ತತ್ತ್ವ ತ್ರಯಮ್ – ಅಚಿತ್ – ನಿರ್ಜೀವ ವಸ್ತುಗಳೆಂದರೆ ಏನು?

ಶ್ರೀಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ ವರವರ ಮುನಯೇ ನಮಃ  ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಶೀರ್ಷಿಕೆ

  • ಇದಕ್ಕೂ ಹಿಂದಿನ ಶೀರ್ಷಿಕೆಯಲ್ಲಿ , ನಾವು ಚಿತ್‍ ತತ್ತ್ವದ ಸ್ವಭಾವವನ್ನು ಅರಿತೆವು.
  • ಈಗ ನಾವು ನಮ್ಮ ಪ್ರಯಾಣವನ್ನು ಮುಂದುವರೆಸುತ್ತಾ ಮೂರೂ ವಿಭಾಗವನ್ನು ( ಚಿತ್, ಅಚಿತ್, ಈಶ್ವರನ್) ದಿವ್ಯ ಗ್ರಂಥವಾದ ಪಿಳ್ಳೈ ಲೋಕಾಚಾರ್‍ಯರ “ತತ್ತ್ವ ತ್ರಯ”ದ ಮೂಲಕ ಮತ್ತು ಮಣವಾಳ ಮಾಮುನಿಗಳ ಸುಂದರವಾದ ವ್ಯಾಖ್ಯಾನದ ಸಹಾಯದಿಂದ ಅರಿತುಕೊಳ್ಳುತ್ತೇವೆ.

ಅಚಿತ್ (ವಸ್ತು) ತತ್ತ್ವವನ್ನು ಬುದ್ಧಿವಂತರ ಬೋಧನೆಯಿಂದ ತಿಳಿದುಕೊಳ್ಳುವುದು

ಪರಿಚಯ:

  • ಅಚಿತ್ (ನಿರ್ಜೀವಿ) ಗಳಿಗೆ ಜ್ಞಾನವಿರುವುದಿಲ್ಲ ಮತ್ತು ಅವುಗಳನ್ನು ಸುಲಭವಾಗಿ ಬದಲಾಯಿಸಲು/ ಪರಿವರ್ತಿಸಲು ಸಾಧ್ಯ.
  • ಅಚಿತ್ ವಸ್ತುಗಳಿಗೆ ಜ್ಞಾನವಿಲ್ಲದಿರುವುದರಿಂದ ಅವುಗಳ ಅಸ್ತಿತ್ವವು ಬೇರೆಯವರಿಗೆ ಸಂತೋಷ ಕೊಡಲು ಮಾತ್ರ.
  • ತಮ್ಮ ಸ್ವರೂಪವನ್ನು ಬದಲಾಯಿಸದ ಚಿತ್‍ಗಳ (ಚೇತನ – ಆತ್ಮಗಳಂತೆ)  ಹಾಗೆ ಇರದೆ – ಅಚಿತ್‍ಗಳು ಬದಲಾವಣೆಯನ್ನು ಹೊಂದುತ್ತವೆ.
  • ಮೂರು ವಿಧದ ಅಚಿತ್‍ಗಳಿವೆ, ಅವುಗಳು
    • ಶುದ್ಧ ಸತ್ವಮ್ – ಬರಿಯ ಒಳ್ಳೆಯತನವನ್ನು ಮಾತ್ರ ಹೊಂದಿದ್ದು, ರಜಸ್(ಕಾಮ) ಮತ್ತು ತಮಸ್(ಅಜ್ಞಾನ) ಸ್ವಲ್ಪವೂ ಇರುವುದಿಲ್ಲ.
    • ಮಿಶ್ರ ಸತ್ವಮ್ – ಇದು ಸತ್ವಮ್ (ಒಳ್ಳೆಯತನ), ರಜಸ್ (ಕಾಮ) ಮತ್ತು ತಮಸ್ (ಅಜ್ಞಾನ) ನ ಮಿಶ್ರಣವಾಗಿರುತ್ತದೆ.
    • ಸತ್ವ ಶೂನ್ಯಮ್ – ಕಾಲದ (ಸಮಯದ) ತತ್ವ – ಇದರಲ್ಲಿ ಎಲ್ಲಾ ಗುಣಗಳೂ ಶೂನ್ಯವಾಗಿರುತ್ತದೆ. (ಸತ್ವಮ್, ರಜಸ್ ಮತ್ತು ತಮಸ್ ಗುಣಗಳು).

ಶುದ್ಧ ಸತ್ವಮ್ (ಶುದ್ಧವಾದ ಒಳ್ಳೆಯಗುಣ) :

ಶ್ರೀಮನ್ನಾರಾಯಣರು ವಾಸಿಸುವ ಪರಮಪದದಲ್ಲಿ ಶುದ್ಧಸತ್ವದಿಂದ ಮಾಡಲಾದ ಮಂಟಪ, ಉದ್ಯಾನವನ ಇತ್ಯಾದಿ

ಪರಮಪದಮ್ – ಶ್ರೀಮನ್ನಾರಾಯಣರ ಆಧ್ಯಾತ್ಮಿಕ ವಾಸಸ್ಥಾನ , ಅದು ಮಂಟಪಗಳಿಂದ, ತೋಟಗಳಿಂದ ಕೂಡಿರುತ್ತದೆ. ಅವುಗಳೆಲ್ಲವೂ ಶುದ್ಧವಾದ ದಿವ್ಯ ಪದಾರ್ಥಗಳಿಂದ ಸಂಪನ್ನವಾಗಿರುತ್ತದೆ.

  • ಇದು ಪರಿಪೂರ್ಣ ಶುದ್ಧವಾದ ಮತ್ತು ರಜಸ್ , ತಮಸ್‍ಗಳಿಂದ ಪೂರ್ಣವಾಗಿ ಮುಕ್ತವಾದುದು. ಇವುಗಳು ಮುಖ್ಯವಾಗಿ ಪರಮಪದದಲ್ಲಿರುವ ಎಲ್ಲಾ ಅಚಿತ್‍ಗಳ (ಅಚೇತನಗಳ) ಮೇಲೆ ಕೇಂದ್ರೀಕೃತವಾಗಿರುತ್ತದೆ.
  • ಸ್ವಭಾವದಲ್ಲಿ ಇವು
    • ಶಾಶ್ವತವಾದುದು
    • ಇವು ಜ್ಞಾನದ ಮತ್ತು ಆನಂದದ ಮೂಲ
    • ವಿಮಾನಮ್ / ಗೋಪುರಮ್, ಮಂಡಪಮ್ ಮುಂತಾದುವುಗಳಿಂದ ನಿರ್ಮಾಣವಾಗಿದ್ದು, ಇವು ಭಗವಂತನ ದಿವ್ಯ ಆಸೆಯಿಂದ ಸ್ಥಾಪನೆಗೊಂಡಿರುತ್ತದೆ. ಆದರೆ ಇವುಗಳು ಜೀವಾತ್ಮದ ಆಸೆಯಿಂದ ಅವನ ಕರ್ಮಾನುಸಾರವಾಗಿ ಸೃಷ್ಟಿಸಲ್ಪಡುವುದಿಲ್ಲ.
    • ಇದು ಅಪರಿಮಿತವಾಗಿ ಹೊಳೆಯುವ ರೂಪವನ್ನು ಹೊಂದಿರುತ್ತದೆ.
    • ಇದು ಎಣಿಸಲಾರದ ಮತ್ತು ಒಂದು ಭಾಷೆಯಲ್ಲಿ ವರ್ಣಿಸಲಾರದ್ದು, ನಿತ್ಯಸೂರಿಗಳಿಂದ (ಸಂಸಾರದಿಂದ ಶಾಶ್ವತವಾಗಿ ಎಂದೆಂದಿಗೂ ಮುಕ್ತರಾದವರು) , ಮುಕ್ತರಿಂದ (ಸಂಸಾರದಿಂದ ವಿಮುಕ್ತಿ ಪಡೆದವರು) ,ಮತ್ತು ಭಗವಂತನಿಂದಲೇ ಸಹ ವರ್ಣಿಸಲಾಗದ್ದು. ಮಾಮುನಿಗಳ್ ಒಂದು ಸಂದೇಹವನ್ನು ಇಡುತ್ತಾರೆ ಮತ್ತು ಆ ಸಂದೇಹಕ್ಕೆ ತಾವೇ ಸಮಾಧಾನವನ್ನೂ ನೀಡುತ್ತಾರೆ. ಭಗವಂತನಿಗೇ ಇದನ್ನು ಪೂರ್ತಿಯಾಗಿ ಎಣಿಸಲು ಅಥವಾ ವರ್ಣಿಸಲು ಸಾಧ್ಯವಿಲ್ಲವೆಂದರೆ, ಅದು ಅವನ ಸರ್ವಜ್ಞತ್ವಮ್‍ಗೆ (ಎಲ್ಲವನ್ನೂ ಬಲ್ಲವನು ಎಂಬ ತತ್ತ್ವ) ಭಂಗವಾಗುವುದಿಲ್ಲವೇ? ಮಾಮುನಿಗಳ್ ಬಹು ಸುಂದರವಾಗಿ ಇಲ್ಲಿ ವಿವರಿಸಿದ್ದಾರೆ, ಎಲ್ಲವನ್ನೂ ಬಲ್ಲವನು ಎಂದರೆ ಎಲ್ಲದರ ಸಹಜ ನಿಜ ಗುಣವನ್ನು ಬಲ್ಲವನು ಎಂದು ಅರ್ಥ. – ಆದ್ದರಿಂದ ಭಗವಂತನು ಶುದ್ಧ ಸತ್ವಮ್ ಎಂಬುದು ಅಪರಿಮಿತವಾಗಿದೆ ಎಂದು ತಿಳಿದವನು ಅದೇ ಅದರ ನಿಜವಾದ ಸ್ವರೂಪ ಮತ್ತು ಅವನದೇ ನಿಜವಾದ ಸರ್ವಜ್ಞತ್ವ.
    • ಅದು  ಅವರ್ಣನೀಯವಾಗಿ  ಅದ್ಭುತವಾಗಿದೆ.
  • ಕೆಲವರು ಹೇಳುತ್ತಾರೆ, ಅದು ಸ್ವ-ಪ್ರಕಾಶಿತವಾಗಿದೆ ಎಂದು, ಮತ್ತೆ ಕೆಲವರು ಹೇಳುತ್ತಾರೆ, ಅದು ಪ್ರಕಾಶಿತವಾಗಿಲ್ಲವೆಂದು. ಇಲ್ಲಿ ಎರಡು ವಿಧದ ಅಭಿಪ್ರಾಯಗಳಿವೆ.
  • ಆದರೆ ಸ್ವ-ಪ್ರಕಾಶಿತವಾಗಿದೆ ಎಂಬುದು ಹೆಚ್ಚು ಸಮಂಜಸವಾಗಿದೆ. ಈ ಪ್ರಕರಣದಲ್ಲಿ, ಅದು ನಿತ್ಯಸೂರಿಗಳಿಗೆ, ಮುಕ್ತರಿಗೆ ಮತ್ತು ಭಗವಂತನಿಗೆ ತನ್ನನ್ನು ತಾನು ಪ್ರದರ್ಶಿಸುತ್ತದೆ. ಆದರೆ ಸಂಸಾರಿಗಳು ಅದನ್ನು ನೋಡಲು ಸಾಧ್ಯವಿಲ್ಲ.
  • ಅದು ಆತ್ಮದಿಂದ ಬೇರೆಯಾಗಿರುವುದು. ಏಕೆಂದರೆ,
    • ಅದು ಬೇರೆ ಬೇರೆ ರೂಪಗಳನ್ನು ಹೊಂದುವುದು, (ಜ್ಞಾನವು ಒಂದೇ ರೂಪವನ್ನು ಹೊಂದುವುದಿಲ್ಲ) ಬೇರೆಯವರ ಸಹಾಯವಿಲ್ಲದೇ.
    • ಜ್ಞಾನದಿಂದ ಬೇರೆಯಾಗಿರುವುದು, ಜ್ಞಾನವು ತನ್ಮಾತ್ರಾಗಳನ್ನು (ಇಂದ್ರಿಯಗಳ ವಸ್ತುಗಳಾದ ಶಬ್ದ, ಸ್ಪರ್ಷ, ರೂಪ, ರುಚಿ, ಮತ್ತು ವಾಸನೆ) ಗ್ರಹಿಸುವಂತೆ ಇದು ಗ್ರಹಿಸುವುದಿಲ್ಲ. ಇದು ಅತಿಸೂಕ್ಷ್ಮ ಅಣುಗಳ ಆಶ್ರಯವಾಗಿದೆ.

ಮಿಶ್ರ ಸತ್ವಮ್ (ಅಶುದ್ಧವಾಗಿರುವ ಒಳ್ಳೆಯತನ)

  • ಸ್ವರೂಪದಿಂದ, ಇದು
    • ಸತ್ವಮ್, ರಜಸ್ ಮತ್ತು ತಮಸ್ಸಿನ ಮಿಶ್ರಣವಾಗಿದೆ.
    • ಜೀವಾತ್ಮವು ಪೂರ್ತಿಯಾದ ಆನಂದ ಮತ್ತು ಜ್ಞಾನವನ್ನು ಪಡೆಯಲು ತಡೆಯುವ ಪರದೆಯಾಗಿದೆ.
    • ಶಾಶ್ವತವಾದುದು.
    • ಈಶ್ವರನಿಗೆ ಒಂದು ವಿರಾಮಕಾಲದ ಸಾಧನವಾಗಿದೆ.
    • ಒಂದೊಂದು ಸಲ ಒಂದಕ್ಕೊಂದು ಸರಿಸಮಾನವಾಗಿ ಮತ್ತೊಂದು ಸಲ ಒಂದಕ್ಕಿಂತ ಒಂದು ವ್ಯತ್ಯಾಸವಾಗಿದೆ. ಅದು ಆ ಸ್ಥಿತಿಯನ್ನು ಅವಲಂಬಿಸಿರುತ್ತದೆ. (ಅವ್ಯಕ್ತ – ಸ್ಪಷ್ಟವಾಗಿಲ್ಲದ ಸ್ಥಿತಿ -ಎದುರಾಗಿ- ವ್ಯಕ್ತ – ಸ್ಪಷ್ಟವಾದ ಸ್ಥಿತಿ) ಮತ್ತು ಸಮಯವನ್ನು ಅವಲಂಬಿಸಿರುತ್ತದೆ. (ಸೃಷ್ಟಿ – ರಚನೆಯ ಕಾಲ ಮತ್ತು ಸಂಹಾರಮ್ – ವಿನಾಶದ ಕಾಲ)
    • ಅದು ಜನಪ್ರಿಯವಾಗಿ ಈ ರೀತಿ ಕರೆಯಲ್ಪಡುತ್ತದೆ.
      • ಪ್ರಕೃತಿ – ಎಲ್ಲ ಪರಿವರ್ತನೆಗೆ ಮೂಲವಾಗಿರುವುದರಿಂದ
      • ಅವಿದ್ಯ – ನಿಜವಾದ ಜ್ಞಾನಕ್ಕೆ ವಿರುದ್ಧವಾಗಿರುವುದರಿಂದ
      • ಮಾಯಾ – ಅದರ ಪ್ರತಿಫಲವು ಅದ್ಭುತವಾಗಿ ಮತ್ತು ವಿವಿಧ ವೈವಿಧ್ಯತೆಗಳು ಇರುವುದರಿಂದ
  • ನಮ್ಮಾಳ್ವಾರರು ತಿರುವಾಯ್ಮೊೞಿ – 10.7.10 ರ ಮೂಲಕ  24 ಮೂಲಭೂತ ವಸ್ತುಗಳನ್ನು ಗುರುತಿಸಿದ್ದಾರೆ.
    • ಪಂಚ ತನ್ಮಾತ್ರಗಳು – 5 ಇಂದ್ರಿಯಗಳ ವಸ್ತುಗಳು – ಶಬ್ದ , ಸ್ಪರ್ಷ, ರೂಪ, ರಸ, ಗಂಧ
    • ಪಂಚ ಜ್ಞಾನೇಂದ್ರಿಯಗಳು – 5 ಜ್ಞಾನದ ಇಂದ್ರಿಯಗಳು – ಶ್ರೋತ್ರ (ಕಿವಿಗಳು), ತ್ವಕ್ (ಚರ್ಮ) , ಚಕ್ಷುರ್ (ಕಣ್ಣುಗಳು), ಜಿಹ್ವಾ (ನಾಲಿಗೆ), ಗ್ರಾಹ್ಣ (ಮೂಗು).
    • ಪಂಚ ಕರ್ಮೇಂದ್ರಿಯಗಳು – 5 ಕ್ರಿಯೆಯನ್ನು ಮಾಡುವ ಅಂಗಗಳು – ವಾಕ್ (ಬಾಯಿ), ಪಾಣಿ (ಕೈಗಳು), ಪಾದ (ಕಾಲುಗಳು), ಪಾಯು (ವಿಸರ್ಜನ ಅಂಗಗಳು), ಉಪಸ್ತ (ಜನನೇಂದ್ರಿಯಗಳು).
    • ಪಂಚ ಭೂತಗಳು – 5 ಶ್ರೇಷ್ಠ ಮೂಲಭೂತ ಅಂಶಗಳು -ಆಕಾಶ, ವಾಯು (ಗಾಳಿ), ಅಗ್ನಿ (ಬೆಂಕಿ), ಆಪ/ಜಲ (ನೀರು), ಪೃಥ್ವಿ (ಭೂಮಿ).
    • ಮನಸ್ – ಮನಸ್ಸು
    • ಅಹಂಕಾರಮ್ – ಗರ್ವ
    • ಮಹಾನ್ – ಸ್ಪಷ್ಟೀಕೃತವಾದ ವಸ್ತುಗಳು
    • ಮೂಲ ಪ್ರಕೃತಿ – ಅಸ್ಪಷ್ಟೀಕೃತವಾದ ವಸ್ತುಗಳು
  • ಇವೆಲ್ಲದರಲ್ಲೂ, ಮೂಲ ಪ್ರಕೃತಿಯು ಮೂಲಭೂತ ವಸ್ತುವಾಗಿರುತ್ತದೆ. ಅದು ತನ್ನನ್ನು ತಾನೇ ವೈವಿಧ್ಯಮಯವಾಗಿ ಗುಣಗಳ ಮಿಶ್ರಣವಾಗಿ ರೂಪಿಸಿಕೊಳ್ಳುತ್ತದೆ.
  • ಗುಣಗಳು 3 ವಿಧವಾದುವುಗಳು – ಸತ್ವಮ್ (ಒಳ್ಳೆಯತನ), ರಜಸ್ (ಕಾಮ) ಮತ್ತು ತಮಸ್ (ಅಜ್ಞಾನ)
  • ಸತ್ವಮ್ ಸಂತೋಷ ಮತ್ತು ಆನಂದಕ್ಕೆ ಮೂಲವಾಗಿರುತ್ತದೆ.
  • ರಜಸ್ ವಸ್ತುಗಳೊಂದಿಗಿನ ಲಗತ್ತಿಗೆ ಮತ್ತು ತೃಷೆಗೆ ಮೂಲವಾಗಿರುತ್ತದೆ.
  • ತಮಸ್ ಅಡ್ಡರೀತಿಯ ಜ್ಞಾನಕ್ಕೆ, ಮರೆಯುವಿಕೆಗೆ, ಸೋಮಾರಿತನ ಮತ್ತು ಅತೀವ ನಿದ್ರೆಗೆ ಕಾರಣವಾಗುತ್ತದೆ.
  • ಈ ಮೂರೂ ಗುಣಗಳು ಸಮಾನವಾಗಿ ಹಂಚಿಕೆಯಾಗಿದ್ದರೆ, ಅಸ್ಪಷ್ಟವಾದ ವಸ್ತುವು ರೂಪಗೊಳ್ಳುತ್ತದೆ.
  • ಈ ಮೂರೂ ಗುಣಗಳು ಅಸಮಾನವಾಗಿ ಹಂಚಿಕೆಯಾಗಿದ್ದರೆ, ಸ್ಪಷ್ಟವಾದ ವಸ್ತುವು ರೂಪಗೊಳ್ಳುತ್ತದೆ.
  • ಮಹಾನ್ ಎಂಬುದು ಮೊದಲ ಸ್ಪಷ್ಟವಾದ ವಸ್ತುವಿನ ಸ್ಥಿತಿ.
  • ಅಹಂಕಾರಮ್ ಎಂಬುದು ಮಹಾನ್ ನ ಇರುವಿಕೆಯಿಂದ ಬರುವುದು.
  • ಈ ರೀತಿಯಲ್ಲಿ ಇನ್ನಿತರ ಅಂಶಗಳು (ತನ್ಮಾತ್ರಾಗಳು, ಜ್ಞಾನ ಇಂದ್ರಿಯಗಳು, ಕರ್ಮ ಇಂದ್ರಿಯಗಳು ಮುಂತಾದುವುಗಳು) ಮಹಾನ್ ಮತ್ತು ಅಹಂಕಾರದಿಂದ ಸ್ಪಷ್ಟವಾಗುತ್ತದೆ (ಸೃಷ್ಟಿಯಾಗುತ್ತದೆ) .
  • ಪಂಚ ತನ್ಮಾತ್ರಗಳು (ಇಂದ್ರಿಯಗಳ ವಸ್ತುಗಳು) ಪಂಚ ಭೂತಗಳ (ದೊಡ್ಡ ಅಂಶಗಳ) ಸೂಕ್ಷ್ಮ ಸ್ಥಿತಿ.
  • ಭಗವಂತನು ಸ್ಪಷ್ಟವಾದ ಬ್ರಹ್ಮಾಂಡವನ್ನು ಈ ವಸ್ತುಗಳ ವಿವಿಧ ಮಿಶ್ರಣದಿಂದ ಸೃಷ್ಟಿಸುತ್ತಾನೆ.
  • ಭಗವಂತನು ಬ್ರಹ್ಮಾಂಡವನ್ನು (ಪರಿಣಾಮ) ಮತ್ತು ಅದರ ಕಾರಣವನ್ನು ಸೃಷ್ಟಿಸುತ್ತಾನೆ. ಅಂದರೆ ಅಸ್ಪಷ್ಟವಾದ ಮೂಲ ಪ್ರಕೃತಿಯಿಂದ, ಸ್ಪಷ್ಟವಾದ ಮೂಲಾಂಶಗಳನ್ನು ಸಂಕಲ್ಪದಿಂದಲೇ (ಪ್ರಯತ್ನವಿಲ್ಲದೇ) ಸೃಷ್ಟಿಸುತ್ತಾನೆ.
  • ಎಲ್ಲಾ ಬ್ರಹ್ಮಾಂಡದ ಮೂಲಾಂಶಗಳೂ ಬೇರೆ ಜೈವಿಕ (ಚೇತನ)ಗಳಿಂದ ಅವು ಬ್ರಹ್ಮ, ಪ್ರಜಾಪತಿ ಮುಂತಾದವರ ಮೂಲಕ ಭಗವಂತನು ಸೃಷ್ಟಿಸುತ್ತಾನೆ.(ಅವರನ್ನು ಅಂತರ್ಯಾಮಿಯಾಗಿ ಮಾರ್ಗದರ್ಶಿಸಿ , – ಇರುವಿಕೆಯಲ್ಲೇ ಮಹಾ ಆತ್ಮವಾಗಿ – ಶ್ರೇಷ್ಠ ಆತ್ಮವಾಗಿ)
  • ಅನೇಕ ಬ್ರಹ್ಮಾಂಡಗಳು ಸೃಷ್ಟಿಯಲ್ಲಿವೆ.
  • ಭಗವಂತನು ತನ್ನ ಸಂಕಲ್ಪದಿಂದ ಮಾತ್ರವೇ ಎಲ್ಲವನ್ನೂ ಒಟ್ಟಿಗೇ, ಪ್ರಯತ್ನವಿಲ್ಲದೇ ಸೃಷ್ಟಿಸುತ್ತಾನೆ.
  • ಪ್ರತಿಯೊಂದು ಬ್ರಹ್ಮಾಂಡವು 14 ಪದರಗಳನ್ನೊಳಗೊಂಡಿದೆ. ಮಾಮುನಿಗಳ್ ಇದನ್ನು ಅತ್ಯಂತ ವಿವರವಾಗಿ, ಬ್ರಹ್ಮಾಂಡದ ರಚನೆಯನ್ನು ಅನೇಕ ಪ್ರಮಾಣಗಳ ಆಧಾರದ ಮೇಲೆ ವಿವರಿಸಿದ್ದಾರೆ.
ಲೀಲಾ ವಿಭೂತಿಯ ರಚನೆ (ಲೌಕಿಕ ಜಗತ್ತಿನ ವಿನ್ಯಾಸ)
  • 7 ಕೆಳಗಿನ ಪದರಗಳು
    • ಮೇಲಿನಿಂದ ಈ ರೀತಿ ಇವೆ : – ಅತಲಮ್, ವಿತಲಮ್, ನಿತಲಮ್, ಕಪಸ್ಥಿಮಠ್ (ತಲಾತಲಮ್), ಮಹಾತಲಮ್, ಸುತಲಮ್, ಮತ್ತು ಪಾತಾಲಮ್. ಈ ಪದರಗಳಲ್ಲಿ ರಾಕ್ಷಸರು, ಹಾವುಗಳು, ಇತರ ಹಕ್ಕಿಗಳು ವಾಸಿಸುತ್ತವೆ.
    • ಇಲ್ಲಿ ಅನೇಕ ಸುಂದರವಾದ ಕಂಭಗಳು, ಅರಮನೆಗಳು, ಮುಂತಾದುವುಗಳು ಸ್ವರ್ಗ ಲೋಕಕ್ಕಿಂತಲೂ ಅದ್ಭುತವಾಗಿ ನಿರ್ಮಾಣವಾಗಿವೆ.
  • 7 ಮೇಲಿನ ಪದರಗಳು
    • ಭೂ ಲೊಕಮ್ – ಇಲ್ಲಿ ಮಾನವರು, ಪ್ರಾಣಿಗಳು, ಪಕ್ಷಿಗಳು ಮುಂತಾದುವುಗಳು ಜೀವಿಸುತ್ತವೆ. ಇದನ್ನು 7 ದೊಡ್ಡ ದ್ವೀಪಗಳನ್ನಾಗಿ ವಿಂಗಡಿಸಿದ್ದಾರೆ. ನಾವು ಈಗ ಜಂಬೂದ್ವೀಪದಲ್ಲಿದ್ದೇವೆ.
    • ಭುವರ್ ಲೋಕಮ್ – ಗಂಧರ್ವರು (ದೇವ ಹಾಡುಗರು) ಇಲ್ಲಿ ವಾಸಿಸುತ್ತಾರೆ.
    • ಸ್ವರ್ಗ ಲೋಕಮ್ – ಇಂದ್ರ (ಈ ಪದವಿಯಲ್ಲಿ ಭೂಲೋಕಮ್, ಭುವರ್ ಲೋಕಮ್ ಮತ್ತು ಸ್ವರ್ಗ ಲೋಕದ ಎಲ್ಲಾ ಚಟುವಟಿಕೆಗಳನ್ನು ಆಡಳಿತ ಮಾಡುವುದು.) ಮತ್ತು ಅವನ ಸಿಬ್ಬಂದಿವರ್ಗದವರು ವಾಸಿಸುತ್ತಾರೆ.
    • ಮಹರ್ ಲೋಕಮ್ – ಇಲ್ಲಿ ನಿವೃತ್ತಿಯಾದ ಇಂದ್ರನು ಮತ್ತು ಇತರರು ಇಂದ್ರನಾಗಲು ಬಯಸುವವರು ವಾಸಿಸುತ್ತಾರೆ.
    • ಜನರ್ ಲೋಕಮ್ – ಇಲ್ಲಿ ಮಹಾ ಋಷಿಗಳು – ಅವರು ಬ್ರಹ್ಮನ 4 ಮಕ್ಕಳಾದ ಸನಕ, ಸನಕಾಧಿಕ, ಸನಾತನ ಮತ್ತು ಸನಂಧನ ಮುಂತಾದವರು ವಾಸಿಸುತ್ತಾರೆ.
    • ತಪ ಲೋಕಮ್ – ಪ್ರಜಾಪತಿಗಳು (ಮೂಲಪುರುಷರು) ವಾಸಿಸುತ್ತಾರೆ.
  • ಸತ್ಯ ಲೋಕಮ್ – ಇಲ್ಲಿ ಬ್ರಹ್ಮ, ವಿಷ್ಣು, ಶಿವ ಮತ್ತು ಅವರ ಭಕ್ತರು ಅವರವರ ಲೋಕದಲ್ಲಿ ವಾಸಿಸುತ್ತಾರೆ. ಒಂದೊಂದು ಲೋಕವು 14 ಪದರಗಳನ್ನು ಹೊಂದಿದ್ದು, 7 ಪದರಗಳ ರಕ್ಷಣೆಯಿಂದ ಸುತ್ತುವರಿಯಲ್ಪಟ್ಟಿರುತ್ತದೆ, – ನೀರು, ಬೆಂಕಿ, ವಾಯು, ಆಕಾಶ, ಅಹಂಕಾರಮ್, ಮಹಾನ್ ಮತ್ತು ಕೊನೆಯಲ್ಲಿ ಮೂಲ ಪ್ರಕೃತಿ.
  • ಜ್ಞಾನೇಂದ್ರಿಯಗಳು ಸೂಕ್ಷ್ಮ ಮತ್ತು ಒಟ್ಟು ಮೊತ್ತದ ಅಂಶಗಳಿಂದ ಜ್ಞಾನವನ್ನು ಪಡೆಯುತ್ತವೆ. ಕರ್ಮೇಂದ್ರಿಯಗಳು ವಿವಿಧ ಭೌತಿಕ ಕ್ರಿಯೆಗಳನ್ನು ಮಾಡಲು ಉಪಯೋಗಿಸಲ್ಪಡುತ್ತದೆ. ಮನಸ್ಸು ಎಲ್ಲದಕ್ಕೂ ಸಾಮಾನ್ಯವಾಗಿದ್ದುಕೊಂಡು ಎಲ್ಲಾ ರೀತಿಯ ಕೆಲಸಗಳಿಗೂ ಸಹಾಯ ಮಾಡುತ್ತದೆ.
  • ಪಂಚೀಕರಣಮ್ ಒಂದು ಕ್ರಿಯೆ, ಇದರಲ್ಲಿ ಭಗವಂತನು ವಿವಿಧ ಅಂಶಗಳನ್ನು ಮಿಶ್ರಣಗೊಳಿಸಿ ಬ್ರಹ್ಮಾಂಡವನ್ನು ಈಗ ನಾವು ನೋಡುವ ರೀತಿಯಲ್ಲಿ ಸೃಷ್ಟೀಕರಿಸುತ್ತಾನೆ.

ಸತ್ವ ಶೂನ್ಯಮ್ – ಕಾಲಮ್ (ಸಮಯ)

  • ಸ್ವಭಾವದಿಂದ , ಕಾಲವು
    • ವಸ್ತುಗಳ ಪರಿವರ್ತನೆಗೆ ವೇಗವರ್ಧಕವಾಗಿ ಕೆಲಸ ಮಾಡುತ್ತದೆ. (ಅಸ್ಪಷ್ಟವಾದ ಸ್ಥಿತಿಯಿಂದ ಸ್ಪಷ್ಟವಾದ ಸ್ಥಿತಿಗೆ ಮತ್ತೂ ಮುಂದುವರೆದು ನಂತರದ ಹಂತಗಳಲ್ಲೂ ಸಹ).
    • ಅನೇಕ ಅಳತೆಗೆ ತಕ್ಕಂತೆ ತನ್ನನ್ನು ತಾನು ಅಳವಡಿಸಿ ಕೊಳ್ಳುತ್ತದೆ. (ಉದಾಹರಣೆಗೆ ದಿನ, ವಾರ, ಮಾಸ ಮುಂತಾದುವುಗಳು )
    • ಅದು ಶಾಶ್ವತವಾದುದು. – ಅಂದರೆ ಸಮಯಕ್ಕೆ ಆದಿ ಮತ್ತು ಅಂತ್ಯವಿಲ್ಲ.
    • ಈಶ್ವರನ ಕಾಲಕ್ಷೇಪಕ್ಕೆ ಸಹಾಯ ಮಾಡುವುದು.
    • ಇದು ಎಂಪೆರುಮಾನರ ರೂಪವೂ (ತಿರುಮೇನಿಯೂ) ಸಹ ಆಗಿದೆ.
  • ನಡುವಿಲ್ ತಿರುವೇದಿ ಪಿಳ್ಳೈ ಭಟ್ಟರ್ ರವರು ವಿವರಿಸಿದ ಸಮಯದ ಅನೇಕ ಭಾಗಗಳನ್ನು ಮಾಮುನಿಗಳು ಇಲ್ಲಿ ಹೇಳಿದ್ದಾರೆ.
    • ನಿಮೇಷಮ್ (ಈ ಕ್ಷಣ, ಕಣ್ಣಿನ ಒಂದು ಮಿಟುಕು – ಒಂದು ಕ್ಷಣಕ್ಕೆ ಸಮನಾದುದು) ಇದು ಸಮಯದ ಅತ್ಯಂತ ಕಡಿಮೆಯ ಅಳತೆಯಾಗಿದೆ.
    • 15 ನಿಮೇಷಮ್ = 1 ಕಾಷ್ಟ
    • 30 ಕಾಷ್ಟ = 1 ಕಲೈ
    • 30 ಕಲೈಗಳು = 1 ಮುಹೂರ್ತಮ್
    • 30 ಮುಹೂರ್ತಮ್ = 1 ದಿವಸಮ್ (ಒಂದು ದಿನ)
    • 30 ದಿವಸಮ್ = 2 ಪಕ್ಷಗಳು (2 – 15 ದಿನಗಳು) = 1 ಮಾಸ (ತಿಂಗಳು)
    • 2 ಮಾಸಮ್ = 1 ಋತು
    • 3 ಋತು = 1 ಅಯನಮ್ (6 ತಿಂಗಳು – ಉತ್ತರಾಯಣಮ್ ಮತ್ತು ದಕ್ಷಿಣಾಯಣಮ್)
    • 2 ಅಯನಮ್ = 1 ಸಂವತ್ಸರ (ವರ್ಷ)
    • 360 ಮನುಷ್ಯ ಸಂವತ್ಸರಮ್ = 1 ದೇವ ಸಂವತ್ಸರಮ್
  • ಬೇರೆರಡು ಅಚಿತ್ ತತ್ತ್ವಗಳು (ಶುದ್ಧ ಸತ್ವಮ್ ಮತ್ತು ಮಿಶ್ರ ಸತ್ವಮ್) ಆನಂದಿಸಲು ಇರುವ ವಸ್ತುಗಳು, ಆನಂದದ ಆಶ್ರಯ ಮತ್ತು ಆನಂದದ ಉಪಕರಣ.
  • ಶುದ್ಧ ಸತ್ವಮ್ ನ(ದಿವ್ಯ ವಸ್ತುಗಳು) ಮೇಲ್ಭಾಗವು ಪರಿಮಿತಿಯಿಲ್ಲದ್ದು (ಅಪರಿಮಿತವಾದದ್ದು) ಮತ್ತು ತಳವು ಪರಿಮಿತವಾದದ್ದು. (ಇದು ಪೂರ್ತಿಯಾಗಿ ಪರಮಪದದಲ್ಲಿ ಇರುತ್ತದೆ – ಆಧ್ಯಾತ್ಮಿಕ ಮೇಲ್ಮಟ್ಟದ ಲೋಕಗಳಲ್ಲಿ).
  • ಮಿಶ್ರ ಸತ್ವಮ್ – (ವಸ್ತುಗಳು) ಇವುಗಳ ತಳವು ಪರಿಮಿತಿಯಿಲ್ಲದ್ದು ಮತ್ತು ಮೇಲ್ಭಾಗವು ಪರಿಮಿತವಾಗಿರುತ್ತದೆ. (ಇದು ಸಂಪೂರ್ಣವಾಗಿ ಸಂಸಾರದಲ್ಲಿ ಇರುತ್ತದೆ. – ಕೀಳ್ಮಟ್ಟದ ಲೌಕಿಕ ಲೋಕಗಳಲ್ಲಿ)
  • ಕಾಲ ತತ್ವಮ್ ಎಲ್ಲಾ ಕಡೆಯೂ ಇರುತ್ತದೆ. (ಪರಮಪದದಲ್ಲಿ ಮತ್ತು ಸಂಸಾರದಲ್ಲಿ).
  • ಪರಮಪದದಲ್ಲಿ ಕಾಲವು ಶಾಶ್ವತವಾಗಿ/ ನಿರಂತರವಾಗಿರುತ್ತದೆ ಮತ್ತು ಸಂಸಾರದಲ್ಲಿ ತಾತ್ಕಾಲಿಕ / ನಶ್ವರವಾಗಿರುತ್ತದೆ. ತತ್ತ್ವ ತ್ರಯ ವಿವರಣಮ್ (ಈ ದಿನಗಳಲ್ಲಿ ಈ ಗ್ರಂಥವು ಸಿಗುವುದಿಲ್ಲ) ನಲ್ಲಿ ಮಾಮುನಿಗಳು ಪೆರಿಯ ವಾಚ್ಚಾನ್ ಪಿಳ್ಳೈ ಯವರ ವಿವರವನ್ನು ಇಲ್ಲಿ ಉಲ್ಲೇಖಿಸಿದ್ದಾರೆ – “ಸಮಯವು ಈ ಎರಡೂ ಕಡೆಯಲ್ಲೂ ಪರಮಪದದಲ್ಲಿ ಮತ್ತು ಸಂಸಾರದಲ್ಲಿ ಏಕಪ್ರಕಾರವಾಗಿರುತ್ತದೆ.” ಆದ್ದರಿಂದ ಅದು ಪರಮ ಅಧಿಕಾರಿಯಾಗಿರುತ್ತದೆ. ಆದರೆ ಕೆಲವು ಆಚಾರ್‍ಯರು ಪರಮಪದದಲ್ಲಿನ ಸಮಯಕ್ಕೂ ಮತ್ತು ಸಂಸಾರದಲ್ಲಿನ ಸಮಯಕ್ಕೂ ವ್ಯತ್ಯಾಸವನ್ನು ವಿವರಿಸಿರುವುದರಿಂದ – ಸಂಸಾರದ ನಿರಂತರ ಬದಲಾಗುವ ಸ್ವಭಾವದಿಂದ, ಶಾಶ್ವತವಾದ ಸಮಯವೂ ಇಲ್ಲಿ ತಾತ್ಕಾಲಿಕವಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು.
  • ಸಮಯವು ಅಸ್ತಿತ್ವದಲ್ಲೇ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ತರ್ಕಕ್ಕೆ ಮತ್ತು ಶಾಸ್ತ್ರಕ್ಕೆ ವಿರುದ್ಧವಾಗಿರುವುದರಿಂದ ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ.

ಮುಕ್ತಾಯ :

ಆದ್ದರಿಂದ ನಾವು ಅಚಿತ್ (ಅಚೇತನ ವಸ್ತುಗಳು) ತತ್ತ್ವದ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇವೆ, ಇದನ್ನು 3 ವಿಧವಾಗಿ ವಿಂಗಡಿಸಬಹುದು (ಶುದ್ಧ ಸತ್ವಮ್ – ಪರಮಪದದಲ್ಲಿನ ದಿವ್ಯ ವಸ್ತುಗಳು, ಮಿಶ್ರ ಸತ್ವಮ್ – ಈ ಸಂಸಾರದಲ್ಲಿನ ವಸ್ತುಗಳು ಮತ್ತು ಸತ್ವ ಶೂನ್ಯಮ್ – ಸಮಯ , ಈ ಎರಡೂ ಸ್ಥಳಗಳಲ್ಲಿ ಸಮಾನ್ಯವಾಗಿರುವುದು ). ಮೊದಲೇ ಹೇಳಿದಂತೆ ಈ ವಿಷಯವು ಅತ್ಯಂತ ಕ್ಲಿಷ್ಟವಾದದ್ದು ಮತ್ತು ಈ ಲೇಖನವು ಆಸಕ್ತಿಯನ್ನು ಮತ್ತು ಕುತೂಹಲವನ್ನು ಸೃಷ್ಟಿಸಲು ಮತ್ತು ಅದರಿಂದ ಆಚಾರ್‍ಯರ ಮೂಲಕ ಕಾಲಕ್ಷೇಪವನ್ನು ಕೇಳಿಸಿಕೊಳ್ಳಲು ಮತ್ತು ಅದರಿಂದ ನಿಜವಾದ ಜ್ಞಾನೋದಯವನ್ನು ಪಡೆದುಕೊಳ್ಳುವ ಉದ್ದೇಶದಿಂದ ಬರೆಯಲಾಗಿದೆ.

ಶ್ರೀಮತೇ ರಮ್ಯಜಾಮಾತೃ ಮುನೀಂದ್ರಾಯ ಮಹಾತ್ಮನೇ
ಶ್ರೀರಂಗವಾಸಿನೇ ಭೂಯಾತ್ ನಿತ್ಯಶ್ರೀ ನಿತ್ಯ ಮಂಗಳಮ್

ಮಂಗಳಾಶಾಸನ ಪರೈಃ ಮದಾಚಾರ್‍ಯ ಪುರೋಗಮೈಃ
ಸರ್ವೈಶ್ಚ ಪೂರ್ವೈಃ ಆಚಾರ್‍ಯೈ ಸತ್ಕೃತಾಯಾಸ್ತು ಮಂಗಳಮ್

ನಮ್ಮ ಮುಂದಿನ ಲೇಖನದಲ್ಲಿ ಈಶ್ವರ ತತ್ತ್ವದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://granthams.koyil.org/2013/03/thathva-thrayam-achith-what-is-matter/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

2 thoughts on “ತತ್ತ್ವ ತ್ರಯಮ್ – ಅಚಿತ್ – ನಿರ್ಜೀವ ವಸ್ತುಗಳೆಂದರೆ ಏನು?”

Leave a Comment