ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ತತ್ತ್ವ ತ್ರಯಮ್

ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ರಹಸ್ಯ ತ್ರಯಮ್

ಎಲ್ಲಾ ವಸ್ತುಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಬಹುದು. ಅವು: ಚಿತ್, ಅಚಿತ್, ಮತ್ತು ಈಶ್ವರ ತತ್ತ್ವಗಳು.

’ಚಿತ್’ ಎಂಬುದು ನಿತ್ಯವಿಭೂತಿ (ಪರಮಪದ – ನಾಶರಹಿತವಾದ ಶ್ರೀವೈಕುಂಠಲೋಕ) ಮತ್ತು ಲೀಲಾವಿಭೂತಿ (ನಶ್ವರವಾದ ಸಂಸಾರ ಮಂಡಲ) ಎಂಬ ಎರಡೂ ಮಂಡಲಗಳಲ್ಲಿರುವ ಅಸಂಖ್ಯಾತ ಜೀವಾತ್ಮಗುಣವನ್ನು ಸೂಚಿಸುತ್ತದೆ. ಪ್ರತಿಯೊಂದು ಜೀವಾತ್ಮವೂ ಸ್ವಾಭಾವಿಕವಾಗಿಯೇ ಜ್ಞಾನಮಯವೂ (ಜ್ಞಾನದಿಂದಾಗಿರುವುದು), ಜ್ಞಾನಗುಣಕವೂ (ಜ್ಞಾನವನ್ನು ಹೊಂದಿರುವುದು) ಆಗಿದೆ. ಪರಿಶುದ್ಧ ಜ್ಞಾನವು ಆನಂದಮಯವಾಗಿರುವುದರಿಂದ ಆತ್ಮವು ಪರಿಶುದ್ಧ ಜ್ಞಾನದಲ್ಲಿ ನೆಲೆನಿಂತಿರುವಾಗ ಅದೂ ಸಹ ಆನಂದಮಯವಾಗಿರುತ್ತದೆ. ಜೀವಾತ್ಮಗಳನ್ನು ಈ ಕೆಳಕಂಡಂತೆ ಮೂರು ವಿಧವಾಗಿ ವಿಂಗಡಿಸಬಹುದು: ನಿತ್ಯಸೂರಿಗಳು (ಸಂಸಾರ ಸಂಬಂಧವೇ ಇಲ್ಲದವರು), ಮುಕ್ತಾತ್ಮಗಳು (ಒಂದು ಕಾಲದಲ್ಲಿ ಸಂಸಾರದಲ್ಲಿದ್ದುಕೊಂಡು ನಂತರ ಬಂಧಮುಕ್ತರಾದವರು), ಮತ್ತು ಬದ್ಧಾತ್ಮಗಳು (ಈಗಲೂ ಸಂಸಾರದಲ್ಲಿರುವವರು). ಇನ್ನೂ ಬದ್ಧಾತ್ಮಗಳನ್ನು ಬುಭುಕ್ಷುಗಳು (ಭೋಗವನ್ನಿಚ್ಛಿಸುವವರು) ಮತ್ತು ಮುಮುಕ್ಷುಗಳು (ಮೋಕ್ಷವನ್ನಿಚ್ಛಿಸುವವರು) ಎಂಬುದಾಗಿ ಎರಡು ವಿಧವಾಗಿ ವಿಂಗಡಿಸಬಹುದು. ಮೇಲೆಯೂ, ಮುಮುಕ್ಷುಗಳನ್ನು ಕೈವಲ್ಯಾರ್ಥಿಗಳು (ತಮ್ಮನ್ನು ತಾವೇ ಅನುಭವಿಸಲಿಚ್ಛಿಸುವವರು) ಮತ್ತು ಭಗವತ್ಕೈಂಕರ್ಯಾರ್ಥಿಗಳು (ಪರಮಪದದಲ್ಲಿ ಭಗವಂತನಿಗೆ ನಿತ್ಯಕೈಂಕರ್ಯವನ್ನು ಮಾಡಲಿಚ್ಛಿಸುವವರು) ಎಂದು ಎರಡು ವಿಧವಾಗಿ ಪರಿಗಣಿಸಬಹುದು. ಈ ವಿಂಗಡಣೆಯ ಬಗೆಗೆ ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ಜಾಲತಾಣವನ್ನು ವೀಕ್ಷಿಸಬಹುದು: https://granthams.koyil.org/2013/03/06/thathva-thrayam-chith-who-am-i/

 

’ಅಚಿತ್’ ಎಂಬುದು ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ಅನೇಕ ಜಡ ಪದಾರ್ಥಗಳನ್ನು  ಒಳಕೊಂಡಿರುತ್ತದೆ. ಇವು ಪ್ರಳಯಕಾಲದಲ್ಲಿ ಅವ್ಯಕ್ತವಾಗಿದ್ದು, ಸೃಷ್ಟಿ ಕಾಲದಲ್ಲಿ ವ್ಯಕ್ತರೂಪವನ್ನು ತಾಳುತ್ತವೆ. ಚಿದ್ವಸ್ತುವಿನಂತೆಯೇ ಅಚಿದ್ವಸ್ತುವೂ ಸಹಾ ನಿತ್ಯವಿಭೂತಿ-ಲೀಲಾ ವಿಭೂತಿ ಎರಡರಲ್ಲಿಯೂ ಕಾಣ ಸಿಗುತ್ತದೆ. ಸಾಮಾನ್ಯವಾಗಿ ಅಚಿತ್, ಲೀಲಾವಿಭೂತಿಯಲ್ಲಿ ಜ್ಞಾನವನ್ನು ಮರೆಮಾಚುವ ಸಾಧನವೂ, ನಿತ್ಯವಿಭೂತಿಯಲ್ಲಿ ಜ್ಞಾನ ಧರ್ಮಕವಾದ ಸಾಧನವೂ ಆಗಿರುತ್ತದೆ. ಈ ಅಚಿದ್ವಸ್ತುವನ್ನು ’ಶುದ್ಧಸತ್ತ್ವ’ (ಸತ್ತ್ವಮಾತ್ರವೇ ಆಗಿರುವ ವಸ್ತು – ಪರಮಪದದಲ್ಲಿ ಲಭ್ಯ), ’ಮಿಶ್ರಸತ್ತ್ವ’ (ಸತ್ತ್ವ-ರಜಸ್-ತಮಸ್ಸುಗಳ ಮಿಶ್ರಣ – ಸಂಸಾರದಲ್ಲಿ ಗೋಚರ) ಮತ್ತು ’ಸತ್ತ್ವಶೂನ್ಯ’ (ಸತ್ತ್ವವೇ ಇಲ್ಲದ ವಸ್ತು – ’ಕಾಲ’ವೆಂದು ಹೆಸರು) ಎಂಬುದಾಗಿ ವಿಂಗಡಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಈ ತಾಣಕ್ಕೆ ಭೇಟಿ ಕೊಡಿ: https://granthams.koyil.org/2013/03/thathva-thrayam-achith-what-is-matter/ .

ಈಶ್ವರನು ಶ್ರಿಯಃಪತಿಯಾದ ಸರ್ವಸ್ವಾಮಿ ಶ್ರೀಮನ್ನಾರಾಯಣ. ಇವನನ್ನು ’ಭಗವಂತ’ (ಭಗವಾನ್) ಎನ್ನುತ್ತಾರೆ. ’ಭಗವಾನ್’ ಎಂದರೆ ಆರು ಗುಣಗಳನ್ನು ಸಂಪೂರ್ಣವಾಗಿ ಹೊಂದಿರುವವನು ಎಂದರ್ಥ (ಷಾಡ್ಗುಣ್ಯಪೂರ್ತಿ). ಈ ಆರು ಗುಣಗಳಾವು ಎಂದರೆ: ಜ್ಞಾನ, ಬಲ, ಐಶ್ವರ್ಯ, ವೀರ್ಯ, ಶಕ್ತಿ, ಮತ್ತು ತೇಜಸ್ಸು. ಈ ಆರುಗುಣಗಳೇ ಮುಂದೆ ಭಗವಂತನ ಅನೇಕ ಕಲ್ಯಾಣಗುಣಗಳಾಗಿ ವಿಸ್ತರಿಸುತ್ತವೆ.  ಭಗವಂತನು ಎಲ್ಲಾ ಕಲ್ಯಾಣಗುಣಗಳಿಗೂ ಆಶ್ರಯಭೂತನಾಗಿದ್ದು, ಎಲ್ಲಾ ಹೇಯಗುಣಗಳಿಗೂ ಪ್ರತಿಭಟನಾಗಿರುತ್ತಾನೆ. ಎಲ್ಲಾ ಚಿದಚಿದ್ವಸ್ತುಗಳೂ ಅವನಲ್ಲೇ ಆಶ್ರಿತವಾಗಿವೆ, ಮತ್ತು ಅವೆಲ್ಲವನ್ನೂ ಒಂದೂ ಬಿಡದಂತೆ ಆತನು ವ್ಯಾಪಿಸಿದ್ದಾನೆ. ಆದ್ದರಿಂದ ಅವನಲ್ಲೇ ಎಲ್ಲಾ ವಸ್ತುಗಳೂ ನೆಲೆಸಿದ್ದು, ಅವನೂ ಎಲ್ಲಾ ವಸ್ತುಗಳಲ್ಲಿಯೂ ನೆಲೆಸಿದ್ದಾನೆ. ಅವನು ಎಲ್ಲರಿಗೂ / ಎಲ್ಲಾ ಪದಾರ್ಥಗಳಿಗೂ ಸ್ವಾಮಿಯಾಗಿದ್ದು, ಎಲ್ಲಾ ಚಿದಚಿದ್ವಸ್ತುಗಳೂ ಕೇವಲ ಅವನ ಭೋಗಕ್ಕಾಗಿಯೇ ಇವೆ. ಈಶ್ವರ ತತ್ತ್ವದ ಬಗೆಗೆ ಇನ್ನೂ ಹೆಚ್ಚಿನ ವಿವರಗಳಿಗೆ ಓದಿ: https://granthams.koyil.org/2013/03/thathva-thrayam-iswara-who-is-god/

ಈ ಮೂರು ತತ್ತ್ವಗಳಲ್ಲಿರುವ ಸಾಮ್ಯಗಳು ಈ ಕೆಳಕಂಡಂತಿವೆ:

  • ಈಶ್ವರ ಮತ್ತು ಚಿತ್ (ಜೀವಾತ್ಮಾ) ಎಂಬ ಎರಡೂ ಚೈತನ್ಯವುಳ್ಳ ತತ್ತ್ವಗಳು (ಜ್ಞಾನವನ್ನು ಹೊಂದಿರುವವು).
  • ಚಿತ್ (ಜ್ಞಾನ ಸಹಿತವಾದದ್ದು) ಮತ್ತು ಅಚಿತ್ (ಜ್ಞಾನ ರಹಿತವಾದದ್ದು) ಎಂಬ ಎರಡೂ ತತ್ತ್ವಗಳು ಈಶ್ವರನ ಸ್ವತ್ತು.
  • ಈಶ್ವರ ಮತ್ತು ಅಚಿದ್ವಸ್ತುಗಳೆರಡೂ ಚಿದ್ವಸ್ತುವಾದ ಜೀವಾತ್ಮವನ್ನು ತಮ್ಮ ತಮ್ಮಗುಣಗಳಿಗೆ ಆನುಸಾರವಾಗಿ ಮಾರ್ಪಡಿಸಬಲ್ಲವು. ಉದಾಹರಣೆಗೆ: ಜೀವಾತ್ಮನು ಬಹಳವಾಗಿ ಲೌಕಿಕಾನುಭವಗಳಲ್ಲಿ ಆಸಕ್ತನಾಗಿರುವಾಗ ತಾನೂ ಅಚಿದ್ವಸ್ತುವಿನಂತೆಯೇ ಜ್ಞಾನಶೂನ್ಯನಾಗಿಬಿಡುವನು. ಹಾಗೆಯೇ, ಜೀವಾತ್ಮನು ಪರಿಪೂರ್ಣವಾಗಿ ಭಗವದನುಭವದಲ್ಲಿ ಮುಳುಗಿರುವಾಗ ಈ ಸಂಸಾರಬಂಧಗಳಿಂದ ಮುಕ್ತನಾಗಿ ಭಗವಂತನಂತೆಯೇ ಪರಿಪೂರ್ಣ ಆನಂದಾನುಭವವನ್ನು ಹೊಂದುವನು.

ಈ ಮೂರೂ ತತ್ತ್ವಗಳಲ್ಲಿರುವ ಅಸಾಧಾರಣ ಗುಣಗಳು ಈ ಕೆಳಕಂಡಂತಿವೆ:

  • ಈಶ್ವರನ ಅಸಾಧಾರಣ ಗುಣಗಳೆಂದರೆ ಚಿದಚಿದ್ವಸ್ತುಗಳ ಮೇಲಿರುವ ಅವನ ಸರ್ವಸ್ವಾಮ್ಯ, ಮತ್ತು ಅವನ ಸರ್ವ ಅಂತರ್ಯಾಮಿತ್ವ -ಸರ್ವಶಕ್ತಿತ್ವ-ಸರ್ವಜ್ಞತ್ವಾದಿಗಳು.
  • ಚಿದ್ವಸ್ತುವಿನ ಅಸಾಧಾರಣ ಗುಣವೆಂದರೆ ಈಶ್ವರವಿಷಯವಾಗಿ ತನಗಿರುವ ಶೇಷತ್ವಜ್ಞಾನ.
  • ಅಚಿದ್ವಸ್ತುವಿನ ಅಸಾಧಾರಣ ಗುಣವೆಂದರೆ ಜ್ಞಾನಶೂನ್ಯವಾಗಿದ್ದುಕೊಂಡು, ಇತರರ ಭೋಗೋಪಯೋಗಿಯಾಗಿಯೇ ಇರುವುದು.

ಈ ಮೂರು ತತ್ತ್ವಗಳ ಬಗೆಗೆ ಇನ್ನೂ ಹೆಚ್ಚಿನ ವಿವರಗಳಿಗಾಗಿ ಶ್ರೀ ಪಿಳ್ಳೈಲೋಕಾಚಾರ್ಯರ “ತತ್ತ್ವತ್ರಯಮ್” ಎಂಬ ರಹಸ್ಯಗ್ರಂಥವನ್ನು ಈ ಕೆಳಕಂಡ ಜಾಲತಾಣದಲ್ಲಿ ಪರಿಶೀಲಿಸುವುದು: https://granthams.koyil.org/2013/10/aippasi-anubhavam-pillai-lokacharyar-tattva-trayam/

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಪಿಳ್ಳೈಲೋಕಾಚಾರ್ಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೇನ್ ಶ್ರೀನಿವಾಸ ರಾಮಾನುಜ ದಾಸನ್

 

ಮೂಲ: https://granthams.koyil.org/2015/12/thathva-thrayam-in-short/

ರಕ್ಷಿತ ಮಾಹಿತಿ:  https://granthams.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org

ಪ್ರಮಾತಾ (ಬೋಧಕರು) – https://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

Leave a Comment