ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಬಾಲ್ಯದಲ್ಲಿ ಶ್ರೀಕೃಷ್ಣನಿಗೆ ಹಸುಗಳನ್ನು ಮೇಯಿಸುವುದು ಅತ್ಯಂತ ಪ್ರಿಯವಾದ ಲೀಲೆಗಳಲ್ಲಿ ಒಂದಾಗಿತ್ತು. ನಮ್ಮಾಳ್ವಾರರು ತಮ್ಮ ತಿರುವಾಯ್ಮೊಳಿಯಲ್ಲಿ “ತಿವತ್ತಿಲುಂ ಪಶು ನಿರೈ ಮೇಯ್ಪ್ಪು ವತ್ತಿ” (ಪರಮಪದದಲ್ಲಿರುವುದಕ್ಕಿಂತಲೂ ಹಸುಗಳನ್ನು ಮೇಯಿಸುವುದು ಕೃಷ್ಣನಿಗೆ ಹೆಚ್ಚು ಸಂತೋಷವನ್ನು ನೀಡುತ್ತದೆ) ಎಂದು ಹೇಳುತ್ತಾರೆ. ತಿರುಮಂಗೈ ಆಳ್ವಾರರು ಕೂಡ ತಿರುನೆಡುಂದಾಂಡಗಂನಲ್ಲಿ “ಕನ್ರು ಮೇಯ್ತ್ತು ಇನಿದುಗಂದ ಕಾಳಾಯ್” (ಕರುಗಳನ್ನು ಮೇಯಿಸಿ ಅತ್ಯಂತ ಆನಂದವನ್ನು ಅನುಭವಿಸಿದ ತರುಣ ಕೃಷ್ಣ) ಎಂದು ವರ್ಣಿಸಿದ್ದಾರೆ.
ಪೆರಿಯಾಳ್ವಾರರು ತಮ್ಮ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ಯಶೋದಾ ಮತ್ತು ಗೋಪಿಕೆಯರ ಭಾವದಲ್ಲಿ, “ಅಂಜನ ವಣ್ಣನೈ”, “ಶೀಲೈ ಕುದಂಬೈ” ಮತ್ತು ” ತಲೈಗಳುಮ್” ಎಂಬ ಮೂರು ದಶಕಗಳಲ್ಲಿ (ಪದಗಳಲ್ಲಿ) ಕೃಷ್ಣನು ಹಸುಗಳನ್ನು ಮೇಯಿಸುವುದನ್ನು ಅನುಭವಿಸಿ ಹಾಡಿದ್ದಾರೆ.
ಮೊದಲು ಅವರು, ಬಾಲಕೃಷ್ಣನು ಕಾಡಿಗೆ ಹಸುಗಳನ್ನು ಮೇಯಿಸಲು ಹೋಗುವಾಗ ತಾಯಿ ಯಶೋದೆಗಾಗುವ ಸಂಕಟದ ಭಾವದಲ್ಲಿ ಹಾಡಿದ್ದಾರೆ.ನಂತರ, ಹಸುಗಳನ್ನು ಮೇಯಿಸಿ ಕಾಡಿನಿಂದ ಹಿಂತಿರುಗುವ ಕೃಷ್ಣನನ್ನು ನೋಡಿ ಯಶೋದೆಗಾಗುವ ಸಂತೋಷದ ಭಾವದಲ್ಲಿ ಹಾಡಿದ್ದಾರೆ.ತದನಂತರ, ಗೋವುಗಳ ಮಂದೆಯ ಹಿಂದೆ ಹಿಂತಿರುಗುವ ಕೃಷ್ಣನ ಮೇಲಿನ ಅಪಾರ ಪ್ರೀತಿಯನ್ನು ತೋರುವ ಗೋಪಿಕೆಯರ ಭಾವದಲ್ಲಿ ಹಾಡಿದ್ದಾರೆ.
ಆಂಡಾಳ್ ನಾಚ್ಚಿಯಾರ್ ಕೂಡ ತಿರುಪ್ಪಾವೈನಲ್ಲಿ “ಅರಿವೊನ್ರುಮ್ ಇಲ್ಲಾದ ಆಯ್ಕುಲತು ಉಂದನ್ನೈ ಪಿರವಿ ಪೆರುಂದನೈ ಪುಣ್ಣಿಯಂ ಯಾಮುಡೈಯೋಂ” (ಜ್ಞಾನವಿಲ್ಲದ ನಮ್ಮ ಗೊಲ್ಲರ ಕುಲದಲ್ಲಿ ನೀನು ಜನಿಸುವಂತಹ ಪುಣ್ಯವನ್ನು ನಾವು ಪಡೆದಿದ್ದೇವೆ) ಎಂದು ಹೇಳಿದ್ದಾರೆ. ಆಕೆ “ಕೂಡಾರೈ”, “ಕರವೈ” ಮತ್ತು “ಸಿಟ್ರಂ” ಎಂಬ ಮೂರು ಪಾಶುರಗಳಲ್ಲಿ, ಹಸುಗಳು ಮತ್ತು ಕರುಗಳ ಮೇಲಿನ ಕೃಷ್ಣನ ಪ್ರೀತಿಯನ್ನು ಸೂಚಿಸಲು ಅವನನ್ನು “ಗೋವಿಂದ” ಎಂಬ ಹೆಸರಿನಿಂದ ಕರೆದಿದ್ದಾರೆ.
ನಮ್ಮಾಳ್ವಾರರು ಕೂಡ ತಿರುವಾಯ್ಮೊಳಿಯ “ಮಲ್ಲಿಗೈ ಕಮಳ್ ತೆನ್ರಲ್” ದಶಕದಲ್ಲಿ, ಹಸುಗಳನ್ನು ಮೇಯಿಸಿ ಕಾಡಿನಿಂದ ಹಿಂತಿರುಗುವ ಕೃಷ್ಣನನ್ನು ಗೋಪಿಕೆಯರ ಭಾವದಲ್ಲಿ ಅನುಭವಿಸಿದ್ದಾರೆ. ಈ ರೀತಿಯಾಗಿ, ಆಳ್ವಾರರು ಕೃಷ್ಣನ ಗೋಪಾಲನ ಲೀಲೆಯನ್ನು ಹಲವು ಬಗೆಯಲ್ಲಿ ಅನುಭವಿಸಿ ಕೊಂಡಾಡಿದ್ದಾರೆ.
ಈ ಸನ್ನಿವೇಶದ ಸಾರಾಂಶ:
- ಭಗವಂತನು ನಮಗೆ ಸಹಾಯ ಮಾಡಲು ಬಂದಾಗ, ನಾವು ಅವನನ್ನು ತಡೆಯದಿದ್ದರೆ ಸಾಕು, ಅವನು ನಮ್ಮನ್ನು ರಕ್ಷಿಸುತ್ತಾನೆ. ಇದನ್ನು ನಾವು ಹಸುಗಳು ಮತ್ತು ಕರುಗಳ ವಿಷಯದಲ್ಲಿ ಗಮನಿಸಬಹುದು. ಭಗವಂತನು ತಮ್ಮ ರಕ್ಷಕ ಎಂದು ಅವುಗಳಿಗೆ ತಿಳಿದಿಲ್ಲದಿದ್ದರೂ ಮತ್ತು ರಕ್ಷಿಸು ಎಂದು ಅವು ಪ್ರಾರ್ಥಿಸದಿದ್ದರೂ, ಅವನು ಸಹಾಯ ಮಾಡಲು ಬಂದಾಗ ಅವು ಅವನನ್ನು ತಡೆಯಲಿಲ್ಲ. ಆದುದರಿಂದಲೇ ಅವು ಅವನಿಂದ ರಕ್ಷಿಸಲ್ಪಟ್ಟವು.
- ಸಾಮಾನ್ಯವಾಗಿ, ಹಸುಗಳು ಮತ್ತು ಕರುಗಳು ಸತ್ವಗುಣದಲ್ಲಿ (ಶಾಂತ ಸ್ವಭಾವದಲ್ಲಿ) ಇರುತ್ತವೆ. ಯಾರು ಸತ್ವಗುಣದಲ್ಲಿರುತ್ತಾರೋ ಅವರನ್ನು ಭಗವಂತನು ಖಂಡಿತವಾಗಿಯೂ ರಕ್ಷಿಸುತ್ತಾನೆ.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/09/21/krishna-leela-16-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org