ಆಳ್ವಾರ್ ತಿರುನಗರಿಯ ವೈಭವ – ಪ್ರಾಚೀನ ಇತಿಹಾಸ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮ:

ಆಳ್ವಾರ್ ತಿರುನಗರಿಯ ವೈಭವ

ಶ್ರೀ ಕುರುಗಾಪುರಿ ಕ್ಷೇತ್ರವು, ಆದಿ ಕ್ಷೇತ್ರವೆಂದೂ ಕರೆಯಲ್ಪಡುವ ಆಳ್ವಾರ್ ತಿರುನಗರಿ ಒಂದು ಪುಣ್ಯ ಕ್ಷೇತ್ರ. ಈ ಕ್ಷೇತ್ರವು ಎಮ್ಬೆರುಮಾನ್ ಶ್ರೀಮನ್ ನಾರಾಯಣನು ತನ್ನ ಲೀಲಾ ವಿನೋದಕ್ಕಾಗಿ ರಚಿಸಿ, ಕ್ಷೇತ್ರದ ಗರಿಮೆಯನ್ನು ಪ್ರಕಟಿಸಿದನು. ಸೃಷ್ಟಿಯ ಸಮಯದಲ್ಲಿ, ಬ್ರಹ್ಮಾಂಡವನ್ನು ಸೃಷ್ಟಿಸಿದ ನಂತರ, ಅವನು ಮೊದಲು ನಾನ್ಮುಗನ್(ನಾಲ್ಕು ಮುಖಗಳುಳ್ಳವನು) ಎಂದು ಕರೆಯಲ್ಪಡುವ ಬ್ರಹ್ಮನನ್ನು ಸೃಷ್ಟಿಸುತ್ತಾನೆ , ನಂತರ ಅವನ ಮೂಲಕ ಭೌತಿಕ ಪ್ರಪಂಚವನ್ನು ಸೃಷ್ಠಿಸುವುದಾಗಿ ಸಂಕಲ್ಪಿಸಿದನು .ಆ ಬ್ರಹ್ಮನು ಎಮ್ಬೆರುಮಾನ್ ದರ್ಶನಕ್ಕಾಗಿ ಹಾಗೂ ಸೃಷ್ಟಿಕಾರ್ಯದ ನಿರ್ವಹಣೆಯ ಆಲೋಚನೆಯೊಂದಿಗೆ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಎಮ್ಬೆರುಮಾನ್ ಕೃಪೆಯನ್ನು ಪಡೆದನು. ಬ್ರಹ್ಮನು ಎಮ್ಬೆರುಮಾನ್ನನ್ನು ಅನೇಕ ವಿಧಗಳಲ್ಲಿ ಸ್ತುತಿಸಿದನು. ಆ ಸಮಯದಲ್ಲಿ, ಎಮ್ಬೆರುಮಾನ್ ಕರುಣೆಯಿಂದ ಬ್ರಹ್ಮನಿಗೆ ರಹಸ್ಯವನ್ನು ಉಪದೇಶಿಸಿದನು. ಭೂಮಿಯ ಮೇಲೆ ಭಾರತ ದೇಶದ ದಕ್ಷಿಣ ಭಾಗದಲ್ಲಿ, ಮಲಯ ಮೇಲೆ ಪರ್ವತ ಶ್ರೇಣಿಯಿದೆ. ತಾಮ್ರಪರಣಿ ನದಿಯು ಈ ಮಲಯ ಮೇಲೆಯಿಂದ ಹುಟ್ಟುತ್ತದೆ. ಆದಿಕ್ಷೇತ್ರವು ಅದರ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಅಲ್ಲಿ ಆದಿನಾಥನು ಸುಂದರ ರೂಪವನ್ನು ತಾಳಿ ಶ್ರೀಮಹಾಲಕ್ಷ್ಮಿಯೊಂದಿಗೆ ಯಾರಿಗೂ ಕಾಣದೆ, ಅಲ್ಲಿ ವಿಹರಿಸುತಿದ್ದಾನೆಂದು ಹಾಗೂ ಅವನು ಅಲ್ಲಿ ತನ್ನನು ಪೂಜಿಸಬಹುದೆಂದು ಬ್ರಹ್ಮನಿಗೆ ಹೇಳಿದನು. ಈ ಕ್ಷೇತ್ರದ ಶ್ರೇಷ್ಠತೆಯ ಬಗ್ಗೆ ತಿಳಿದುಕೊಂಡ ಬ್ರಹ್ಮನು ಸಂತೋಷಗೊಂಡನು ಮತ್ತು ಇದನ್ನು ಕುರುಗಾ ಕ್ಷೇತ್ರವೆಂದು ಕರೆಯಲು ಬಯಸಿದನು, ಅದಕ್ಕೆ ಎಮ್ಬೆರುಮಾನ್ ಒಪ್ಪಿದನು.ಕ್ರಮೇಣ, ಬ್ರಹ್ಮನು ಆದಿಕ್ಷೇತ್ರವನ್ನು ತಲುಪಿದನು ಮತ್ತು ದೀರ್ಘಕಾಲದವರೆಗೆ ಎಮ್ಬೆರುಮಾನ್ನನ್ನು ಚೆನ್ನಾಗಿ ಪೂಜಿಸಿದನು. ಈ ದಿವ್ಯ ಧಾಮದಲ್ಲಿ ಹರಿಯುವ ತಾಮ್ರಪರಣಿ ನದಿಯು ಎಮ್ಬೆರುಮಾನಿಗೆ ಪ್ರಿಯವಾದದ್ದು ಎಂದು ನಮ್ಮ ಪೂರ್ವಜರು ಸಾರಿ ಹೇಳಿದ್ದಾರೆ.

ಕೆಲವು ಮಹರ್ಷಿಗಳು ಈ ಸ್ಥಳಕ್ಕೆ ತೀರ್ಥಯಾತ್ರೆಗೆ ಬಂದು ಎಮ್ಬೆರುಮಾನ್ನನ್ನು ಪೂಜಿಸಿದರು. ಆ ಸಮಯದಲ್ಲಿ ಒಬ್ಬ ಬೇಟೆಗಾರ ಮತ್ತು ಆನೆಯು ಪರಸ್ಪರ ಹೊಡೆದಾಡಿ ಒಬ್ಬರನ್ನೊಬ್ಬರು ಕೊಂದುಕೊಂಡರು. ವಿಷ್ಣು ಲೋಕದಿಂದ ದೂತರು ಅಲ್ಲಿಗೆ ಆಗಮಿಸಿ ಎರಡೂ ಆತ್ಮಾಗಳನ್ನು ವಿಷ್ಣುಲೋಕಕ್ಕೆ ಕರೆದೊಯ್ದರು. ಇದನ್ನು ಕಂಡ ಮಹರ್ಷಿಗಳು ಈ ಸ್ಥಳದ ಮಹಿಮೆಯೇ ಕಾರಣವೆಂದು ಅರಿತು ಕೊಂಡಾಡಿದರು.

ಇಲ್ಲಿ ದಾಂತನೆಂಬವನ ವೃತ್ತಾಂತವನ್ನು ಆನಂದಿಸಬಹುದು. ಭಾರತದ ಉತ್ತರ ಭಾಗದಲ್ಲಿರುವ ಶ್ರೀ ಸಾಲಗ್ರಾಮ ದಿವ್ಯದೇಶದಲ್ಲಿ ಒಬ್ಬ ಶಿಷ್ಯನು, ಆ ಸ್ಥಳದಲ್ಲಿ ವಾಸಿಸುತ್ತಿದ್ದ. ಒಬ್ಬ ಬ್ರಾಹ್ಮಣನಿಂದ ವೇದಗಳನ್ನು ಕಲಿಯುತ್ತಿದ್ದನು. ಅವನ ಅಸಮರ್ಪಕ ಜ್ಞಾನದಿಂದಾಗಿ, ಅವನು ಬ್ರಾಹ್ಮಣರಿಂದ ಸರಿಯಾಗಿ ಕಲಿಯಲಿಲ್ಲ. ಬ್ರಾಹ್ಮಣನು ಶಿಷ್ಯನಿಗೆ “ನೀನು ವೇದಗಳನ್ನು ಸರಿಯಾಗಿ ಕಲಿಯದ ಕಾರಣ ಮುಂದಿನ ಜನ್ಮದಲ್ಲಿ ನೀನು ಶೂದ್ರನಾಗಿ ಹುಟ್ಟುವೆ” ಎಂದು ಶಪಿಸಿದನು. ಆದರೆ, ಆ ಶಿಷ್ಯನು ಶಾಪಕ್ಕೆ ಹೆದರುವ ಬದಲು, ಆ ಸ್ಥಳದಲ್ಲಿಯೇ ಉಳಿದು, ಆ ಸ್ಥಳದ ಸಮೀಪದಲ್ಲಿರುವ ವಿಷ್ಣು ದೇವಾಲಯದಲ್ಲಿ ಹುಲ್ಲನ್ನು ಕೊಯ್ದು, ಹುಲ್ಲನ್ನು ಮಾರಿ ಜೀವನ ಸಾಗಿಸುತ್ತಿದ್ದನು. ಆ ಶಿಷ್ಯನು ವಿಷ್ಣುವಿನ ಕರುಣೆಗೆ ಒಳಗಾದನು (ದೇವಾಲಯದ ಹುಲ್ಲನ್ನು ಕತ್ತರಿಸಿ ದೇವಾಲಯವನ್ನು ಶುಚಿಗೊಳಿಸಿ ಸುಂದರವಾಗಿ ಮಾಡಿದರಿಂದ). ಅವನು ತನ್ನ ಮುಂದಿನ ಜನ್ಮದಲ್ಲಿ ಆದಿಕ್ಷೇತ್ರದಲ್ಲಿ ಶೂದ್ರನಾಗಿ ಜನಿಸಿದನು. ಎಮ್ಬೆರುಮಾನನ ಕರುಣೆಯಿಂದಾಗಿ, ಅವನು ತಾಳ್ಮೆಯಿಂದ ಇದ್ದನು ಮತ್ತು ದಾಂತ ಎಂಬ ಹೆಸರನ್ನು ಪಡೆದನು. ಅವನು ಎಮ್ಬೆರುಮಾನ್ನನ್ನು ಪೂಜಿಸುತ್ತಾ ಅಲ್ಲಿಯೇ ಉಳಿದನು. ದೇವಾಸುರರ ನಡುವಿನ ಸಂಗ್ರಾಮದ ವೇಳೆಯಲ್ಲಿ ದೇವತೆಗಳ ಮುಖ್ಯಸ್ಥನಾದ ಇಂದ್ರನು ದೇವತೆಗಳೊಂದಿಗೆ ಇಲ್ಲಿಗೆ ಬಂದು ಎಮ್ಬೆರುಮಾನ್ನನ್ನು ಪೂಜಿಸಿದರು. ಆದರೆ, ದಾಂತನ ಮೇಲೆ ಅಪಚಾರವೆಸಗಿದ ಕಾರಣದಿಂದಾಗಿ ಅವರು ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ದಾಂತನು ಅವರ ಪಾಪಗಳನ್ನು ಕ್ಷಮಿಸಿ, ಅವರ ದೃಷ್ಟಿಯನ್ನು ನೀಡುವಂತೆ ಎಮ್ಬೆರುಮಾನ್‌ನಲ್ಲಿ ಪ್ರಾರ್ಥಿಸಿದನು . ಎಮ್ಬೆರುಮಾನ್‌ ದೇವತೆಗಳಿಗೆ ದೃಷ್ಟಿಯನ್ನು ಕೊಟ್ಟನು. ತದನಂತರ ಎಮ್ಬೆರುಮಾನನ ಆರಾಧನೆಯನ್ನು ಮುಂದುವರೆಸಿದನು ಮತ್ತು ಕೊನೆಯಲ್ಲಿ, (ಸಂಸಾರದಿಂದ) ಮುಕ್ತಿಯನ್ನು ಪಡೆದನು.

ಪೂರ್ವದಲ್ಲಿ, ಶಂಖಮುನಿವರ್ಯನೆಂಬ ಋಷಿ ಇಂದ್ರಪದವಿಯನ್ನು ಪಡೆಯಲು ತಪಸ್ಸು ಮಾಡುತ್ತಿದ್ದನು. ಆಗ ಈ ತಪ್ಪಸ್ಸಿನ ಬಗ್ಗೆ ವಿಚಾರಿಸಲು ಬಂದ ನಾರದ ಮಹರ್ಷಿಗಳಿಗೆ ಪ್ರಣಾಮಗೈದನು. ಶಂಖಮುನಿಯು ನಾರದರಿಗೆ, ವಿಷ್ಣುವು ಇತರ ದೇವತೆಗಳಂತೆ ಸಾಮಾನ್ಯನೆಂದು ನಾರದರಿಗೆ ಹೇಳಿದನು.ಆಗ ನಾರದರು, “ನೀನು ದೊಡ್ಡ ತಪ್ಪು ಮಾಡಿದೆ. ನೀನು, ಪರಬ್ರಹ್ಮನಾದ ವಿಷ್ಣುವನ್ನು ಇತರ ದೇವತೆಳಂತೆ ಸಾಮಾನ್ಯನೆಂದು ಭಾವಿಸಿದ ಕಾರಣ, ಸಾಗರದಲ್ಲಿ ಶಂಖನಾಗಿ ಹುಟ್ಟುವೆ” ಎಂದು ಶಪಿಸಿದರು. ಶಂಖಮುನಿಯು ತನ್ನ ತಪ್ಪನ್ನು ಅರಿತು ಶಾಪವಿಮೋಚನೆಗೆ ಮಾರ್ಗವನ್ನು ಕೇಳಲು ನಾರದರು ಅವನಿಗೆ “ಆದಿಕ್ಷೇತ್ರದಲ್ಲಿ ಎಮ್ಬೆರುಮಾನನ ಕರುಣೆಯಿಂದ ಮುಕ್ತಿಯನ್ನು ಪಡೆಯುವೆ” ಎಂದು ಹೇಳಿದರು. ಮುನಿಯು ಸಾಗರದಲ್ಲಿ ಶಂಖವಾಗಿ ಜನಿಸಿ ತಾಮ್ರಪರಣಿಯನ್ನು ತಲುಪಿದನು, ಅಲ್ಲಿ ಅವನು ಎಮ್ಬೆರುಮಾನ್ನನ್ನು ನಿರಂತರವಾಗಿ ಧ್ಯಾನಿಸುತ್ತಿದ್ದನು. ಅವನು ಉಳಿದುಕೊಂಡಿದ್ದ ನದಿಯ ದಡವನ್ನು “ಶಂಖ ನಿದ್ಧಿರೈ” ಎಂದು ಕರೆಯಲಾಯಿತು. ಎಮ್ಬೆರುಮಾನ್ ಶಂಖದ ರೂಪದಲ್ಲಿದ್ದ ಶಂಖಮುನಿಯನ್ನು ಮತ್ತು ಇತರೆ ಹಲವಾರು ಶಂಖಗಳಿಗೆ ಮೋಕ್ಷವನ್ನು ಕರುಣಿಸಿದನು. ಇದಲ್ಲದೆ, ಈ ದಿವ್ಯ ಕ್ಷೇತ್ರದಲ್ಲಿ ಎಮ್ಬೆರುಮಾನ್ ತನ್ನ ದಿವ್ಯ ಸ್ವರೂಪವನ್ನು ಅನೇಕರು ನೋಡಲು ಸಾಧ್ಯವಾಗುವಂತೆ ತನ್ನ ದಯೆಯಿಂದ ಕರುಣಿಸಿದನು. ಈ ದಿವ್ಯ ಕ್ಷೇತ್ರಕ್ಕೆ ಶ್ರೀದೇವಿ, ಭೂದೇವಿ, ನೀಲಾ ದೇವಿ [ಅವರ ದಿವ್ಯ ಮಹಿಷಿಯರು(ಪತ್ನಿಗಳು)], ವರಾಹ ಪೆರುಮಾಳ್ ಮತ್ತು ಗರುಡರ ದಿವ್ಯವಿಗ್ರಹಗಳನ್ನೂ ಬ್ರಹ್ಮನ ಮೂಲಕ ಕರೆತಂದನು.

ಮುಂದೆ, ಭೃಗು, ಮಾರ್ಕಾಂಡೇಯ ಮುಂತಾದ ಮಹರ್ಷಿಗಳೂ, ಕಾರ್ತವೀರ್ಯರ್ಜುನ ಎಂಬ ರಾಜನು ಮತ್ತು ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನನು, ಈ ಕ್ಷೇತ್ರದಲ್ಲಿ ಎಮ್ಬೆರುಮಾನನ ದರ್ಶನವನ್ನು ಪಡೆದರು.

ಕುರುಗಾಪುರಿ ಮಹಾತ್ಮೆಯಲ್ಲಿ ವೇದವ್ಯಾಸರು ತಮ್ಮ ಪುತ್ರರಾದ ಶುಕದೇವರಿಗೆ, ಬ್ರಹ್ಮದೇವರಿಗೆ ಮತ್ತು ವಸಿಷ್ಠರಿಗೂ ಆದಿಕ್ಷೇತ್ರದ ಶ್ರೇಷ್ಠತೆಯನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.

ಹೀಗಾಗಿ, ಈ ಕ್ಷೇತ್ರದ ಪ್ರಾಚೀನ ಇತಿಹಾಸವನ್ನು ನಾವು ಆನಂದಿಸಿದ್ದೇವೆ.

ಉಲ್ಲೇಖ – ಕುರುಗಾಪುರಿ ಕ್ಷೇತ್ರ ವೈಭವದ ಕುರಿತು ಆದಿನಾಥರ್ ಆಳ್ವಾರ್ ದೇವಸ್ಥಾನ ಪ್ರಕಟಿಸಿದ ಪುಸ್ತಕ.

ಅಡಿಯೇನ್ ಕಸ್ತೂರಿ ರಂಗನ್ ರಾಮಾನುಜ ದಾಸನ್

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ : https://granthams.koyil.org/2022/12/02/azhwarthirunagari-vaibhavam-1-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment