ಕೃಷ್ಣ ಲೀಲೆಗಳ ಸಾರಾಂಶ – 25 – ಕಂಸನ ಭಯ ಮತ್ತು ಪಿತೂರಿ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಕೃಷ್ಣ ಮತ್ತು ನಪ್ಪಿನ್ನೈ ಪಿರಾಟ್ಟಿ (ನೀಳಾದೇವಿ)

ಕಂಸನು ಕೃಷ್ಣನನ್ನು ಕೊಂದು ತಾನು ಪಾರಾಗಬಹುದು ಎಂದು ಭಾವಿಸಿ ಅನೇಕ ರಾಕ್ಷಸರನ್ನು ಕಳುಹಿಸಿದನು. ಆದರೆ ಆ ಎಲ್ಲಾ ರಾಕ್ಷಸರು ಕೃಷ್ಣನಿಂದ ಸಂಹರಿಸಲ್ಪಟ್ಟರು, ಮತ್ತು ಕಂಸನಿಗೆ ಕೇವಲ ಭಯ ಮತ್ತು ಹತಾಶೆ ಮಾತ್ರ ಉಳಿಯಿತು.

ವಿಷ್ಣುವಿನ ಪರಮ ಭಕ್ತರಾದ ನಾರದರು ಕಂಸನ ಆಸ್ಥಾನಕ್ಕೆ ಬಂದರು. ಅವರು ಕಂಸನಿಗೆ, “ನಿನ್ನನ್ನು ಕೊಲ್ಲಲಿರುವ ಕೃಷ್ಣ ಮತ್ತು ಬಲರಾಮರು ವೃಂದಾವನದಲ್ಲಿ ಸುಖವಾಗಿ ವಾಸಿಸುತ್ತಿದ್ದಾರೆ. ನಿನ್ನ ಅಂತ್ಯ ಸಮೀಪಿಸಿದೆ” ಎಂದು ಹೇಳಿದರು. ಅದನ್ನು ಕೇಳಿ ಕಂಸನು ಅತ್ಯಂತ ಕೋಪಗೊಂಡನು. ಅಶರೀರವಾಣಿಯ ಮಾತುಗಳನ್ನು ಕೇಳಿ ಅವನು ಈಗಾಗಲೇ ಭಯಭೀತನಾಗಿದ್ದನು. ಈಗ ನಾರದರ ದೃಢವಾದ ಮಾತುಗಳನ್ನು ಕೇಳಿ, ಅವನ ಕೋಪ ಮತ್ತು ಭಯ ಇನ್ನಷ್ಟು ಹೆಚ್ಚಾಯಿತು.

ಕೃಷ್ಣನನ್ನು ಕೊಲ್ಲುವ ಉಪಾಯಗಳ ಬಗ್ಗೆ ಆಲೋಚಿಸಿದ ಅವನು, ಧನುರ್-ಯಾಗವನ್ನು (ಬಿಲ್ಲು ಹಬ್ಬ) ಏರ್ಪಡಿಸಿ, ಅದಕ್ಕೆ ಕೃಷ್ಣನನ್ನು ಆಹ್ವಾನಿಸಿ ಹೇಗಾದರೂ ಮಾಡಿ ಕೊಲ್ಲಬೇಕೆಂದು ಸಂಚು ರೂಪಿಸಿದನು. ಕುವಲಯಾಪೀಡ ಎಂಬ ಆನೆ ಮತ್ತು ಚಾಣೂರ-ಮುಷ್ಟಿಕರಂತಹ ಮಲ್ಲರ ಸಹಾಯದಿಂದ ಕೃಷ್ಣನನ್ನು ಕೊಲ್ಲಬಹುದೆಂದು ಅವನು ಅಂದುಕೊಂಡನು. ಒಂದು ವೇಳೆ ಕೃಷ್ಣನು ಅವರಿಂದ ತಪ್ಪಿಸಿಕೊಂಡರೆ, ತಾನೇ ಕೃಷ್ಣನನ್ನು ಕೊಲ್ಲಬಹುದೆಂದು ಭಾವಿಸಿದನು. ಇದನ್ನು ಒಂದು ಆಕಸ್ಮಿಕ ಘಟನೆಯಂತೆ ಬಿಂಬಿಸಬೇಕೆಂದು ಅವನು ಯೋಚಿಸಿದನು. ತನ್ನ ಆಸ್ಥಾನದ ಅಧಿಕಾರಿಗಳಲ್ಲಿ ಒಬ್ಬನಾದ ಅಕ್ರೂರನಿಗೆ ಕೃಷ್ಣ ಮತ್ತು ಬಲರಾಮರನ್ನು ಕರೆತರುವಂತೆ ಆಜ್ಞಾಪಿಸಿದನು. ಕೃಷ್ಣನ ಬಗ್ಗೆಯೇ ಯೋಚಿಸುತ್ತಾ ಅವನು ರಾತ್ರಿಯಿಡೀ ನಿದ್ದೆಯಿಲ್ಲದೆ ಕಳೆದನು.

ಈ ಘಟನೆಯನ್ನು ಪೆರಿಯಾಳ್ವಾರ್ ಅವರು ತಮ್ಮ ‘ಪೆರಿಯಾಳ್ವಾರ್ ತಿರುಮೊಳಿ’ಯಲ್ಲಿ “ತೀಯ ಪುಂದಿಕ್ಕಂಜನ್ ಉನ್ ಮೇಲ್ ಸಿನಮುಡೈಯನ್” -ಕೆಟ್ಟ ಬುದ್ಧಿಯ ಕಂಸನು ನಿನ್ನ ಮೇಲೆ [ಕೃಷ್ಣನ ಮೇಲೆ] ಕೋಪಗೊಂಡಿದ್ದಾನೆ ಎಂದು ವಿವರಿಸಿದ್ದಾರೆ.

ಆಂಡಾಳ್ ಈ ಘಟನೆಯನ್ನು ತಮ್ಮ ‘ತಿರುಪ್ಪಾವೈ’ನಲ್ಲಿ “ತರಿಕ್ಕಿಲಾನಾಗಿತ್ತಾನ್‌ ತೀಂಗು ನಿನೈಂದ, ಕರುತ್ತೈ ಪಿಳೈಪ್ಪಿತ್ತುಕ್ ಕಂಜನ್ ವಯಿಟ್ರಿಲ್, ನೆರುಪ್ಪೆನ್ನ ನಿನ್ರ ನೆಡುಮಾಲೇ”-ಕೃಷ್ಣನು ಅಡಗಿಕೊಂಡು ಬದುಕುತ್ತಿರುವುದನ್ನು ಸಹಿಸಲಾಗದ ಕಂಸನು ಅವನಿಗೆ ಕೆಡುಕನ್ನು ಬಯಸಿದನು; ಅಂತಹ ಕಂಸನ ಹೊಟ್ಟೆಯಲ್ಲಿ ಕೃಷ್ಣನು, ಬೆಂಕಿಯಂತೆ ನೆಲೆಸಿದನುಎಂದು ವಿಸ್ತಾರವಾಗಿ ವಿವರಿಸಿದ್ದಾರೆ.

ಅಕ್ರೂರನು ಕೃಷ್ಣನ ಸಂಪೂರ್ಣ ಭಕ್ತನಾಗಿದ್ದನು. “ನಾಳೆ ಬೆಳಿಗ್ಗೆ ಎದ್ದು ಕಂಸನ ಮುಖವನ್ನು ನೋಡುವ ಬದಲು, ಕೃಷ್ಣನನ್ನು ನೋಡುವ ಸೌಭಾಗ್ಯ ನನಗೆ ದೊರೆಯಲಿದೆ” ಎಂದು ಯೋಚಿಸಿ ಅವನು ಆನಂದಭರಿತನಾದನು. ಅವನು ಕೃಷ್ಣನನ್ನು ನೋಡುವ ಹಂಬಲದಿಂದ ಕೃಷ್ಣನಿರುವ ಸ್ಥಳಕ್ಕೆ ಹೊರಟನು.

ಈ ಘಟನೆಯ ಸಾರಾಂಶ:

  • ಕಂಸನು ಸದಾಕಾಲ ಭಗವಂತನ ಬಗ್ಗೆಯೇ ಯೋಚಿಸುತ್ತಿದ್ದನು. ಆದರೆ ಅವನು ಕೃಷ್ಣನ ಬಗ್ಗೆ ದ್ವೇಷವನ್ನು ಹೊಂದಿದ್ದರಿಂದ, ಅವನು ಯಾವಾಗಲೂ ಕೆಟ್ಟ ಉದ್ದೇಶದಿಂದಲೇ ಕೃಷ್ಣನ ಬಗ್ಗೆ ಚಿಂತಿಸುತ್ತಿದ್ದನು. ಭಗವಂತನ ಬಗ್ಗೆ ಅಂತಹ ಆಲೋಚನೆಗಳು ಯೋಗ್ಯವಲ್ಲ.
  • ಭಗವಂತನನ್ನು ವಂಚಿಸಲು ಎಷ್ಟೇ ಕುತಂತ್ರ ಮಾಡಿದರೂ, ಅಂತಹವರನ್ನೇ ಮಣಿಸುವ ಚಾಕಚಕ್ಯತೆ ಮತ್ತು ಸಾಮರ್ಥ್ಯ ಭಗವಂತನಲ್ಲಿದೆ. ಕಂಸನು ಯಾರಿಗೂ ತಿಳಿಯದಂತೆ ಕೃಷ್ಣನನ್ನು ಕೊಲ್ಲಬೇಕೆಂದು ಅಂದುಕೊಂಡಿದ್ದನು. ಆದರೆ ಆ ಆಲೋಚನೆಯು ಅವನೊಂದಿಗೇ ಅಂತ್ಯವಾಗುವಂತೆ ಕೃಷ್ಣನು ಕಂಸನನ್ನು ಸಂಹರಿಸಿದನು.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/02/krishna-leela-25-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment