ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ
ಕುವಲಯಾಪೀಡ ಎಂಬ ಆನೆ ಮತ್ತು ತನಗೆ ರಕ್ಷಕರೆಂದು ಕಂಸ ನಂಬಿದ್ದ ಮಲ್ಲರನ್ನು ಸಂಹರಿಸಿದ ನಂತರ, ಎತ್ತರದ ಸಿಂಹಾಸನದಲ್ಲಿ ಕುಳಿತಿದ್ದ ಕಂಸ ನಡುಗಲು ಪ್ರಾರಂಭಿಸಿದನು. ಕೃಷ್ಣನು ಅವನನ್ನು ವಧಿಸಲು ದೃಢಸಂಕಲ್ಪ ಮಾಡಿದ್ದನು. ತಾನು ಅವತರಿಸಿದ ದಿನದಿಂದಲೂ ಕೃಷ್ಣ ಇದಕ್ಕಾಗಿಯೇ ಕಾಯುತ್ತಿದ್ದನು.
“ಈ ಇಬ್ಬರು ಮಕ್ಕಳನ್ನು ನಮ್ಮ ರಾಜ್ಯದಿಂದ ಹೊರಹಾಕಿರಿ; ವಸುದೇವ ಮತ್ತು ಉಗ್ರಸೇನರನ್ನು ಕೊಲ್ಲಿರಿ” ಎಂದು ಕಂಸನು ತನ್ನ ಸೈನಿಕರಿಗೆ ಆಜ್ಞಾಪಿಸಿದನು. ಕೃಷ್ಣನು ವೇಗವಾಗಿ ಕಂಸನ ಕಡೆಗೆ ಹೋದನು. ಕಂಸನು ತನ್ನ ಕತ್ತಿಯನ್ನು ಎಳೆದು ಕೃಷ್ಣನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದನು. ಆದರೆ ಕೃಷ್ಣನು ಕಂಸನ ಕೂದಲನ್ನು ಹಿಡಿದು ಕೆಳಗೆ ಎಳೆದನು, ಅವನ ಮೇಲೆ ಕುಳಿತು ಉಗ್ರವಾಗಿ ಮುಷ್ಟಿಘಾತದಿಂದ ಅವನನ್ನು ಸಂಹರಿಸಿದನು. ಕಂಸನ ಸಹೋದರರು ಆಕ್ರಮಣ ಮಾಡಲು ಬಂದಾಗ, ಕೃಷ್ಣ ಮತ್ತು ಬಲರಾಮರಿಬ್ಬರೂ ಅವರನ್ನೂ ಸಂಹರಿಸಿದರು. ಕಂಸನು ಯಾವಾಗಲೂ ಕೃಷ್ಣನ ಬಗ್ಗೆಯೇ ಚಿಂತಿಸುತ್ತಿದ್ದರಿಂದ ಮತ್ತು ಕೃಷ್ಣನ ಅನುಗ್ರಹದಿಂದ, ಅವನು ಸಾರೂಪ್ಯ ಮೋಕ್ಷ ಪಡೆದನು.
ಆಳ್ವಾರರು ಅನೇಕ ಪಾಶುರಗಳಲ್ಲಿ ಕೃಷ್ಣನು ಕಂಸನನ್ನು ಕೊಂದ ಬಗೆಯನ್ನು ಆನಂದಿಸಿ ವರ್ಣಿಸಿದ್ದಾರೆ:
ಪೆರಿಯಾಳ್ವಾರರು ತಮ್ಮ ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ಕರುತ್ತಿಟ್ಟು ಎದಿರ್ ನಿನ್ರ ಕಂಜನೈಕ್ ಕೊನ್ರಾನ್” (ದುರುದ್ದೇಶದಿಂದ ತನ್ನನ್ನು ವಿರೋಧಿಸಿದ ಕಂಸನನ್ನು ಕೃಷ್ಣ ಕೊಂದನು) ಎಂದು ಹೇಳಿದ್ದಾರೆ.
ಆಂಡಾಳ್ ತಮ್ಮ ನಾಚ್ಚಿಯಾರ್ ತಿರುಮೊಳಿಯಲ್ಲಿ “ಕಂಜನೈ ವಂಜನೈಯಿನಾಲ್ ಸೆಟ್ರವನ್” (ವಂಚನೆಯಿಂದ ಕಂಸನನ್ನು ಕೊಂದವನು) ಎಂದು ಸ್ತುತಿಸಿದ್ದಾರೆ.
ತಿರುಮಳಿಸೈ ಆಳ್ವಾರರು ತಮ್ಮ ತಿರುಚ್ಚಂದ ವಿರುತ್ತಂನಲ್ಲಿ “ಕಂಜನೈಕ್ಕಡಿದು” (ಕಂಸನನ್ನು ಶಿಕ್ಷಿಸಿದನು) ಎಂದು ಹೇಳಿದ್ದಾರೆ.
ನಮ್ಮಾಳ್ವಾರರು ತಮ್ಮ ತಿರುವಾಯ್ಮೊಳಿಯಲ್ಲಿ “ಸಾಧು ಸನತ್ತೈ ನಲಿಯುಂ ಕಂಜನೈಚ್ಚಾದಿಪ್ಪದರ್ಕು ಆದಿಯಂಜೋದಿ ಉರುವೈ ಅಂಗು ವೈತ್ತಿಂಗುಪ್ಪಿರಂದು” (ದೇವಕಿ, ವಸುದೇವ ಮುಂತಾದ ಸಾಧು ಸಜ್ಜನರಿಗೆ ಹಿಂಸೆ ನೀಡುತ್ತಿದ್ದ ಕಂಸನನ್ನು ಶಿಕ್ಷಿಸಲು, ಭಗವಂತನು ಪರಮಪದದಲ್ಲಿರುವ ತನ್ನ ಆದಿಜ್ಯೋತಿ ಸ್ವರೂಪದೊಂದಿಗೆ/ದಿವ್ಯ ತೇಜಸ್ಸಿನೊಂದಿಗೆ ಇಲ್ಲಿ ಅವತರಿಸಿದನು) ಎಂದು ಹಾಡಿದ್ದಾರೆ.
ಈ ಲೀಲೆಯ ಸಾರಾಂಶ:
- ಭಗವಂತನಿಗೆ ಯಾರೂ ಶತ್ರುಗಳಿಲ್ಲ. ಆದರೆ ಅವನು ತನ್ನ ಭಕ್ತರ ಶತ್ರುಗಳನ್ನು ತನ್ನ ಶತ್ರುಗಳೆಂದು ಪರಿಗಣಿಸಿ ಅವರನ್ನು ನಾಶಮಾಡುತ್ತಾನೆ.
- ತನ್ನ ಭಕ್ತರಿಗೆ ಹಿಂಸೆ ನೀಡುವವರನ್ನು ಭಗವಂತನು ಕಠಿಣವಾಗಿ ದಂಡಿಸುತ್ತಾನೆ, ಅವರನ್ನು ಅಸಹಾಯಕರನ್ನಾಗಿ ಮಾಡಿ ನಂತರ ಸಂಹರಿಸುತ್ತಾನೆ.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/10/06/krishna-leela-30-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org