ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ
ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ
ಹಿಂದಿನ ಲೇಖನದಲ್ಲಿ ನಾವು ಹೇಗೆ ಪಂಚಸಂಸ್ಕಾರವು ಒಬ್ಬ ಶ್ರೀವೈಷ್ಣವನ ಯಾತ್ರೆಯನ್ನು ಪ್ರಾರಂಭಿಸುತ್ತದೆಂದು ನೋಡಿದೆವು. ಅದಲ್ಲದೆ ನಾವು “ಆಚಾರ್ಯ-ಶಿಷ್ಯ ಸಂಬಂಧ” ಎಂಬ ಒಂದು ಅನನ್ಯವಾದ ಸಂಬಂಧವು ಹೇಗೆ ಆರಂಭವಾಗುತ್ತದೆಂದೂ ನೋಡಿದೆವು. ಇದು ನಮ್ಮ ಸಂಪ್ರದಾಯದಲ್ಲಿ ಒಂದು ಅತಿ ಮುಖ್ಯವಾದ ಅಂಶವಾದುದರಿಂದ, ನಾವು ಪೂರ್ವಾಚಾರ್ಯ ಶ್ರೀಸೂಕ್ತಿಗಳ ಆಧಾರದ ಮೇಲೆ ಈ ಸಂಬಂಧದ ಬಗ್ಗೆ ಸ್ವಲ್ಪ ಹೆಚ್ಚಾಗಿ ತಿಳಿದುಕೊಳ್ಳೋಣ.
ಆಚಾರ್ಯರೆಂದರೆ ಅಕ್ಷರಶ: “ಒಬ್ಬ ಶಾಸ್ತ್ರಗಳನ್ನು ಅಭ್ಯಸಿಸಿದವರು ಮತ್ತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಬೋಧಿಸುವವರು” ಎಂದರ್ಥ. ಶಾಸ್ತ್ರದಲ್ಲಿ ಹೀಗೂ ಹೇಳಲ್ಪಟ್ಟಿದೆ “ಒಬ್ಬ ಸಂನ್ಯಾಸಿಯೂ ಕೂಡ ವಿಷ್ಣುವಿನ ಪರತ್ವವನ್ನು ಒಪ್ಪಿಕೊಳ್ಳದಿದ್ದರೆ ಆತನನ್ನು ಒಬ್ಬ ಚಂಡಾಲನನ್ನಾಗಿಯೇ ಪರಿಗಣಿಸಬೇಕು”. ಆದ್ದರಿಂದ ಆಚಾರ್ಯರು ಒಬ್ಬ ವೈಷ್ಣವರಾಗಿರಬೇಕೆಂಬುದು ಅತ್ಯಗತ್ಯ – ಅರ್ಥಾತ್ ಶ್ರೀಮನ್ ನಾರಾಯಣನು ಸರ್ವೋಚ್ಚ ದೇವನೆಂದು ಸ್ವೀಕರಿಸುವುದು ಮತ್ತು ಪ್ರತಿಕ್ಷಣವೂ ಪ್ರತಿಯೊಂದು ಕಾರ್ಯದಲ್ಲಿಯೂ ಆತನನ್ನು ಸಂತುಷ್ಟಗೊಳಿಸಲು ಪ್ರಯತ್ನಿಸುವುದು. ನಮ್ಮ ಪೂರ್ವಾಚಾರ್ಯರು ಪಂಚಸಂಸ್ಕಾರದ ಸಮಯದಲ್ಲಿ ತಿರುಮಂತ್ರ ಉಪದೇಶ (ದ್ವಯ ಮತ್ತು ಚರಮ ಶ್ಲೋಕದೊಂದಿಗೆ) ಮಾಡುವವರನ್ನು ಮೊದಲ ಆಚಾರ್ಯರೆಂದು ಘೋಷಿಸಿದ್ದಾರೆ. ಶಿಷ್ಯ ಎಂದರೆ ಶಿಕ್ಷೆಗೆ ಈಡಾಗುವವನು (ಶುದ್ಧೀಕರಿಸಲ್ಪಡುವವನು) ಎಂದರ್ಥ. ಇದನ್ನು ಸಾಧಾರಣವಾಗಿ ಇಂಗ್ಲಿಷ್ ನಲ್ಲಿ ‘ಡಿಸೈಪಲ್’ ಎಂದು ಅನುವಾದಿಸಲಾಗುತ್ತದೆ – ಅರ್ಥಾತ್ ಕಟ್ಟುಪಾಡಿಗೆ ಒಳಪಟ್ಟವನು . ಇಲ್ಲಿ ಶಿಷ್ಯನು/ಶಿಷ್ಯಳು ಆಚಾರ್ಯರ ಮಾರ್ಗದರ್ಶನದಲ್ಲಿ ಒಂದು ಸಮರ್ಪಕವಾದ ಅಚ್ಚಿನಲ್ಲಿ ರೂಪಿತಗೊಳ್ಳುತ್ತಾರೆ.
ಉಡೈಯವರ್ – ಆಳ್ವಾನ್ (ಆದರ್ಶ ಆಚಾರ್ಯ – ಶಿಷ್ಯ), ಕೂರಮ್
ನಮ್ಮ ಪೂರ್ವಾಚಾರ್ಯರು ಆಚಾರ್ಯ ಮತ್ತು ಶಿಷ್ಯರ ಗುಣಲಕ್ಷಣಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. ಪ್ರಾರಂಭದಲ್ಲಿ ಅವರು ಶಾಸ್ತ್ರಗಳ ಆಧಾರದ ಮೇಲೆ ಆಚಾರ್ಯ-ಶಿಷ್ಯರ ಸಂಬಂಧವು ಒಬ್ಬ ತಂದೆ-ಮಗನ ಸಂಬಂಧಕ್ಕೆ ಸರಿಸಮವಾದದ್ದೆಂದು ಸ್ಥಾಪಿಸಿದ್ದಾರೆ. ಒಬ್ಬ ಮಗನು ತನ್ನ ತಂದೆಗೆ ಹೇಗೆ ಅಧೀನನಾಗಿರುವನೋ ಹಾಗೆ ಒಬ್ಬ ಶಿಷ್ಯನು ತನ್ನ ಆಚಾರ್ಯರಿಗೆ ಸಂಪೂರ್ಣವಾಗಿ ಅಧೀನನಾಗಿರಬೇಕು.
ಭಗವದ್ಗೀತೆಯಲ್ಲಿ ಕಣ್ಣನ್ ಭಗವಂತನು ಹೀಗೆ ಹೇಳಿದ್ದಾನೆ “ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ, ಉಪದೇಕ್ಷನ್ತಿ ತೇ ಜ್ಞಾನಮ್ ಜ್ಞಾನಿನಸ್ತತ್ತ್ವದರ್ಶಿನ:”. ಇದು ಸುಂದರವಾಗಿ ಆಚಾರ್ಯ ಮತ್ತು ಶಿಷ್ಯರ ಗುಣಲಕ್ಷಣಗಳನ್ನು ಸಂಕ್ಷಿಪ್ತ ರೂಪದಲ್ಲಿ ತಿಳಿಸುತ್ತದೆ. ಮೊದಲ ಸಾಲಿನಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ “ನೀನು ವಿನೀತನಾಗಿ ಒಬ್ಬ ಆಚಾರ್ಯರ ಬಳಿಗೆ ಹೋಗಬೇಕು, ನಮ್ರತೆಯಿಂದ ಅವರ ಸೇವೆ ಮಾಡಬೇಕು ಮತ್ತು ವಿನಯದಿಂದ ಅವರಿಗೆ ಪ್ರಶ್ನೆಗಳನ್ನು ಕೇಳಬೇಕು”. ಎರಡೆನೆಯ ಸಾಲಿನಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ “ಆಚಾರ್ಯರು ನಿಜವಾದ ತತ್ತ್ವವನ್ನು (ಅರ್ಥಾತ್ ಭಗವಾನ್) ಅರಿತಿರುವುದರಿಂದ ಅವರು ನಿನಗೆ ಆಜ್ಞಾನವನ್ನು ಬೋಧಿಸುತ್ತಾರೆ”.
ಒಬ್ಬ ಆಚಾರ್ಯರಿಂದ ನಿರೀಕ್ಷಿಸಲ್ಪಡುವ ಕೆಲವು ಗುಣಲಕ್ಷಣಗಳೇನೆಂದರೆ:
- ಆಚಾರ್ಯರುಗಳು ಸಾಮಾನ್ಯವಾಗಿ ಪಿರಾಟ್ಟಿಯೊಂದಿಗೆ (ಶ್ರೀ ಮಹಾಲಕ್ಷ್ಮಿ) ಸಮೀಕರಿಸಲ್ಪಡುತ್ತಾರೆ – ಅವರ ಮುಖ್ಯ ಕಾರ್ಯವೆಂದರೆ ಭಗವಂತನಿಗೆ ಪುರುಷಕಾರವನ್ನು (ಪಿರಾಟ್ಟಿಯಂತೆ ಪ್ರಭಾವ) ಮಾಡುವುದು.
- ಪಿರಾಟ್ಟಿಯಂತೆಯೇ ಅವರೂ ಸಹ ಭಗವಂತನಿಗೆ ತಾವು ಅಧೀನರೆಂದು ಒಪ್ಪಿಕೊಳ್ಳಬೇಕು, ಅವರು ಭಗವಂತನು ಮಾತ್ರವೇ ಉಪಾಯವೆಂಬುದನ್ನು ಸ್ವೀಕರಿಸಬೇಕು ಮತ್ತು ಅವರ ಕ್ರಿಯೆಗಳು ಭಗವಂತನನ್ನು ಸಂತೋಷಪಡಿಸುವುದಕ್ಕಾಗಿ ಮಾತ್ರವೇ ಇರಬೇಕು.
- ಅವರು ಪೂರ್ಣವಾಗಿ ಕೃಪೆಯಿಂದ ಕೂಡಿರಬೇಕು – ಶಿಷ್ಯರುಗಳನ್ನು ಸ್ವೀಕರಿಸಲು, ಅವರ ಆತ್ಮಜ್ಞಾನ ಮತ್ತು ವೈರಾಗ್ಯವನ್ನು ಅಭಿವೃದ್ಧಿಪಡಿಸಲು, ಮತ್ತು ಶಿಷ್ಯರುಗಳನ್ನು ಭಗವತ್/ಭಾಗವತ ಕೈಂಕರ್ಯಗಳಲ್ಲಿ ತೊಡಗಿಸಲು.
- ಮಾಮುನಿಗಳ ದಿವ್ಯ ಶ್ರೀಸೂಕ್ತಿಯಂತೆ, ಆಚಾರ್ಯರು ಶಿಷ್ಯರ ಆತ್ಮದ ರಕ್ಷಣೆಯಲ್ಲಿ ಮಾತ್ರವೇ ಗಮನವಿರಬೇಕು.
- ಪಿಳ್ಳೈ ಲೋಕಾಚಾರ್ಯರು ಹೇಳುತ್ತಾರೆ “ಒಬ್ಬ ಆಚಾರ್ಯರು ತಮ್ಮ ಶಿಷ್ಯರ ಮತ್ತು ಫಲಿತಾಂಶಗಳ ಬಗ್ಗೆ ಸಮರ್ಪಕ ಜ್ಞಾನವುಳ್ಳವರಾಗಿರಬೇಕು”.
- ಅವರು ತಾವು ಆಚಾರ್ಯರಲ್ಲ, ತಮ್ಮ ಆಚಾರ್ಯರೇ ಆಚಾರ್ಯರೆಂದು ಭಾವಿಸಬೇಕು.
- ಅವರು ಶಿಷ್ಯನು ತಮ್ಮ ಶಿಷ್ಯನಲ್ಲ, ತಮ್ಮ ಆಚಾರ್ಯರ ಶಿಷ್ಯನೆಂದು ಭಾವಿಸಬೇಕು.
- ಫಲಿತಾಂಶವು ಭಗವಂತನ ಮಂಗಳಾಶಾಸನವನ್ನು ಸತತವಾಗಿ ಮಾಡುವ ಒಬ್ಬ ಉತ್ತಮವಾಗಿ ಪಕ್ವನಾದ ಶಿಷ್ಯನನ್ನು ತಯಾರಿಸುವುದರ ಹೊರತು ಬೇರೇನೂ ಅಲ್ಲ ಎಂದು ಅವರು ಭಾವಿಸಬೇಕು.
- ವಾರ್ತಾಮಾಲೈ ಗ್ರಂಥದಲ್ಲಿ ವಿವರಿಸಿರುವಂತೆ ಮತ್ತು ಶಿಷ್ಟಾಚಾರಗಳಂತೆ (ಹಿರಿಯರ ಪದ್ಧತಿಗಳು), ಆಚಾರ್ಯರು ತಮ್ಮ ಶಿಷ್ಯನನ್ನು ಅತಿ ಗೌರವದಿಂದ ಕಾಣಬೇಕು – ಏಕೆಂದರೆ ಆ ಶಿಷ್ಯನ್ನು (ಆಚಾರ್ಯರ ಅರ್ಹತೆ/ಸಾಮರ್ಥ್ಯವನ್ನು ಪರಿಶೀಲಿಸಲು ಹೋಗದೆ) ಸಂಪೂರ್ಣ ರಕ್ಷಣೆಗಾಗಿ ಕೇವಲ ಶಾಸ್ತ್ರಗಳ ಆದೇಶದ ಮೇರೆಗೆ ಆಚಾರ್ಯರ ಬಳಿಗೆ ಬಂದಿದ್ದಾನೆ.
- ನಮ್ಮ ಪೂರ್ವಾಚಾರ್ಯರುಗಳು ವಿವರಿಸಿರುವಂತೆ ಸಾಕ್ಷಾತ್ ಭಗವಂತನೂ ಸಹ ಒಬ್ಬ ಆಚಾರ್ಯನಾಗಲು ಇಚ್ಛಿಸುತ್ತಾನೆ. ಇದರಿಂದಾಗಿಯೇ ಅವನು ನಮ್ಮ ಓರಾಣ್ ವಳಿ ಗುರು ಪರಂಪರೈಯಲ್ಲಿ ಮೊದಲ ಆಚಾರ್ಯನಾಗಿರಲು ಅಪೇಕ್ಷಿಸಿದನು. ಆತನು ತನಗೂ ಒಬ್ಬ ಆಚಾರ್ಯರು ಬೇಕೆಂದು ಇಚ್ಛಿಸಿದನು – ಇದರಿಂದಾಗಿಯೇ ಆತನು ತನಗಾಗಿ ಅತ್ಯಂತ ಪರಿಪೂರ್ಣರಾದ ಆಚಾರ್ಯರನ್ನು ಆಯ್ಕೆ ಮಾಡಿದನು – ಅವರೆಂದರೆ ಅಳಗಿಯ ಮಣವಾಳ ಮಾಮುನಿಗಳ್.
ಒಬ್ಬ ಶಿಷ್ಯನಿಂದ ನಿರೀಕ್ಷಿಸಲ್ಪಟ್ಟ ಕೆಲವು ಗುಣಲಕ್ಷಣಗಳು ಹೀಗಿವೆ:
- ಪಿಳ್ಳೈ ಲೋಕಾಚಾರ್ಯರು ಹೇಳುತ್ತಾರೆ:
- ಶಿಷ್ಯನು ತನ್ನನ್ನು ಎಂಪೆರುಮಾನ್ ಮತ್ತು ಆಚಾರ್ಯರ ವಿನಾ ಎಲ್ಲವುಗಳಿಂದಲೂ ಮುಕ್ತಗೊಳಿಸಿಕೊಳ್ಳಬೇಕು (ಅದೆಂದರೆ ಐಶ್ವರ್ಯ ಮತ್ತು ಆತ್ಮಾನುಭವ) .
- ಶಿಷ್ಯನು ಆಚಾರ್ಯರ ಸೇವೆ ಮಾಡಲು ಎಲ್ಲಾ ರೀತಿಯಲ್ಲಿಯೂ ಸದಾಕಾಲವೂ ಸಿದ್ಧನಾಗಿರಬೇಕು.
- ಶಿಷ್ಯನು ಈ ಭೌತಿಕ ಪ್ರಪಂಚವನ್ನು ಕಂಡು ಮಾನಸಿಕವಾಗಿ ತಳಮಳಗೊಳ್ಳಬೇಕು.
- ಶಿಷ್ಯನು ಭಗವದ್ ವಿಷಯ ಮತ್ತು ಆಚಾರ್ಯ ಕೈಂಕರ್ಯಗಳಲ್ಲಿ ಅಪೇಕ್ಷೆಯುಳ್ಳವನಾಗಿರಬೇಕು.
- ಭಗವತ್/ಭಾಗವತ ವಿಷಯಗಳ ವೈಭವಗಳನ್ನು ತಿಳಿದುಕೊಳ್ಳುವಾಗ ಶಿಷ್ಯನು ಅಸೂಯೆಯಿಂದ ಮುಕ್ತನಾಗಿರಬೇಕು.
- ಒಬ್ಬ ಶಿಷ್ಯನು ತನ್ನ ಎಲ್ಲ ಸಂಪತ್ತು ಆಚಾರ್ಯರಿಗೆ ಸೇರಿದ್ದೆಂದು ಭಾವಿಸಬೇಕು. ತನ್ನ ದೇಹ ಧಾರಣಕ್ಕೆ (ಮೂಲಭೂತ ಜೀವನಕ್ಕೆ) ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು.
- ಒಬ್ಬ ಶಿಷ್ಯನು ಆಚಾರ್ಯರೇ ತನ್ನ ಸರ್ವಸ್ವವೆಂದು ಭಾವಿಸಬೇಕು, ಆಳವಂದಾರರು “ಮಾತಾ ಪಿತಾ ಯುವತಯ: … ” ಶ್ಲೋಕದಲ್ಲಿ ಹೇಳಿರುವಂತೆ.
- ಅವನು ತನ್ನ ಆಚಾರ್ಯರ ಜೀವನಾಧಾರವನ್ನು ನೋಡಿಕೊಳ್ಳಬೇಕು.
- ಮಣವಾಳ ಮಾಮುನಿಗಳು ಉಪದೇಶ ರತ್ತಿನ ಮಾಲೈಯಲ್ಲಿ ಹೇಳಿರುವಂತೆ “ಈ ಲೋಕದಲ್ಲಿರುವವರೆಗೆ ಒಬ್ಬನು ತನ್ನ ಆಚಾರ್ಯರಿಂದ ಒಂದು ಕ್ಷಣವೂ ದೂರವಿರಬಾರದು”.
- ಒಬ್ಬ ಶಿಷ್ಯನು ತನ್ನ ಆಚಾರ್ಯರನ್ನು ಅವರ ಉಪಸ್ಥಿತಿಯಲ್ಲಿ ಶ್ಲಾಘಿಸಬೇಕು ಮತ್ತು ತನ್ನ ಆಚಾರ್ಯರು ತನಗೆ ನೀಡಿದ ಜ್ಞಾನದ ಬಗ್ಗೆ ಉಪಕಾರ ಸ್ಮೃತಿಯುಳ್ಳವನಾಗಿರಬೇಕು.
ಒಬ್ಬ ಶಿಷ್ಯನು ತನ್ನ ಆಚಾರ್ಯರ ಆತ್ಮ ರಕ್ಷಣೆಯನ್ನು ಮಾಡುವುದೂ (ಅರ್ಥಾತ್ ಶಿಷ್ಯನು ಆಚಾರ್ಯರಿಗೆ ಸ್ವರೂಪ ಶಿಕ್ಷಣ ಮಾಡುವುದು) ಮತ್ತು ಆಚಾರ್ಯರು ಶಿಷ್ಯನ ದೇಹ ರಕ್ಷಣೆಯನ್ನು ಮಾಡುವುದೂ (ಅರ್ಥಾತ್ ಶಿಷ್ಯನು ಆಚಾರ್ಯರು ತನ್ನ ಜೀವನಾಧಾರವನ್ನು ನೋಡಿಕೊಳ್ಳುವರೆಂದು ಅಪೇಕ್ಷಿಸುವುದು) ಅನುಚಿತವೆಂದು ವಿವರಿಸಲ್ಪಟ್ಟಿದೆ.
ಪಿಳ್ಳೈ ಲೋಕಾಚಾರ್ಯರು ವಿವರಿಸಿರುವಂತೆ, ಒಬ್ಬ ಶಿಷ್ಯನಾಗಿರುವುದು ಬಹು ಕಷ್ಟಕರವಾದದ್ದು (ಮತ್ತು ಒಬ್ಬನು ಯೋಗ್ಯನಾದ ಶಿಷ್ಯನಾಗುವುದನ್ನು ನಾವು ನಿಜವಾಗಿ ಅರಿತುಕೊಳ್ಳಲಾಗದು, ಈ ವಿಷಯದ ಬಗ್ಗೆ ಎಷ್ಟೇ ಓದಿದರೂ ಸಹ). ಇದರಿಂದಾಗಿಯೇ ಭಗವಂತನು ಸ್ವತಃ “ನರ” ಋಷಿಯ ರೂಪದಲ್ಲಿ ಬಂದು ತಿರುಮಂತ್ರವನ್ನು ಅರಿಯುವ ಸೋಗಿನಲ್ಲಿ ಹೇಗೆ ಒಬ್ಬನು ಯೋಗ್ಯನಾದ ಶಿಷ್ಯನಾಗಿರಬೇಕಂದು ತೋರಿಸಲು “ನಾರಾಯಣ” ಋಷಿಯ (ಆತನೂ ಭಗವಂತನ ಅವತಾರ) ಶಿಷ್ಯನಾದನು.
ಈ ಹಿನ್ನೆಲೆಯಲ್ಲಿ ನಾವು ಈಗ ಆಚಾರ್ಯರುಗಳ ವಿವಿಧ ವರ್ಗೀಕರಣಗಳನ್ನು ಅರಿತುಕೊಳ್ಳಲು ಪ್ರಯತ್ನಿಸೋಣ:
ಅನುವೃತ್ತಿ ಪ್ರಸನ್ನಾಚಾರ್ಯ
ಎಂಪೆರುಮಾನಾರ್ (ರಾಮಾನುಜರ್) ಗಿಂತ ಹಿಂದಿನ ಕಾಲದಲ್ಲಿ, ಆಚಾರ್ಯರುಗಳು ಭಾವೀ ಶಿಷ್ಯರನ್ನು ಸ್ವೀಕರಿಸುವ ಮುನ್ನ ಅವರ ನಿಷ್ಠೆಯನ್ನು ಪರೀಕ್ಷಿಸುತ್ತಿದ್ದರು. ಶಿಷ್ಯನು ಸ್ವೀಕಾರಕ್ಕೆ ಮುನ್ನ ತನ್ನ ಆಚಾರ್ಯರ ಗೃಹಕ್ಕೆ ಹೋಗಿ, ಅವರೊಡನೆ ವಾಸ ಮಾಡಿ ಮತ್ತು ಒಂದು ವರ್ಷ ಕಾಲ ಅವರ ಸೇವೆಯನ್ನು ಮಾಡುವುದು ವಾಡಿಕೆಯಾಗಿತ್ತು.
ಕೃಪಾ ಮಾತ್ರ ಪ್ರಸನ್ನಾಚಾರ್ಯ
ಆದರೆ ಯಾವಾಗ ಎಂಪೆರುಮಾನಾರರು ಕಲಿಯುಗದ ಲಕ್ಷಣಗಳನ್ನು ನೋಡಿದರೋ, ಅವರಿಗೆ ಅರಿವಾಯಿತು – ಆಚಾರ್ಯರುಗಳು ಹೀಗಿದ್ದರೆ ಕೇವಲ ಕೆಲವೇ ಜನರು ಮಾತ್ರ ಲೌಕಿಕ ವಿಷಯಗಳನ್ನು ತ್ಯಜಿಸಲು ಪ್ರೇರೇಪಿತರಾಗುತ್ತಾರೆ ಮತ್ತು ಅನೇಕರು ಆಚಾರ್ಯರುಗಳ ಕೋರಿಕೆಗಳನ್ನು ಈಡೇರಿಸಲು ಅಶಕ್ತರಾಗುತ್ತಾರೆ. ಆದ್ದರಿಂದ, ಅವರ ಅಪರಿಮಿತವಾದ ಕರುಣೆಯಿಂದಾಗಿ, ಎಂಪೆರುಮಾನಾರರು ನಿಯಮಗಳನ್ನು ಸಡಿಲಿಸಿದರು ಮತ್ತು ಈ ಅತ್ಯಮೂಲ್ಯವಾದ ಜ್ಞಾನವನ್ನು ಭಗವತ್ ವಿಷಯಗಳನ್ನು ಅರಿಯಲು ನಿಜವಾದ ಬಯಕೆಯಿರುವವರಿಗೆ ನೀಡಿದರು. ಆದರಿಂದ ಅರ್ಹತೆಯು “ಯೋಗ್ಯತೆಯುಳ್ಳ” ಎಂಬುದರಿಂದ “ಅಪೇಕ್ಷೆಯುಳ್ಳ” ಅಭ್ಯರ್ಥಿಗಳು ಎಂದು ಬದಲಾಯಿತು. ಅವರು ತಮ್ಮ ಶಿಷ್ಯರಿಗೂ ಸಹ ಇದೇ ಕ್ರಮವನ್ನು ಅನುಸರಿಸುವಂತೆ ಮಾರ್ಗದರ್ಶನ ಸೂತ್ರವನ್ನು ಸ್ಥಾಪಿಸಿದರು ಮತ್ತು ತಮ್ಮ ಕೃಪೆಯಿಂದಾಗಿ ಅನೇಕ ಸಹಸ್ರ ಜನರನ್ನು ಶ್ರೀವೈಷ್ಣವದ ಪರಿಧಿಯಲ್ಲಿ ತಂದರು . ಎಂಪೆರುಮಾನಾರರಿಂದ ಪ್ರಾರಂಭವಾಗಿ, ನಮ್ಮ ಆಚಾರ್ಯರುಗಳು ಕೃಪಾ ಮಾತ್ರ ಪ್ರಸನ್ನಾಚಾರ್ಯರುಗಳೆಂದು ಕರೆಯಲ್ಪಡುತ್ತಾರೆ. ಮಾಮುನಿಗಳು ಈ ತತ್ತ್ವವನ್ನು ಅದ್ಭುತವಾಗಿ ತಮ್ಮ ಉಪದೇಶ ರತ್ತಿನ ಮಾಲೈ ಪಾಶುರದಲ್ಲಿ ವಿವರಿಸಿದ್ದಾರೆ “ಓರಾಣ್ ವಳಿಯಾಯ್ ಉಪದೇಶಿತ್ತಾರ್ ಮುನ್ನೋರ್, ಏರಾರ್ ಎತಿರಾಶರ್ ಇನ್ನರುಳಾಲ್ ಪಾರುಲಗಿಲ್ ಆಶೈ ಉಡಯೋರ್ಕ್ಕೆಲ್ಲಾಮ್ ಆರಿಯರ್ಗಾಳ್ ಕೂರುಮ್ ಎನ್ರು ಪೇಶಿ ವರಂಬರುತ್ತಾರ್ ಪಿನ್”.
ಉತ್ತಾರಕ ಆಚಾರ್ಯ ಮತ್ತು ಉಪಕಾರಕ ಆಚಾರ್ಯ
“ಚರಮ ಉಪಾಯ ನಿರ್ಣಯ” ದಲ್ಲಿ – ನಾಯನಾರಾಚ್ಚಾನ್ ಪಿಳ್ಳೈ ಅವರ ಕೃತಿ – ಅವರು ಈ ಎರಡು ವಿಧದ ಆಚಾರ್ಯರನ್ನು ವಿವರಿಸುತ್ತಾರೆ. ಈ ಗ್ರಂಥವು ಎಂಪೆರುಮಾನಾರರ ಮಹಿಮೆಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ.
ಉತ್ತಾರಕ ಆಚಾರ್ಯರು ಯಾರೆಂದರೆ ಒಬ್ಬರನ್ನು ಈ ಸಂಸಾರದಿಂದ ಮೇಲೆತ್ತಿ ಆತ/ಆಕೆಯನ್ನು ಸುಲಭವಾಗಿ ಪರಮಪದಕ್ಕೆ ತಲುಪಿಸಲು ಶಕ್ತರಾದವರು. ಶ್ರೀಮನ್ ನಾರಾಯಣನ್, ನಮ್ಆಳ್ವಾರ್ ಮತ್ತು ಎಂಪೆರುಮಾನಾರ್ ಇವರು ಮೂವರು ಮಾತ್ರವೇ ಉತ್ತಾರಕ ಆಚಾರ್ಯರುಗಳು ಎಂದೂ ವಿವರಿಸಲ್ಪಟ್ಟಿದೆ (ಸಹಜವಾಗಿಯೇ, ಯತಿ ಪುನರವತಾರಭೂತರಾದ ಮಣವಾಳ ಮಾಮುನಿಗಳೂ ಕೂಡ ಎರುಂಬಿ ಅಪ್ಪಾ ಅವರ ವರವರಮುನಿ ಶತಕದಲ್ಲಿ ಉತ್ತಾರಕ ಆಚಾರ್ಯರು ಎಂದು ಸ್ಥಾಪಿತರಾಗಿದ್ದಾರೆ).
- ಶ್ರೀಮನ್ ನಾರಾಯಣನು ಪ್ರಥಮಾಚಾರ್ಯನು ಮತ್ತು ಸರ್ವಜ್ಞ, ಸರ್ವಶಕ್ತ, ಇತ್ಯಾದಿಯಾಗಿರುವುದರಿಂದ, ಆತನು ಯಾರಿಗಾದರೂ ಸುಲಭವಾಗಿ ಮೋಕ್ಷವನ್ನು ನೀಡಬಲ್ಲನು.
ಪೆರಿಯ ಪೆರುಮಾಳ್ – ಶ್ರೀರಂಗಮ್
- ನಮ್ಆಳ್ವಾರ್ ಸಂಸಾರಿಗಳಿಗೆ ಜ್ಞಾನವನ್ನು ನೀಡಲು ಮತ್ತು ಅವರನ್ನು ಸರಿಪಡಿಸಲು ಭಗವಂತನಿಂದ ಆಯ್ಕೆಮಾಡಲ್ಪಟ್ಟವರಾದ್ದರಿಂದ, ಅವರೂ ಸಹ ಯಾರಿಗಾದರೂ ಮೋಕ್ಷವನ್ನು ನೀಡಲು ಅರ್ಹರು. ಇದು ತಿರುವಾಯ್ಮೊಳಿಯಲ್ಲಿ ಸ್ವತಃ ಅವರ ಹೇಳಿಕೆಯಿಂದಲೇ ವ್ಯಕ್ತವಾಗುತ್ತದೆ – “ಪೊನ್ನುಲಗು ಆಳಿರೋ, ಪುವನಿ ಮುಳುತು ಆಳೀರೊ”. ಅವರು ಭಗವಂತನಿಗೆ ಸಂದೇಶವಾಹಕರಾದ ಪಕ್ಷಿಗಳಿಗೆ ಹೇಳುತ್ತಾರೆ – ನಾನು ನಿಮ್ಮ ಉಪಕಾರಕ್ಕೆ ಸಂಭಾವನೆಯಾಗಿ ನಿತ್ಯ ವಿಭೂತಿ ಮತ್ತು ಲೀಲಾ ವಿಭೂತಿ ಎರಡನ್ನೂ ನೀಡಬಲ್ಲೆನು.
ನಮ್ಮಾಳ್ವಾರ್ – ಆಳ್ವಾರ್ ತಿರುನಗರಿ
- ಎಂಪೆರುಮಾನಾರರು, ಉಡೈಯವರ್ – ಉಭಯ ವಿಭೂತಿಗಳ ನಿಯಂತ್ರಕರು – ಎಂದು ಶ್ರೀರಂಗನಾಥ ಮತ್ತು ತಿರುವೇಂಕಟಮುಡೈಯಾನ್ (ಶ್ರೀನಿವಾಸ – ತಿರುಮಲ) ಇವರಿಂದ ಘೋಷಿಸಲ್ಪಟ್ಟರು. ಅವರು ಭಗವತ್ ಅನುಭವದಲ್ಲಿ ಮಗ್ನರಾಗಿದ್ದುದು ಮಾತ್ರವಲ್ಲದೆ ಈ ಲೀಲಾ ವಿಭೂತಿಯಲ್ಲಿ ಬಹುಕಾಲ (120 ವರ್ಷಗಳು) ಬಾಳಿದರು ಮತ್ತು ಭಗವಂತನ ಉದ್ದೇಶವನ್ನು ಸಂಪೂರ್ಣವಾಗಿ ನಿರ್ವಹಿಸಿದರು. ಅವರು ಸಮರ್ಪಕವಾಗಿ ದೇವಾಲಯದ ಪೂಜೆಯನ್ನು ಪ್ರತಿಷ್ಠಾಪಿಸಿದರು, ಸಾವಿರಾರು ಶಿಷ್ಯರಿಗೆ ದೀಕ್ಷೆಯನ್ನು ನೀಡಿದರು ಮತ್ತು ಈ ದಿವ್ಯ ಸಂದೇಶವನ್ನು ಮುಂದೆ ಸಾಗಿಸಲು 74 ಸಿಂಹಾಸನಾಧಿಪತಿಗಳನ್ನು ಸ್ಥಾಪಿಸಿದರು.
ಎಂಪೆರುಮಾನಾರ್ – ಶ್ರೀಪೆರುಂಬೂದೂರ್
- ಭಗವಂತನು ಕೇವಲ ಶಾಸ್ತ್ರಗಳ ಪ್ರಕಾರವೇ ವರ್ತಿಸುತ್ತಾನೆ, ಆತನು ಜೀವಾತ್ಮರಿಗೆ ಮೋಕ್ಷವನ್ನು ನೀಡುತ್ತಾನೆ ಇಲ್ಲವೇ ಅವರನ್ನು ಸಂಸಾರದಲ್ಲಿ ಇರಿಸುತ್ತಾನೆ, ಅವರವರ ಇಚ್ಛೆ ಮತ್ತು ಕರ್ಮಗಳಿಗೆ ಅನುಗುಣವಾಗಿ. ಆದ್ದರಿಂದ, ನಾಯನಾರಾಚ್ಚಾನ್ ಪಿಳ್ಳೈ ಅವರು ಉತ್ತಾರಕತ್ವವು ಎಂಪೆರುಮಾನಾರರಲ್ಲಿ ಪರಿಪೂರ್ಣವಾಗಿದೆ ಎಂದು ನಿರ್ಣಯಿಸಿದ್ದಾರೆ.
- ನಮ್ಆಳ್ವಾರ್ ರವರು, ಈ ಜ್ಞಾನವನ್ನು ಪಡೆದ ನಂತರ, ಅವರು ಒಬ್ಬರು ಆಳ್ವಾರರಾದ್ದರಿಂದ – ಅವರು ಸ್ವಲ್ಪ ಪರೋಪದೇಶವನ್ನು ಮಾಡಿದ್ದರೂ ಸಹ, ಅವರು ಭಗವತ್ ಅನುಭವದಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ ತಮ್ಮ ಸ್ವಂತ ಇಚ್ಛೆಯಂತೆ ಈ ಭೌತಿಕ ಪ್ರಪಂಚವನ್ನು ಬಹು ಚಿಕ್ಕ ವಯಸ್ಸಿನಲ್ಲಿಯೇ ತೊರೆದರು.
- ಎಂಪೆರುಮಾನಾರರು ತಮ್ಮ ಪರಮ ಕೃಪೆಯಿಂದಾಗಿ ಈ ಅನುಗ್ರಹವನ್ನು ಇಚ್ಛೆಯುಳ್ಳ ಯಾರೊಬ್ಬರಿಗೂ ಕರುಣಿಸಿದರು ಮತ್ತು ಅವರನ್ನು ಭಗವಂತನಲ್ಲಿ ತಲುಪಿಸಿದರು.
ಹೀಗೆ, ನಾಯನಾರಾಚ್ಚಾನ್ ಪಿಳ್ಳೈ ಅವರು ಉತ್ತಾರಕತ್ವವು ಎಂಪೆರುಮಾನಾರರಲ್ಲಿ ಪೂರ್ತಿಯಾಗಿದೆ ಎಂದು ನಿರ್ಣಯಿಸಿದ್ದಾರೆ.
ಉಪಕಾರಕ ಆಚಾರ್ಯ
ಇವರು ನಮ್ಮನ್ನು ಒಬ್ಬ ಉತ್ತಾರಕ ಆಚಾರ್ಯರ ಬಳಿಗೆ ಕರೆದೊಯ್ಯಲು ಸಮರ್ಥರಾದವರು. ನಮ್ಮ ಸಂಪ್ರದಾಯದಲ್ಲಿ, ನಮ್ಮ ಸ್ವಂತ ಆಚಾರ್ಯರ ವರೆಗೆ ಎಂಪೆರುಮಾನಾರರ ಕೆಳಗೆ ಬರುವ ಎಲ್ಲ ಆಚಾರ್ಯ ಪರಂಪರೆಗಳೂ ಉಪಕಾರಕ ಆಚಾರ್ಯರೆಂದು ವರ್ಗೀಕೃತವಾಗಿವೆ. ನಾವು ಪಂಚ ಸಂಸ್ಕಾರವನ್ನು ಮಾಡಿಸಿಕೊಳ್ಳುವಾಗ, ನಮ್ಮ ಆಚಾರ್ಯರು ತಮ್ಮ ಗುರುಪರಂಪರೆಯ ಮೂಲಕ, ಆ ಜೀವಾತ್ಮನನ್ನು ಸಂಸಾರವನ್ನು ತೊರೆದು ಪರಮಪದವನ್ನು ಸೇರಲು ಇಚ್ಛಿಸುವ ವ್ಯಕ್ತಿಯನ್ನಾಗಿ, ಭಗವಂತನಲ್ಲಿಗೆ ಕರೆದೊಯ್ಯಲು ಎಂಪೆರುಮಾನಾರರಿಗೆ ವಿನಂತಿಸಿಕೊಳ್ಳುತ್ತಾರೆ.
ಉತ್ತಾರಕ ಆಚಾರ್ಯ ಮತ್ತು ಉಪಕಾರಕ ಆಚಾರ್ಯ ಇವರಿಬ್ಬರೂ ಸಮಾನವಾಗಿ ಗೌರವಿಸಲ್ಪಡಬೇಕಾದವರು – ಎಂಪೆರುಮಾನಾರರು ನಮ್ಮ ಸಂಪ್ರದಾಯದಲ್ಲಿ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದರೂ ಸಹ. ಮಾಮುನಿಗಳು ತಮ್ಮ ಉಪದೇಶ ರತ್ತಿನ ಮಾಲೈಯಲ್ಲಿ ನಮಗೆ ಸರಿಯಾದ ಕ್ರಮವನ್ನು ತೋರಿಸಲು ತಿರುವಾಯ್ಮೊಳಿ ಪಿಳ್ಳೈ ಇಂದ ಪ್ರಾರಂಭಿಸಿ ಎಂಪೆರುಮಾನಾರರಲ್ಲಿ ಮುಗಿಸುತ್ತಾರೆ.
ಸಮಾಶ್ರಯಣ ಆಚಾರ್ಯ ಮತ್ತು ಜ್ಞಾನ ಆಚಾರ್ಯ
ಸಮಾಶ್ರಯಣ ಆಚಾರ್ಯರು ಯಾರೆಂದರೆ ನಮಗೆ ಪಂಚಸಂಸ್ಕಾರವನ್ನು ಮಾಡುವವರು.
ಜ್ಞಾನ ಆಚಾರ್ಯರು ನಮಗೆ ಗ್ರಂಥ ಕಾಲಕ್ಷೇಪ, ಇತ್ಯಾದಿಗಳನ್ನು ಮಾಡುವವರು; ಅದರಿಂದ ನಮ್ಮ ಆತ್ಮಜ್ಞಾನವು ಅಭಿವೃದ್ಧಿಯಾಗುತ್ತದೆ.
ಸಮಾಶ್ರಯಣ ಆಚಾರ್ಯರಿಗೆ ನಾವು ಚಿರಋಣಿಗಳಾಗಿರಬೇಕು ಮತ್ತು ಅವರಿಗೆ ಸಂಪೂರ್ಣವಾಗಿ ಶರಣಾಗತರಾಗಿರಬೇಕು, ಆದರೂ ಜ್ಞಾನ ಆಚಾರ್ಯರನ್ನೂ ಸಹ ಅಷ್ಟೇ ಗೌರವದಿಂದ ಕಾಣಬೇಕು. ಕೆಲವರಿಗೆ ಸಮಾಶ್ರಯಣ ಮತ್ತು ಜ್ಞಾನ ಆಚಾರ್ಯರು ಒಬ್ಬರೇ ಆಗಿರುತ್ತಾರೆ. ವಾಸ್ತವವಾಗಿ, ಶ್ರೀ ವಚನ ಭೂಷಣದಲ್ಲಿ ಹೇಳಿರುವಂತೆ ಪ್ರತಿಯೊಬ್ಬ ಶ್ರೀವೈಷ್ಣವರನ್ನೂ ತಮ್ಮ ಸ್ವಂತ ಆಚಾರ್ಯರಂತೆ ಗೌರವದಿಂದ ಕಾಣಬೇಕು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಒಬ್ಬ ಶಿಷ್ಯನು/ಶಿಷ್ಯಳು ತನ್ನ ಆಚಾರ್ಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರಬೇಕು. ತಮ್ಮ ಆಚಾರ್ಯರ ಜೀವನಾಧಾರವನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅವರದಾಗಿದೆ. ಒಬ್ಬರು ತಮ್ಮ ಆಚಾರ್ಯರೊಂದಿಗೆ ನಿರಂತರವಾಗಿ ಸಂಪರ್ಕವನ್ನು ಇರಿಸಿಕೊಂಡಿರಬೇಕು ಮತ್ತು ಅವರ ಅವಶ್ಯಕತೆಗಳಲ್ಲಿ ನೆರವಾಗಬೇಕು.
ನಮ್ಮ ಪೂರ್ವಾಚಾರ್ಯರುಗಳ ಜೀವನದಲ್ಲಿ ಆಚಾರ್ಯ ಮತ್ತು ಶಿಷ್ಯರ ನಡುವೆ ಅನೇಕ ಅದ್ಭುತವಾದ ಘಟನೆಗಳು ನಡೆದಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ:
- ಮಣಕ್ಕಾಲ್ ನಂಬಿ ತಮ್ಮ ಆಚಾರ್ಯರ (ಉಯ್ಯಕ್ಕೊಂಡಾರ್) ಗೃಹದಲ್ಲಿ ಅನೇಕ ಮನೆಗೆಲಸಗಳನ್ನು ಮಾಡುತ್ತಿದ್ದರು.
- ಮಣಕ್ಕಾಲ್ ನಂಬಿ ಆಳವಂದಾರರನ್ನು ಶ್ರೀವೈಷ್ಣವದೊಳಗೆ ತರಲು ಅತೀವ ಶ್ರಮ ಪಟ್ಟರು.
- ಎಂಪೆರುಮಾನಾರರು ಕೂರತ್ತಾಳ್ವಾನ್ ರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು, ತಾವು ಅವರ ಆಚಾರ್ಯರಾಗಿದ್ದರೂ ಸಹ.
- ಒಮ್ಮೆ ಎಂಪೆರುಮಾನಾರರು ಕೂರತ್ತಾಳ್ವಾನ್ ರ ಬಗ್ಗೆ ಅಸಮಾಧಾನಗೊಂಡಾಗ ಆಳ್ವಾನ್ ಹೇಳಿದರು “ಅಡಿಯೇನ್ (ತಾನು) ಎಂಪೆರುಮಾನಾರರ ಆಸ್ತಿ – ನೀವು ನನ್ನನ್ನು ಏನು ಬೇಕಾದರೂ ಮಾಡಬಹುದು”.
- ಎಂಬಾರ್ ತಮ್ಮ ಆಚಾರ್ಯರ ಹಾಸಿಗೆಯನ್ನು ಅದರ ಮೇಲೆ ಮಲಗಿ ಪರೀಕ್ಷಿಸುತ್ತಿದ್ದರು. ಇದು ಪಾಪವಲ್ಲವೇ ಎಂದು ಕೇಳಿದಾಗ, ತಮ್ಮ ಆಚಾರ್ಯರ ಹಾಸಿಗೆಯು ಅತ್ಯಂತ ಸುಖದಾಯಕವಾಗಿದ್ದರೆ ಸಾಕು, ನಾನು ಆ ಪಾಪವನ್ನು ಮಾಡಲೂ ಹಿಂದೆಗೆಯುವುದಿಲ್ಲ ಎಂದರು,
- ಎಂಪೆರುಮಾನಾರರು ಅನಂತಾಳ್ವಾನ್ ರಿಗೆ ಪರಾಶರ ಭಟ್ಟರು ತಮ್ಮಂತೆಯೇ ಮತ್ತು ಅವರನ್ನು ಹಾಗೆಯೇ ಕಾಣಬೇಕು ಎಂದು ಹೇಳುತ್ತಾರೆ.
- ಭಟ್ಟರು ಮತ್ತು ನಂಜೀಯರ್ ಅತ್ಯುತ್ತಮವಾದ ಸಂಭಾಷಣೆಗಳನ್ನು ನಡೆಸುತ್ತಿದ್ದರು. ನಂಜೀಯರ್ ಎಲ್ಲವನ್ನೂ ತೊರೆದರು ಮತ್ತು ಸನ್ಯಾಸಿಯಾದರು. ಒಮ್ಮೆ ಅವರು ಹೇಳಿದರು “ನನ್ನ ಆಶ್ರಮವು ಭಟ್ಟರಿಗೆ (ಅವರ ಆಚಾರ್ಯ) ನನ್ನ ಸೇವೆ ಮಾಡಲು ಅಡ್ಡಿಯಾದಲ್ಲಿ, ನಾನು ನನ್ನ ತ್ರಿದಂಡವನ್ನು ಮುರಿದುಹಾಕುತ್ತೇನೆ”.
- ನಂಜೀಯರ್ ಅವರು ನಂಪಿಳ್ಳೈ ಅವರ ದೃಷ್ಟಿಕೋನಗಳನ್ನು ಪ್ರೋತ್ಸಾಹಿಸುತ್ತಿದ್ದರು, ಅವು ಕೆಲವು ಪಾಶುರಗಳ ಮೇಲೆ ತಮ್ಮ ಸ್ವಂತ ಅಭಿಪ್ರಾಯಕ್ಕಿಂತ ಭಿನ್ನವಾಗಿದ್ದರೂ ಸಹ.
- ಪಿನ್ಬಳಗಿಯ ಪೆರುಮಾಳ್ ಜೀಯರ್, ನಂಪಿಳ್ಳೈ (ಅವರ ಆಚಾರ್ಯ) ಅವರು ಕಾವೇರಿಯಲ್ಲಿ ಸ್ನಾನ ಮಾಡಿ ಹಿಂದಿರುಗುವಾಗ ಅವರ ಬೆನ್ನನ್ನು ನೋಡಿ ಆನಂದಿಸುವುದಕ್ಕಾಗಿ ಮಾತ್ರವೇ, ತಾವು ಈ ಲೀಲಾವಿಭೂತಿಯಲ್ಲೇ ಇರಲು ಬಯಸುತ್ತೇನೆಂದು ಹೇಳುತ್ತಿದ್ದರು.
- ಕೂರಕುಲೋತ್ತಮ ದಾಸರು ತಿರುವಾಯ್ಮೊಳಿ ಪಿಳ್ಳೈ ಅವರನ್ನು ಶ್ರೀವೈಷ್ಣವದೊಳಗೆ ತರಲು ಅತೀವ ಶ್ರಮ ಪಟ್ಟರು.
- ಮಣವಾಳ ಮಾಮುನಿಗಳು ತಿರುವಾಯ್ಮೊಳಿ ಪಿಳ್ಳೈ (ಅವರ ಆಚಾರ್ಯ) ಅವರ ಆದೇಶಗಳನ್ನು ತಮ್ಮ ಜೀವನದ ಒಂದೇ ಧ್ಯೇಯವನ್ನಾಗಿ ಇಟ್ಟುಕೊಂಡಿದ್ದರು. ಅವರು ಒಮ್ಮೆ ಶ್ರೀಭಾಷ್ಯವನ್ನು ಕಲಿತರು ಮತ್ತು ಅದರ ಮೇಲೆ ಉಪನ್ಯಾಸಗಳನ್ನು ನೀಡಿದರು, ಆದರೆ ಆ ಇಡೀ ಸಮಯದಲ್ಲಿ ಅರುಳಿಚ್ಚೆಯಲ್ ಮತ್ತು ರಹಸ್ಯ ಗ್ರಂಥಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು.
- ಶ್ರೀರಂಗನಾಥನು ಶ್ರೀದೇವಿ ಮತ್ತು ಭೂದೇವಿಯರೊಡಗೂಡಿ ತನ್ನ ಸನ್ನಿಧಿಯ ಮುಂದೆ ಒಂದು ಪೂರ್ಣ ವರ್ಷ ಕಾಲ ಮಣವಾಳ ಮಾಮುನಿ ಅವರಿಂದ ಈಡು ಕಾಲಕ್ಷೇಪವನ್ನು ಕೇಳಿದನು ಮತ್ತು ತನ್ನ ಆಚಾರ್ಯ ಸಂಭಾವನೆಯಾಗಿ ತನ್ನ ಸ್ವಂತ ಶೇಷ ಪರ್ಯಂಕವನ್ನು ನೀಡಿದನು, ಮತ್ತು ಎಲ್ಲೆಡೆಯೂ ಯಾವುದೇ ಅರುಳಿಚ್ಚೆಯಲ್ (ದಿವ್ಯಪ್ರಬಂಧ) ಗೋಷ್ಠಿಯ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಆತನ ಆದೇಶದಂತೆ ಇಂದಿಗೂ ಹಾಡಲ್ಪಡುವ ತನಿಯನ್ ಒಂದನ್ನು ತನ್ನ ಆಚಾರ್ಯರಿಗಾಗಿ ರಚಿಸಿದನು.
- ಮಣವಾಳ ಮಾಮುನಿಗಳು ತಮ್ಮ ಸ್ವಂತ ಆಸನ, ಚಕ್ರ ಮತ್ತು ಶಂಖಗಳನ್ನು ಪೊನ್ನಡಿಕ್ಕಾಲ್ ಜೀಯರ್ ಅವರಿಗೆ ನೀಡಿದರು, ಮತ್ತು ಅವರಿಗೆ ಅಪ್ಪಾಚಿಯಾರಣ್ಣಾರಿಗೆ ಪಂಚಸಂಸ್ಕಾರವನ್ನು ಮಾಡಲು ಹೇಳಿದರು.
ಹೀಗೆ ಅನೇಕ ಘಟನೆಗಳು ನಡೆದಿವೆ, ಆದರೆ ಆಚಾರ್ಯರು ಮತ್ತು ಶಿಷ್ಯರು ಪರಸ್ಪರ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ ಈ ಮೇಲೆ ಕೆಲವನ್ನು ಮಾತ್ರ ಪಟ್ಟಿ ಮಾಡಲಾಗಿದೆ.
ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್
ಮೂಲ: https://granthams.koyil.org/2015/12/simple-guide-to-srivaishnavam-acharya-sishya/
ರಕ್ಷಿತ ಮಾಹಿತಿ: https://granthams.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org
2 thoughts on “ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ”