ಣನು ಅವರಿಗೆ, “ಈಗ ನೀವು ಅದೇ ಸ್ಥಳಕ್ಕೆ ಹಿಂತಿರುಗಿ ಹೋಗಿ. ಅಲ್ಲಿ ನಿಮಗೆ ಆ ಋಷಿಗಳ ಪತ್ನಿಯರು ಕಾಣಸಿಗುತ್ತಾರೆ. ಅವರಿಗೆ ಪರಿಸ್ಥಿತಿಯನ್ನು ತಿಳಿಸಿ ಅವರಿಂದ ಆಹಾರವನ್ನು ಪಡೆದುಕೊಳ್ಳಿ” ಎಂದು ಹೇಳಿದನು.
ಹುಡುಗರು ಮತ್ತೆ ಅಲ್ಲಿಗೆ ಹೋದರು. ಈ ಬಾರಿ ಅವರು ಋಷಿಪತ್ನಿಯರ ಬಳಿಗೆ ಹೋಗಿ, “ನಾವು ಕೃಷ್ಣ ಮತ್ತು ಬಲರಾಮರಿಂದ ಬಂದಿದ್ದೇವೆ. ನಮಗೆ ತುಂಬಾ ಹಸಿವಾಗಿರುವುದರಿಂದ ದಯವಿಟ್ಟು ಸ್ವಲ್ಪ ಆಹಾರವನ್ನು ನೀಡಿ” ಎಂದು ಕೇಳಿಕೊಂಡರು. ಅದನ್ನು ಕೇಳಿದ ಆ ಸ್ತ್ರೀಯರು, ಕೃಷ್ಣನ ಮೇಲೆ ಉಕ್ಕಿ ಹರಿಯುವ ಪ್ರೀತಿಯನ್ನು ಹೊಂದಿದ್ದರಿಂದ, ಅನೇಕ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಕೃಷ್ಣನಿರುವ ಸ್ಥಳದ ಕಡೆಗೆ ಹೊರಟರು. ಅವರ ಸಂಬಂಧಿಕರು (ಗಂಡಂದಿರೂ ಸೇರಿದಂತೆ) ಅವರನ್ನು ತಡೆದರು. ಆದರೂ, ಅವರು ಹೋಗಿ ಕೃಷ್ಣ, ಬಲರಾಮ ಮತ್ತು ಗೋಪಾಲಕರಿಗೆ ಆಹಾರ ಪದಾರ್ಥಗಳನ್ನು ಸಮರ್ಪಿಸಿದರು.
ಅದನ್ನು ಕಂಡು ಕೃಷ್ಣನು ಅತ್ಯಂತ ಪ್ರಸನ್ನನಾಗಿ, ಆ ಆಹಾರ ಪದಾರ್ಥಗಳನ್ನು ಸ್ವೀಕರಿಸಿದನು ಮತ್ತು ಇತರರಿಗೂ ನೀಡಿದನು. ತದನಂತರ, ಋಷಿಗಳಿಗೆ ತಮ್ಮ ತಪ್ಪಿನ ಅರಿವಾಯಿತು ಮತ್ತು ಅವರು ಮನಸ್ಸಿನಲ್ಲಿಯೇ ಕೃಷ್ಣನ ಬಳಿ ಕ್ಷಮೆ ಯಾಚಿಸಿದರು.
ಈ ಘಟನೆಯನ್ನು ಆಂಡಾಳ್ ನಾಚ್ಚಿಯಾರ್ ತಿರುಮೊಳಿಯಲ್ಲಿ ಬಹಳ ಸುಂದರವಾಗಿ ವಿವರಿಸಿದ್ದಾರೆ: “ವೇರ್ತ್ತುಪ್ ಪಸಿತ್ತು ವಯಿರಸೈಂದು ವೇಂಡಡಿಸಿಲ್ ಉಣ್ಣುಂಬೋದು ಈದೆನ್ರು ಪಾರ್ತ್ತಿರುಂದು ನೆಡುನೋಕ್ಕುಕ್ಕೊಳ್ಳುಮ್ ಪತ್ತ ವಿಲೋಚನತ್ತು ಉಯ್ತ್ತಿಡುಮಿನ್” (ಹಸುಗಳನ್ನು ಮೇಯಿಸುವುದರಿಂದ ಬೆವರು ಸುರಿಯುತ್ತಿದ್ದು, ಹಸಿವಿನಿಂದ ಬಳಲಿ, ಹೊಟ್ಟೆ ಹಸಿವಿನಿಂದ ತಪಿಸುತ್ತಾ, ಋಷಿಪತ್ನಿಯರು ಆಹಾರವನ್ನು ತಂದು “ಇದೇ ಬೇಕಾದಷ್ಟು ಊಟ ಮಾಡುವ ಸಮಯ” ಎಂದು ಹೇಳುವುದನ್ನು ಕಾಯುತ್ತಿರುವ ಕೃಷ್ಣನು ದೀರ್ಘಕಾಲ ನೆಲೆಸಿದ ‘ಭಕ್ತವಿಲೋಚನಂ’ ಎಂಬ ಸ್ಥಳಕ್ಕೆ ನನ್ನನ್ನು ಕರೆದೊಯ್ಯಿರಿ).
‘ಪತ್ತವಿಲೋಚನಂ’ ಎನ್ನುವಲ್ಲಿ, ‘ಪತ್ತ’ ಎಂದರೆ ‘ಭಕ್ತ’ ಅಂದರೆ ಆಹಾರ ಎಂದು ಅರ್ಥ. ‘ವಿಲೋಚನ’ ಎಂದರೆ ನೋಡುವುದು. ಅವರಿಗೆ ಹಸಿವಾದಾಗ, ಆಹಾರವನ್ನು ತರುತ್ತಿದ್ದ ಋಷಿಪತ್ನಿಯರಿಗಾಗಿ ಅವನು ಆತುರದಿಂದ ಎದುರು ನೋಡುತ್ತಿದ್ದನು.
ಈ ಲೀಲೆಯ ಸಾರಂಶ:
- ಒಬ್ಬರು ವೇದಾಂತದಲ್ಲಿ ಎಷ್ಟೇ ಪರಿಣತರಾಗಿದ್ದರೂ ಮತ್ತು ಯಾಗಗಳಲ್ಲಿ ತೊಡಗಿದ್ದರೂ, ಭಗವಂತನ ಬಗ್ಗೆ ಭಕ್ತಿ ಇಲ್ಲದಿದ್ದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ಒಬ್ಬರು ಶಾಸ್ತ್ರವನ್ನು ಸರಿಯಾಗಿ ಕಲಿಯದಿದ್ದರೂ, ಭಗವಂತನ ಬಗ್ಗೆ ಕೇಳಿದಾಗ ಮನಸ್ಸು ಕರಗುವ ಸ್ವಭಾವವನ್ನು ಹೊಂದಿದ್ದರೆ, ಅದು ಭಗವಂತನಿಗೆ ಸಂತೋಷವನ್ನು ನೀಡುತ್ತದೆ.
- ಒಂದೂ ಭಗವಂತನ ಕರುಣೆಯನ್ನು ಅರ್ಥಮಾಡಿಕೊಂಡು ಅವನಲ್ಲಿ ಭಕ್ತಿಯನ್ನು ಹೊಂದಿರಬೇಕು. ಅಥವಾ ಇತರರ ಉಪದೇಶಗಳನ್ನು ಕೇಳಿಯೋ ಅಥವಾ ಇತರರ ಭಕ್ತಿಯನ್ನು ಕಂಡೋ ತನ್ನನ್ನು ತಾನು ತಿದ್ದಿಕೊಳ್ಳಬೇಕು. ಇವೆರಡರಲ್ಲಿ ಒಂದೂ ಇಲ್ಲದಿದ್ದರೆ, ಮೋಕ್ಷಕ್ಕೆ ಯಾವುದೇ ಅವಕಾಶವಿರುವುದಿಲ್ಲ.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/09/25/krishna-leela-19-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org