ಕೃಷ್ಣ ಲೀಲೆಗಳ ಸಾರಾಂಶ – 11 – ಅಘಾಸುರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ದಧಿಭಾಂಡನು ಪಡೆದ ಆಶೀರ್ವಾದ

ಕೃಷ್ಣನು ಐದು ವರ್ಷದ ಬಾಲಕನಾಗಿದ್ದಾಗ, ಇತರ ಗೋಪಾಲಕರೊಂದಿಗೆ ಕಾಡಿಗೆ ಹೋಗಿ ಅಲ್ಲಿ ದನಕರುಗಳನ್ನು ಮೇಯಿಸುತ್ತಿದ್ದನು. ವೃಂದಾವನದಲ್ಲಿ ಹಚ್ಚ ಹಸಿರಿನ ಹುಲ್ಲುಗಾವಲುಗಳಿದ್ದ ಕಾರಣ, ಅವರು ಸಂತೋಷದಿಂದ ಕಾಡಿಗೆ ಹೋಗಿ ಅಲ್ಲಿ ಓಡಾಡುತ್ತಾ ಆಟವಾಡುತ್ತಿದ್ದರು ಮತ್ತೆ ಸಂಜೆ ಮನೆಗೆ ಹಿಂದಿರುಗುತ್ತಿದ್ದರು. ತಾಯಿ ಯಶೋದೆ ಮತ್ತು ಇತರ ಗೋಪಿಯರು ಮೊಸರನ್ನ, ಉಪ್ಪಿನಕಾಯಿ ಮುಂತಾದ ಪ್ರಸಾದಗಳನ್ನು ಅವರೊಂದಿಗೆ ಕಳುಹಿಸುತ್ತಿದ್ದರು. ಮಧ್ಯಾಹ್ನದ ಸಮಯದಲ್ಲಿ, ಎಲ್ಲ ಮಕ್ಕಳು ಕೃಷ್ಣನ ಸುತ್ತ ಕುಳಿತು ಸಂತೋಷದಿಂದ ಪ್ರಸಾದವನ್ನು ಸೇವಿಸುತ್ತಿದ್ದರು.

ಒಮ್ಮೆ ಅವರು ಈ ರೀತಿ ಕಾಡಿಗೆ ಹೋದಾಗ, ಕಂಸನಿಂದ ಕಳುಹಿಸಲ್ಪಟ್ಟ ಅಘಾಸುರ ಎಂಬ ದುಷ್ಟ ರಾಕ್ಷಸ ಕಾಡಿಗೆ ಬಂದಿದ್ದನು. ಅವನು ಪೂತನ  ಮತ್ತು ಬಕಾಸುರನ ಸಹೋದರನಾಗಿದ್ದನು. ಕೃಷ್ಣನು ಅವರನ್ನು ಕೊಂದಿದ್ದರಿಂದ, ಅಘಾಸುರನಿಗೆ ಕೃಷ್ಣನ ಮೇಲೆ ಬಹಳ ಕೋಪವಿತ್ತು. ಅವನು ಒಂದು ಹೆಬ್ಬಾವಿನ ರೂಪವನ್ನು ಧರಿಸಿ, ಗೋಪಾಲಕರು ಹೋಗುವ ದಾರಿಯಲ್ಲಿ ತನ್ನ ಬಾಯಿಯನ್ನು ಅಗಲವಾಗಿ ತೆರೆದು ಮಲಗಿದ್ದನು. ಅದು ಪ್ರಕಾಶಮಾನವಾದ ಗುಹೆಯ ಪ್ರವೇಶದ್ವಾರದಂತೆ ಕಾಣುತ್ತಿತ್ತು. ಹಾಗಾಗಿ ಗೋಪಾಲಕರು ಉತ್ಸಾಹದಿಂದ ಆ ಬಾಯಿಯೊಳಗೆ ಪ್ರವೇಶಿಸಿದರು. ಅವರು ಅಲ್ಲಿ ಸಂತೋಷದಿಂದ ಆಟವಾಡಿದರು. ಅವನ ಉಪಾಯವನ್ನು  ತಿಳಿದಿದ್ದ ಕೃಷ್ಣನು ಹೊರಗೇ ಇದ್ದನು. ಆದರೆ ಅಘಾಸುರನು ಕೃಷ್ಣನು ಒಳಗೆ ಪ್ರವೇಶಿಸಲು ಬಯಸಿದನು, ಇದರಿಂದ ಅವನು ತನ್ನ ಬಾಯಿಯನ್ನು ಮುಚ್ಚಿ ಎಲ್ಲರನ್ನು ಕೊಲ್ಲಬಹುದಿತ್ತು.

ಕೊನೆಗೆ, ಕೃಷ್ಣನು ಒಳಗೆ ಹೋದನು. ತಕ್ಷಣ ಅಘಾಸುರನು ತನ್ನ ಬಾಯಿಯನ್ನು ಮುಚ್ಚಿದನು. ಎಲ್ಲರೂ ಉಸಿರುಗಟ್ಟಿ ಮೂರ್ಛೆ ಹೋದರು. ಕೃಷ್ಣ ಮಾತ್ರ ಎಚ್ಚರವಾಗಿದ್ದನು. ಅವನು ಅಘಾಸುರನನ್ನು ಕೊಲ್ಲುವ ಮಾರ್ಗದ ಬಗ್ಗೆ ಯೋಚಿಸಿ, ತನ್ನ ವಿಸ್ತೃತರೂಪವನ್ನು ಧರಿಸಿದನು. ಆ ಶಕ್ತಿಯನ್ನು ಸಹಿಸಲಾರದೆ ಅಘಾಸುರನು ಒದ್ದಾಡಲು ಪ್ರಾರಂಭಿಸಿದನು. ನಂತರ, ಕೃಷ್ಣನು ತನ್ನ ದೊಡ್ಡ ಕೈಯಿಂದ ಹಾವಿನ ತಲೆಯ ಒಳಭಾಗಕ್ಕೆ ತನ್ನ ಮುಷ್ಟಿಯಿಂದ ಗುದ್ಧಿದನು. ಅವನ ತಲೆ ಎರಡು ಭಾಗವಾಗಿ ಹರಿದುಹೋಯಿತು ಮತ್ತು ಅವನು ಕೆಳಗೆ ಬಿದ್ದು ಸತ್ತನು. ಕೃಷ್ಣನು ತನ್ನ ಅನುಗ್ರಹದ ನೋಟದಿಂದ ಮಕ್ಕಳನ್ನು ಪ್ರಜ್ಞೆಗೆ ಮರಳಿಸಿದನು.

ಈ ಘಟನೆಯ ಸಾರಾಂಶ: 

  • ಭಗವಂತನ ಬೆಂಬಲವಿದ್ದಾಗ, ಯಾವುದೇ ಅಪಾಯವನ್ನು ತಪ್ಪಿಸಬಹುದು.
  • ತನ್ನ ಭಕ್ತರನ್ನು ಅಪಾಯಗಳಿಂದ ರಕ್ಷಿಸುವಲ್ಲಿ ಭಗವಂತನು ಬಹಳ ಎಚ್ಚರಿಕೆಯಿಂದಿರುತ್ತಾನೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ : https://granthams.koyil.org/2023/09/10/krishna-leela-11-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment