ಕೃಷ್ಣ ಲೀಲೆಗಳ ಸಾರಾಂಶ – 26 – ಅಕ್ರೂರನ ಯಾತ್ರೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಕಂಸನ ಭಯ ಮತ್ತು ಪಿತೂರಿ

ಕಂಸನಿಂದ ಕೃಷ್ಣ ಮತ್ತು ಬಲರಾಮರನ್ನು ಕರೆತರಲು ಕಳುಹಿಸಲ್ಪಟ್ಟ ಅಕ್ರೂರನು, ಮುಂಜಾನೆ ಬೇಗನೆ ವೃಂದಾವನದ ಕಡೆಗೆ ತ್ವರಿತ ಗತಿಯಲ್ಲಿ ಹೊರಟನು. ಅಕ್ರೂರನು ಕೃಷ್ಣನಲ್ಲಿ ಅಪಾರವಾದ ಭಕ್ತಿಯನ್ನು ಹೊಂದಿದ್ದನು. ಅವನು ಕೃಷ್ಣನ ದರ್ಶನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದನು. ವೃಂದಾವನದ ಕಡೆಗಿನ ಅವನ ಈ ಉತ್ಸುಕತೆಯ ಪಯಣವನ್ನು ಸಾಮಾನ್ಯವಾಗಿ ‘ತಿರುವೇಂಗಡ ಯಾತ್ರೆ’ (ತಿರುಮಲ ತಿರುಪತಿಗೆ ಮಾಡುವ ಯಾತ್ರೆ) ಮತ್ತು ಅರ್ಚಿರಾದಿ ಮಾರ್ಗದಲ್ಲಿ (ಮೋಕ್ಷದ ದಾರಿ)ಸಂಚರಿಸಿ ‘ಪರಮಪದ’ವನ್ನು ತಲುಪುವುದಕ್ಕೆ ಹೋಲಿಸಲಾಗುತ್ತದೆ.

ಅಕ್ರೂರನು ಮುಂಜಾನೆ ಬೇಗನೆ ಎದ್ದು ತನ್ನ ರಥದಲ್ಲಿ ವೇಗವಾಗಿ ವೃಂದಾವನಕ್ಕೆ ಪ್ರಯಾಣ ಬೆಳೆಸಿದನು. ಹೋಗುವ ದಾರಿಯುದ್ದಕ್ಕೂ, ತಾನು ಅಲ್ಲಿಗೆ ತಲುಪಿದ ನಂತರ ಕೃಷ್ಣನಿಗೆ ನಮಸ್ಕರಿಸುವುದು ಮತ್ತು ಕೃಷ್ಣನು ತನ್ನನ್ನು ಕೈಗಳಿಂದ ಎತ್ತಿ ಪ್ರೀತಿಯಿಂದ ಆಲಿಂಗನ ಮಾಡಿಕೊಳ್ಳುವುದನ್ನು ಕುರಿತು ಅವನು ತನ್ಮಯನಾಗಿ ಧ್ಯಾನಿಸುತ್ತಿದ್ದನು. ಹೀಗೆ ಅವನು ವೃಂದಾವನವನ್ನು ತಲುಪಿದಾಗ, ಕೃಷ್ಣ ಮತ್ತು ಬಲರಾಮರು ಹಸುಗಳ ಹಾಲು ಕರೆಯಲು ಹೋಗುತ್ತಿದ್ದರು. ಅವರನ್ನು ಕಂಡ ಕೂಡಲೇ ಭಕ್ತಿಯ ಪರಾಕಾಷ್ಠೆಯಿಂದ ಅಕ್ರೂರನು ಅತ್ಯಂತ ಭಾವುಕನಾದನು. ಅವನು ರಥದಿಂದ ಕೆಳಗೆ ಹಾರಿ, ಕೃಷ್ಣನ ಕಡೆಗೆ ಓಡಿ, ಕಡಿದ ಮರದಂತೆ ಅವನ ದಿವ್ಯ ಪಾದಗಳಿಗೆ ಸಾಷ್ಟಾಂಗವೆರಗಿದನು. ಕೃಷ್ಣನು ಅವನನ್ನು ತನ್ನ ಕೈಗಳಿಂದ ಮೇಲಕ್ಕೆತ್ತಿ ಅಪ್ಪಿಕೊಂಡು ಮತ್ತು ಅವನಿಗೆ ಪರಮಾನಂದವನ್ನು ನೀಡಿದನು.

ತದನಂತರ, ಅವರು ಅಕ್ರೂರನನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಉಪಚರಿಸಿದರು. ನಂದಗೋಪ, ಬಲರಾಮ ಮತ್ತು ಕೃಷ್ಣರು ಅವನ ಭೇಟಿಯ ಉದ್ದೇಶವನ್ನು ವಿಚಾರಿಸಿದರು. ಅವನು ಕಂಸನ ಕೆಟ್ಟ ಉದ್ದೇಶಗಳನ್ನು ಮತ್ತು ಯೋಜನೆಯನ್ನು ವಿವರಿಸಿದನು. ಕೂಡಲೇ ಕೃಷ್ಣನು, “ನಾವು ಅಕ್ರೂರನೊಂದಿಗೆ ಹೋಗೋಣ” ಎಂದು ಹೇಳಿದನು. ನಂದಗೋಪನು ತನ್ನ ಅನೇಕ ಜನರನ್ನು ಅವರೊಂದಿಗೆ ಕಳುಹಿಸಲು ನಿರ್ಧರಿಸಿದನು. ಕೃಷ್ಣ ಮತ್ತು ಬಲರಾಮರು ಅಕ್ರೂರನೊಂದಿಗೆ ರಥವನ್ನು ಏರಿದರು. ಕೃಷ್ಣನ ವಿರಹವನ್ನು ಸಹಿಸಲಾರದೆ ಗೋಪಿಕೆಯರು ಇದನ್ನು ನೋಡಿ ಅಳಲು ಪ್ರಾರಂಭಿಸಿದರು. ರಥ ಚಲಿಸಲು ಆರಂಭಿಸಿದಾಗ, ಅವರು ರಥವನ್ನು ಹಿಂಬಾಲಿಸಲು ಪ್ರಾರಂಭಿಸಿದರು, ಆದರೆ ಕೃಷ್ಣನು ಅವರನ್ನು ಬಾರದಂತೆ ತಡೆದಾಗ, ಅವರು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಅವನಿಗೆ ವಿದಾಯ ಹೇಳಿದರು.

ಸ್ವಲ್ಪ ದೂರ ಪ್ರಯಾಣಿಸಿದ ನಂತರ, ಅವರು ಯಮುನಾ ನದಿಯ ದಡವನ್ನು ತಲುಪಿದರು. ಅಕ್ರೂರನು ತನ್ನ ಸಂಧ್ಯಾವಂದನೆಯನ್ನು (ಸಂಜೆ ಸಮಯದಲ್ಲಿ ಮಾಡುವ ಧಾರ್ಮಿಕ ವಿಧಿ) ಮಾಡಲು ರಥವನ್ನು ನಿಲ್ಲಿಸಿದನು. ಅವನು ರಥದಿಂದ ಇಳಿದು ನದಿಯೊಳಗೆ ಪ್ರವೇಶಿಸಿದನು. ಅವನು ನದಿಯಿಂದ ನೀರು ತೆಗೆದುಕೊಂಡು ಆಚಮನ (ಬಾಯಿಯನ್ನು ಶುದ್ಧೀಕರಿಸುವುದು) ಮಾಡಲು ಹೋದಾಗ, ಭಗವಂತನು ನೀರಿನೊಳಗೆ ಆದಿಶೇಷನ ಮೇಲೆ ಅದ್ಭುತವಾಗಿ ಪ್ರತ್ಯಕ್ಷನಾದನು. ಇದರಿಂದ ಆಶ್ಚರ್ಯಚಕಿತನಾದ ಅಕ್ರೂರನು ಹೊರಗೆ ನೋಡಿದಾಗ ಕೃಷ್ಣನು ರಥದ ಮೇಲೆಯೂ ಕುಳಿತಿದ್ದನು. ಕೃಷ್ಣನು ಸರ್ವೇಶ್ವರನಾಗಿ ಪ್ರಕಟವಾದ ರೀತಿಯನ್ನು ನೆನೆದು ಆನಂದತುಂದಿಲನಾಗಿ, ಅವನು ಕೃಷ್ಣನನ್ನು ಸ್ತುತಿಸಿದನು ಮತ್ತು ಕೊಂಡಾಡಿದನು. ಈ ರೀತಿಯಾಗಿ, ಅಕ್ರೂರನು ಕೃಷ್ಣ ಮತ್ತು ಬಲರಾಮರನ್ನು ಮಥುರೆಗೆ ಕರೆದೊಯ್ದನು.

ಈ ಘಟನೆಯ ಸಾರಂಶ:
  •  ನಾವು ಪ್ರತಿದಿನವೂ ಭಗವಂತನನ್ನು ಸೇರಲು ತೀವ್ರವಾಗಿ ಬಯಸಬೇಕು. 
  • ಮನುಷ್ಯನು ಎಲ್ಲೇ ಇರಲಿ, ಎಂತಹ ಪರಿಸ್ಥಿತಿಯಲ್ಲೇ ಇರಲಿ, ಭಗವಂತನನ್ನು ಸೇರುವ ಹಂಬಲವನ್ನು ಸದಾ ಹೊಂದಿದ್ದರೆ, ಭಗವಂತನು ಅಂತಹವರ ಮೇಲೆ ಖಂಡಿತವಾಗಿಯೂ ತನ್ನ ಕರುಣೆಯನ್ನು ತೋರುತ್ತಾನೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/02/krishna-leela-26-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment