ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ
ಅಧ್ಯಯನ ಅಂದರೆ ಕಲಿಕೆ, ಅಭ್ಯಸಿಸು, ಪಠಿಸು, ಮನನಮಾಡು ಇತ್ಯಾದಿ. ವೇದವನ್ನು ಆಚಾರ್ಯರಿಂದ ಕೇಳುವ ಮೂಲಕ ಮತ್ತು ಅದನ್ನು ಪುನರಾವರ್ತಿಸುವ ಮೂಲಕ ಅವರ ಅಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ. ದೈನಂದಿನ ಅನುಷ್ಟಾನಗಳ ಭಾಗವಾಗಿ ವೇದ ಮಂತ್ರಗಳನ್ನು ನಿಯಮಿತವಾಗಿ ಪಠಿಸಲಾಗುತ್ತದೆ. ಅನಧ್ಯಯನ ಎಂದರೆ ಕಲಿಕೆ/ಪಾಠ ಮಾಡುವುದನ್ನು ತಡೆಯುವುದು, ವಿರಾಮ ನೀಡುವುದು. ವರ್ಷದ ಕೆಲವು ಸಮಯಗಳಲ್ಲಿ ವೇದವನ್ನು ಪಠಿಸುವುದಿಲ್ಲ. ಈ ಸಮಯವನ್ನು ಶಾಸ್ತ್ರದ ಇತರ ಭಾಗಗಳಾದ ಸ್ಮೃತಿ, ಇತಿಹಾಸಗಳು, ಪುರಾಣಗಳು ಇತ್ಯಾದಿಗಳನ್ನು ಕಲಿಯಲು ಬಳಸಿಕೊಳ್ಳಲಾಗುತ್ತದೆ. ಹಾಗೂ, ವರ್ಷವಿಡೀ ಬರುವ ಅಮವಾಸ್ಯೆ, ಪೌರ್ಣಮಿ, ಪ್ರಥಮೆ ಮುಂತಾದ ದಿನಗಳು ವೇದವನ್ನು ಕಲಿಯಲು ಅನುಕೂಲಕರವಾಗಿಲ್ಲ. ಹಾಗೇ, ದ್ರಾವಿಡ ವೇದ (೪000 ದಿವ್ಯ ಪ್ರಬಂಧ) ವನ್ನು ಸಂಸ್ಕೃತ ವೇದಕ್ಕೆ ಸಮಾನವೆಂದು ಪರಿಗಣಿಸಲಾಗಿರುವುದರಿಂದ, ನಿರ್ದಿಷ್ಟ ಅವಧಿಯಲ್ಲಿ ದಿವ್ಯ ಪ್ರಬಂಧವನ್ನು ಕಲಿಯದ/ಪಠಿಸದಿರುವ ಸಂಪ್ರದಾಯವಿದೆ.
ಅನಧ್ಯಯನ ಕಾಲವು ತಿರುಕಾರ್ತಿಕೈ (ಕಾರ್ತಿಕ ಮಾಸದ) ದೀಪೋತ್ಸವದ ಮರುದಿನ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ, ಇದು ದೇವಾಲಯಗಳಲ್ಲಿ ಅಧ್ಯಯನ-ಉತ್ಸವ ಮುಗಿದ ನಂತರ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ತೈ ಹಸ್ತದಲ್ಲಿ ದಿವ್ಯಪ್ರಬಂಧ ವಾಚನವನ್ನು ಪುನರಾರಂಭಿಸುವ ಪರಿಪಾಠವಿದೆ.
ಶ್ರೀರಂಗಂದಲ್ಲಿ ವೈಕುಂಠ ಏಕಾದಶಿಯ ಸಮಯದಲ್ಲಿ ತಿರುವಾಯ್ಮೊಳಿಯನ್ನು ಪಠಿಸುವ ಮೂಲಕ ನಮ್ಮಾಳ್ವಾರರ ಪರಮಪದ ಯಾತ್ರೆಯನ್ನು ವೈಭವೀಕರಿಸಲು ತಿರುಮಂಗೈ ಆಳ್ವಾರರು ಈ ಅಧ್ಯಯನ ಉತ್ಸವವನ್ನು ಮೊದಲು ಆಯೋಜಿಸಿದರು. ತರುವಾಯ, ಶ್ರೀಮಾನ್ ನಾಥಮುನಿಗಳು ಎಲ್ಲಾ ಆಳ್ವಾರರ ಪ್ರಬಂಧಗಳ ವಾಚನಗೋಷ್ಠಿಯನ್ನು ಆಯೋಜಿಸಿದರು. ಎಂಪೆರುಮಾನಾರ್ ಇದನ್ನು ಎಲ್ಲಾ ದಿವ್ಯದೇಶಗಳಲ್ಲಿ ಆಚರಿಸಲು ವ್ಯವಸ್ಥೆ ಮಾಡಿದರು. ನಮ್ಮ ನಂತರದ ಆಚಾರ್ಯರು ಈ ಸಂಪ್ರದಾಯವನ್ನು ಅದ್ಧೂರಿಯಾಗಿ ಮುಂದುವರೆಸಿದರು.
ಅನಧ್ಯಯನ ಕಾಲದಲ್ಲಿ ಏನು ಕಲಿಯಬೇಕು ಮತ್ತು ಪಠಿಸಬೇಕು?
ಕೆಲವು ತ್ವರಿತ ಸೂಚನೆಗಳು ಇಲ್ಲಿವೆ:
- ಸಾಮಾನ್ಯವಾಗಿ ದೇವಾಲಯಗಳಲ್ಲಿ, ಅನಧ್ಯಯನ ಕಾಲದ ಸಮಯದಲ್ಲಿ, ತಿರುಪ್ಪಾವೈ ಬದಲಿಗೆ ಉಪದೇಶರತ್ತಿನಮಾಲೈ ಮತ್ತು ಕೋಯಿಲ್ ತಿರುವಾಯ್ಮೊಳಿ/ರಾಮಾನುಸ ನೂತ್ತಂದಾದಿಯ ಬದಲಿಗೆ ತಿರುವಾಯ್ಮೊಳಿ ನೂತ್ತಂದಾದಿಯನ್ನು ಪಠಿಸಲಾಗುತ್ತದೆ.
- ಮಾರ್ಹಳಿ ತಿಂಗಳಲ್ಲಿ ತಿರುಪ್ಪಳ್ಳಿಯೆಳುಚ್ಚಿ/ತಿರುಪ್ಪಾವೈ ಪಾರಾಯಣ ಪುನರಾರಂಭವಾಗುತ್ತದೆ.
- ದೇವಾಲಯಗಳಲ್ಲಿ, ಅಧ್ಯಯನ ಉತ್ಸವದ ಸಮಯದಲ್ಲಿ, ಎಲ್ಲಾ ೪000 ಪಾಸುರಗಳನ್ನು ಒಮ್ಮೆ ಪಠಿಸಲಾಗುತ್ತದೆ
- ಮನೆಗಳಲ್ಲಿ, ತಿರುವಾರಾಧನೆಯ ಸಮಯದಲ್ಲಿ, ೪000 ದಿವ್ಯ ಪ್ರಬಂಧದಿಂದ ಪಾಸುರಗಳನ್ನು ಅನಧ್ಯಯನ ಕಾಲದಲ್ಲಿ ಪಠಿಸಲಾಗುವುದಿಲ್ಲ, (ಮಾರ್ಹಳಿ ತಿಂಗಳಲ್ಲಿ ದೇವಸ್ಥಾನಗಳಲ್ಲಿಯೂ ಅದೇ ತತ್ವ – ತಿರುಪ್ಪಾವೈ ಮತ್ತು ತಿರುಪ್ಪಳ್ಳಿಯೆಳುಚ್ಚಿಯನ್ನು ಪಠಿಸಲಾಗುತ್ತದೆ.
- ಕೋಯಿಲ್ ಆಳ್ವಾರರನ್ನು ತೆರೆಯುವ ಸಮಯದಲ್ಲಿ, ನಾವು ಜಿತಂತೇ ಸ್ಥೋತ್ರವನ್ನು (ಮೊದಲ 2 ಶ್ಲೋಕಗಳು) ಪಠಿಸುತ್ತೇವೆ (“ಕೌಸಲ್ಯ ಸುಪ್ರಜಾ ರಾಮ” ಶ್ಲೋಕ, “ಕೂರ್ಮಾದಿನ್ ” ಶ್ಲೋಕ (ಇವುಗಳನ್ನು ಸಾಮಾನ್ಯವಾಗಿ ಪಠಿಸಲಾಗುತ್ತದೆ) ಮತ್ತು ನೇರವಾಗಿ ಬಾಗಿಲನ್ನು ತೆರೆಯುತ್ತೇವೆ. ಹಾಗೇ ಬಾಗಿಲು ತೆರೆಯುವಾಗ ಹೃದಯ/ಮನಸ್ಸಿನಲ್ಲಿ ಆಳ್ವಾರರ ಪಾಸುರಗಳನ್ನು ಸ್ಮರಿಸುವುದಕ್ಕೆ/ಧ್ಯಾನಮಾಡುವುದಕ್ಕೆ ಅಡ್ಡಿಯಿಲ್ಲ.
- ಅದೇ ರೀತಿ ತಿರುಮಂಜನದ ಸಮಯದಲ್ಲಿ, ವೇದ ಸೂಕ್ತಗಳನ್ನು ಪಠಿಸಿದ ನಂತರ, ನಾವು “ವೆಣ್ಣೆಯ್ಯಳೈOದ ಕುಣುಂಗುಂ” ಪದಿಗಂ ಮತ್ತು ಕೆಲವು ಹೆಚ್ಚುವರಿ ಪಾಸುರಗಳನ್ನು ಪಠಿಸುತ್ತೇವೆ – ಅನಧ್ಯಯನ ಕಾಲದ ಸಮಯದಲ್ಲಿ, ನಾವು ಕೇವಲ ಸೂಕ್ತಗಳೊಂದಿಗೆ ನಿಲ್ಲಿಸುತ್ತೇವೆ.
- ಮಂತ್ರ ಪುಷ್ಪ ಸಮಯದಲ್ಲಿ, ನಾವು ಸಾಮಾನ್ಯವಾಗಿ “ಸೆನ್ರಾಲ್ ಕುಡೈಯಾಂ” ಪಾಸುರವನ್ನು ಪಠಿಸುತ್ತೇವೆ. ಅನಧ್ಯಯನ ಕಾಲದ ಸಮಯದಲ್ಲಿ, ನಾವು ಅದರ ಬದಲಿಗೆ “ಎಂಪೆರುಮಾನಾರ್ ದರಿಶನಂ ಎನ್ರೇ” ಪಾಸುರವನ್ನು ಪಠಿಸುತ್ತೇವೆ.
- ಸಾಟ್ರುಮೊರೈ ಸಮಯದಲ್ಲಿ, ನಾವು “ಸಿತ್ತಂ ಸಿರುಕಾಲೇ”, “ವಂಗಕ್ಕಡಲ್” ಮತ್ತು “ಪಲ್ಲಾಂಡು ಪಲ್ಲಾಂಡು” ಪಾಶುರಗಳ ಬದಲು “ಉಪದೇಶ ರತ್ನಮಾಲೈ”, “ತಿರುವಾಯ್ಮೊಳಿ ನೂತ್ತಂದಾದಿ”, ಪಾಶುರಗಳನ್ನು ಪಠಿಸಿ “ಸರ್ವದೇಶ ದಶಾ ಕಾಲೇ” ಮತ್ತು ವಾಳಿ ತಿರುನಾಮಮ್ ಅನ್ನು ಪಠಿಸುತ್ತೇವೆ.
- ಅನಧ್ಯಯನ ಕಾಲವು ಸಂಸ್ಕೃತದಲ್ಲಿರುವ ಪೂರ್ವಾಚಾರ್ಯರ ಸ್ತೋತ್ರ ಗ್ರಂಥಗಳನ್ನು ಮತ್ತು ಜ್ಞಾನ ಸಾರಂ ಪ್ರಮೇಯ ಸಾರಂ, ಸಪ್ತ ಗಾದೈ, ಉಪದೇಶ ರತ್ನಮಾಲೈ, ತಿರುವಾಯ್ಮೊಳಿ ನೂತ್ತಂದಾದಿ ಇತ್ಯಾದಿ ತಮಿಳು ಪ್ರಬಂಧಗಳನ್ನು ಹಾಗು, ತನಿಯನ್ಗಳು ಮತ್ತು ಆಚಾರ್ಯರ ವಾಳಿ ತಿರುನಾಮಗಳನ್ನು ಕಲಿತು ಪಠಿಸಲು ಸೂಕ್ತ ಸಮಯವಾಗಿದೆ.
ಅಲ್ಲದೆ, ಈ ಸಮಯದಲ್ಲಿ ರಹಸ್ಯ ಗ್ರಂಥಗಳನ್ನು ಕಲಿಯಲು ತೊಡಗಬಹುದು ಮತ್ತು ಅದನ್ನೇ ಕಂಠಪಾಠ ಮಾಡಬಹುದು.
ಅಡಿಯೇನ್ ಗೋದಾ ರಾಮಾನುಜ ದಾಸಿ
ಮೂಲ : https://granthams.koyil.org/2023/05/18/anadhyayana-kalam-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org