ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ
<< ಕಾಳಿಂದಿ, ಮಿತ್ರವಿಂದಾ ,ಸತ್ಯಾ , ಭದ್ರಾ ಮತ್ತು ಲಕ್ಷ್ಮಣಾ ರೊಡನೆ ಕೃ ಷ್ಣನ ಕಲ್ಯಾಣ

ಕೃಷ್ಣ ಮತ್ತು ಸತ್ಯಭಾಮೆಯರು ನರಕಾಸುರನನ್ನು ಸಂಹರಿಸಿದ ಲೀಲೆಯನ್ನು ನಾವೀಗ ಅನುಭವಿಸೋಣ.
ನರಕಾಸುರನು ಭಗವಾನ್ ವರಾಹ ಮತ್ತು ಭೂಮಿದೇವಿಯರಿಗೆ ಜನಿಸಿದವನು ಎಂದು ಹೇಳಲಾಗುತ್ತದೆ. ಆದರೆ ದುಷ್ಟ ಸ್ನೇಹಿತರ ಸಹವಾಸದಿಂದ ಅವನು ರಾಕ್ಷಸ ಪ್ರವೃತ್ತಿಯನ್ನು ಹೊಂದಿದನು. ಅವನು ಮಾನವರನ್ನು ಮತ್ತು ದೇವತೆಗಳನ್ನೂ ಹಿಂಸಿಸುತ್ತಿದ್ದನು. ಅವನು ಅನೇಕ ದೇವತಾ ಸ್ತ್ರೀಯರನ್ನು ಸೆರೆಹಿಡಿದು ಇಟ್ಟುಕೊಂಡಿದ್ದನು. ಇಂದ್ರ ಮುಂತಾದ ದೇವತೆಗಳು ಕ್ಷೀರಾಬ್ಧಿಯಲ್ಲಿ (ಹಾಲಿನ ಕಡಲು) ಪವಡಿಸಿದ್ದ ಶ್ರೀಮನ್ನಾರಾಯಣನ ಬಳಿಗೆ ಹೋಗಿ, ನರಕಾಸುರನನ್ನು ಸಂಹರಿಸಿ ತಮ್ಮನ್ನು ಕಾಪಾಡುವಂತೆ ಪ್ರಾರ್ಥಿಸಿದರು. ಕೃಷ್ಣನು ಅವರನ್ನು ಸಮಾಧಾನಪಡಿಸಿ, ಸರಿಯಾದ ಸಮಯದಲ್ಲಿ ಅದನ್ನು ಮಾಡುವುದಾಗಿ ಹೇಳಿ ಕಳುಹಿಸಿದನು.
ಭಗವಂತನು ಈ ಲೋಕದಲ್ಲಿ ಕೃಷ್ಣನಾಗಿ ಅವತರಿಸಿದ್ದರೆ, ಭೂಮಿದೇವಿಯು ಸತ್ಯಭಾಮೆಯಾಗಿ ಅವತರಿಸಿದಳು ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಸತ್ಯಭಾಮೆಯ ಸಹಾಯದಿಂದ ನರಕನನ್ನು ಕೊಲ್ಲುವುದಾಗಿ ಕೃಷ್ಣನು ತನ್ನ ದಿವ್ಯ ಸಂಕಲ್ಪದಲ್ಲಿ ನಿಶ್ಚಯಿಸಿದನು. ಆ ಸಮಯದಲ್ಲಿ, ಇಂದ್ರನು ದ್ವಾರಕೆಗೆ ಬಂದು, ನರಕಾಸುರನು ವರುಣನ ಛತ್ರಿ, ಅದಿತಿಯ (ಇಂದ್ರನ ತಾಯಿ) ಕಿವಿಯೋಲೆಗಳು ಮತ್ತು ದೇವತೆಗಳ ಆಟದ ಮೈದಾನವಾದ ಮಣಿಪರ್ವತವನ್ನು ಕಸಿದುಕೊಂಡಿದ್ದಾನೆ ಎಂದು ದೂರಿತ್ತನು. ತಕ್ಷಣವೇ ರಕ್ಷಿಸುವಂತೆ ಅವನು ಕೃಷ್ಣನನ್ನು ಪ್ರಾರ್ಥಿಸಿದನು. ಕೂಡಲೇ ಕೃಷ್ಣನು ಸತ್ಯಭಾಮೆಯೊಡನೆ ತನ್ನ ರಥವನ್ನೇರಿ ನರಕಾಸುರನ ಪಟ್ಟಣಕ್ಕೆ ತೆರಳಿದನು.
ಮುಖ್ಯ ದ್ವಾರದಲ್ಲಿ, ಮುರ ಎಂಬ ರಾಕ್ಷಸನು ಬಂದು ಕೃಷ್ಣನನ್ನು ಯುದ್ಧಕ್ಕೆ ಆಹ್ವಾನಿಸಿದನು. ಕೃಷ್ಣನು ತನ್ನ ದಿವ್ಯ ಚಕ್ರವನ್ನು ಪ್ರಯೋಗಿಸಿ ಮುರನ ತಲೆಯನ್ನು ಕತ್ತರಿಸಿದನು. ಇದೇ ಕಾರಣದಿಂದ ಕೃಷ್ಣನಿಗೆ “ಮುರಾರಿ” ಎಂಬ ಹೆಸರು ಬಂದಿತು. ತದನಂತರ, ಸ್ವತಃ ನರಕಾಸುರನೇ ಯುದ್ಧಕ್ಕೆ ಬಂದನು. ಭೀಕರ ಯುದ್ಧದ ನಂತರ, ಕೃಷ್ಣನು ನರಕನ ತಲೆಯನ್ನು ಕತ್ತರಿಸಿ ಸಂಹರಿಸಿದನು. ಇದರಲ್ಲಿ ಒಂದು ವಿಶೇಷವೇನೆಂದರೆ, ನರಕಾಸುರನಿಗೆ ತಾನು ತನ್ನ ತಾಯಿಯ ಕೈಯಿಂದಲೇ ಸಾಯಬೇಕೆಂಬ ವರವಿತ್ತು ಎಂದು ಹೇಳಲಾಗುತ್ತದೆ. ಯುದ್ಧದಲ್ಲಿ ನರಕನು ಕೃಷ್ಣನಿಗೆ ಹೊಡೆದಾಗ ಕೃಷ್ಣನು ಮೂರ್ಛೆ ಹೋದಂತೆ ನಟಿಸಿದನು. ಆ ಸಮಯದಲ್ಲಿ ಸತ್ಯಭಾಮೆಯು ಬಿಲ್ಲು ಮತ್ತು ಬಾಣವನ್ನುತ್ತಿಕೊಂಡು ನರಕನನ್ನು ಕೊಂದಳು.
ನಂತರ, ಕೃಷ್ಣನು ನರಕಾಸುರನ ಸೆರೆಯಲ್ಲಿದ್ದ ಹದಿನಾರು ಸಾವಿರದ ನೂರು (೧೬,೧೦೦) ದೇವತಾ ಸ್ತ್ರೀಯರನ್ನು ಮುಕ್ತಗೊಳಿಸಿದನು. ಅವರೆಲ್ಲರೂ ಕೃಷ್ಣನನ್ನೇ ತಮ್ಮ ಪತಿಯಾಗಿ ಪಡೆಯಲು ಬಯಸಿದರು. ಆದ್ದರಿಂದ, ಕೃಷ್ಣನು ಅವರೆಲ್ಲರನ್ನೂ ದ್ವಾರಕೆಗೆ ಕರೆತಂದು, ಅಷ್ಟೇ ದಿವ್ಯ ರೂಪಗಳನ್ನು ಧರಿಸಿ ಅವರೆಲ್ಲರನ್ನೂ ವಿವಾಹವಾದನು.
ಅನೇಕ ಆಳ್ವಾರರು ನರಕಾಸುರನ ವಧೆಯ ಬಗ್ಗೆ ಹಾಡಿದ್ದಾರೆ.
ಕುಲಶೇಖರ ಆಳ್ವಾರರು ತಮ್ಮ ಪೆರುಮಾಳ್ ತಿರುಮೊಳಿಯಲ್ಲಿ “ನಲ್ ನಾರಣನ್ ನರಗಾಂದಕನ್ ಪಿತ್ತನೇ” (ನರಕಾಸುರನನ್ನು ಕೊಂದ ಪರಮಾತ್ಮನಾದ ನಾರಾಯಣನು, ತನ್ನ ಭಕ್ತರ ವಿಷಯದಲ್ಲಿ ಅತಿಯಾದ ಪ್ರೀತಿಯುಳ್ಳವನು) ಎಂದು ಹೇಳಿದ್ದಾರೆ.
ನಮ್ಮಾಳ್ವಾರ್ ತಮ್ಮ ತಿರುವಿರುತ್ತಂನಲ್ಲಿ “ನಲಿಯುಂ ನರಗನೈ ವೀಟ್ಟಿಟ್ರುಂ” (ಹಿಂಸೆ ನೀಡುತ್ತಿದ್ದ ನರಕನ ವಧೆ) ಎಂದು ಉಲ್ಲೇಖಿಸಿದ್ದಾರೆ.
ತಿರುಮಂಗೈ ಆಳ್ವಾರ್ ಪೆರಿಯ ತಿರುಮೊಳಿಯಲ್ಲಿ “ವೆನ್ರಿ ಮಿಗು ನರಗನ್ ಉರಮ್ ಅದು ಅಳಿಯ ವಿಸಿರುಂ ವಿರಲ್ ಆಳಿತ್ ತಡಕ್ಕೈಯನ್” (ಪರಾಕ್ರಮಿಯಾದ ನರಕಾಸುರನನ್ನು ಕೊಲ್ಲಲು, ವಿಶಾಲವಾದ ಬಾಹುಗಳುಳ್ಳ ಭಗವಂತನು ತನ್ನ ಶೌರ್ಯಯುತವಾದ ಚಕ್ರವನ್ನು ಪ್ರಯೋಗಿಸಿದನು) ಎಂದು ವರ್ಣಿಸಿದ್ದಾರೆ.
ಪೆರಿಯಾಳ್ವಾರ್ ತಮ್ಮ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ಶ್ರೀ ದ್ವಾರಕೆಯಲ್ಲಿ ಭಗವಂತನ ಇರುವಿಕೆಯ ಬಗ್ಗೆ “ಪದಿನ್ರಾಮ್ ಆಯಿರವರ್ ದೇವಿಮಾರ್ ಪಣಿಸೆಯ್ಯ ತುವರೈ ಇನ್ನುಂ ಅದಿಲ್ ನಾಯಕರಾಹಿ ವೀಟ್ರಿರುಂದ ಮಣವಾಳರ್” (ಹದಿನಾರು ಸಾವಿರ ರಾಣಿಯರಿಂದ ಸೇವೆಸಲ್ಲಿಸಲ್ಪಡುವ ನಾಯಕನಾಗಿ ಕೃಷ್ಣನು ದ್ವಾರಕೆಯಲ್ಲಿ ನೆಲೆಸಿದ್ದನು) ಎಂದು ಹೇಳಿದ್ದಾರೆ.
ನರಕಾಸುರನು ಕಸಿದುಕೊಂಡಿದ್ದ ವಸ್ತುಗಳೊಂದಿಗೆ, ಕೃಷ್ಣ ಮತ್ತು ಸತ್ಯಭಾಮೆಯರು ಇಂದ್ರನ ಸ್ವರ್ಗಲೋಕಕ್ಕೆ ಹೋದರು. ನರಕಾಸುರನನ್ನು ಸೋಲಿಸಲು ಸಹಾಯ ಮಾಡಿದ್ದಕ್ಕಾಗಿ ಇಂದ್ರನು ಅವರಿಗೆ ಧನ್ಯವಾದ ಅರ್ಪಿಸಿದನು. ಇಂದ್ರಾಣಿ (ಇಂದ್ರನ ಪತ್ನಿ) ಕೂಡ ಬಂದು ಅವರಿಗೆ ನಮಸ್ಕರಿಸಿದಳು. ಆ ಸಮಯದಲ್ಲಿ ಇಂದ್ರಾಣಿಯ ದಾಸಿಯರು ಅವಳಿಗೆ ಪಾರಿಜಾತ ಪುಷ್ಪವನ್ನು ತಂದುಕೊಟ್ಟರು. ಅದನ್ನು ಕಂಡ ಸತ್ಯಭಾಮೆಯು ತನಗೂ ಅದು ಬೇಕೆಂದು ಆಶಿಸಿದಳು. ಆದರೆ ಇಂದ್ರಾಣಿಯು ಗರ್ವದಿಂದ, “ಇದು ದೇವತೆಗಳಿಗೆ ಮಾತ್ರ ಸಲ್ಲುವಂಥದ್ದು. ನಿಮ್ಮಂತಹ ಮನುಷ್ಯರಿಗೆ ಇದು ಸೂಕ್ತವಲ್ಲ,” ಎಂದು ಹೇಳಿದಳು. ಇದನ್ನು ಕೇಳಿ ಸತ್ಯಭಾಮೆಗೆ ತುಂಬಾ ದುಃಖವಾಯಿತು. ಇದನ್ನು ಕಂಡ ಕೃಷ್ಣನು, ತನ್ನ ವಾಹನವಾದ ಗರುಡಾಳ್ವಾರ್‌ಗೆ ಇಡೀ ಪಾರಿಜಾತ ವೃಕ್ಷವನ್ನೇ ಕೀಳಲು ಆಜ್ಞಾಪಿಸಿದನು. ಇದನ್ನು ನೋಡಿದ ಇಂದ್ರನು, ಸ್ವಲ್ಪ ಸಮಯದ ಹಿಂದಷ್ಟೇ ಕೃಷ್ಣನು ತಮ್ಮೆಲ್ಲರನ್ನು ಕಾಪಾಡಿದನೆಂಬುದನ್ನೂ ಮರೆತು, ಕೃಷ್ಣನೊಂದಿಗೆ ಯುದ್ಧಕ್ಕೆ ಬಂದನು. ಕೃಷ್ಣನು ಇಂದ್ರ ಮತ್ತು ಅವನ ಸೈನಿಕರನ್ನು ಸುಲಭವಾಗಿ ಸೋಲಿಸಿ, ದ್ವಾರಕೆಗೆ ಮರಳಿದನು. ಅವನು ಆ ಪಾರಿಜಾತ ವೃಕ್ಷವನ್ನು ದ್ವಾರಕೆಯ ತಮ್ಮ ಉದ್ಯಾನದಲ್ಲಿ ನೆಟ್ಟನು.
ಪೆರಿಯಾಳ್ವಾರ್ ತಮ್ಮ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ಸತ್ಯಭಾಮೆಯು ಪಾರಿಜಾತ ಪುಷ್ಪಕ್ಕಾಗಿ ಹೇಗೆ ಆಸೆಪಟ್ಟಳು ಎಂಬುದನ್ನು ವಿವರಿಸುತ್ತಾರೆ: “ಕರ್ಪಗಕ್ಕಾವು ಕರುದಿಯ ಕಾದಲಿಕ್ಕು ಇಪ್ಪೊಳುದು ಈವನ್ ಎನ್ರು ಇಂದಿರನ್ ಕಾವಿನಿಲ್ ನಿರ್ಪಣ ಸೆಯ್ಧು ನಿಲಾತ್ತಿಗಲ್ ಮುಟ್ರತ್ತುಳ್ ಉಯ್ತವನ್ ಎನ್ನೈ ಪ್ಪುರಂ ಪುಲ್ಗುವಾನ್ ಉಂಬರ್ ಕೋನ್ ಎನ್ನೈ ಪ್ಪುರಂ ಪುಲ್ಗುವಾನ್” (ಇಂದ್ರನ ತೋಟದಿಂದ ಕಲ್ಪವೃಕ್ಷವನ್ನು (ಪಾರಿಜಾತ) ಬಯಸಿದ ತನ್ನ ಪ್ರಿಯತಮೆಗಾಗಿ, “ನಾನೀಗಲೇ ನಿನಗೆ ತಂದುಕೊಡುತ್ತೇನೆ” ಎಂದು ಹೇಳಿ, ಅದನ್ನು ತಂದು ಅವಳ ಉದ್ಯಾನದಲ್ಲಿ ಸ್ಥಾಪಿಸಿದ ಕೃಷ್ಣನು ನನ್ನನ್ನು ಆಲಿಂಗಿಸಿಕೊಳ್ಳಲಿ).
ಈ ಲೀಲೆಯ ಸಾರಾಂಶ:
- ನರಕಾಸುರನು ಹತನಾದ ದಿನವನ್ನು, ಅವನ ಪ್ರಾರ್ಥನೆಯಂತೆ ‘ನರಕ ಚತುರ್ದಶಿ’ ಅಥವಾ ದೀಪಾವಳಿಯನ್ನಾಗಿ ಆಚರಿಸಲಾಗುತ್ತದೆ.
- ಇಂದ್ರ ಮುಂತಾದ ದೇವತೆಗಳು ಭಗವಂತನಿಂದ ಅನೇಕ ಒಳ್ಳೆಯ ವಿಷಯಗಳನ್ನು ಪಡೆದರೂ, ತಾವು ದೇವತೆಗಳೆಂಬ ಗರ್ವದಿಂದ ತಪ್ಪುಗಳನ್ನು ಮಾಡುತ್ತಾರೆ. ಆದರೆ ಭಗವಂತನು ಉದಾರ ಮನಸ್ಸಿನಿಂದ ಅವರನ್ನು ಕ್ಷಮಿಸುತ್ತಾನೆ.
- ಭಗವಂತನು ದ್ವಾರಕೆಯಲ್ಲಿ ತನ್ನ ಗೃಹಸ್ಥಾಶ್ರಮ ಧರ್ಮವನ್ನು ಅದ್ಭುತವಾಗಿ ನಡೆಸಿದನು.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/10/15/krishna-leela-39-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org