ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ
ಯಮುನಾ ನದಿಯ ದಡದಲ್ಲಿರುವ ಒಂದು ಕೊಳದಲ್ಲಿ, ಕಾಳಿಂಗ ಎಂಬ ಹೆಸರಿನ ಸರ್ಪವು ತನ್ನ ಕುಟುಂಬದೊಂದಿಗೆ ವಾಸಿಸುತ್ತಿತ್ತು. ಅದು ದುಷ್ಟ ಬುದ್ಧಿಯನ್ನು ಹೊಂದಿತ್ತು. ನಿರಂತರವಾಗಿ ವಿಷವನ್ನು ಉಗುಳುವುದರ ಮೂಲಕ, ಅದು ಕೊಳವನ್ನು ಸಮೀಪಿಸದಂತೆ ಎಲ್ಲರನ್ನು ತಡೆಯುತ್ತಿತ್ತು. ಯಾರಾದರೂ ಹತ್ತಿರ ಬಂದರೆ, ಅವರು ವಿಷಪೂರಿತ ಗಾಳಿಯನ್ನು ಉಸಿರಾಡಿ ಮೂರ್ಛೆ ಹೋಗುತ್ತಿದ್ದರು. ದನಕರುಗಳಿಗೂ ಇದೇ ಸ್ಥಿತಿ. ಮರಗಳು, ಸಸ್ಯಗಳು ಮತ್ತು ಬಳ್ಳಿಗಳು ಸಹ ಒಣಗಿ ಹೋಗಿದ್ದವು. ಇದನ್ನು ನೋಡಿದ ಕೃಷ್ಣನು ಕಾಳೀಯನನ್ನು ಅಡಗಿಸಬೇಕೆಂದು ನಿರ್ಧರಿಸಿದನು.
ಒಂದು ದಿನ, ಕೃಷ್ಣನು ಬಲರಾಮನಿಗೆ ತಿಳಿಸದೆ, ಕಾಳಿಂಗನಿದ್ದ ಕೊಳದ ದಡಕ್ಕೆ ಹೋದನು. ಅವನು ಕದಂಬ ಮರವನ್ನು ಏರಿ, ಕೊಳದಲ್ಲಿದ್ದ ಕಾಳಿಂಗನ ತಲೆಯ ಮೇಲೆ ಹಾರಿದನು. ನಂತರ, ಅವನು ಕಾಳಿಂಗನ ತಲೆಯ ಮೇಲೆ ನೃತ್ಯ ಮಾಡಿ ಅದನ್ನು ಹಿಂಸಿಸಿದನು. ಕಾಳಿಂಗನಿಗೆ ಉಸಿರುಗಟ್ಟಿ, ಕಣ್ಣುಗಳು ಹೊರಬಂದು ಬಹಳವಾಗಿ ನರಳಿತು. ಇದನ್ನು ಕಂಡ ಕಾಳೀಯನ ಹೆಂಡತಿಯರು ಬಂದು ಕೃಷ್ಣನನ್ನು ಸ್ತುತಿಸಿ, ಅವನನ್ನು ಪೂಜಿಸಿ ಕ್ಷಮೆ ಕೇಳಿದರು. ಕಾಳೀಯನು ಸಹ ತನ್ನ ತಪ್ಪನ್ನು ಅರಿತು ಕ್ಷಮೆ ಬೇಡಿದನು. ಕೃಷ್ಣನು ಕಾಳಿಂಗನಿಗೆ “ನೀನು ಇಲ್ಲಿ ಇರಬಾರದು. ನೀನು ಸಾಗರಕ್ಕೆ ಹೋಗಬೇಕು” ಎಂದು ಆಜ್ಞಾಪಿಸಿದನು. ಕಾಳಿಂಗನು ಅವನ ಆಜ್ಞೆಯನ್ನು ಪಾಲಿಸಿದನು.
ಅನೇಕ ಆಳ್ವಾರರು ಈ ಘಟನೆಯನ್ನು ಆಸ್ವಾದಿಸಿದ್ದಾರೆ. ಪೆರಿಯಾಳ್ವಾರ್ ತಮ್ಮ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ವಿಸ್ತಾರವಾಗಿ ಹೀಗೆ ವಿವರಿಸಿದ್ದಾರೆ: “ಕಾಲಿಯನ್ ಪೊಯ್ಗೈ ಕಲಂಗಪ್ ಪಾಯ್ದಿಟ್ಟು ಅವನ್ ನೀಳ್ಮುಡಿ ಐನ್ಧಿಲುಂ ನಿನ್ರು ನಡಂ ಸೈದು ಮೀಳ ಅವನುಕ್ಕು ಅರುಳ್ ಸೈದ ವಿತ್ತಗನ್ ತೋಳ್ವಲಿ ವೀರಮೇ ಪಾಡಿಪ್ ಪಱ ತೂಮಣಿ ವಣ್ಣನೈ ಪಾಡಿಪ್ ಪಱ” (ಕೃಷ್ಣನು ಕಾಳೀಯನು ವಾಸಿಸುತ್ತಿದ್ದ ಕೊಳವನ್ನು ಕೆರಳಿಸಲು ಅದರೊಳಗೆ ಹಾರಿದನು; ನಂತರ ಅವನು ಕಾಳೀಯನ ಐದು ಹೆಡೆಯ ತಲೆಗಳ ಮೇಲೆ ನಿಂತು ನೃತ್ಯ ಮಾಡಿ, ನಂತರ ಅವನಿಗೆ ತನ್ನ ಕರುಣೆಯನ್ನು ತೋರಿಸಿದನು; ಎಂಪೆರುಮಾನ್ ನ ಬಲವಾದ ಭುಜದ ಪರಾಕ್ರಮದ ವೈಭವವನ್ನು ಹಾಡಿರಿ; ಶುದ್ಧ ರತ್ನದ ಮೈಬಣ್ಣದವನ ವೈಭವವನ್ನು ಹಾಡಿರಿ); ಆಂಡಾಳ್ ನಾಚ್ಚಿಯಾರ್ ತಮ್ಮ ನಾಚ್ಚಿಯಾರ್ ತಿರುಮೊಳಿಯಲ್ಲಿ ಹೀಗೆ ಹೇಳಿದ್ದಾರೆ: “ನೀರ್ಕ್ಕರೈ ನಿನ್ಱ ಕದಂಬೈ ಏರಿಕ್ ಕಾಲಿಯನ್ ಉಚ್ಚಿಯಿಲ್ ನಟ್ಟಂ ಪಾಯ್ದು ಪೋರ್ಕ್ಕಳಮಾಗ ನಿರುತ್ತಂ ಸೈದ ಪೊಯ್ಗೈಕ್ ಕರೈಕ್ಕು ಎನ್ನೈ ಉಯ್ತ್ತಿಡುಮಿನ್” (ಕಣ್ಣನ್ ಕದಂಬ ಮರವನ್ನು ಏರಿ, ರಾಕ್ಷಸ ಸರ್ಪ ಕಾಳಿಂಗನ ತಲೆಯ ಮೇಲೆ ನೃತ್ಯ ಮಾಡುತ್ತಿರುವಂತೆ ಹಾರಿದನು ಮತ್ತು ಯಮುನೆಯ ದಡವನ್ನು ಯುದ್ಧಭೂಮಿಯನ್ನಾಗಿ ಮಾಡಿದನು); ಕುಲಶೇಖರಾಳ್ವಾರ್ ತಮ್ಮ ಪೆರುಮಾಳ್ ತಿರುಮೊಳಿಯಲ್ಲಿ ಹೀಗೆ ಹೇಳಿದ್ದಾರೆ: “ಕಾಲಾಲ್ ಕಾಲಿಯನ್ ತಲೈ ಮಿದಿತ್ತದುಮ್” (ತನ್ನ ಕಾಲಿನಿಂದ ಕಾಳಿಂಗನ ತಲೆಯ ಮೇಲೆ ಹೆಜ್ಜೆ ಹಾಕಿ); ತಿರುಮಂಗೈ ಆಳ್ವಾರ್ ತಮ್ಮ ಪೆರಿಯ ತಿರುಮೊಳಿಯಲ್ಲಿ ಹೀಗೆ ಹೇಳಿದ್ದಾರೆ: “ಕಾಲಿಯನ್ ತನ್ ಸೆನ್ನಿ ನಡುಂಗ ನಡಂ ಪಯಿನ್ಱ” (ಕಾಳಿಂಗನ ತಲೆ ನಡುಗುವಂತೆ ನೃತ್ಯವನ್ನು ಅಭ್ಯಾಸ ಮಾಡಿದ).
ಈ ಘಟನೆಯ ಸಾರಾಂಶ:
- ವೈರಿಗಳನ್ನು ನಾಶ ಮಾಡಲು, ಎಂಬೆರುಮಾನ್ ಸ್ವಯಂಶಕ್ತಿಯನ್ನು ಹೊಂದಿದ್ದಾನೆ.
- ತಪ್ಪುಗಳನ್ನು ಮಾಡುವವರನ್ನು ಎಂಬೆರುಮಾನ್ ಶಿಕ್ಷಿಸುವುದಲ್ಲದೆ, ಅವರ ತಪ್ಪನ್ನು ಅರಿತುಕೊಂಡಾಗ, ಅವನು ಅವರನ್ನು ಕ್ಷಮಿಸುತ್ತಾನೆ.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ : https://granthams.koyil.org/2023/09/19/krishna-leela-14-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org