ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ
<< ಖಾಂಡವ ವನ ದಹನ ಮತ್ತು ಇಂದ್ರಪ್ರಸ್ಥ ನಿರ್ಮಾಣ

ಕೃಷ್ಣನು ಇನ್ನೂ ಐವರು ಸ್ತ್ರೀಯರನ್ನು ಹೇಗೆ ಮದುವೆಯಾಗುತ್ತಾನೆ ಎಂಬುದನ್ನು ನಾವಿಲ್ಲಿ ನೋಡೋಣ. ಕೃಷ್ಣಾವತಾರದಲ್ಲಿ ಈ ಐವರು ಸ್ತ್ರೀಯರೂ ಸೇರಿದಂತೆ ಒಟ್ಟು ಎಂಟು ಜನ ಸ್ತ್ರೀಯರು ಅವನ ಪ್ರಮುಖ ಪತ್ನಿಯರಾಗಿದ್ದಾರೆ (ಅಷ್ಟಮಹಿಷಿಯರು).
ಒಮ್ಮೆ ಕೃಷ್ಣ ಮತ್ತು ಅರ್ಜುನರು ಬೇಟೆಯಾಡಲು ಕಾಡಿಗೆ ತೆರಳಿದ್ದಾಗ, ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಆ ಸಮಯದಲ್ಲಿ ಅಲ್ಲಿ ಒಬ್ಬ ಸುಂದರ ಸ್ತ್ರೀಯನ್ನು ಕಂಡರು. ಕೃಷ್ಣನು ಅರ್ಜುನನನ್ನು ಅವಳ ಬಳಿ ಕಳುಹಿಸಿ, ಅವಳ ಬಗ್ಗೆ ವಿಚಾರಿಸುವಂತೆ ತಿಳಿಸಿದನು. ಅರ್ಜುನನು ಅವಳ ಬಳಿ ಹೋಗಿ, “ನೀನು ಯಾರು?” ಎಂದು ಕೇಳಿದನು.
ಅದಕ್ಕವಳು, “ನಾನು ಸೂರ್ಯನ ಮಗಳಾದ ಕಾಳಿಂದಿ. ನಾನು ಭಗವಾನ್ ವಿಷ್ಣುವನ್ನು ಮಾತ್ರ ಮದುವೆಯಾಗಲು ಬಯಸುತ್ತೇನೆ. ಅದಕ್ಕಾಗಿ ನಾನು ತಪಸ್ಸನ್ನು ಮಾಡುತ್ತಿದ್ದೇನೆ,” ಎಂದು ಉತ್ತರಿಸಿದಳು. ಅರ್ಜುನನು ಈ ವಿಷಯವನ್ನು ಕೃಷ್ಣನಿಗೆ ತಿಳಿಸಿದನು. ಕೃಷ್ಣನು ಅವಳನ್ನು ತನ್ನ ರಥದಲ್ಲಿ ಯುಧಿಷ್ಠಿರನ ಆಸ್ಥಾನಕ್ಕೆ ಕರೆದುಕೊಂಡು ಹೋದನು. ತದನಂತರ, ಕೃಷ್ಣ ಮತ್ತು ಇತರರು ಪಾಂಡವರಿಂದ ವಿದಾಯ ಹೇಳಿ ದ್ವಾರಕೆಗೆ ತಲುಪಿದರು. ಅಲ್ಲಿ ಕೃಷ್ಣನು ಕಾಳಿಂದಿಯನ್ನು ವಿವಾಹವಾದನು.
ಮುಂದೆ, ಕೃಷ್ಣನು ತನ್ನ ಇನ್ನೊಬ್ಬ ಅತ್ತೆ ರಾಜಾಧಿದೇವಿಯ ಮಗಳಾದ ಮಿತ್ರವಿಂದಾಳನ್ನು ಮದುವೆಯಾಗಲು ಬಯಸಿದನು. ಅವಳ ಸಹೋದರರಾದ ವಿಂದ್ಯಾ ಮತ್ತು ಅನುವಿಂದ್ಯಾ ಅವಂತಿ ರಾಜ್ಯವನ್ನು ಆಳುತ್ತಿದ್ದರು. ಅವರು ತಮ್ಮ ಸಹೋದರಿಗಾಗಿ ಸ್ವಯಂವರವನ್ನು ಏರ್ಪಡಿಸಿದರು. ಆದರೆ ಅವರು ಕೃಷ್ಣನನ್ನು ಆ ಸಮಾರಂಭದಲ್ಲಿ ಭಾಗವಹಿಸದಂತೆ ತಡೆದರು. ಆದರೂ, ಕೃಷ್ಣನು ಅಲ್ಲಿಗೆ ತೆರಳಿ, ಸಮಾರಂಭಕ್ಕೆ ಬಂದಿದ್ದ ರಾಜರು ನೋಡುತ್ತಿರುವಂತೆಯೇ ಅವಳನ್ನು ಕರೆದೊಯ್ದು ವಿವಾಹವಾದನು.
ತದನಂತರ, ಕೋಸಲ ರಾಜ್ಯದ ರಾಜನಾದ ನಗ್ನಜಿತ, ಸತ್ಯಾ (ನಗ್ನಜಿತಿ ಎಂದೂ ಕರೆಯುತ್ತಾರೆ) ಎಂಬ ತನ್ನ ಮಗಳಿಗೆ ಒಳ್ಳೆಯ ವರನನ್ನು ಹುಡುಕುತ್ತಿದ್ದನು. ಅವನ ಬಳಿ ಏಳು ಬಲಿಷ್ಠ ಮತ್ತು ಕ್ರೂರವಾದ ಹೋರಿಗಳಿದ್ದವು. ಆ ಏಳು ಹೋರಿಗಳನ್ನು ಯಾರು ನಿಯಂತ್ರಿಸುತ್ತಾರೋ (ಅಡಗಿಸುತ್ತಾರೋ) ಅವರು ಮಾತ್ರ ತನ್ನ ಮಗಳನ್ನು ಮದುವೆಯಾಗಬಹುದು ಎಂದು ಅವನು ಘೋಷಿಸಿದನು. ಅನೇಕ ರಾಜಕುಮಾರರು ಆ ಹೋರಿಗಳನ್ನು ಸೋಲಿಸಲು ಬಂದು, ಅವುಗಳಿಂದ ಗಾಯಗೊಂಡು ಓಡಿಹೋದರು. ಇದನ್ನು ಕೇಳಿದ ಕೃಷ್ಣನು ದೊಡ್ಡ ಸೈನ್ಯದೊಂದಿಗೆ ಕೋಸಲ ರಾಜ್ಯಕ್ಕೆ ಬಂದನು. ನಗ್ನಜಿತ್ ಕೃಷ್ಣನನ್ನು ಪ್ರೀತಿಯಿಂದ ಸ್ವಾಗತಿಸಿ, ಅನೇಕ ಉಡುಗೊರೆಗಳನ್ನು ಸಮರ್ಪಿಸಿದನು. ಕೃಷ್ಣನನ್ನು ಕಂಡ ಕೂಡಲೇ ಸತ್ಯಾ ಕೂಡ ಅವನನ್ನೇ ಮದುವೆಯಾಗಲು ಬಯಸಿದಳು. ಕೃಷ್ಣನು ಆ ಏಳು ಹೋರಿಗಳನ್ನು ಅಡಗಿಸಿ ಅವಳನ್ನು ವಿವಾಹವಾದನು. ಕೆಲವು ರಾಜಕುಮಾರರು ಮದುವೆಯನ್ನು ತಡೆಯಲು ಪ್ರಯತ್ನಿಸಿದರು, ಆದರೆ ಕೃಷ್ಣನು ಅವರನ್ನು ಓಡಿಸಿದನು. ಈ ಘಟನೆಯು ನಪ್ಪಿನ್ನೈ ಅವರ (ನೀಳಾದೇವಿ) ಪ್ರಸಂಗವನ್ನೇ ಹೋಲುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.
ಮುಂದೆ, ಕೇಕಯ ರಾಜ್ಯದ ರಾಣಿಯಾಗಿದ್ದ ಕೃಷ್ಣನ ಮತ್ತೊಬ್ಬ ಅತ್ತೆ ಶ್ರುತಕೀರ್ತಿಗೆ ಭದ್ರಾ ಎಂಬ ಮಗಳಿದ್ದಳು. ಅವಳ ಸಹೋದರರ ಅನುಮತಿಯೊಂದಿಗೆ ಕೃಷ್ಣನು ಅವಳನ್ನು ಮದುವೆಯಾದನು.
ನಂತರ, ಮದ್ರ ರಾಜ್ಯದ ರಾಜಕುಮಾರಿ ಲಕ್ಷ್ಮಣಾಳ ಸ್ವಯಂವರಕ್ಕೆ ಹೋಗಿ, ಅವಳನ್ನು ಕರೆದುಕೊಂಡು ಬಂದು ವಿವಾಹವಾದನು.
ಈ ರೀತಿಯಾಗಿ, ರುಕ್ಮಿಣಿ, ಸತ್ಯಭಾಮಾ, ಜಾಂಬವತಿ, ಕಾಳಿಂದಿ, ಮಿತ್ರವಿಂದಾ, ಸತ್ಯಾ, ಭದ್ರಾ ಮತ್ತು ಲಕ್ಷ್ಮಣಾ ಎಂಬ ತನ್ನ ಎಂಟು ಜನ ಪ್ರಮುಖ ಪತ್ನಿಯರೊಂದಿಗೆ ದ್ವಾರಕಾಧೀಶನಾಗಿ ಕೃಷ್ಣನು ದ್ವಾರಕೆಯಲ್ಲಿ ಆನಂದದಿಂದ ನೆಲೆಸಿದನು.
ನಂತರ ಕೃಷ್ಣನು ನರಕಾಸುರನನ್ನು ಸಂಹರಿಸಿ, ಅವನ ಸೆರೆಯಲ್ಲಿದ್ದ ಹದಿನಾರು ಸಾವಿರದ ನೂರು ಜನ ದೇವಕನ್ಯೆಯರನ್ನು ಮದುವೆಯಾದನು. ಇದನ್ನು ನಾವು ಮುಂದಿನ ಲೇಖನದಲ್ಲಿ ನೋಡೋಣ.
ಈ ಲೀಲೆಯ ಸಾರಾಂಶ:
- ಭಗವಾನ್ ಶ್ರೀಮನ್ನಾರಾಯಣನ ಪ್ರಮುಖ ಪತ್ನಿಯರಾದ ಶ್ರೀದೇವಿ, ಭೂದೇವಿ ಮತ್ತು ನೀಳಾದೇವಿಯರು ಕ್ರಮವಾಗಿ ರುಕ್ಮಿಣಿ, ಸತ್ಯಭಾಮಾ ಮತ್ತು ನಪ್ಪಿನ್ನೈ (ಅಥವಾ ಸತ್ಯಾ) ಆಗಿ ಅವತರಿಸಿ ಕೃಷ್ಣನನ್ನು ವಿವಾಹವಾದರು.
- ಭಗವಂತನು ಪುರುಷೋತ್ತಮ (ಪುರುಷರಲ್ಲಿ ಶ್ರೇಷ್ಠ). ಎಲ್ಲಾ ಜೀವಾತ್ಮಗಳು ಅವನ ಪತ್ನಿಯ ಸ್ಥಾನದಲ್ಲಿವೆ. ಕೆಲವು ಅವತಾರಗಳಲ್ಲಿ, ಅವನು ಕೆಲವು ಜೀವಾತ್ಮಗಳನ್ನು ಆರಿಸಿಕೊಂಡು, ಅವರಿಗೆ ಸ್ತ್ರೀ ಶರೀರವನ್ನು ಕರುಣಿಸಿ ಅವರನ್ನು ವಿವಾಹವಾಗುತ್ತಾನೆ. ಈ ಮೂಲಕ ಅವನು ಅವರಿಗೆ ತನ್ನ ದಿವ್ಯ ಪತ್ನಿಯರಾಗುವ ಶ್ರೇಷ್ಠ ಸ್ಥಾನವನ್ನು ಅನುಗ್ರಹಿಸುತ್ತಾನೆ.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/10/15/krishna-leela-38-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org