ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರರ ದಿವ್ಯ ಯಾತ್ರೆ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:

ಆಳ್ವಾರ್ ತಿರುನಗರಿಯ ವೈಭವ

<< ಹಿಂದಿನ ಲೇಖನವನ್ನು

ಆಳ್ವಾರ್ ತಿರುನಗರಿಯಲ್ಲಿ ಮತ್ತು ಆಳ್ವಾರರ ಜೀವನ ಚರಿತ್ರೆಯಲ್ಲಿ ಅವರ ದಿವ್ಯ ಯಾತ್ರೆಯನ್ನು ಒಂದು ವಿಶೇಷ ಘಟನೆಯೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನಾವು ಈ ಉತ್ಸವದ ಯಾತ್ರೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. 

ಹಿಂದಿನ ಅಧ್ಯಾಯದಲ್ಲಿ,  ನಮ್ಮಾಳ್ವರರು ರಾಮಾನುಜರ ಅವತಾರದ ಬಗ್ಗೆ ಮಧುರಕವಿ ಆಳ್ವಾರರಿಗೆ ಹೇಗೆ ಸೂಚಿಸಿದರು ಮತ್ತು ಭವಿಷ್ಯದಾಚಾರ್ಯರ ವಿಗ್ರಹವನ್ನು ಮಧುರಕವಿ ಆಳ್ವಾರ್‌ಗೆ ಹೇಗೆ ನೀಡಿದರು ಎಂಬುದನ್ನು ನಾವು ಕಲಿತುಕೊಂಡಿದ್ದೇವೆ. ನಮ್ಮಾಳ್ವರರ ಕಾಲದ ನಂತರ ಮತ್ತು ರಾಮಾನುಜರ ಅವತಾರದ ಮೊದಲು, ನಾಥಮುನಿಗಳಂತಹ ಪೂರ್ವಾಚಾರ್ಯರು ಈ ಭೂಮಿಯಲ್ಲಿ ಅವತರಿಸಿ ನಮ್ಮ ಶ್ರೀ ವೈಷ್ಣವ ಸಂಪ್ರದಾಯವನ್ನು ಪೋಷಿಸಿದರು.

ಶ್ರೀಮನ್ನಾಥಮುನಿಗಳು ನಮ್ಮಾಳ್ವಾರ್ ಅವರ ಪಾಶುರಗಳ ಬಗ್ಗೆ ಕೇಳಿ, ಆಳ್ವಾರ್ ಮತ್ತು ಅವರ ಪಾಶುರವನ್ನು ಹುಡುಕಿಕೊಂಡು ಆಳ್ವಾರ್ ತಿರುನಗರಿಗೆ ಬಂದರು. ಅವರು ತಮ್ಮ ದಿವ್ಯ ದೃಷ್ಟಿಯ ಮೂಲಕ ನಮ್ಮಾಳ್ವಾರ್ ಅವರ ದರ್ಶನ ಹೊಂದುವ ಭಾಗ್ಯವನ್ನು ಪಡೆದರು. ನಮ್ಮಾಳ್ವಾರ್ ಕರುಣೆಯ ಮೂಲಕ, ಶ್ರೀಮನ್ನಾಥಮುನಿಗಳಿಗೆ ನಮ್ಮಾಳ್ವಾರ್ ಅವರ ನಾಲ್ಕು ದಿವ್ಯ ಪ್ರಬಂಧಗಳನ್ನು ಮತ್ತು ಇತರ ಆಳ್ವಾರರ ದಿವ್ಯ ಪ್ರಬಂಧಗಳನ್ನು ಅವುಗಳ ಅರ್ಥಗಳೊಂದಿಗೆ ಪಡೆಯುವ ಭಾಗ್ಯ ಸಿಕ್ಕಿತು. ಆಚಾರ್ಯರ ಪರಂಪರೆಯಲ್ಲಿ ಅವರು ನಮ್ಮಾಳ್ವಾರ್ ನಂತರದ ಸ್ಥಾನವನ್ನು ಪಡೆದರು. ನಾಥಮುನಿಗಳ ಶಿಷ್ಯರಲ್ಲಿ  ಒಬ್ಬರಾದ ಕುರುಗೈಕ್ಕಾವಲಪ್ಪನ್ ಈ ಆಳ್ವಾರ್ ತಿರುನಗರಿಯಲ್ಲಿ ಅವತರಿಸಿದರು.

ಶ್ರೀಮನ್ನಾಥಮುನಿಗಳ ನಂತರ, ಉಯ್ಯಕೊಂಡಾರ್, ಮಣಕ್ಕಾಲ್ ನಂಬಿ, ಆಳವಂದಾರ್ ಮತ್ತು ಪೆರಿಯ ನಂಬಿ ಅವರ ಮೂಲಕ ಆಚಾರ್ಯರ ಪರಂಪರೆ ಚೆನ್ನಾಗಿ ಬೆಳೆದುಬಂತು. ನಂತರ, ಆದಿಶೇಷನನ (ಎಮ್ಬೆರುಮಾನನ ದಿವ್ಯ ಶಯ್ಯೆ) ಅವತಾರವಾಗಿರುವ ಶ್ರೀ ರಾಮಾನುಜರು ಈ ಭೂಮಿಯಲ್ಲಿ ಅವತರಿಸಿ, ಮೋಕ್ಷವನ್ನು ಬಯಸುವವರಿಗೆಲ್ಲರಿಗೂ ಅದು ಸಾಧ್ಯ ಎಂದು ತೋರಿಸಿಕೊಟ್ಟರು. ಎಮ್ಬೆರುಮಾನಾರರು ತಮ್ಮನ್ನು ತಾವು “ಮಾರನ್ ಅಡಿ ಪಣಿಂದು ಉಯ್ಂದವನ್” ಅಂದರೆ ನಮ್ಮಾಳ್ವಾರರ ದಿವ್ಯ ಚರಣಗಳಿಗೆ ದಾಸರು ಎಂದು ಹೇಳಿಕೊಳ್ಳುತ್ತಿದ್ದರು. ರಾಮಾನುಜರ ಎಲ್ಲೆ ಮೀರಿದ ಭಕ್ತಿಯನ್ನು ನೋಡಿ , ನಮ್ಮಾಳ್ವಾರರು ತನ್ನ ತಿರುವಡಿ ನಿಲೆಯಲ್ಲಿರುವ (ಆಳ್ವಾರರ ದಿವ್ಯ ಪಾದುಕೆಗಳು: ಇದು ಗಂಟೆಯ ಆಕಾರದಲ್ಲಿದ್ದು ಅರ್ಚಕ ಸ್ವಾಮಿಗಳು ಭಕ್ತಾದಿಗಳ ಶಿರಸ್ಸಿನ ಮೇಲೆ ಇಡುತ್ತಾರೆ) ಭಾಗ್ಯವನ್ನು ನೀಡಿದರು. ಇತರ ಎಲ್ಲಾ ಸ್ಥಳಗಳಲ್ಲಿ ನಮ್ಮಾಳ್ವಾರರ ತಿರುವಡಿ ನಿಲೆಯನ್ನು ಮಧುರಕವಿಗಳೆಂದು ಕರೆಯಲಾಗುತ್ತದೆ, ಆದರೆ ಆಳ್ವಾರ್ ತಿರುನಗರಿಯಲ್ಲಿ, ನಮ್ಮಾಳ್ವಾರರು ಅದು ಶ್ರೀ ರಾಮಾನುಜಮ್ ಎಂಬ ಹೆಸರಿನಿಂದ ಕರೆಯಬೇಕೆಂದು ಆದೇಶಿಸಿದರು.

ಭಗವದ್ರಾಮಾನುಜರ ನಂತರ  ಸಂಪ್ರದಾಯವು ಎಂಬಾರ್, ಭಟ್ಟರು, ನಂಜೀಯರ್, ನಂಪಿಳ್ಳೈ, ವಡಕ್ಕುತಿರುವೀದಿಪ್ಪಿಳ್ಳೈ ಮತ್ತು ಪಿಳ್ಳೈ ಲೋಕಾಚಾರ್ಯರ  ಮೂಲಕ ಒರಾನ್ ವಳಿ (ಒಬ್ಬ ಶಿಷ್ಯನು ಒಬ್ಬ ಗುರುವಿನಿಂದ ಜ್ಞಾನದ ದೀಪವನ್ನು ಮುಂದಕ್ಕೆ ಕೊಂಡೊಯ್ಯುತ್ತಾನೆ) ಮೂಲಕ ಬೆಳೆಯಿತು.ಪಿಳ್ಳೈ ಲೋಕಾಚಾರ್ಯರ ಕೊನೆಯ ದಿನಗಳಲ್ಲಿ, ವಿದೇಶಿ ಪಡೆಗಳ ದಾಳಿಯಿಂದ ಭಾರತದ ದಕ್ಷಿಣ ಭಾಗಕ್ಕೆ ಭಾರೀ ಅಪಾಯವುಂಟಾಯಿತು. ನಮ್ಮ ಸಂಪ್ರದಾಯದ ಪ್ರಮುಖ ಕೇಂದ್ರವಾದ ಶ್ರೀರಂಗವು ದಾಳಿಕೋರರಿಂದ ತೀವ್ರವಾಗಿ ಆಕ್ರಮಣಕ್ಕೊಳಗಾಯಿತು. ಆ ಸಮಯದಲ್ಲಿ, ಪಿಳ್ಳೈಲೋಕಾಚಾರ್ಯರು ಪೆರಿಯ ಪೆರುಮಾಳ್ (ಶ್ರೀ ರಂಗನಾಥ ಮೂಲವರ್) ಮುಂದೆ ರಕ್ಷಣಾತ್ಮಕ ಗೋಡೆಯನ್ನು ಎತ್ತಿದರು ಮತ್ತು ಸುರಕ್ಷಿತ ಆಶ್ರಯವನ್ನು ಹುಡುಕುತ್ತಾ ನಂಪೆರುಮಾಳನ್ನು (ಉತ್ಸವ ವಿಗ್ರಹ) [ಶ್ರೀರಂಗದ] ದಕ್ಷಿಣದ ಕಡೆಗೆ ಕರೆದೊಯ್ದರು. ಪಿಳ್ಳೈ ಲೋಕಾಚಾರ್ಯರು [ನಂಪೆರುಮಾಳ್ ಜೊತೆ] ಮಧುರೈಯ ಯಾನೈ ಮಲೈ ಹಿಂದೆ ಇರುವ ಜ್ಯೋತಿಷ್ಕುಡಿಯನ್ನು (ಇಂದಿನ ಕೊಡಿಕ್ಕುಲಂ) ತಲುಪಿದರು. ಅವರ ವಯಸ್ಸಾದ ಕಾರಣ, ಅವರು ಅನಾರೋಗ್ಯಕ್ಕೆ ಒಳಗಾದರು. ಅವರು ತಮ್ಮ ಶಿಷ್ಯರಾದ ತಿರುಮಲೈ ಆಳ್ವಾರರು ಸಂಪ್ರದಾಯದ ಮುಖ್ಯಸ್ಥರ ಜವಾಬ್ದಾರಿಯನ್ನು ಮುಂದುವರಿಸಬೇಕೆಂದು ಆದೇಶಿಸಿ, ಪರಮಪದವನ್ನು ಸೇರಿದರು.

ಇದಾದ ನಂತರ, ನಂಪೆರುಮಾಳ್ ಕೇರಳದ ಕೋಳಿಕ್ಕೊಡು ತಲುಪಿದರು. ಅದೇ ಸಮಯದಲ್ಲಿ, ನಮ್ಮಾಳ್ವಾರರು ಕೂಡಾ ವಿದೇಶಿ ದಾಳಿಗಾರರ ದಾಳಿಯಿಂದಾಗಿ ಆಳ್ವಾರ್ ತಿರುನಗರಿಯಿಂದ ಹೊರಡುವಂತಾಗಿದ್ದು, ಕೋಳಿಕೋಡನ್ನು ತಲುಪಿದರು. ಈ ರೀತಿಯಾಗಿ, ಆಳ್ವಾರ್ ಅವರು ಹಲವಾರು ವರ್ಷಗಳ ಕಾಲ ಆಳ್ವಾರ್ ತಿರುನಗರಿಯಿಂದ ದೂರವಿರಬೇಕಾಯಿತು. ನಮ್ಮಾಳ್ವಾರರು ಕೋಳಿಕ್ಕೋಡನ್ನು ತಲುಪಿದ ನಂತರ, ನಂಪೆರುಮಾಳನ ಇಚ್ಛೆಯಿಂದ ಸ್ಥಳವನ್ನು ನೀಡಿ ತಮ್ಮ ದಿವ್ಯ ಸ್ಥಾನವನ್ನು ಸ್ವೀಕರಿಸಿದರು.

ಕೇರಳ ಪ್ರದೇಶದ ಪೋತ್ತಿಮಾರ್  ಮತ್ತು ನಂಬೂದಿರಿಗಳು ಅಪಾರ ಭಕ್ತಿಯಿಂದ ಆಳ್ವಾರ್ ಮತ್ತು ನಂಪೆರುಮಾಳರಿಗೆ ಕೈಂಕರ್ಯ ಮಾಡಿದರು. ಕೋಳಿಕೋಡನ್ನು ಬಿಟ್ಟ ನಂತರ, ಆಳ್ವಾರ್ ಮತ್ತು ನಂಪೆರುಮಾಳರು ತಿರುಕ್ಕಣಂಬಿ ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ಕೆಲಕಾಲ ತಂಗಿದ್ದು, ನಂಪೆರುಮಾಳ್ ಅಲ್ಲಿಂದ ಹೊರಟನು. ಅಲ್ಲಿ ನಮ್ಮಾಳ್ವಾರ್ಗೆ ಕೈಂಕರ್ಯವನ್ನು ಕೈಗೊಳ್ಳಲು ತೊಡಗಿದರು, ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ಪಶ್ಚಿಮ ಪ್ರದೇಶದ ಕಡೆಗೆ ಅವರನ್ನು ಕರೆದೊಯ್ದರು. ಕಡಿದಾದ ಬಂಡೆಯನ್ನು ತಲುಪಿದ ಅವರು ಆಳ್ವಾರರನ್ನು ಆ ಸ್ಥಳದಲ್ಲಿ ಸುರಕ್ಷಿತವಾಗಿ ಇಡಬಹುದೆಂದು ನಿರ್ಧರಿಸಿದರು. ಅವರು ಕರುಣೆಯಿಂದ ನಮ್ಮಾಳ್ವಾರ್ ಅವರನ್ನು ಪೆಟ್ಟಿಗೆಯಲ್ಲಿಟ್ಟು ಬಂಡೆಯ ಇಳಿಜಾರಿನಲ್ಲಿ ಇಳಿಸಿದರು.

ಅವರು ನಮ್ಮಾಳ್ವಾರರ ವಿಗ್ರಹವನ್ನು ಸುರಕ್ಷಿತವಾಗಿ ಇರಿಸಿದ ನಂತರ ಹಿಂದಿರುಗುತ್ತಿದ್ದಾಗ, ಕಳ್ಳರು ಆ ಕೈಂಕರ್ಯಪರರುಗಳಿಂದ ದಿವ್ಯ ಹಾಗೂ ಅಮೂಲ್ಯವಾದ ಆಭರಣಗಳನ್ನು ಕದ್ದರು. ಈ ಕೈಂಕರ್ಯಪರರಲ್ಲಿ ತೋಳಪ್ಪರ್ ಎಂಬ ಹೆಸರಿನ ವ್ಯಕ್ತಿಯೂ ಇದ್ದರು. ಅವರು ಮಧುರೆಯನ್ನು ತಲುಪಿ, ರಾಜನ ಸಭೆಯಲ್ಲಿ ಹಿರಿಯ ಮಂತ್ರಿಯಾಗಿದ್ದ ತಿರುಮಲೈ ಆಳ್ವಾರ್ ಅವರ ಸಹಾಯವನ್ನು ಪಡೆಯಲು ಪ್ರಯತ್ನಿಸಿದರು. ಈ ತಿರುಮಲೈ ಆಳ್ವಾರ್, ಪಿಳ್ಳೈ ಲೋಕಾಚಾರ್ಯರ ಮುಖ್ಯ ಶಿಷ್ಯರಾಗಿದ್ದರು ಮತ್ತು ಪಿಳ್ಳೈ ಲೋಕಾಚಾರ್ಯರ ಆದೇಶದಂತೆ ಸಂಪ್ರದಾಯದ ಮುಂದಿನ ಮುಖ್ಯಸ್ಥರಾಗಿದ್ದರು. ಅವರು ಕೇರಳದ ರಾಜನಿಗೆ ಸಂದೇಶವನ್ನು ಕಳುಹಿಸಿ, ಸಹಾಯವನ್ನು ಕೇಳಿದರು. ಅವರು ನಮ್ಮಾಳ್ವಾರರ ವಿಗ್ರಹವನ್ನು ಹಿಂತಿರುಗಿಸಿಕೊಳ್ಳಲು ತಮ್ಮ ಆಪ್ತ ಸೇವಕರನ್ನೂ ಕಳುಹಿಸಿದರು. ಕೇರಳದ ರಾಜನು ತಿರುಮಲೈ ಆಳ್ವಾರ್ ಅವರ ಸಂದೇಶವನ್ನು ಪಡೆದ ನಂತರ, ನಮ್ಮಾಳ್ವಾರರನ್ನು ಹಿಂತಿರುಗಿಸಿಕೊಳ್ಳಲು ತನ್ನ ಸೈನ್ಯವನ್ನು ಕಳುಹಿಸಿದನು. ತೋಳಪ್ಪರ್ ನೇತೃತ್ವದಲ್ಲಿ ಎಲ್ಲಾ ಜನರು ಕಾರ್ಯಕ್ಕೆ ತೆರಳಿದರು. ಒಂದು ಗರುಡ ಪಕ್ಷಿ ಅವರಿಗೆ ನಮ್ಮಾಳ್ವಾರರ ಸ್ಥಳವನ್ನು ಸೂಚಿಸಿತು. ತೋಳಪ್ಪರ್ ಕಬ್ಬಿಣದ ಸರಪಳಿಗಳಿಂದ ಹಿಡಿದಿರುವ ಹಲಗೆಯ ಮೇಲೆ ಕುಳಿತುಕೊಂಡು ತಾವೇ ಕಡಿದಾದ ಇಳಿಜಾರಿಗೆ ಇಳಿದರು. ಅವರು ನಮ್ಮಾಳ್ವಾರರ ವಿಗ್ರಹವನ್ನು ಇರಿಸಿದ್ದ ಪೆಟ್ಟಿಗೆಯನ್ನು ಪತ್ತೆಹಚ್ಚಿದರು. ಅವರು ನಮ್ಮಾಳ್ವಾರೊಂದಿಗೆ ಪೆಟ್ಟಿಗೆಯನ್ನು ಮೇಲಕ್ಕೆ ಕಳುಹಿಸಿದರು. ತೋಳಪ್ಪರ್ ಹಿಂದಿರುಗಲು ಹಲಗೆಯನ್ನು ಕೆಳಗೆ ಇಳಿಸಲಾಯಿತು. ಆದರೆ, ಮೇಲಕ್ಕೆ ಹತ್ತುವಾಗ ಅವರು ಸಮತೋಲನ ಕಳೆದುಕೊಂಡು ಕಡಿದಾದ ಇಳಿಜಾರಿಗೆ ಬಿದ್ದರು. ಅವರು ಪರಮಪದವನ್ನು ಸೇರಿದರು. ಇದನ್ನು ನೋಡಿದ ತೋಳಪ್ಪರ ಮಗ ಭಾವುಕರಾಗಿ ಕೂಗಿದರು. ನಮ್ಮಾಳ್ವಾರರು ಆ ಮಗುವನ್ನು ಸಮಾಧಾನಪಡಿಸಿದರು ಮತ್ತು ತಾನೇ ತಂದೆಯಾಗುತ್ತೇನೆ ಎಂದು ಹೇಳಿದರು.ಅವರು ತೋಳಪ್ಪರ ಮಗನಿಗೆ ಮತ್ತು ಅವನ ವಂಶಸ್ಥರಿಗೆ ದೇವಾಲಯದ ಎಲ್ಲಾ ಗೌರವಗಳನ್ನು ನೀಡಬೇಕೆಂದು ಆದೇಶಿಸಿದರು. ನಂತರ, ನಮ್ಮಾಳ್ವಾರರು ಮತ್ತೆ ತಿರುಕ್ಕಣಂಬಿಗೆ ತಲುಪಿದರು. ದರೋಡೆಕೋರರು (ನಮ್ಮಾಳ್ವಾರರ ದಿವ್ಯ ಆಭರಣಗಳನ್ನು ಕದ್ದಿದ್ದವರು) ಎಲ್ಲಾ ಘಟನೆಗಳನ್ನು ಕೇಳಿ, ತಮ್ಮ ತಪ್ಪನ್ನು ಅರಿತುಕೊಂಡು, ಕದ್ದ ಆಭರಣಗಳನ್ನು ನಮ್ಮಾಳ್ವಾರರಿಗೆ ಸಮರ್ಪಿಸಿದರು. ತಿರುಮಲೈ ಆಳ್ವಾರ್ ತಿರುಕ್ಕಣಂಬಿಗೆ ಬಂದು ಪ್ರೀತಿಯಿಂದ ನಮ್ಮಾಳ್ವಾರವರನ್ನು ಪೂಜಿಸಿದರು.

ತಿರುಮಲೈ ಆಳ್ವಾರ್ ಮಧುರೆಗೆ ವಾಪಸ್ಸಾದಾಗ, ಪಿಳ್ಳೈ ಲೋಕಾಚಾರ್ಯರ ಶಿಷ್ಯರಲ್ಲಿ ಒಬ್ಬರಾದ ಕೂರಕುಲೋತ್ತಮ ದಾಸರ್ ಅವರನ್ನು ಭೇಟಿಯಾದರು, ಅವರಿಗೆ ಪಿಳ್ಳೈ ಲೋಕಾಚಾರ್ಯರೊಂದಿಗಿನ ಸಂಬಂಧವನ್ನು ನೆನಪಿಸಿದರು . ಅವರು ಸಂಪ್ರದಾಯದ ಪ್ರಮುಖ ಲಕ್ಷಣಗಳನ್ನು ತಿರುಮಲೈ ಆಳ್ವಾರ್‌ಗೆ ತಿಳಿಸಿದರು, ಮಂತ್ರಿಯಾಗಿರುವ ಸ್ಥಾನವನ್ನು ತ್ಯಜಿಸಿ ಕೇವಲ ನಮ್ಮಾಳ್ವಾರರ ಸೇವಕನಾಗಿ ಉಳಿಯುವಂತೆ ಸೂಚಿಸಿದರು. ತಿರುಮಲೈ ಆಳ್ವಾರ್ ಕೂರಕುಲೋತ್ತಮ ದಾಸರ್, ವಿಲಾಂಜೋಲೈ ಪಿಳ್ಳೈ , ನಾಲೂರಾಚ್ಚಾನ್ ಪಿಳ್ಳೈ ಮುಂತಾದವರಿಂದ ನಮ್ಮ ಸಂಪ್ರದಾಯದ ಆಳವಾದ ಅರ್ಥಗಳನ್ನು ಕಲಿತು, ಪಿಳ್ಳೈ ಲೋಕಾಚಾರ್ಯರ ದಿವ್ಯಾಜ್ಞೆಯಂತೆ ನಮ್ಮ ಸಂಪ್ರದಾಯದ ಆಚಾರ್ಯರಾದರು. ನಂತರ ಅವರು ಕರುಣೆಯಿಂದ ನಮ್ಮಾಳ್ವಾರರನ್ನು ಮರಳಿ ಆಳ್ವಾರ್ ತಿರುನಗರಿಗೆ ಕರೆದುಕೊಂಡು ಹೋದರು. ಅವರು ಆಳ್ವಾರ್ ತಿರುನಗರಿಯ ದಿವ್ಯ ಸ್ಥಳವನ್ನು  ತಲುಪಿದಾಗ, ಆ ಸ್ಥಳವು ಕಾಡು ಗಿಡಗೆಂಟೆಗಳಿಂದ ತುಂಬಿರುವುದನ್ನು ನೋಡಿದರು. ಅವರು ಆ ಸ್ಥಳದಿಂದ ಎಲ್ಲಾ ಗಿಡಗೆಂಟೆಗಳನ್ನು ತೆರವುಗೊಳಿಸಿ, ಆದಿನಾಥರ್ ಆಳ್ವಾರ್ ದಿವ್ಯ ಮಂದಿರವನ್ನು ಪುನರ್ ನಿರ್ಮಿಸಿದರು. ಅವರು ತಿರುಪ್ಪುಳಿ ಆಳ್ವಾರ್ (ದಿವ್ಯವಾದ ಹುಣಸೆ ಮರ) ಕೆಳಗೆ ಹೂತುಹೋಗಿದ್ದ ಭವಿಷ್ಯದಾಚಾರ್ಯರ ದಿವ್ಯ ವಿಗ್ರಹವನ್ನು ಕಂಡುಕೊಂಡರು. ಅವರು ಪಶ್ಚಿಮ ಭಾಗದಲ್ಲಿ ಚತುರ್ವೇದಿಮಂಗಲವನ್ನು ನಿರ್ಮಿಸಿ, ಅಲ್ಲಿ ದೇವಾಲಯವನ್ನು ನಿರ್ಮಿಸಿ, ಆದಿನಾಥರ್ ಆಳ್ವಾರ್ ದೇವಾಲಯ ಮತ್ತು ಎಮ್ಬೆರುಮಾನಾರ್ ದೇವಾಲಯದಲ್ಲಿ ನಿಯಮಿತವಾಗಿ ಕೈಂಕರ್ಯಗಳ ವ್ಯವಸ್ಥೆಗಳನ್ನು ಸರಿಯಾದ ರೀತಿಯಲ್ಲಿ ಮಾಡಿದರು. ನಮ್ಮಾಳ್ವಾರ್ ಮತ್ತು ತಿರುವಾಯ್ಮೊಳಿಯ ಮೇಲಿನ ಅತಿಶಯವಾದ ಭಕ್ತಿಯಿಂದ ,ಅವರು ಶಠಕೋಪ ದಾಸರ್ ಮತ್ತು ತಿರುವಾಯ್ಮೊಳಿ ಪಿಳ್ಳೈ ಎಂಬ ಗೌರವಾನ್ವಿತ ಹೆಸರುಗಳಿಂದ ಪ್ರಸಿದ್ಧರಾದರು. ಅವರ ವಂಶಸ್ಥರು ಇಂದಿನವರೆಗೂ ಈ ಪ್ರದೇಶದ  ಸುತ್ತಮುತ್ತಲಿನ ದೇವಾಲಯಗಳಲ್ಲಿ ಕೈಂಕರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ನಮ್ಮ ಪೂರ್ವಾಚಾರ್ಯರು ಈ ನಿರೂಪಣೆಯನ್ನು “ನಮ್ಮಾಳ್ವಾರರ ದಿವ್ಯ ಯಾತ್ರೆ” ಎಂದು ಕರೆಯಬಹುದೆಂದು ಹೇಳುತ್ತಾರೆ.

ಆಳ್ವಾರ್ ತಿರುನಗರಿಯಲ್ಲಿ ಜನಿಸಿ, ನಂತರ ಸಾಕ್ಷಾತ್ ಶ್ರೀರಂಗನಾಥನಿಗೆ ಆಚಾರ್ಯರಾದ ಮಣವಾಳ ಮಾಮುನಿಗಳು, ತಿರುವಾಯ್ಮೊಳಿ ಪಿಳ್ಳೈಯವರನ್ನು ತಮ್ಮ ಆಚಾರ್ಯರನ್ನಾಗಿ ಸ್ವೀಕರಿಸಿ, ಆಳ್ವಾರ್ ತಿರುನಗರಿಯಲ್ಲಿ ಮೊದಲ ಬಾರಿಗೆ ಕೈಂಕರ್ಯ ನಿರ್ವಹಿಸಿದರು. ಅವರ ಜೀವನ ಚರಿತ್ರೆ ಮತ್ತು ಮಹತ್ವದ ಬಗ್ಗೆ ಮುಂದಿನ ಅಧ್ಯಾಯದಲ್ಲಿ ತಿಳಿಯೋಣ.

ಅಡಿಯೇನ್ ಕಸ್ತೂರಿ ರಂಗನ್ ರಾಮಾನುಜ ದಾಸನ್

ಮೂಲ : https://granthams.koyil.org/2022/12/04/azhwarthirunagari-vaibhavam-3-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment