ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು

ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಗುರುಪರಂಪರೆ

ಶ್ರೀಮನ್ ನಾರಾಯಣ ಶ್ರೀದೇವಿ (ಶ್ರೀ ಮಹಾಲಕ್ಷ್ಮಿ), ಭೂದೇವಿ, ನೀಳಾದೇವಿ ಮತ್ತು ನಿತ್ಯಸೂರಿಗಳೊಂದಿಗೆ ಪರಮಪದದಲ್ಲಿ

ಈ ಹಿಂದಿನ ಲೇಖನದಲ್ಲಿ ನಾವು ಗುರುಪರಂಪರೆಯ ವೈಭವಗಳನ್ನು ತಿಳಿದುಕೊಂಡೆವು. ಈಗ ನಾವು ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.

ಶ್ರೀಮನ್ ನಾರಾಯಣನು ಅನಂತವಾದ ಮತ್ತು ಅದ್ಭುತವಾದ ಕಲ್ಯಾಣಗುಣಗಳಿಂದ ಕೂಡಿದ ಸರ್ವೋಚ್ಚನಾದ ದೇವನು. ತನ್ನ ದೈವಿಕ ಮತ್ತು ನಿರುಪಾಧಿಕ ಕೃಪೆಯಿಂದಾಗಿ, ಆತನು ಕೆಲವರು ಆಯ್ದ ಜೀವಾತ್ಮರನ್ನು ಆಳ್ವಾರುಗಳಾಗುವಂತೆ (ಶ್ರೀಮನ್ ನಾರಾಯಣನ ಕುರಿತು ನಿರ್ಮಲವಾದ ಮತ್ತು ಅನನ್ಯವಾದ ಭಕ್ತಿಯನ್ನು ಬೋಧಿಸಿದ ಶ್ರೇಷ್ಠ ಸಂತರು) ಅನುಗ್ರಹಿಸಿದನು. ತಾನು ನಿತ್ಯಸೂರಿಗಳ (ನಿರಂತರವೂ ಸ್ವತಂತ್ರರಾದ ಆತ್ಮರು) ಮತ್ತು ಮುಕ್ತಾತ್ಮರ (ಮೋಕ್ಷವನ್ನು ಪಡೆದ ಆತ್ಮರು) ಅಪ್ರತಿಮ ಪ್ರಭುವಾಗಿದ್ದರೂ ಸಹ, ಶ್ರೀಮನ್ ನಾರಾಯಣನು ತನ್ನ ಒಂದು ಸಂಕಟವನ್ನು ತೊಡೆದುಹಾಕಲು ಬಯಸಿದನು.

ಆತನ ಸಂಕಟವು ಬದ್ಧಾತ್ಮರು ಈ ಭೌತಿಕ ಪ್ರಪಂಚದಲ್ಲಿ ಕಷ್ಟಪಡುವುದರಿಂದ ಉಂಟಾದುದು. ಆತನು ಪ್ರತಿಯೊಬ್ಬರ ಪರಮಪ್ರಧಾನ ತಂದೆಯಾದ್ದರಿಂದ, ಭೌತಿಕ ಪ್ರಪಂಚದಲ್ಲಿ ಜನನ ಮತ್ತು ಮರಣಗಳ ಚಕ್ರದಲ್ಲಿ ಸಿಲುಕಿಕೊಂಡಿರುವ ತನ್ನ ಮಕ್ಕಳ ಕಷ್ಟವನ್ನು ಆತನಿಂದ ಸಹಿಸಿಕೊಳ್ಳಲಾಗಲಿಲ್ಲ. ಯಾರಾದರೂ ಪ್ರಶ್ನಿಸಬಹುದು – ಸರ್ವೋಚ್ಛನಾದ ದೇವನಿಗೆ ಸಂಕಟ/ದುಃಖ ಇರುವುದುಂಟೇ ಎಂದು – ಏಕೆಂದರೆ ಆತನು ಸತ್ಯ ಕಾಮ (ತನ್ನ ಎಲ್ಲ ಬಯಕೆಗಳನ್ನೂ ಈಡೇರಿಸಿಕೊಳ್ಳಬಲ್ಲವನು) ಮತ್ತು ಸತ್ಯ ಸಂಕಲ್ಪ (ಏನನ್ನಾದರೂ ಸಾಧಿಸಬಲ್ಲವನು). ನಮ್ಮ ಆಚಾರ್ಯರುಗಳು ವಿವರಿಸಿರುವುದೇನೆಂದರೆ ಕಷ್ಟಪಡುತ್ತಿರುವ ಜೀವಾತ್ಮರಿಗಾಗಿ ಸಂಕಟವನ್ನು ಅನುಭವಿಸುವುದೂ ಆತನ ಒಂದು ಕಲ್ಯಾಣ ಗುಣ. ಹೇಗೆ ಒಬ್ಬ ಸರ್ವಶಕ್ತನಾದ ತಂದೆಯು ತನ್ನ ಒಬ್ಬ ಮಗನೊಡನೆ ಸಂತೋಷವಾಗಿ ಜೀವಿಸುತ್ತಿದ್ದರೂ ಸಹ, ತನ್ನಿಂದ ದೂರವಾಗಿರುವ ತನ್ನ ಇನ್ನೊಬ್ಬ ಮಗನು ಕಷ್ಟಪಡುತ್ತಿರುವ ಬಗ್ಗೆ ಚಿಂತಿಸುತ್ತಿರುತ್ತಾನೋ, ಹಾಗೆಯೇ ಭಗವಂತನೂ ಸರ್ವಶಕ್ತನಾಗಿದ್ದರೂ ಕೂಡ, ಸಂಸಾರದಲ್ಲಿ ಅನಾದಿಕಾಲದಿಂದ ಅಜ್ಞಾನದಿಂದ ಆವೃತರಾಗಿ, ನಿಜವಾದ ಜ್ಞಾನದ ಅಭಾವದಿಂದಾಗಿ ಪಾಡುಪಡುತ್ತಿರುವ ಜೀವಾತ್ಮರುಗಳನ್ನು ಕಂಡು ಸಂಕಟವನ್ನು ಅನುಭವಿಸುತ್ತಾನೆ.

ಈ ರೀತಿಯಾಗಿ ಕಷ್ಟಪಡುತ್ತಿರುವ ಜೀವಾತ್ಮರುಗಳ ಉದ್ಧಾರವು ಸುಗಮವಾಗಲು, ಆತನು ಸೃಷ್ಟಿಯ ಸಮಯದಲ್ಲಿ ಜೀವಾತ್ಮರಿಗೆ ಶರೀರ ಮತ್ತು ಇಂದ್ರಿಯಗಳನ್ನು ನೀಡುತ್ತಾನೆ, ಶಾಸ್ತ್ರಗಳನ್ನು ತಿಳಿಯಪಡಿಸುತ್ತಾನೆ, ಸ್ವತಃ ಈ ಭೌತಿಕ ಪ್ರಪಂಚದಲ್ಲಿ ಶ್ರೀ ರಾಮ, ಕೃಷ್ಣ, ಇತ್ಯಾದಿ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಇವೆಲ್ಲವುಗಳ ನಂತರವೂ, ಜೀವಾತ್ಮರುಗಳು ನಿಜವಾದ ಜ್ಞಾನವನ್ನು ವಾಸ್ತವಿಕವಾಗಿ ಅರಿಯಲು ಮತ್ತು ಆತನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲು ಇಚ್ಛಿಸುವುದಿಲ್ಲ. ಹೇಗೆ ಒಬ್ಬ ಬೇಡನು ಒಂದು ಜಿಂಕೆಯನ್ನು ಹಿಡಿಯಲು ಇನ್ನೊಂದು ಪಳಗಿದ ಜಿಂಕೆಯನ್ನು ಬಳಸುತ್ತಾನೋ ಹಾಗೆ ಶ್ರೀಮನ್ ನಾರಾಯಣನು ಜೀವಾತ್ಮರುಗಳನ್ನು ಈ ಭೌತಿಕ ಪ್ರಪಂಚದಲ್ಲಿರುವ ಇತರ ಜೀವಾತ್ಮರುಗಳ ಮೂಲಕ ಉದ್ಧರಿಸಲು ನಿರ್ಧರಿಸುತ್ತಾನೆ. ಹೀಗೆ ಆತನು ಕೆಲವರನ್ನು ಆರಿಸಿಕೊಳ್ಳುತ್ತಾನೆ, ಅವರಿಗೆ ದಿವ್ಯ ಜ್ಞಾನವನ್ನು ಅನುಗ್ರಹಿಸುತ್ತಾನೆ ಮತ್ತು ಅವರನ್ನು ಆಳ್ವಾರುಗಳಾಗಿ ಮಾಡುತ್ತಾನೆ. ಅಳ್ವಾರ್ ಎಂದರೆ ಭಗವದ್ವಿಷಯಗಳಲ್ಲಿ ತನ್ಮಯರಾಗಿರುವವರು ಎಂದರ್ಥ. ಈ ಆಳ್ವಾರುಗಳು, ವೇದ ವ್ಯಾಸರು ಶ್ರೀ ಭಾಗವತದಲ್ಲಿ ಭವಿಷ್ಯ ನುಡಿದಿರುವಂತೆ, ಭಾರತ ದೇಶದ ದಕ್ಷಿಣ ಭಾಗದಲ್ಲಿ ವಿವಿಧ ಪವಿತ್ರ ಕ್ಷೇತ್ರಗಳಲ್ಲಿ ಅವತರಿಸಿದರು. ನಾವು ಹಿಂದಿನ ಲೇಖನಗಳಲ್ಲಿ ಆಳ್ವಾರುಗಳ ಬಗ್ಗೆ ಈಗಾಗಲೇ ನೋಡಿದ್ದೇವೆ.

ಆಳ್ವಾರುಗಳು ಶ್ರೀಮನ್ ನಾರಾಯಣನನ್ನು ವೈಭವೀಕರಿಸುವ ಅನೇಕ ಪಾಶುರಗಳನ್ನು ಸಂಯೋಜಿಸಿದರು. ಈ ಪಾಶುರಗಳು ಒಟ್ಟು ಸರಿಸುಮಾರು ೪೦೦೦ ಪದ್ಯಗಳು ಮತ್ತು ಅದರಿಂದಾಗಿ ೪೦೦೦ ದಿವ್ಯಪ್ರಬಂಧಗಳೆಂದು ಹೆಸರಾಗಿವೆ. ದಿವ್ಯ ಎಂದರೆ ದೈವಿಕವಾದದ್ದು ಮತ್ತು ಪ್ರಬಂಧ ಎಂದರೆ ಸಾಹಿತ್ಯ (ಸ್ವತಃ ಭಗವಂತನನ್ನೇ ಗ್ರಹಿಸುವಂತಹುದು). ಭಗವಂತನನ್ನು ಅರ್ಚಾ ರೂಪದಲ್ಲಿ ಹೊಂದಿರುವ ಆಳ್ವಾರುಗಳು ವೈಭವೀಕರಿಸಿದ ವಿವಿಧ ಕ್ಷೇತ್ರಗಳು ದಿವ್ಯದೇಶಗಳೆಂದು ಹೆಸರಾಗಿವೆ. ದಿವ್ಯದೇಶಗಳು ಒಟ್ಟು ೧೦೮ ಇರುವುದಾಗಿ ಹೇಳಲಾಗಿದೆ. ಅವುಗಳಲ್ಲಿ ೧೦೬ ಭಾರತ ದೇಶದ ವಿವಿಧ ಪ್ರಾಂತ್ಯಗಳಲ್ಲಿವೆ (ನೇಪಾಳವೂ ಸೇರಿ). ಕ್ಷೀರಾಬ್ಧಿಯು ಭೌತಿಕ ಪ್ರಪಂಚದಲ್ಲಿಯೇ ಸ್ಥಾಪಿತವಾಗಿದ್ದರೂ ನಮಗೆ ತಲುಪಲಾಗದಷ್ಟು ಬಹು ದೂರದಲ್ಲಿದೆ. ಪರಮಪದವು ಆಧ್ಯಾತ್ಮಿಕ ಪ್ರಪಂಚದಲ್ಲಿದ್ದು ಮುಕ್ತಿ ಪಡೆದ ನಂತರ ತಲುಪಬಹುದಾಗಿದೆ. ಶ್ರೀರಂಗಮ್ ಪ್ರಾಥಮಿಕ ದಿವ್ಯದೇಶವೆಂದು ಪರಿಗಣಿಸಲ್ಪಟ್ಟಿದೆ ಮತ್ತು ತಿರುಮಲ, ಕಾಂಚೀಪುರಮ್, ತಿರುವಲ್ಲಿಕ್ಕೇಣಿ, ಅಳ್ವಾರ್ ತಿರುನಗರಿ, ಇತ್ಯಾದಿಗಳು ಕೆಲವು ಪ್ರಮುಖ ದಿವ್ಯದೇಶಗಳಾಗಿವೆ. ಭಗವಂತನು ಇದು ಅಭಿವ್ಯಕ್ತಿಗಳನ್ನು ಹೊಂದಿರುವನೆಂದು ಹೇಳಲಾಗಿದೆ – ಸರ್ವೋಚ್ಚ ಅಧಿಪತಿಯಾಗಿ ಪರಮಪದದಲ್ಲಿ, ವ್ಯೂಹ ರೂಪದಲ್ಲಿ ಕ್ಷೀರಾಬ್ಧಿಯಲ್ಲಿ, ಅಂತರ್ಯಾಮಿಯಾಗಿ (ಜೀವಿಗಳಲ್ಲಿ ವಾಸಿಸುವ ಪರಮಾತ್ಮನ ರೂಪದಲ್ಲಿ), ವಿಭವ (ಶ್ರೀ ರಾಮ, ಕೃಷ್ಣ, ಇತ್ಯಾದಿ ಅವತಾರಗಳಲ್ಲಿ) ಮತ್ತು ಕಡೆಯದಾಗಿ ಅರ್ಚಾ ರೂಪದಲ್ಲಿ. ಈ ಎಲ್ಲ ರೂಪಗಳಲ್ಲಿ ಪ್ರತಿಯೊಬ್ಬರೂ ಎಲ್ಲ ಸಮಯದಲ್ಲಿಯೂ ಸಮೀಪಿಸಬಹುದಾದ ಅರ್ಚಾ ರೂಪವು ಅತ್ಯಂತ ಉದಾತ್ತವಾದದ್ದೆಂದು ಪರಿಗಣಿಸಲ್ಪಟ್ಟಿದೆ. ನಮ್ಮ ಪೂರ್ವಾಚಾರ್ಯರುಗಳು ದಿವ್ಯದೇಶಗಳನ್ನು ತಮ್ಮ ಪ್ರಾಣವನ್ನಾಗಿ ನೋಡಿಕೊಂಡಿದ್ದರು ಮತ್ತು ತಮ್ಮ ಜೀವನವನ್ನು ಆ ದಿವ್ಯದೇಶಗಳ ಭಗವಂತ ಮತ್ತು ಭಾಗವತರ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅಧಿಕ ಮಾಹಿತಿಗಾಗಿ   ಇಲ್ಲಿಗೆ ಭೇಟಿ ನೀಡಿ: https://koyil.org.

ದಿವ್ಯಪ್ರಬಂಧಗಳು ವೇದ/ವೇದಾಂತಗಳ ಸಾರವನ್ನು ಸರಳವಾದ ಮತ್ತು ಪರಿಶುದ್ಧವಾದ ತಮಿಳಿನಲ್ಲಿ ತೆರೆದಿಟ್ಟವು. ಈ ದಿವ್ಯಪ್ರಬಂಧಗಳ ಪೂರ್ಣ ಉದ್ದೇಶವು ನಿಜವಾದ ಜ್ಞಾನವನ್ನು ಪ್ರಸರಿಸುವುದರ ಮೂಲಕ ಜೀವಾತ್ಮರುಗಳನ್ನು ಉದ್ಧರಿಸುವುದಾಗಿತ್ತು. ಆಳ್ವಾರುಗಳ ಕಾಲದ ಅನೇಕ ಶತಮಾನಗಳ ನಂತರ ನಾಥಮುನಿಗಳು ಮೊದಲ್ಗೊಂಡು, ಮಧ್ಯದಲ್ಲಿ ಶ್ರೀ ರಾಮಾನುಜರು ಮತ್ತು ಕಡೆಯದಾಗಿ ಮಾಮುನಿಗಳು, ಹೀಗೆ ಅನೇಕ ಆಚಾರ್ಯರುಗಳು ಅವತರಿಸಿದರು ಮತ್ತು ಆಳ್ವಾರುಗಳ ದಿವ್ಯಸಂದೇಶವನ್ನು ಉಪದೇಶಿಸಿದರು. ಕಡಿಮೆ ಜ್ಞಾನವುಳ್ಳ ಜನರು ಆಳ್ವಾರುಗಳ ಪಾಶುರಗಳನ್ನು ಸರಳವಾದ ತಮಿಳು ಹಾಡುಗಳೆಂದು ಪರಿಗಣಿಸಿದರೆ, ಅತ್ಯಂತ ಜ್ಞಾನಿಗಳಾದ ಆಚಾರ್ಯರುಗಳು, ಈ ಪಾಶುರಗಳು ಶ್ರೀಮನ್ ನಾರಾಯಣನೇ ಉಪಾಯ (ಈ ಭೌತಿಕ ಪ್ರಪಂಚದಿಂದ ಉದ್ಧರಿಸಲು) ಮತ್ತು ಉಪೇಯ (ಆಧ್ಯಾತ್ಮಿಕ ಪ್ರಪಂಚದಲ್ಲಿ, ನಿರಂತರವಾಗಿ ಶ್ರೀಮನ್ ನಾರಾಯಣನ ಸೇವೆ ಮಾಡುತ್ತಾ ತನ್ನ ನಿಜ ಸ್ವಭಾವದಲ್ಲಿ ಸ್ಥಾಪಿತವಾಗಿರುವುದು) , ಎಂಬ ಅಂತಿಮ ತತ್ತ್ವವನ್ನು ಈ ಪಾಶುರಗಳು ತೆರೆದಿಟ್ಟಿರುವುದಾಗಿ ಪ್ರತಿಪಾದಿಸಿದರು. ನಮ್ಮ ಪೂರ್ವಾಚಾರ್ಯರುಗಳು ದಿವ್ಯಪ್ರಬಂಧಗಳನ್ನು ಸಂಪೂರ್ಣವಾಗಿ ಆಸ್ವಾದಿಸಿದರು ಮತ್ತು ತಮ್ಮ ಜೀವನವನ್ನು, ಈ ಪಾಶುರಗಳನ್ನು ಅರಿಯುವುದಕ್ಕಾಗಿ, ಬೋಧಿಸುವುದಕ್ಕಾಗಿ ಮತ್ತು ಅದರಂತೆ ಜೀವಿಸುವುದಕ್ಕಾಗಿ, ಕೇಂದ್ರೀಕರಿಸಿದರು.

ನಮ್ಆಳ್ವಾರ್ ಎರಡೂ ಪಕ್ಕದಲ್ಲಿ ಮಧುರಕವಿ ಅಳ್ವಾರ್ ಮತ್ತು ನಾಥಮುನಿಗಳೊಂದಿಗೆ

ಆಳ್ವಾರುಗಳ ನಂತರ, ಇತಿಹಾಸದಲ್ಲಿ ದಿವ್ಯಪ್ರಬಂಧಗಳು ಕಳೆದುಹೋದ ಒಂದು ಅಂಧಕಾರದ ಕಾಲವಿತ್ತು. ಅಂತಿಮವಾಗಿ, ನಾಥಮುನಿಗಳು ಬಹು ಕಷ್ಟದಿಂದ  ನಮ್ಆಳ್ವಾರ್ರ ಜನ್ಮಸ್ಥಳವಾದ ಅಳ್ವಾರ್ ತಿರುನಗರಿಯನ್ನು ಪತ್ತೆಹಚ್ಚಿದರು ಮತ್ತು  ನಮ್ಆಳ್ವಾರ್ರ ದಿವ್ಯ ಕೃಪೆಯಿಂದಾಗಿ ಅವರು ಎಲ್ಲ ೪೦೦೦ ದಿವ್ಯಪ್ರಬಂಧಗಳನ್ನು ಅವುಗಳ ಅರ್ಥದೊಂದಿಗೆ ಕಲಿತುಕೊಂಡರು. ನಾಥಮುನಿಗಳು ೪೦೦೦ ದಿವ್ಯಪ್ರಬಂಧಗಳನ್ನು ನಾವು ಈ ದಿನ ಕಾಣುವಂತೆ ೪ ಭಾಗಗಳಾಗಿ ವಿಂಗಡಿಸಿದರು, ಅದನ್ನು ತಮ್ಮ ಶಿಷ್ಯರಿಗೆ ಬೋಧಿಸಿದರು ಮತ್ತು ಈ ದಿವ್ಯಪ್ರಬಂಧಗಳ ಪ್ರಾಮುಖ್ಯತೆಯನ್ನು ಪ್ರಕಟಪಡಿಸಿದರು. ಅವರು ನಮ್ಮಾಳ್ವಾರರ ಬಗ್ಗೆ ದೃಢವಾದ ಭಕ್ತಿಯನ್ನು ತೋರಿಸಿದ ಮಧುರಕವಿ ಆಳ್ವಾರರನ್ನು ಗೌರವಿಸುವ ಸಲುವಾಗಿ, ಕಣ್ಣಿನುಣ್ ಚಿರು ತಾಮ್ಬು ಪಾಶುರವನ್ನು೪೦೦೦ ದಿವ್ಯಪ್ರಬಂಧಗಳಲ್ಲಿ ಸೇರಿಸಿದರು


ಶ್ರೀ ರಾಮಾನುಜರು

ಆದಿಶೇಷನ ಅವತಾರವೆಂದು ಪರಿಗಣಿಸಲಾದ ಮತ್ತು ಒಂದು ಶತಮಾನದ ನಂತರ ಜನಿಸಿದ ಶ್ರೀ ರಾಮಾನುಜರು (ಎಂಪೆರುಮಾನಾರ್) ಯಾಮುನಾಚಾರ್ಯರ ಅಪೇಕ್ಷೆಯಂತೆ ಹಲವು ಆಚಾರ್ಯರುಗಳ ಕೆಳಗೆ ಅಧ್ಯಯನ ಮಾಡುವ ಮೂಲಕ ಈ ದಿವ್ಯಪ್ರಬಂಧಗಳನ್ನು ಪಡೆದರು. ಅವರು ನಂತರ ಆಳ್ವಾರುಗಳ ವೈಭವಗಳನ್ನು ಮತ್ತು ಅವರ ಕೃತಿಗಳನ್ನು ಸಮಾಜದ ಎಲ್ಲಾ ವರ್ಗಗಳಿಗೂ ಪ್ರಸರಿಸಿದರು, ಮತ್ತು ಈ ಶ್ರೀವೈಷ್ಣವ ಸಂಪ್ರದಾಯದ ಪ್ರಸಾರವನ್ನು ಅತ್ಯಂತ ಸುಗಮವಾಗಿಸಿದರು. ಅವರ ಈ ಮಹತ್ವದ ಕೊಡುಗೆಯಿಂದಾಗಿ ಈ ಸಂಪ್ರದಾಯವು ಶ್ರೀ ರಾಮಾನುಜ ದರ್ಶನವೆಂದು ಸಾಕ್ಷಾತ್ ಶ್ರೀರಂಗನಾಥನಿಂದಲೇ ಹೆಸರಿಸಲ್ಪಟ್ಟಿತು. ಇದಲ್ಲದೆ, ಅವರ ಶ್ರೇಷ್ಠತೆಯಿಂದಾಗಿ ಶ್ರೀ ರಾಮಾನುಜರನ್ನು ವೈಭವೀಕರಿಸಿ ತಿರುವರಂಗತ್ತು ಅಮುದನಾರ್ ಅವರು ರಚಿಸಿದ ರಾಮಾನುಜ ನೂಟ್ರನ್ದಾದಿಯು ೪೦೦೦ ದಿವ್ಯಪ್ರಬಂಧಗಳಲ್ಲಿ ಆಚಾರ್ಯರುಗಳಿಂದ ಸೇರಿಸಲ್ಪಟ್ಟಿತು. ಈ ರಾಮಾನುಜ ನೂಟ್ರನ್ದಾದಿಯು ಪ್ರಪನ್ನ ಗಾಯತ್ರೀ ಎಂದು ಶ್ಲಾಘಿಸಲ್ಪಟ್ಟಿದೆ – ಎಲ್ಲಾ ಪ್ರಪನ್ನರುಗಳೂ (ಶರಣಾಗತರಾದವರು) ಪ್ರತಿದಿನ ಕಡ್ಡಾಯವಾಗಿ ಪಠಿಸಬೇಕಾದುದು, ಹೇಗೆ ಬ್ರಾಹ್ಮಣರುಗಳು ಪ್ರತಿದಿನವೂ ಗಾಯತ್ರಿ ಮಂತ್ರವನ್ನು ಪಠಿಸುತ್ತಾರೋ ಹಾಗೆ.

 

ನಂಪಿಳ್ಳೈ ಕಾಲಕ್ಷೇಪ ಗೋಷ್ಠಿ

ಈ ಸಂದರ್ಭದಲ್ಲಿ ನಂಪಿಳ್ಳೈ ಒಬ್ಬ ಪ್ರಮುಖ ಆಚಾರ್ಯರು ಎಂಬುದನ್ನು ಉಲ್ಲೇಖಿಸಬೇಕು (ಪರಂಪರೆಯಲ್ಲಿ ಎಂಪೆರುಮಾನಾರ್, ಎಂಬಾರ್, ಭಟ್ಟರ್ ಮತ್ತು ನಂಜೀಯರ್ ನಂತರ ಬಂದವರು). ಅವರು ಶ್ರೀರಂಗಮ್ ನಲ್ಲಿ ವಾಸಿಸುತ್ತಿದ್ದರು ಮತ್ತು ತಮ್ಮ ಕಾಲದಲ್ಲಿ ಶ್ರೀವೈಷ್ಣವ ಸಂಪ್ರದಾಯದ ಮುಖ್ಯಸ್ಥರಾಗಿದ್ದರು. ಅವರ ಕಾಲದಲ್ಲಿಯೇ ಶ್ರೀರಂಗಮ್ ನಲ್ಲಿ ೪೦೦೦ ದಿವ್ಯಪ್ರಬಂಧಗಳ ಅರ್ಥಗಳಿಗೆ ಬಹು ಪ್ರಾಮುಖ್ಯತೆ ದೊರಕಿತು. ಅವರು ಪೆರಿಯ ಪೆರುಮಾಳ್ರ (ಶ್ರೀ ರಂಗನಾಥ) ಗರ್ಭಗುಡಿಯ ಸಮೀಪದಲ್ಲಿಯೇ ಪ್ರತಿದಿನವೂ ಉಪನ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಕ್ಷಾತ್ ಪೆರಿಯ ಪೆರುಮಾಳ್ ಕೂಡ ಅವರ ಉಪನ್ಯಾಸವನ್ನು ಕೇಳಲು ಎದ್ದು ನಿಂತು ಕಿಟಕಿಯ ಮೂಲಕ ನೋಡುತ್ತಿದ್ದರೆಂದು ವಿವರಿಸಲ್ಪಟ್ಟಿದೆ. ನಂಪಿಳ್ಳೈ ಅವರ ಶಿಷ್ಯರುಗಳೂ ಸಹ ದಿವ್ಯಪ್ರಬಂಧಗಳ ಅರ್ಥಗಳನ್ನು ಪ್ರಸಾರ ಮಾಡುವುದರಲ್ಲಿ ತಮ್ಮ ಅಪಾರ ಕೊಡುಗೆಯನ್ನು ನೀಡಿದರು. ನಂಪಿಳ್ಳೈ ಅವರ ಶಿಷ್ಯರಲ್ಲೊಬ್ಬರಾದ ವ್ಯಾಖ್ಯಾನ ಚಕ್ರವರ್ತಿ ಎಂದು ಹೆಸರಾದ ಪೆರಿಯವಾಚ್ಚಾನ್ ಪಿಳ್ಳೈ ಅವರು ಎಲ್ಲ ದಿವ್ಯಪ್ರಬಂಧಗಳಿಗೂ ವ್ಯಾಖ್ಯಾನಗಳನ್ನು ಬರೆದರು ಮತ್ತು ಅವರ ಕೊಡುಗೆಯನ್ನು ನಮ್ಮ ಆಚಾರ್ಯರುಗಳು ಬಹುವಾಗಿ ಕೊಂಡಾಡಿದ್ದಾರೆ. ನಂಪಿಳ್ಳೈ ಅವರ ಇನ್ನೊಬ್ಬರು ಶಿಷ್ಯರಾದ ವಡಕ್ಕು ತಿರುವೀದಿ ಪಿಳ್ಳೈ ಅವರು ತಿರುವಾಯ್ಮೊಳಿ ಕುರಿತು ನಂಪಿಳ್ಳೈ ಅವರ ಉಪನ್ಯಾಸಗಳನ್ನು ದಾಖಲಿಸಿದ್ದಾರೆ ಮತ್ತು ಈ ಗ್ರಂಥವು ಈಡು ೩೬೦೦೦ ಪಡಿ ಎಂದು ಕರೆಯಲ್ಪಟ್ಟಿದೆ (ತಿರುವಾಯ್ಮೊಳಿ ಕುರಿತು ಅತ್ಯಂತ ಮಾನ್ಯತೆ ಪಡೆದ ವ್ಯಾಖ್ಯಾನ).


ಪಿಳ್ಳೈ ಲೋಕಾಚಾರ್ಯರ್ ಕಾಲಕ್ಷೇಪ ಗೋಷ್ಠಿ

ನಂಪಿಳ್ಳೈ ಅವರ ಕಾಲದ ನಂತರ ಪಿಳ್ಳೈ ಲೋಕಾಚಾರ್ಯರು ಈ ಸತ್ ಸಂಪ್ರದಾಯವನ್ನು ಮುನ್ನಡೆಸಿದರು ಮತ್ತು ದಿವ್ಯಪ್ರಬಂಧಗಳ ಅತ್ಯಂತ ರಹಸ್ಯವಾದ ಎಲ್ಲ ವಿಷಯಗಳನ್ನೂ ತಮ್ಮ ರಹಸ್ಯ ಗ್ರಂಥದಲ್ಲಿ ದಾಖಲಿಸಿದರು. ಈ ರಹಸ್ಯ ವಿಷಯಗಳು ಅನೇಕ ಆಚಾರ್ಯರುಗಳಿಂದ ವಿವಿಧ ಕಾಲಗಳಲ್ಲಿ ವಿವಿಧ ಗ್ರಂಥಗಳಲ್ಲಿ ವಿವರಿಸಲ್ಪಟ್ಟಿವೆ. ಪಿಳ್ಳೈ ಲೋಕಾಚಾರ್ಯರು ಅವುಗಳನ್ನು ಸಂಗ್ರಹಿಸಿದರು ಮತ್ತು ತಮ್ಮ ೧೮ ಪ್ರಾಥಮಿಕ ಕೃತಿಗಳಲ್ಲಿ ಅವುಗಳನ್ನು ದಾಖಲಿಸಿದರು. ಆದರೆ ಅವರ ಜೀವನದ ಅಂತ್ಯಕಾಲದಲ್ಲಿ ಶ್ರೀರಂಗಂನಲ್ಲಿ ಮೊಘಲ್ ಆಕ್ರಮಣಕಾರರ ರೂಪದಲ್ಲಿ ದುರಂತವು ಸಂಭವಿಸಿ ಅಲ್ಲಿಯ ಎಲ್ಲವೂ ನಾಶವಾಯಿತು. ಪಿಳ್ಳೈ ಲೋಕಾಚಾರ್ಯರು ನಂಪೆರುಮಾಳರ (ಶ್ರೀರಂಗನಾಥ – ಉತ್ಸವರ್) ಸುರಕ್ಷಿತ ಪ್ರಯಾಣಕ್ಕೆ ಏರ್ಪಾಡು ಮಾಡಿದರು ಮತ್ತು ನಂಪೆರುಮಾಳರ ಜೊತೆ ಆಕ್ರಮಣಕಾರರಿಂದ ತಪ್ಪಿಸಿಕೊಂಡರು. ಪ್ರಯಾಣದ ಸ್ವಲ್ಪ ದೂರದ್ಲಲಿಯೇ, ಆ ಇಳವಯಸ್ಸಿನಲ್ಲಿ ಕಾಡಿನಲ್ಲಿ ಕಷ್ಟಕರವಾದ ಆ ಪ್ರಯಾಣದಿಂದಾಗಿ ಅವರು ಪರಮಪದವನ್ನು ಸೇರಿದರು. ಇದಾದ ನಂತರ ಇಡೀ ಶ್ರೀವೈಷ್ಣವ ಸಮುದಾಯಕ್ಕೆ ಕಷ್ಟದಾಯಕವಾದ ಒಂದು ದೀರ್ಘ ಕಾಲವು ಬಂದಿತು. ಕೆಲವು ದಶಕಗಳ ನಂತರ, ಆಕ್ರಮಣಕಾರರನ್ನು ಹೊರಗಟ್ಟಿ ಶಾಂತಿಯು ನೆಲೆಸಿದ ಮೇಲೆ, ಪರಿಣಾಮವಾಗಿ ನಂಪೆರುಮಾಳರು ಶ್ರೀರಂಗಕ್ಕೆ ಹಿಂದಿರುಗಿದರು.


ಮಾಮುನಿಗಳ್ ಕಾಲಕ್ಷೇಪ ಗೋಷ್ಠಿ – ಶ್ರೀ ಶೈಲೇಶ ದಯಾಪಾತ್ರಮ್ ತನಿಯನ್ ಸಲ್ಲಿಕೆ

ಅಂತಿಮವಾಗಿ, ಸ್ವತಃ ಶ್ರೀ ರಾಮಾನುಜರ ಅವತಾರವೆಂದು ಪರಿಗಣಿಸಲಾದ, ಮಣವಾಳ ಮಾಮುನಿಗಳು ಆಳ್ವಾರ್ ತಿರುನಗರಿಯಲ್ಲಿ ಜನಿಸಿದರು. ಅವರು ತಿರುವಾಯ್ಮೊಳಿ ಪಿಳ್ಳೈ ಅವರ ಶಿಷ್ಯರಲ್ಲೊಬ್ಬರಾದರು, ಮತ್ತು ವೇದ, ವೇದಾಂತ ಮತ್ತು ದಿವ್ಯಪ್ರಬಂಧಗಳ ಎಲ್ಲಾ ರಹಸ್ಯವಾದ ಅರ್ಥಗಳನ್ನೂ ಸ್ವತಃ ತಮ್ಮ ತಂದೆಯವರಿಂದ ಮತ್ತು ತಿರುವಾಯ್ಮೊಳಿ ಪಿಳ್ಳೈ ಅವರಿಂದ ಕಲಿತರು. ತಿರುವಾಯ್ಮೊಳಿ ಪಿಳ್ಳೈ (ಅವರ ಆಚಾರ್ಯರು) ಅವರ ಆದೇಶದ ಮೇರೆಗೆ, ಅವರು ಶ್ರೀರಂಗಮ್ ತಲುಪಿದರು ಮತ್ತು ತಮ್ಮ ಉಳಿದ ಜೀವನವನ್ನು ಈ ಸತ್ ಸಂಪ್ರದಾಯವನ್ನು ಅದರ ಹಿಂದಿನ ವೈಭವಕ್ಕೆ ಪುನರುಜ್ಜೀವನಗೊಳಿಸಲು ಮುಡಿಪಾಗಿಟ್ಟರು. ಅವರು ವೈಯಕ್ತಿಕವಾಗಿ ಎಲ್ಲಾ ಕಳೆದುಹೋದ ಸಾಹಿತ್ಯವನ್ನು ಶೋಧಿಸಿದರು, ಅಭ್ಯಸಿಸಿದರು, ಬಹು ಕಷ್ಟದಿಂದ ಅವುಗಳನ್ನು ತಾಳೆಗರಿಗಳಲ್ಲಿ ದಾಖಲಿಸಿದರು ಮತ್ತು ಅವುಗಳನ್ನು ಮುಂದಿನ ತಲೆಮಾರುಗಳಿಗಾಗಿ ಸಂರಕ್ಷಿಸಿದರು. ಸೂಕ್ತವಾಗಿ, ಅವರ ಅಸಾಧಾರಣ ಗುಣಗಳನ್ನು ಮತ್ತು ಪ್ರಯತ್ನಗಳನ್ನು ಮೆಚ್ಚಿ, ಸ್ವತಃ ಶ್ರೀ ರಂಗನಾಥನೇ ಒಂದು ಪೂರ್ಣ ವರ್ಷ ಕಾಲ ಮಾಮುನಿಗಳ ಕಾಲಕ್ಷೇಪವನ್ನು ಆಲಿಸುತ್ತಾನೆ ಮತ್ತು ಆ ಉಪನ್ಯಾಸ ಸರಣಿಯ ಅಂತ್ಯದಲ್ಲಿ, ತಾನೇ ಸ್ವತಃ ಒಬ್ಬ ಚಿಕ್ಕ ಬಾಲಕನಾಗಿ ಕಾಣಿಸಿಕೊಳ್ಳುತ್ತಾನೆ ಮತ್ತು ಮಾಮುನಿಗಳನ್ನು ತನ್ನ ಆಚಾರ್ಯರನ್ನಾಗಿ ಸ್ವೀಕರಿಸುತ್ತಾನೆ ಮತ್ತು ತನ್ನ ಅತ್ಯಂತ ಅದ್ಭುತವಾದ ಶ್ರೀಶೈಲೇಶ ದಯಾಪಾತ್ರಂ ತನಿಯನ್ ಅನ್ನು ಸಲ್ಲಿಸುತ್ತಾನೆ. ತರುವಾಯ, ವಿವಿಧ ಪರಂಪರೆಗಳಲ್ಲಿ ಬಂದ ಅನೇಕ ಆಚಾರ್ಯರುಗಳು ಈ ದಿವ್ಯಪ್ರಬಂಧಗಳನ್ನು ಬೋಧಿಸಿದರು ಮತ್ತು ಅದರಂತೆ ಜೀವಿಸಿದರು.

ಹೀಗೆ, ಭಗವಂತನ ಅಪೇಕ್ಷೆಯನ್ನು ಪೂರೈಸುವುದಕ್ಕಾಗಿ ಜೀವಾತ್ಮರುಗಳ ಉದ್ಧಾರದ ಮೇಲೆ ಗಮನವಿರಿಸಿದ ಆಳ್ವಾರುಗಳ ದಿವ್ಯಪ್ರಬಂಧಗಳು ನಮ್ಮ ಪೂರ್ವಾಚಾರ್ಯರುಗಳ ಮೂಲಕ ಇತಿಹಾಸದಲ್ಲಿ ಸಂರಕ್ಷಿಸಲ್ಪಟ್ಟಿವೆ. ಎಲ್ಲಾ ಶ್ರೀವೈಷ್ಣವರು ದಿವ್ಯಪ್ರಬಂಧಗಳನ್ನು ಕಲಿತು, ಅವುಗಳ ಸರಿಯಾದ ಅರ್ಥಗಳನ್ನು ತಿಳಿದುಕೊಂಡು, ಅದರಂತೆ ಬಾಳಬೇಕೆಂದು ಒತ್ತಿ ಹೇಳಲಾಗಿದೆ.

ಆಳ್ವಾರುಗಳು ಮತ್ತು ಅವರ ದಿವ್ಯಪ್ರಬಂಧಗಳ ಸಿಂಧುತ್ವ ಮತ್ತು ವೈಭವಗಳನ್ನು ತಿಳಿದುಕೊಳ್ಳುವುದು ಬಹು ಉಪಯುಕ್ತವಾಗಿದೆ. ಇದನ್ನು ವಿವರವಾಗಿ ತಿಳಿಸುವ ಈ ಕೆಳಗಿನ ಲೇಖನಗಳನ್ನು ಓದಿರಿ:

 

ಭಾಗ ೧ – https://granthams.koyil.org/2013/02/dhivya-prabhandha-pramanya-samarthanam-1/
ಭಾಗ ೨ – https://granthams.koyil.org/2013/02/dhivya-prabhandha-pramanya-samarthanam-2/

ಅನೇಕ ಭಾಷೆಗಳಲ್ಲಿ ವಿವಿಧ ಪ್ರಬಂಧಗಳ ಅನುವಾದಕ್ಕಾಗಿ ನಮ್ಮ ದಿವ್ಯಪ್ರಬಂಧಮ್ ಜಾಲ ಮುಖಪುಟವನ್ನು ಇಲ್ಲಿ ಸಂದರ್ಶಿಸಿ:
https://divyaprabandham.koyil.org/

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: https://granthams.koyil.org/2015/12/simple-guide-to-srivaishnavam-dhivya-prabandham-dhesam/

ರಕ್ಷಿತ ಮಾಹಿತಿ:  https://granthams.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

 

1 thought on “ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು”

Leave a Comment