ಕೃಷ್ಣ ಲೀಲೆಗಳ ಸಾರಾಂಶ – 28 –ಕುವಲಯಾಪೀಡ ವಧೆ 

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಮಥುರೆಯಲ್ಲಿ ಕೃಷ್ಣನ ನಿಗ್ರಹಾನುಗ್ರಹ

ಈ ರೀತಿಯಾಗಿ, ಕೃಷ್ಣ ಮತ್ತು ಬಲರಾಮರು ತಮ್ಮನ್ನು ತಾವು ಅಲಂಕರಿಸಿಕೊಂಡು, ನೇರವಾಗಿ ಧನುರ್ಯಾಗ (ಬಿಲ್ಲು ಹಬ್ಬ) ನಡೆಯುತ್ತಿದ್ದ ಸ್ಥಳಕ್ಕೆ ಹೋದರು. ಕಾವಲುಗಾರರು ಅವರನ್ನು ತಡೆಯುತ್ತಿದ್ದರೂ, ಕೃಷ್ಣನು ಅಲ್ಲಿ ಇರಿಸಲಾಗಿದ್ದ ಬಿಲ್ಲನ್ನು ಎತ್ತಿ ಮುರಿದುಹಾಕಿದನು. ದಾಳಿ ಮಾಡಲು ಪ್ರಯತ್ನಿಸಿದ ಕಾವಲುಗಾರರನ್ನು ಕೃಷ್ಣ ಮತ್ತು ಬಲರಾಮರಿಬ್ಬರೂ ಸೋಲಿಸಿದರು.

ನಂತರ ಅವರಿಬ್ಬರೂ ಮಥುರೆಯಲ್ಲಿ ಸುತ್ತಾಡಿ ಆನಂದಿಸಿದರು. ರಾತ್ರಿ ತಾವು ತಂಗಿದ್ದ ಸ್ಥಳಕ್ಕೆ ಹೋಗಿ ವಿಶ್ರಮಿಸಿದರು. ಮಾರನೇಯ ದಿವಸ, ಅವರು ಕಂಸನ  ರಂಗಮಂಟಪಕ್ಕೆ ಹೊರಟರು. ಆ ಸಮಯದಲ್ಲಿ, ಮೊದಲಿಗೆ ಕೋಟೆಯ ದ್ವಾರದಲ್ಲಿ ಕುವಲಯಾಪೀಡ ಎಂಬ ಆನೆ ಅವರನ್ನು ತಡೆಯಿತು. ಈ ಆನೆಯು ಗಾತ್ರದಲ್ಲಿ ಬಹಳ ದೊಡ್ಡದಾಗಿತ್ತು ಮತ್ತು ಅತ್ಯಂತ ಬಲಶಾಲಿಯಾಗಿತ್ತು. ಅದರ ಮಾವುತನು ನಿಪುಣನಾಗಿದ್ದನು. ಯಾರಾದರೂ ಆನೆಯನ್ನು ಕೆಳಗೆ ಬೀಳಿಸಿದರೂ, ಅವನು ತನ್ನ ಚಾಕಚಕ್ಯತೆಯಿಂದ ಅದನ್ನು ಮತ್ತೆ ಎಬ್ಬಿಸಬಲ್ಲವನಾಗಿದ್ದನು. ಅವನು ಅದಕ್ಕೆ ಮದವೇರಿಸುವ ಆಹಾರ ಪದಾರ್ಥಗಳನ್ನು ತಿನ್ನಿಸಿ, ಅದಕ್ಕೆ ಹುಚ್ಚು ಹಿಡಿಸಿದ್ದನು. ಆನೆಯು ಕೃಷ್ಣ ಮತ್ತು ಬಲರಾಮರನ್ನು ಕೊಲ್ಲಲು ಕಾಯುತ್ತಿತ್ತು.

ಆನೆಯು ಕೃಷ್ಣನನ್ನು ಕಂಡ ಕೂಡಲೇ, ಮಾವುತನ ಪ್ರೇರಣೆಯಿಂದ, ಕೃಷ್ಣನ ಕಡೆಗೆ ನುಗ್ಗಿತು. ಕೃಷ್ಣನು ತಪ್ಪಿಸಿಕೊಂಡು ಅದರ ಕಾಲುಗಳ ಮಧ್ಯೆ ನುಗ್ಗಿ ಅದನ್ನು ಪೀಡಿಸಿದನು. ನಂತರ ಅವನು ಅದರ ದಂತವನ್ನು ಕಿತ್ತು ಆನೆ ಮತ್ತು ಮಾವುತನನ್ನು ಕೊಂದನು. ಅವನು ಅದರ ದಂತಗಳನ್ನು ಹೊತ್ತುಕೊಂಡು ವಿಜಯಶಾಲಿಯಾಗಿ ನಡೆದನು.

ಆಳ್ವಾರುಗಳು ಈ ಘಟನೆಯನ್ನು ಅನೇಕ ಪಾಸುರಗಳಲ್ಲಿ ವರ್ಣಿಸಿದ್ದಾರೆ.

ಪೊಯ್ಗೈ ಆಳ್ವಾರ್ ತಮ್ಮ ಮುದಲ್ ತಿರುವಂದಾದಿಯಲ್ಲಿ “ವೆನ್ರಿ ಸೂಳ್ ಕಳಿಟ್ರೈ ಊನ್ರಿಪ್ ಪೊರುದುಡೈವು ಕಂಡಾನುಮ್” (ವಿಜಯಶಾಲಿಯಾದ ಆನೆಯನ್ನು ಎದುರಿಸಿ, ಅದನ್ನು ಸೋಲಿಸಿ ಮುರಿದವನು) ಎಂದು ಹೇಳುತ್ತಾರೆ.

ಆಂಡಾಳ್ ಅವರ ತಿರುಪ್ಪಾವೈ ಪಾಸುರದ “ಕೋತ್ತುಕ್ಕಾಲ್ ಕಟ್ಟಿಲ್ ಮೇಲ್” ಎಂಬ ಸಾಲಿನ ವ್ಯಾಖ್ಯಾನದಲ್ಲಿ, ಕೃಷ್ಣನು ಕುವಲಯಾಪೀಡದ ದಂತಗಳನ್ನು ತನ್ನ ಮಂಚದ ಕಾಲುಗಳಾಗಿ ಬಳಸಿದನು ಎಂದು ಆಚಾರ್ಯರು ವಿವರಿಸುತ್ತಾರೆ.

ಕುಲಶೇಖರ ಆಳ್ವಾರ್ ತಮ್ಮ ಪೆರುಮಾಳ್ ತಿರುಮೊಳಿಯಲ್ಲಿ “ವೆಂಗಟಿನ್ ಕಳಿರಡರ್ತ್ತಾಯ್”, ಓ ಕಠಿಣ ಹೃದಯದ ಕಂಸನ ಆನೆಯಾದ ಕುವಲಯಾಪೀಡವನ್ನು ಸಂಹರಿಸಿದವನೇ! ಎಂದು ಸ್ತುತಿಸಿದ್ದಾರೆ.

ತಿರುಮಂಗೈ ಆಳ್ವಾರ್ ತಮ್ಮ ಪೆರಿಯ ತಿರುಮೊಳಿಯಲ್ಲಿ “ವಿರ್ಪೆರು ವಿಳವುಮ್ ಕಂಜನುಮ್ ಮಲ್ಲುಮ್ ವೇಳಮುಮ್ ಪಾಗನುಮ್ ವೀಳ”-ದೊಡ್ಡ ಧನುರ್ಯಾಗ, ಕಂಸ, ಮಲ್ಲರು, ಆನೆ ಮತ್ತು ಮಾವುತ ಎಲ್ಲರೂ ಬಗ್ಗುಬಡಿದವನೇ  ಎಂದು ಹೇಳಿದ್ದಾರೆ.

ಈ ಲೀಲೆಯ ಸಾರಾಂಶ:

  • ಭಗವಂತನು ಗಜೇಂದ್ರ ಎಂಬ ಆನೆಯ ಭಕ್ತಿಯನ್ನು ಕಂಡು ಅದಕ್ಕೆ ಸಹಾಯ ಮಾಡಲು ಶ್ರೀವೈಕುಂಠದಿಂದ ಓಡಿ ಬಂದನು. ಆದರೆ ಕೃಷ್ಣನಾಗಿ, ತನ್ನನ್ನು ವಿರೋಧಿಸಿದ ಆನೆಯನ್ನು ಕೊಂದನು. ಅದು ಆನೆಯಾಗಿರಲಿ, ಮನುಷ್ಯರಾಗಿರಲಿ ಅಥವಾ ದೇವತೆಗಳೇ ಆಗಿರಲಿ, ಭಗವಂತನು ತನ್ನನ್ನು ಪ್ರೀತಿಸುವವರನ್ನು ಸಹಜವಾಗಿ ರಕ್ಷಿಸುತ್ತಾನೆ ಮತ್ತು ತನ್ನನ್ನು ವಿರೋಧಿಸುವವರನ್ನು ಸಹಜವಾಗಿ ನಾಶಮಾಡುತ್ತಾನೆ.
  • ಭಗವಂತನು ಅತ್ಯಂತ ಕಷ್ಟಕರವಾದ ಮತ್ತು ದೊಡ್ಡ ಅಡೆತಡೆಗಳನ್ನು  ಸುಲಭವಾಗಿ ನಿವಾರಿಸುತ್ತಾನೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/05/krishna-leela-28-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment