ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ
<< ಅರಿಷ್ಟಾಸುರ, ಕೇಶಿ ಮತ್ತು ವ್ಯೋಮಾಸುರರ ವಧೆ

ಕೃಷ್ಣ ಲೀಲೆಗಳಲ್ಲಿ ಅತ್ಯಂತ ಪ್ರಮುಖ ಮತ್ತು ಸುಂದರವಾದ ಅಂಶವೆಂದರೆ ಕೃಷ್ಣ ಮತ್ತು ನಪ್ಪಿನ್ನೈ ಪಿರಾಟ್ಟಿಯವರ ನಡುವಿನ ಸಂಬಂಧ. ಆಳ್ವಾರರ ಪಾಶುರಗಳ ಮೂಲಕ ನಾವು ಇದನ್ನು ಸುಂದರವಾಗಿ ಅನುಭವಿಸಬಹುದು.
ಮೊದಲಿಗೆ, “ನಪ್ಪಿನ್ನೈ ಪಿರಾಟ್ಟಿ ಯಾರು?” ಎಂಬ ಪ್ರಶ್ನೆಗೆ ನಾವು ಉತ್ತರವನ್ನು ತಿಳಿದುಕೊಳ್ಳಬೇಕಿದೆ. ಇವರು ನೀಳಾದೇವಿಯ ಅವತಾರ ಎಂದು ಹೇಳಲಾಗುತ್ತದೆ. ಭಗವಂತನಾದ ಶ್ರೀಮನ್ನಾರಾಯಣನಿಗೆ ಮೂವರು ಪ್ರಮುಖ ಪತ್ನಿಯರಿದ್ದಾರೆ (ನಾಚ್ಚಿಯಾರ್‌ಗಳು). ಅವರುಗಳೆಂದರೆ ಪೆರಿಯ ಪಿರಾಟ್ಟಿಯಾರ್ ಎಂದು ಕರೆಯಲ್ಪಡುವ ಶ್ರೀದೇವಿ, ಭೂಮಿ ಪಿರಾಟ್ಟಿಯಾರ್ ಎಂದು ಕರೆಯಲ್ಪಡುವ ಭೂದೇವಿ ಮತ್ತು ನೀಳಾದೇವಿ. ಈ ನೀಳಾದೇವಿಯೇ ನಪ್ಪಿನ್ನೈ ಪಿರಾಟ್ಟಿಯಾಗಿ ಅವತರಿಸುತ್ತಾರೆ. ಪರಾಶರ ಭಟ್ಟರು ತಮ್ಮ ತಿರುಪ್ಪಾವೈ ತನಿಯನ್‌ನಲ್ಲಿ “ನೀಳಾತುಂಗ ಸ್ತನಗಿರಿ ತಟೀ ಸುಪ್ತಂ ಉದ್ಬೋಧ್ಯ ಕೃಷ್ಣಂ” ಎಂದು ಆರಂಭಿಸುತ್ತಾರೆ. ಇದರ ಅರ್ಥವೇನೆಂದರೆ, ನೀಳಾದೇವಿಯ ಅವತಾರವಾದ ನಪ್ಪಿನ್ನೈ ಪಿರಾಟ್ಟಿಯ ಪರ್ವತದಂತಹ ಎದೆಯ ಮೇಲೆ ಒರಗಿ ಮಲಗಿರುವ ಕೃಷ್ಣನನ್ನು ಎಚ್ಚರಿಸುವುದು ಎಂದು. ಈ ತನಿಯನ್ ವ್ಯಾಖ್ಯಾನದಲ್ಲಿ, ಪಿಳ್ಳೈ ಲೋಕಂ ಜೀಯರ್ ಅವರು ಪುರಾಣದ ಶ್ಲೋಕವೊಂದನ್ನು ಉಲ್ಲೇಖಿಸುತ್ತಾರೆ. ಅದರಲ್ಲಿ ಆಕೆ ಯಶೋದಾ ಪಿರಾಟ್ಟಿಯ ಕಿರಿಯ ಸಹೋದರ ಮತ್ತು ಮಿಥಿಲಾ ರಾಜನಾದ ಕುಂಬಕನ ಮಗಳೆಂದು ಹಾಗೂ ಆಕೆ ಆಯರ್ ಕುಲದಲ್ಲಿ (ಗೊಲ್ಲರ ಕುಲದಲ್ಲಿ) ಜನಿಸಿದವಳು ಎಂದು ಗುರುತಿಸುತ್ತಾರೆ.
ಶ್ರೀರಾಮಾವತಾರದಲ್ಲಿ, ಪೆರಿಯ ಪಿರಾಟ್ಟಿಯಾರ್ ಸೀತಾ ಪಿರಾಟ್ಟಿಯ ರೂಪದಲ್ಲಿ ‘ಪುರುಷಕಾರಂ’ (ಜೀವಾತ್ಮನನ್ನು ಭಗವಂತನಿಗೆ ಶಿಫಾರಸು ಮಾಡುವವರು) ಆಗಿರುತ್ತಾರೆ. ವರಾಹಾವತಾರದಲ್ಲಿ, ಭೂಮಿ ಪಿರಾಟ್ಟಿಯಾರ್ ಪುರುಷಕಾರಂ ಆಗಿರುತ್ತಾರೆ. ಕೃಷ್ಣಾವತಾರದಲ್ಲಿ, ನಪ್ಪಿನ್ನೈ ಪಿರಾಟ್ಟಿ ಪುರುಷಕಾರಂ ಸ್ಥಾನದಲ್ಲಿರುತ್ತಾರೆ. ರುಕ್ಮಿಣಿ ಪಿರಾಟ್ಟಿ ಕೃಷ್ಣನ ಪಟ್ಟದ ರಾಣಿಯಾಗಿದ್ದರೂ, ಇಲ್ಲಿ ನಪ್ಪಿನ್ನೈ ಪಿರಾಟ್ಟಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆಳ್ವಾರರ ಪಾಶುರಗಳಲ್ಲಿಯೂ ಸಹ, ರುಕ್ಮಿಣಿ ಪಿರಾಟ್ಟಿ ಮತ್ತು ಸತ್ಯಭಾಮಾ ಪಿರಾಟ್ಟಿಯ ಬಗ್ಗೆ ಬಹಳ ಕಡಿಮೆ ಪಾಶುರಗಳಿದ್ದರೆ, ನಪ್ಪಿನ್ನೈ ಪಿರಾಟ್ಟಿಯ ಬಗ್ಗೆ ಅನೇಕ ಪಾಶುರಗಳಿವೆ.
ಆಕೆಯ ತಂದೆ ಆಕೆಗೆ ವಿವಾಹ ಮಾಡಲು ನಿರ್ಧರಿಸುತ್ತಾರೆ. ತನ್ನ ಬಳಿ ಇರುವ ಏಳು ಬಲಿಷ್ಠ ಹೋರಿಗಳನ್ನು ಯಾರು ಪಳಗಿಸುತ್ತಾರೋ ಅವರಿಗೆ ಆಕೆಯನ್ನು ಕೊಡುವುದಾಗಿ ಘೋಷಿಸುತ್ತಾನೆ. ನಮ್ಮಾಳ್ವಾರ್ ತೋರಿಸಿರುವಂತೆ, ಕೃಷ್ಣನ ಅವತಾರಕ್ಕೆ ಇರುವ ಎರಡು ಕಾರಣಗಳಲ್ಲಿ ಒಂದು ನಪ್ಪಿನ್ನೈ ಪಿರಾಟ್ಟಿಯನ್ನು ಅಪ್ಪಿಕೊಳ್ಳುವುದಾಗಿದೆ. ಹಾಗಾಗಿ ಕೃಷ್ಣನು ಆ ಹೋರಿಗಳನ್ನು ಪಳಗಿಸಲು ಹೊರಟನು. ಅವನು ಏಳು ಹೋರಿಗಳನ್ನು ಒಮ್ಮೆಗೆ ಅಪ್ಪಿಕೊಂಡು, ಅವುಗಳ ಕುತ್ತಿಗೆಯನ್ನು ಮುರಿದು ಸಂಹರಿಸಿದನು. ನಂತರ ನಪ್ಪಿನ್ನೈ ಪಿರಾಟ್ಟಿ ಸಂತೋಷದಿಂದ ಕೃಷ್ಣನನ್ನು ಮದುವೆಯಾದರು.
ಪೆರಿಯಾಳ್ವಾರ್ ತಮ್ಮ ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ಪಿನ್ನೈ ಮಣಾಳನೈ ಪೇರಿಲ್ ಕಿಡಂದಾನೈ” (ತಿರುಪ್ಪೇರ್ ನಗರದಲ್ಲಿ ಮಲಗಿರುವ ನಪ್ಪಿನ್ನೈಯ ಪತಿ) ಎಂದು ಹೇಳುತ್ತಾರೆ. ಆಂಡಾಳ್ ತನ್ನ ತಿರುಪ್ಪಾವೈನಲ್ಲಿ, ನಪ್ಪಿನ್ನೈ ಪಿರಾಟ್ಟಿಯ ಮೂಲಕವೇ ಕೃಷ್ಣನನ್ನು ತಲುಪಲು ಪ್ರಯತ್ನಿಸುತ್ತಾಳೆ. ಅವಳು “ಉಂದು ಮದಗಳಿಟ್ರನ್”, “ಕುತ್ತು ವಿಳಕ್ಕೆರಿಯ” ಮತ್ತು “ಮುಪ್ಪತ್ತು ಮೂವರ್” ಎಂಬ ಮೂರು ಸತತ ಪಾಶುರಗಳಲ್ಲಿ ನಪ್ಪಿನ್ನೈ ಪಿರಾಟ್ಟಿಯನ್ನು ತೋರಿಸಿದ್ದಾಳೆ. ನಮ್ಮಾಳ್ವಾರ್ ತಿರುವಾಯ್ಮೋಳಿಯಲ್ಲಿ “ಪಿನ್ನೈ ಕೊಲ್ ನಿಲಮಾಮಗಳ್ ಕೊಲ್” (ಇವಳು ನಪ್ಪಿನ್ನೈ ಪಿರಾಟ್ಟಿಯೋ ಅಥವಾ ಭೂಮಿ ಪಿರಾಟ್ಟಿಯೋ?) ಎಂದು ಹೇಳುತ್ತಾ ನಪ್ಪಿನ್ನೈ ಪಿರಾಟ್ಟಿಯನ್ನು ತೋರಿಸುತ್ತಾರೆ. ತಿರುಮಂಗೈ ಆಳ್ವಾರ್ ತಮ್ಮ ಪೆರಿಯ ತಿರುಮೊಳಿಯಲ್ಲಿ “ಆಯರ್ ಪಾವೈ ನಪ್ಪಿನ್ನೈ ತನಕ್ಕಿರೈ” (ಗೊಲ್ಲರ ಹುಡುಗಿ ನಪ್ಪಿನ್ನೈಗೆ ಒಡೆಯ) ಎಂದು ಹೇಳುತ್ತಾರೆ. ಇದಲ್ಲದೆ, ಅನೇಕ ಆಳ್ವಾರರು ಅನೇಕ ಪಾಶುರಗಳಲ್ಲಿ ನಪ್ಪಿನ್ನೈ ಪಿರಾಟ್ಟಿಯ ಬಗ್ಗೆ ವಿವರಿಸಿದ್ದಾರೆ.
ಈ ಘಟನೆಯ ಸಾರಂಶ:
ಭಗವಂತನಿಗೆ ನಪ್ಪಿನ್ನೈ ಪಿರಾಟ್ಟಿಯ ಮೇಲೆ ಅಪಾರ ಪ್ರೀತಿ. ಅವನ ಪ್ರೀತಿ ಎಷ್ಟಿತ್ತೆಂದರೆ, ಕೃಷ್ಣನ ಈ ಅವತಾರವು ವಿಶೇಷವಾಗಿ ಅವಳಿಗಾಗಿಯೇ ಆಗಿತ್ತು. ನಮ್ಮಾಳ್ವಾರ್ ತಿರುವಿರುತ್ತಂನಲ್ಲಿ, “ಸೂಟ್ಟು ನನ್ಮಾಲೈಗಳ್ ತೂಯನವೇಂದಿ ವಿಣ್ಣೋರ್ಗಳ್ ನನ್ನೀರ್ ಆಟ್ಟಿ ಅಂದೂಬಮ್ ತರಾ ನಿರ್ಕವೇ ಅಂಗು ಓರ್ ಮಾಯೈಯಿನಾಲ್ ಈಟ್ಟಿಯ ವೆಣ್ಣೆಯ್ ತೊಡು ಉಣ್ಣಪ್ಪೋಂದುಮಿಲೇಟ್ರುವನ್ ಕೂನ್ ಕೋಟ್ಟಿಡೈಯಾಡಿನೈ ಕೂತ್ತು ಅಡಲಾಯರ್ ತಮ್ ಕೊಂಬಿನುಕ್ಕೇ” ಎಂದು ಹೇಳುತ್ತಾರೆ. ಪರಮಪದದಲ್ಲಿ ನಿತ್ಯಸೂರಿಗಳು ಮಾಡುವ ತಿರುವಾರಾಧನೆಯ ನಡುವೆಯೂ ಭಗವಂತನು ಈ ಲೋಕಕ್ಕೆ ಕೃಷ್ಣನಾಗಿ ಇಳಿದು ಬರಲು ಎರಡು ಕಾರಣಗಳಿವೆ ಎಂದು ಇದು ವಿವರಿಸುತ್ತದೆ:
- ಭಕ್ತರು ತಮ್ಮ ಕೈಯಿಂದ ತಯಾರಿಸಿದ ಬೆಣ್ಣೆಯನ್ನು ತಿನ್ನಲು.
- ನಪ್ಪಿನ್ನೈ ಪಿರಾಟ್ಟಿಯನ್ನು ಆಲಿಂಗಿಸಿಕೊಳ್ಳಲು.
ಶ್ರೀಭಾಗವತ ಪುರಾಣದಲ್ಲಿ, ಕೃಷ್ಣನು ಏಳು ಹೋರಿಗಳನ್ನು ಪಳಗಿಸಿ ನಗ್ನಜಿತನ ಮಗಳು ಸತ್ಯಾಳನ್ನು ಮದುವೆಯಾಗುವುದನ್ನು ತೋರಿಸಲಾಗಿದೆ. ಆದರೆ ಅಲ್ಲಿ ಈ ಘಟನೆಯ ಕೃಷ್ಣನು ದೊಡ್ಡವನಾದ ನಂತರ ನಡೆದಂತೆ ತೋರಿಸಲಾಗಿದೆ. ಆದರೆ ಆಂಡಾಳ್ ಶ್ರೀಗೋಕುಲದಲ್ಲಿ ಕೃಷ್ಣನೊಂದಿಗೆ ನಪ್ಪಿನ್ನೈ ಪಿರಾಟ್ಟಿಯನ್ನು ಅನುಭವಿಸುತ್ತಾಳೆ. ಉಪನಯನ ಸಂಸ್ಕಾರ ಆಗುವ ಮೊದಲು, ಕೃಷ್ಣನು ಹತ್ತು ವರ್ಷಗಳವರೆಗೆ ಶ್ರೀಗೋಕುಲ ಮತ್ತು ಬೃಂದಾವನದಲ್ಲಿಯೇ ಇದ್ದನು. ಆ ನಂತರ, ಅವನು ಮಥುರೆಗೆ ತೆರಳುತ್ತಾನೆ ಮತ್ತು ಶ್ರೀಗೋಕುಲ ಅಥವಾ ವೃಂದಾವನದಲ್ಲಿ ಹಿಂತಿರುಗುವುದಿಲ್ಲ. ಆದ್ದರಿಂದ, ಈ ಘಟನೆಯು ಭಗವಂತನು ಆಳ್ವಾರರಿಗೆ ತೋರಿಸಿದ ಅದ್ಭುತವಾದ ದಿವ್ಯದೃಷ್ಟಿ ಎಂದು ಹೇಳಲಾಗುತ್ತದೆ.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ, ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/10/01/krishna-leela-24-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org