ಕೃಷ್ಣ ಲೀಲೆಗಳ ಸಾರಾಂಶ – 35 –ಸ್ಯಮಂತಕೋಪಾಖ್ಯಾನ, ಜಾಂಬವತಿ ಮತ್ತು ಸತ್ಯಭಾಮಾ ಕಲ್ಯಾಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ರುಕ್ಮಿಣಿ ಕಲ್ಯಾಣ

ಸೂರ್ಯದೇವನ ಪರಮ ಭಕ್ತನಾದ ಸತ್ರಾಜಿತ ಎಂಬ ರಾಜನಿದ್ದನು. ಅವನ ಭಕ್ತಿಯನ್ನು ಮೆಚ್ಚಿ, ಸೂರ್ಯನು ಅವನಿಗೆ ‘ಸ್ಯಮಂತಕ ಮಣಿ’ಯನ್ನು ನೀಡಿದನು. ಅತ್ಯಂತ ತೇಜಸ್ವಿಯಾಗಿದ್ದ ಈ ಮಣಿಯು ಅಪಾರ ಸಂಪತ್ತನ್ನು ಕರುಣಿಸುವ ಶಕ್ತಿಯನ್ನು ಹೊಂದಿತ್ತು. ಸತ್ರಾಜಿತನು ಅದನ್ನು ಸರಪಳಿಯಲ್ಲಿ ಪೋಣಿಸಿ ಧರಿಸಿಕೊಂಡು ಆನಂದದಿಂದ ಜೀವಿಸುತ್ತಿದ್ದನು.

ಒಮ್ಮೆ ಅವನು ದ್ವಾರಕೆಗೆ ಬಂದನು. ಆ ಮಣಿಯನ್ನು ಧರಿಸಿದ್ದರಿಂದ ಅವನು ಅತಿಯಾಗಿ ಪ್ರಕಾಶಿಸುತ್ತಿದ್ದನು. ಅಲ್ಲಿ ತಾನು ತಂಗಿದ್ದ ಸ್ಥಳದಲ್ಲಿ, ಆ ಮಣಿಯನ್ನು ಎಲ್ಲರಿಗೂ ಕಾಣುವಂತೆ ಒಂದು ಪೀಠದ ಮೇಲೆ ಇರಿಸಿದನು. ಆ ಮಣಿಯನ್ನು ಕಂಡ ಕೃಷ್ಣನು, ಅದನ್ನು ಉಗ್ರಸೇನನಿಗೆ ನೀಡುವಂತೆ ಸತ್ರಾಜಿತನ ಬಳಿ ವಿನಂತಿಸಿದನು. ಆದರೆ ಸತ್ರಾಜಿತನು ಅದಕ್ಕೆ ನಿರಾಕರಿಸಿದನು.

ಒಮ್ಮೆ ಸತ್ರಾಜಿತನ ಸಹೋದರ ಪ್ರಸೇನನು ಆ ಮಣಿಯನ್ನು ಧರಿಸಿ ಬೇಟೆಗೆ ಹೋದನು. ಅಲ್ಲಿ ಸಿಂಹವೊಂದು ಅವನನ್ನು ಕೊಂದು ಆ ಮಣಿಯನ್ನು ತೆಗೆದುಕೊಂಡು ಹೋಯಿತು. ಆ ಸಿಂಹವು ರಾಮಭಕ್ತನಾದ ಜಾಂಬವಂತನು ವಾಸಿಸುತ್ತಿದ್ದ ಗುಹೆಗೆ ಹೋಯಿತು. ಜಾಂಬವಂತನು ಆ ಸಿಂಹವನ್ನು ಕೊಂದು ಮಣಿಯನ್ನು ತೆಗೆದುಕೊಂಡನು.

ಇತ್ತ ದ್ವಾರಕೆಯಲ್ಲಿ, ತನ್ನ ಸಹೋದರ ಕಾಣದಿದ್ದಾಗ, ಕೃಷ್ಣನೇ ತನ್ನ ತಮ್ಮನನ್ನು ಕೊಂದು ಮಣಿಯನ್ನು ಅಪಹರಿಸಿದ್ದಾನೆ ಎಂದು ಸತ್ರಾಜಿತನು ಭಾವಿಸಿದನು. ಅವನು ಇದೇ ವಿಷಯವನ್ನು ಎಲ್ಲರಿಗೂ ಹೇಳಲು ಪ್ರಾರಂಭಿಸಿದನು. ಇದನ್ನು ಕೇಳಿದ ಕೃಷ್ಣನು, ತನ್ನ ಮೇಲೆ ಬಂದ ಸುಳ್ಳು ಆಪಾದನೆಯನ್ನು ಹೋಗಲಾಡಿಸಲು ನಿರ್ಧರಿಸಿದನು. ಅವನು ಮಣಿಯನ್ನು ಹುಡುಕುತ್ತಾ ಕಾಡಿಗೆ ಹೋದನು. ಅಲ್ಲಿ ಅವನು ಪ್ರಸೇನನ ಮೃತದೇಹವನ್ನು ಕಂಡನು. ಅಲ್ಲದೆ ಸಿಂಹದ ಹೆಜ್ಜೆ ಗುರುತುಗಳನ್ನು ನೋಡಿ ಏನಾಗಿರಬಹುದೆಂದು ಅರ್ಥಮಾಡಿಕೊಂಡನು.

ಅವನು ಆ ಹೆಜ್ಜೆ ಗುರುತುಗಳನ್ನು ಅನುಸರಿಸಿ ಜಾಂಬವಂತನ ಗುಹೆಯನ್ನು ತಲುಪಿದನು. ಅಲ್ಲಿ ಜಾಂಬವಂತನ ಮಗಳಾದ ಜಾಂಬವತಿಯು ಆ ಮಣಿಯೊಂದಿಗೆ ಆಟವಾಡುತ್ತಿರುವುದನ್ನು ಗಮನಿಸಿದನು. ಅದನ್ನು ಕಂಡು ಕೃಷ್ಣನು ಮಣಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಅವಳು ಜೋರಾಗಿ ಕಿರುಚಿದಳು. ಆ ಶಬ್ದವನ್ನು ಕೇಳಿ ಜಾಂಬವಂತನು ಅಲ್ಲಿಗೆ ಬಂದು ಕೃಷ್ಣನೊಂದಿಗೆ ಮಲ್ಲಯುದ್ಧಕ್ಕೆ ಇಳಿದನು. ಈ ಯುದ್ಧವು ಇಪ್ಪತ್ತೆಂಟು ದಿನಗಳ ಕಾಲ ನಡೆಯಿತು. ಕೊನೆಗೆ ಭಗವಂತನು ತನ್ನ ನಿಜ ರೂಪವನ್ನು ತೋರಿಸಿದಾಗ, ಜಾಂಬವಂತನು ಕ್ಷಮೆಯಾಚಿಸಿ ಮಣಿಯನ್ನು ಕೃಷ್ಣನಿಗೆ ಒಪ್ಪಿಸಿದನು. ಅಷ್ಟೇ ಅಲ್ಲದೆ, ತನ್ನ ಮಗಳನ್ನೂ ಕೃಷ್ಣನಿಗೆ ಕೊಟ್ಟು ವಿವಾಹ ಮಾಡಿದನು.

ತದನಂತರ, ಕೃಷ್ಣನು ದ್ವಾರಕೆಗೆ ಹಿಂತಿರುಗಿ ನಡೆದ ಘಟನೆಗಳನ್ನು ಸತ್ರಾಜಿತನಿಗೆ ವಿವರಿಸಿ, ಮಣಿಯನ್ನು ಅವನಿಗೆ ನೀಡಿದನು. ತನ್ನ ತಪ್ಪಿನ ಅರಿವಾದ ಸತ್ರಾಜಿತನು ಕೃಷ್ಣನ ಬಳಿ ಕ್ಷಮೆ ಯಾಚಿಸಿ, ಸಾಕ್ಷಾತ್ ಭೂದೇವಿ (ಭೂಮಿ ಪಿರಾಟ್ಟಿ)ಯ ಅವತಾರವಾಗಿದ್ದ ತನ್ನ ಮಗಳು ಸತ್ಯಭಾಮೆಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿದನು. ಹೀಗೆ ಕೃಷ್ಣನು ಸತ್ಯಭಾಮೆಯನ್ನು ವಿವಾಹವಾದನು..

ನಂತರ, ಪಂಚ ಪಾಂಡವರು ಅರಗಿನ ಮನೆಯಲ್ಲಿ ಬೆಂಕಿಗೆ ಆಹುತಿಯಾದ ಸುದ್ದಿಯನ್ನು ಕೇಳಿದ ಕೃಷ್ಣನು, ಬಲರಾಮನೊಂದಿಗೆ ಹಸ್ತಿನಾಪುರಕ್ಕೆ ಹೋದನು. ಆ ಸಮಯದಲ್ಲಿ, ಕೃತವರ್ಮ ಮತ್ತು ಅಕ್ರೂರರ ಪ್ರಚೋದನೆಯಿಂದ, ಶತಧನ್ವನು ಸತ್ರಾಜಿತನನ್ನು ಕೊಂದು ಮಣಿಯನ್ನು ಅಪಹರಿಸಿದನು. ಇದರಿಂದ ತೀವ್ರ ದುಃಖಿತಳಾದ ಸತ್ಯಭಾಮೆಯು ಕೂಡಲೇ ಹಸ್ತಿನಾಪುರಕ್ಕೆ ಹೋಗಿ ಕೃಷ್ಣನನ್ನು ಭೇಟಿಯಾಗಿ ವಿಷಯ ತಿಳಿಸಿದಳು. ಕೃಷ್ಣನು ತಕ್ಷಣವೇ ಹಿಂತಿರುಗಿ ಬಂದು ಶತಧನ್ವನನ್ನು ಕೊಂದನು. ಆದರೆ ಅವನು ಆಗಲೇ ಆ ಮಣಿಯನ್ನು ಅಕ್ರೂರನಿಗೆ ನೀಡಿದ್ದನು. ಇದನ್ನು ತಿಳಿದ ಕೃಷ್ಣನು, ಅಕ್ರೂರನನ್ನು ದ್ವಾರಕೆಗೆ ಆಹ್ವಾನಿಸಿ, ಮಣಿಯನ್ನು ಒಮ್ಮೆ ತೋರಿಸುವಂತೆ ವಿನಂತಿಸಿ, ಆ ಮಣಿಯನ್ನು ಅವನ ಬಳಿಯೇ ಇಟ್ಟುಕೊಳ್ಳುವಂತೆ ಮರಳಿ ನೀಡಿದನು.

ನಮ್ಮಾಳ್ವಾರರ ತಿರುವಾಯ್ಮೊಳಿ ಪಾಶುರಗಳಾದ “ಮಣಿಸರುಮ್ ಮಟ್ರುಮ್ ಮುಟ್ರುಮಾಯ್” ಮತ್ತು “ವೀಟ್ರಿರುಂದು ಏಳುಲಗುಮ್” ವ್ಯಾಖ್ಯಾನದಲ್ಲಿ, ನಂಪಿಳ್ಳೈ ಅವರು ಹೀಗೆ ವಿವರಿಸುತ್ತಾರೆ: “ಸ್ಯಮಂತಕ ಮಣಿಯನ್ನು ಕದ್ದನು ಎಂಬ ಅಪಮಾನವನ್ನು ಸಹಿಸಿಕೊಂಡರೂ, ಭಗವಂತನು ಈ ಲೋಕದಲ್ಲಿರುವ ಆತ್ಮಗಳಿಗೆ ಸಹಾಯ ಮಾಡಲು ಅವತಾರಗಳನ್ನು ಎತ್ತುತ್ತಾನೆ”.

ಈ ಲೀಲೆಯ ಸಾರಾಂಶ: 

  • ಜಾಂಬವತಿ ಮತ್ತು ಸತ್ಯಭಾಮಾ ಪಿರಾಟ್ಟಿಯರನ್ನು ವಿವಾಹವಾಗಲು ಭಗವಂತನು ಈ ಅದ್ಭುತ ಲೀಲೆಗಳನ್ನು ಮಾಡಿದನು. 
  • ಅವನು ಈ ಲೋಕದಲ್ಲಿ ಅವತರಿಸುವಾಗ, ಅವನನ್ನು ಅರ್ಥಮಾಡಿಕೊಳ್ಳದೆ ಅನೇಕರು ಅವಮಾನಿಸುತ್ತಾರೆ. ಆದರೂ, ಅವನು ತನ್ನ ಭಕ್ತರಿಗೆ ಸಹಾಯ ಮಾಡಲು ಮತ್ತೆ ಮತ್ತೆ ಅವತರಿಸುತ್ತಾನೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/11/krishna-leela-35-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment