ಕೃಷ್ಣ ಲೀಲೆಗಳ ಸಾರಾಂಶ – 10 –ದಧಿಭಾಂಡನು ಪಡೆದ ಆಶೀರ್ವಾದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಕೃಷ್ಣನ ವೃಂದಾವನ ಪ್ರವೇಶ ಮತ್ತು ದೈತ್ಯರ ವಧೆ

ಕೃಷ್ಣಾವತಾರದ ಲೀಲೆಗಳಲ್ಲಿ ಅನೇಕ ಆಹ್ಲಾದಕರ ಅನುಭವಗಳು ಮತ್ತು ಅದ್ಭುತ ತತ್ತ್ವಗಳು ಕಂಡುಬರುತ್ತವೆ. ಅವುಗಳಲ್ಲಿ ಒಂದು ಅದ್ಭುತ ಲೀಲೆ ಎಂದರೆ ಕೃಷ್ಣನು ಒಬ್ಬ ಕುಂಬಾರ ಮತ್ತು ಅವನ ಮಡಕೆಗೆ ಮೋಕ್ಷವನ್ನು ಪ್ರಧಾನ ಮಾಡಿದ್ದು. ಈ ಘಟನೆಯ ಮೂಲವನ್ನು ಇತಿಹಾಸಗಳು ಮತ್ತು ಪುರಾಣಗಳಲ್ಲಿ ಪತ್ತೆಹಚ್ಚಲು ನಮಗೆ ಸಾಧ್ಯವಾಗಿಲ್ಲ. ಆದರೂ, ನಮ್ಮ ಪೂರ್ವಾಚಾರ್ಯರು ಕೆಲವು ಪ್ರಮುಖ ಗ್ರಂಥಗಳಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. ಈಗ ಘಟನೆಯನ್ನು ಕೂಲಂಕುಶವಾಗಿ ನೋಡೋಣ.

ಒಮ್ಮೆ ವೃಂದಾವನದಲ್ಲಿ, ಕೃಷ್ಣ ಎಂದಿನಂತೆ ಬೆಣ್ಣೆಯನ್ನು ಕದ್ದು ಓಡಿಹೋಗುತ್ತಿದ್ದನು. ಆ ಸಮಯದಲ್ಲಿ, ಯಶೋದೆಯು ಅವನನ್ನು ಬೆನ್ನಟ್ಟುತ್ತಿದ್ದಳು. ಕೃಷ್ಣನು ಅಲ್ಲಿದ್ದ ಒಂದು ಗುಡಿಸಲಿಗೆ ಪ್ರವೇಶಿಸಿದನು. ಅಲ್ಲಿ  ದಧಿಬಾಂಡನೆಂಬ ಕುಂಬಾರ ವಾಸಿಸುತ್ತಿದ್ದನು. ಕೃಷ್ಣನನ್ನು ನೋಡಿ ಅವನು ತುಂಬಾ ಸಂತೋಷಗೊಂಡನು. ಕೃಷ್ಣನು ಅಡಗಿಕೊಳ್ಳಲು ಸ್ಥಳವನ್ನು ಹುಡುಕುತ್ತಿದ್ದನು, ಮತ್ತು ಒಂದು ದೊಡ್ಡ ಮಡಕೆಯನ್ನು ಕಂಡು, ಅದರೊಳಗೆ ಪ್ರವೇಶಿಸಿ ಅಡಗಿಕೊಂಡನು. ಅವನು ಕುಂಬಾರನಿಗೆ “ಯಾರೇ ಬಂದು  ಕೇಳಲಿ. ನಾನು ಇಲ್ಲಿ ಇರುವುದನ್ನು ಹೇಳಬೇಡ” ಎಂದು ಹೇಳಿದನು. ಕುಂಬಾರ ಒಪ್ಪಿಕೊಂಡನು. ಯಶೋದೆ ಅಲ್ಲಿಗೆ ಬಂದು “ಕೃಷ್ಣ ಇಲ್ಲಿಗೆ ಬಂದನೇ?” ಎಂದು ಕೇಳಿದಳು. ಅವನು “ಯಾರೂ ಇಲ್ಲಿಗೆ ಬಂದಿಲ್ಲ” ಎಂದು ಹೇಳಿ ಅವಳನ್ನು ಕಳುಹಿಸಿದನು.

ನಂತರ, ಕೃಷ್ಣ ಹೊರಬರಲು ಪ್ರಯತ್ನಿಸಿದನು. ಕುಂಬಾರನು “ನೀನು ಹೊರಬರಬೇಕಾದರೆ, ನೀನು ನನಗೆ ಈ ಭೌತಿಕ ಜಗತ್ತಿನಿಂದ ಮೋಕ್ಷವನ್ನು ನೀಡಲು ಒಪ್ಪಿಕೊಳ್ಳಬೇಕು. ನೀನು ಇದಕ್ಕೆ ಒಪ್ಪಿದರೆ ಮಾತ್ರ ನಾನು ನಿನ್ನನ್ನು ಹೊರಗೆ ಬಿಡುತ್ತೇನೆ” ಎಂದು ಹೇಳಿದನು. ಕೃಷ್ಣನು ಅವನಿಗೆ “ನನಗೆ ಮೋಕ್ಷದ ಬಗ್ಗೆ ಏನೂ ತಿಳಿದಿಲ್ಲ. ನಾನು ಚಿಕ್ಕ ಹುಡುಗ. ನಿನಗೆ ಬೇಕಾದರೆ, ನಾನು ಸ್ವಲ್ಪ ಬೆಣ್ಣೆಯನ್ನು ಕೊಡಬಹುದು” ಎಂದು ಹೇಳಿದನು. ಕುಂಬಾರನು “ನಾನು ನಿನ್ನ ನಿಜವಾದ ಗುರುತನ್ನು ಅರಿತುಕೊಂಡಿದ್ದೇನೆ. ನೀನು ನನಗೆ ಮೋಕ್ಷವನ್ನು ನೀಡಲೇಬೇಕು” ಎಂದು ಒತ್ತಾಯಿಸಿದನು. ಕೃಷ್ಣನು ಸಂತೋಷಗೊಂಡು “ಸರಿ! ನೀಡಿದ್ದೇನೆ!” ಎಂದು ಹೇಳಿದನು. ಕುಂಬಾರನು ಅಷ್ಟಕ್ಕೆ ತೃಪ್ತಿಹೊಂದಲಿಲ್ಲ. ಅವನು “ನನಗೆ ಮಾತ್ರವಲ್ಲ. ನಾನು ಮೊಸರನ್ನು ಇಡುವ ನನ್ನ ಮಡಕೆಗೂ ಮೋಕ್ಷವನ್ನು ನೀಡಬೇಕು” ಎಂದು ಕೇಳಿದನು. ಕೃಷ್ಣನು “ನಾನು ಅದನ್ನು ಮಾಡಲು ಸಾಧ್ಯವಿಲ್ಲ. ನೀನು ಎಷ್ಟು ದುರಾಸೆಯುಳ್ಳವನು! ನಾನು ನಿನಗೆ ಮೋಕ್ಷ ನೀಡಿದರೆ, ನೀನು ಎಲ್ಲರಿಗೂ ಮೋಕ್ಷ ಕೇಳುತ್ತಿದ್ದೀಯಾ” ಎಂದು ಉತ್ತರಿಸಿದನು. ಆದರೆ ಅವನು “ಈ ಮಡಕೆ ನನಗೆ ತುಂಬಾ ಪ್ರಿಯವಾಗಿದೆ. ನೀನು ಮಡಕೆಗೂ ಮೋಕ್ಷ ನೀಡಿದರೆ ಮಾತ್ರ ನಾನು ನಿನ್ನನ್ನು ಹೊರಗೆ ಬಿಡುತ್ತೇನೆ” ಎಂದು ಒತ್ತಾಯಿಸಿದನು. ಅಂತಿಮವಾಗಿ ಎಂಬೆರುಮಾನ್ ಒಪ್ಪಿ “ಸರಿ! ನಾನು ನಿನ್ನ ಮಡಕೆಗೂ ಮೋಕ್ಷ ನೀಡುತ್ತೇನೆ” ಎಂದು ಹೇಳಿದನು.

ಈ ಘಟನೆಯನ್ನು ತಿರುಕ್ಕೋಳೂರ್ ಪೆಣ್ ಪಿಳ್ಳೈ ವಾರ್ತೈಯಲ್ಲಿ “ಇಂಗಿಲ್ಲೈ ಎನ್ರೇನೋ ದಧಿಪಾಂಡನೈ ಪೋಲೆ” ( ದಧಿಭಾಂಡನು ಮಾಡಿದಂತೆ “ಅವನು ಇಲ್ಲಿಲ್ಲ” ಎಂದು ನಾನು ಹೇಳಿದೇನೆಯೇ?) ಎಂದು ತೋರಿಸಲಾಗಿದೆ. ಇದಲ್ಲದೆ, ಅಳಗಿಯ ಮಣವಾಳಪ್ ಪೆರುಮಾಳ್ ನಾಯನಾರ್ ಕರುಣೆಯಿಂದ ರಚಿಸಿದ ಆಚಾರ್ಯ ಹೃದಯದಲ್ಲಿ, 228 ನೇ ಚೂರ್ಣಿಕೆಯಲ್ಲಿ, ಎಂಬೆರುಮಾನ್ ಅನೇಕ ರೀತಿಯ ಜೀವಿಗಳಿಗೆ ಮೋಕ್ಷವನ್ನು ನೀಡುತ್ತಾನೆ ಎಂದು ತೋರಿಸುವಾಗ, “ಇಡೈಯರ್ ತಯಿರ್ಥ್ ಥಾಳಿ” ( ಹಸುವಿನ ಮಂದೆಯ ವ್ಯಕ್ತಿ, ಮೊಸರು ಇಡಲು ಬಳಸುವ ಮಡಕೆ) ಎಂದು ತೋರಿಸಿದ್ದಾರೆ. ಇದರ ಬಗ್ಗೆ ವ್ಯಾಖ್ಯಾನಿಸುವಾಗ, ಮಣವಾಳ ಮಾಮುನಿಗಳು ಇದನ್ನು ಸ್ವಲ್ಪ ವಿಭಿನ್ನವಾಗಿ ವಿವರಿಸಿದ್ದಾರೆ. ಅವರ ದಿವ್ಯ ಪದಗಳು “ವೆಣ್ಣೆಯ್ ಕಳವು ಕಾಣಪ್ಪುಕ್ಕವಿದತ್ತೇ ತೊಡುಪ್ಪುಂಡುವಂದು ತಮ್ಮಗತ್ತೇ ಪುಗಪ್ಪಡಲೈ ತಿರುಗಿ ವೈತ್ತು ಮೋಕ್ಷಂ ತಾರಾವಿಡಿಲ್ ಕಾಟ್ಟಿಕೊಡುಪ್ಪೇನ್ ಎನ್ರು ಮೋಕ್ಷಂ ಪೆತ್ತ ದಧಿಪಾಂಡರ್” (ಬೆಣ್ಣೆ ಕದಿಯಲು ಹೋದ ನಂತರ, ಕೃಷ್ಣನು ಓಡಿಬಂದು ದಧಿಭಾಂಡನ ಮನೆಗೆ ಪ್ರವೇಶಿಸಿದನು; ಕುಂಬಾರನು ಬಾಗಿಲನ್ನು ಮುಚ್ಚಿ “ನೀವು ಮೋಕ್ಷ ನೀಡದಿದ್ದರೆ ನಾನು ಬಾಗಿಲು ತೆರೆಯುವುದಿಲ್ಲ” ಎಂದು ಹೇಳಿ ಮೋಕ್ಷವನ್ನು ಪಡೆದನು – ಮಾಮುನಿಗಳು ಈ ಕುಂಬಾರನು ಕೃಷ್ಣನನ್ನು ತನ್ನ ಮನೆಯೊಳಗೆ  ಬಂಧಿಸಿದ್ದಾನೆಂದು ವಿವರಿಸಿದ್ದಾರೆ, ಮಡಕೆಯೊಳಗೆ ಅಲ್ಲ).

ಹೀಗೆ, ಈ  ದಧಿಭಾಂಡನ  ಘಟನೆ ಒಂದು ಅದ್ಭುತ ಲೀಲೆಯಾಗಿದೆ. ಇತಿಹಾಸಗಳು ಮತ್ತು ಪುರಾಣಗಳಲ್ಲಿ ಇದರ ಮೂಲವನ್ನು ಪತ್ತೆಹಚ್ಚಲು ನಮಗೆ ಸಾಧ್ಯವಾಗದಿರುವುದು ದುರದೃಷ್ಟಕರ. ಆದರೂ, ನಮ್ಮ ಪೂರ್ವಾಚಾರ್ಯರ ಕೃಪೆಯಿಂದ, ನಾವು ಈ ಘಟನೆಯ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.

ಈ ಘಟನೆಯಲ್ಲಿನ ಸಾರಾಂಶ:

  • ಭಗವಂತನು ತನ್ನನ್ನು ತಾನು ಸಾಮಾನ್ಯನಂತೆ ತೋರಿಸಿಕೊಂಡರೂ, ಅವನ ಭಕ್ತರು ಅವನ ನಿಜವಾದ ಗುರುತು/ಸ್ವಭಾವವನ್ನು ಗುರುತಿಸುತ್ತಾರೆ.
  • ಶ್ರೇಷ್ಠ ಭಕ್ತರು ಶಾಶ್ವತ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲು ಎಂಬೆರುಮಾನ್‌ ನಿಂದ ಮೋಕ್ಷವನ್ನು ಪಡೆಯಲು ಮಾತ್ರ ಬಯಸುತ್ತಾರೆ.
  • ಕೃಷ್ಣನು ದಧಿಭಾಂಡನಿಗೆ ಮೋಕ್ಷ ನೀಡಿದ್ದನ್ನು ನಾವು ಅರ್ಥಮಾಡಿಕೊಳ್ಳಬಹುದು. ಆದರೆ ಮಡಕೆ ಒಂದು ಜಡ ವಸ್ತು. ಅದಕ್ಕೆ ಹೇಗೆ ಮೋಕ್ಷ ಸಿಕ್ಕಿತು? ಈ ಪ್ರಶ್ನೆಗೆ ಮಣವಾಳ ಮಾಮುನಿಗಳು ತಮ್ಮ ಆಚಾರ್ಯ ಹೃದಯದಯ ವ್ಯಾಖ್ಯಾನದಲ್ಲಿ ಸುಂದರವಾದ ವಿವರಣೆಯನ್ನು ನೀಡಿದ್ದಾರೆ. ಅದನ್ನು ನೋಡೋಣ. ಯಾವುದೇ ಹೆಸರು ಮತ್ತು ರೂಪವನ್ನು ಹೊಂದಿರುವ ವಸ್ತುವು ಆತ್ಮದಿಂದ ನಿಯಂತ್ರಿಸಲ್ಪಡುತ್ತದೆ/ಹೊಂದಿರುತ್ತದೆ. ಕುಂಬಾರನ ಒತ್ತಾಯದಿಂದ, ಆ ಮಡಕೆಯ ಆತ್ಮವು ಮೋಕ್ಷವನ್ನು ಪಡೆಯಿತು. ವಿಷೇಶವಾಗಿ ನಾವು ಗಮನಿಸಬೇಕಾದ ವಿಷಯವೇಂದರೆ ಮಹಾ ಪಾಪಗಳನ್ನು ಮಾಡಿದ ಆತ್ಮಗಳು ಮರ, ಸಸ್ಯ, ಬಳ್ಳಿ, ಕಲ್ಲು, ಬಟ್ಟೆ ಇತ್ಯಾದಿ ದೇಹಗಳನ್ನು ಪಡೆಯುತ್ತವೆ ಎಂದು ಸಹ ಹೇಳಲಾಗುತ್ತದೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ : https://granthams.koyil.org/2023/09/09/krishna-leela-10-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment