ಮುಮುಕ್ಷುಪ್ಪಡಿ – ಸೂತ್ರಮ್ 1-3

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

ಹಿಂದಿನ ಲೇಖನವನ್ನು

ಸೂತ್ರಮ್ – 1

ಮುಮುಕ್ಷುವುಕ್ಕು ಅಱಿಯ ವೇಣ್ಡುಮ್ ರಹಸ್ಯಮ್ ಮೂನ್ಱು.

ಸರಳ ಅರ್ಥ: ಎಲ್ಲಾ ಮುಮುಕ್ಷುಗಳೂ (ಯಾರು ಮೋಕ್ಷವನ್ನು ಆಶಿಸುತ್ತಾರೋ) ಮೂರು ರಹಸ್ಯಗಳನ್ನು ತಿಳಿದುಕೊಳ್ಳಬೇಕು.

ವ್ಯಾಖ್ಯಾನಮ್ :

ಮುಮುಕ್ಷು ಎಂದರೆ ಯಾರು ಮುಕ್ತಿಯನ್ನು ಪಡೆಯಲು ಆಶಿಸುತ್ತಾರೋ ಅವರು. “ಮುಚೀ ಮೋಕ್ಷಣೇ” ಎಂಬುದು ಸಂಸ್ಕೃತದ ಮೂಲ ಪದ. ಇದು ಪ್ರತಿಯೊಂದು ಆತ್ಮವು ಯಾವುದು ಲೌಕಿಕ ಸಂಸಾರದಿಂದ ಮುಕ್ತಿಯನ್ನು ಬಯಸುತ್ತದೆಯೋ ಆ ಅತ್ಮವನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ತನ್ನನ್ನು ತಾನು ಅರಿತುಕೊಳ್ಳಲು ಆಸೆಪಡುವವನು ಕೂಡಾ ಮುಕ್ತಿಯನ್ನು ಬಯಸಬಹುದು. ಆದರೆ ಅವನಿಗೆ ಮೂರು ರಹಸ್ಯಗಳನ್ನು ತಿಳಿದುಕೊಳ್ಳುವ ಆಸೆಯಿಲ್ಲದ ಕಾರಣ ಅವನನ್ನು ಇಲ್ಲಿ ಉಲ್ಲೇಖಿಸಲಾಗುವುದಿಲ್ಲ. ಆದ್ದರಿಂದ, ಲೋಕಾಚಾರ್‍ಯರು ಯಾರಿಗೆ ಈ ಜೀವನ ಮರಣಗಳ ಚಕ್ರದಿಂದ ಬಿಡುಗಡೆ ಕಾಣಲು ನಾರಾಯಣನ ಮೇಲಿನ ಪ್ರೀತಿಯಿಂದ ಆಸೆ ಪಡುತ್ತಾರೆಯೋ ಅಂಥವರು ಮೂರು ರಹಸ್ಯಗಳನ್ನು ಮನಗಾಣುವುದು ಅವಶ್ಯಕವಾಗಿದೆ. ಏಕೆಂದರೆ,

  1. ನಿಜ ಸ್ವರೂಪ ( ಅವನದೇ ಆದ – ಆತ್ಮ ಸ್ವರೂಪಮ್)
  2. ಮಾಧ್ಯಮ (ಮೋಕ್ಷಕ್ಕೆ ಮಾರ್ಗ) ಮತ್ತು
  3. ಪರಮ ಗುರಿ (ಪುರುಷಾರ್ಥಮ್ – ಮೋಕ್ಷದ).

ಈ ಮೂರು ರಹಸ್ಯಗಳು, ನಿಗೂಢ ಮಂತ್ರಗಳು ಈ ಮೇಲಿನ ವಿಷಯಗಳನ್ನು ಅವು ಹೇಗಿದೆಯೋ ಹಾಗೆಯೇ ವಿವರಿಸುತ್ತದೆ. ಆದ್ದರಿಂದ ಅವುಗಳನ್ನು ತಿಳಿಯುವುದು ಅತ್ಯಾವಶ್ಯಕ.

“ಸ್ವ ಜ್ಞಾನಮ್ ಪ್ರಾಪಕ ಜ್ಞಾನಮ್ ಪ್ರಾಪ್ಯ ಜ್ಞಾನಮ್ ಮುಮುಕ್ಷುಭಿಃ ।
ಜ್ಞಾನತ್ರಯಮ್ ಉಪಾಧೇಯಮ್ ಏತದ್ ಅನ್ಯತ್ ನ ಕಿಂಚನ ॥ “

ಶಾಸ್ತ್ರವು ಈ ರೀತಿ ಹೇಳುತ್ತದೆ – ಯಾರು ಮುಕ್ತಿಯನ್ನು ಪಡೆಯಲು ಬಯಸುತ್ತಾರೋ ಅವರಿಗೆ ಆತ್ಮದ ಬಗ್ಗೆ, ಮಾಧ್ಯಮದ ಬಗ್ಗೆ (ಮುಕ್ತಿಯನ್ನು ಪಡೆಯಲು), ಮತ್ತು ಫಲಿತಾಂಶದ ಬಗ್ಗೆ ಅರಿವಿರಬೇಕು. ಈ ವಿಷಯಗಳ ಬಗ್ಗೆ ಇರುವ ಅರಿವೇ ಸ್ವೀಕರಿಸಲ್ಪಡುತ್ತದೆ. ಆದ್ದರಿಂದ ಲೋಕಾಚಾರ್‍ಯರು ಇವುಗಳನ್ನು ರಹಸ್ಯ ತ್ರಯಮ್,  ನಿಗೂಢ ಮಂತ್ರವೆಂದು ಪರಿಗಣಿಸಿದ್ದಾರೆ. ನಾವು ಮುಂದೆ ಹೋಗುತ್ತಾ, ಅವರು ತಿರುಮಂತ್ರಮ್, ದ್ವಯಮ್ ಮತ್ತು ಚರಮ ಶ್ಲೋಕಮ್‍ನನ್ನು ಮೂರು ರಹಸ್ಯಗಳೆಂದು ಪರಿಗಣಿಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಅವರು ಅದನ್ನು ರಹಸ್ಯ , ನಿಗೂಢ ವಿಷಯಗಳೆಂದು ಕರೆದಿದ್ದಾರೆ ಏಕೆಂದರೆ ಅವು ಇಡೀ ವೇದಾಂತ ಸಾರದ ಸಂಗ್ರಹವನ್ನು ನಿರೂಪಿಸುತ್ತದೆ. ಆದ್ದರಿಂದ ಪ್ರತ್ಯೇಕವಾಗಿ ಅದನ್ನು ತಿಳಿದುಕೊಳ್ಳಲು ಯೋಗ್ಯ ವ್ಯಕ್ತಿಗೆ ಮಾತ್ರ ಸಾಧ್ಯ. ಆ ಯೋಗ್ಯತೆಯೇನೆಂದರೆ ಅವನಿಗೆ ಆ ವಿಷಯದ ಬಗ್ಗೆ ಇರುವ ಆಸಕ್ತಿಯೇ. ಆದ್ದರಿಂದ ಈ ವಾಕ್ಯದಲ್ಲಿ ವ್ಯಕ್ತಿಯು ಈ ಜ್ಞಾನಕ್ಕೆ ಯೋಗ್ಯನಾಗಿರಬೇಕು. ಮತ್ತು ಅವನು ಆಸೆ ಪಡುವ ಈ ಜ್ಞಾನವು ಅವನಿಗೆ ತಿಳಿಯಲ್ಪಡಬೇಕು.

 

ಸೂತ್ರಮ್ – 2

ಪರಿಚಯ : ಈಗ, ಈ ಮೂರು ರಹಸ್ಯ ಮಂತ್ರಗಳಲ್ಲಿ ಯಾವುದು ಮೊದಲನೆಯದು? ಈ ವಿಷಯವನ್ನು ತಿಳಿಯಪಡಿಸಲು ಅವರು ಹೇಳುತ್ತಾರೆ, “ತಿರುಮಂತ್ರಮ್ ಮೊದಲ ರಹಸ್ಯವು ಅವುಗಳಲ್ಲಿ”.

ಅದಿಲ್ ಪ್ರಥಮ ರಹಸ್ಯಮ್ ತಿರುಮಂತ್ರಮ್.

ಸರಳ ಅರ್ಥ: ಈ ಮೂರು ರಹಸ್ಯ ತ್ರಯಗಳಲ್ಲಿ ಮೊದಲನೆಯದು ತಿರುಮಂತ್ರಮ್ (ಅಷ್ಟಾಕ್ಷರಮ್).

ವ್ಯಾಖ್ಯಾನಮ್ :

ಮೂರು ನಿಗೂಢ ರಹಸ್ಯಗಳಲ್ಲಿ, ತಿಳಿಯಬೇಕಾದ ಮೊದಲನೆಯ ಮತ್ತು ಅತ್ಯಂತ ಅವಶ್ಯಕವಾದದ್ದು ತಿರುಮಂತ್ರಮ್. ಏಕೆಂದರೆ ಅದು ಯಾವುದನ್ನು ಬಿಡಬೇಕು ಮತ್ತು ಯಾವುದನ್ನು ಪಡೆಯಬೇಕು ಎಂದು ತಿಳಿಯಲು ಬಯಸುವ ಪ್ರತಿಯೊಬ್ಬರಿಗೂ ಸೂಕ್ಷ್ಮವಾಗಿ ಜ್ಞಾನವನ್ನು ಕಲ್ಪಿಸಿ ಕೊಡುತ್ತದೆ. ಯಾರು ಆ ಜ್ಞಾನವನ್ನು ಪಡೆಯಲು ಬಯಸುತ್ತಾರೋ, ಅವನಿಗೆ ಅನನ್ಯ ಶೇಷತ್ವಮ್ – ಎಂಪೆರುಮಾನರಿಗೆ ಮಾತ್ರ ಸೇವಕನಾಗುವ ಪ್ರಾಮುಖ್ಯತೆ, ಅನನ್ಯ ಶರಣತ್ವಮ್ – ಅವನಿಗೆ ಮಾತ್ರ ಪ್ರತ್ಯೇಕವಾಗಿ ಶರಣಾಗುವಿಕೆ, ಅನನ್ಯ ಭೋಗತ್ವಮ್ – ಅವನಿಗೆ ಮಾತ್ರ ಆನಂದವನ್ನು ಕೊಡುವುದು, ಉಪಾಯ (ಮಾರ್ಗ) ಮತ್ತು ಉಪೇಯ (ಪರಮಗುರಿ) ವನ್ನು ತಿಳಿಯುವ ಮತ್ತು ಮಿಕ್ಕೆರಡು ರಹಸ್ಯ ಮಂತ್ರಗಳನ್ನು ತಿಳಿಯುವ ಹಂಬಲವು ಏರ್ಪಡುತ್ತದೆ. ಆದ್ದರಿಂದ, ಆತ್ಮದ ನಿಜ ಸ್ವರೂಪವನ್ನು ತಿಳಿಸುವ ತಿರುಮಂತ್ರವೇ ಮೊದಲನೆಯ ಮುಖ್ಯವಾದ ನಿಗೂಢ ರಹಸ್ಯ ಮಂತ್ರವು ಎಂದು ಹೇಳಿದರೆ ತಪ್ಪಾಗುವುದಿಲ್ಲ. ತಿರುಮಂತ್ರದ ಮಿಕ್ಕ ಭಾಗಗಳು ಪ್ರಣವಮ್‍ನನ್ನು ವಿವರಿಸಿದರೆ, ದ್ವಯಮ್ ತಿರುಮಂತ್ರದ ಉಳಿದ ಭಾಗವನ್ನು ವಿವರಿಸುತ್ತದೆ, ಹಾಗೆಯೇ ಚರಮ ಶ್ಲೋಕವು ದ್ವಯದ ಉಳಿದ ಭಾಗವನ್ನು ವಿವರಿಸುತ್ತದೆ. ಈ ರೀತಿಯಲ್ಲೂ ಸಹ ತಿರುಮಂತ್ರಮ್ ಮೊದಲನೆಯದಾಗಿ ಬರುತ್ತದೆ. ಈ ಕಾರಣಗಳಿಂದ, ಅವರು ಇದನ್ನು ಅತ್ಯಂತ ಪ್ರಮುಖವಾದ ಪ್ರಥಮ ರಹಸ್ಯವೆಂದು ಹೇಳಿದ್ದಾರೆ. “ಮಂತಾರಮ್ ತ್ರಾಯತೇ ಇತಿ ಮಂತ್ರಃ” ಎಂದು ಹೇಳಿದ್ದಾರೆ, ಇದರ ಅರ್ಥ ಶಬ್ದದ (ಸದ್ದು)  ಮತ್ತು ಅರ್ಥದ (ಅರ್ಥದ ಪ್ರಕಾಶನ) ಶಕ್ತಿಯೇನೆಂದರೆ ಅದನ್ನು ಉಚ್ಛಾರಿಸುವವರನ್ನು ರಕ್ಷಿಸುತ್ತದೆ. ಅದು ಯಾರು ಕ್ರಮಗಳನ್ನು ಪಾಲಿಸಿ ಈ ಮಂತ್ರವನ್ನು ಹೇಳುತ್ತಾರೋ ಆ ಶಬ್ದದ ಶಕ್ತಿಯು ಮತ್ತು ಅವನಿಗೆ ಯಾರು ಶರಣಾಗುತ್ತಾರೋ ಅವನನ್ನು ಮಾತ್ರ ಮಾರ್ಗ ಮತ್ತು ಗುರಿ (ಉಪಾಯ, ಉಪೇಯ) ಎಂದು ನಂಬಿ ಆ ಅರ್ಥದ ತಿಳುವಳಿಕೆಯ ಶಕ್ತಿಯು ಅವರನ್ನು ಕಾಪಾಡುತ್ತದೆ.

ಶ್ರೀ ಪರಾಶರ ಭಟ್ಟರ್ ಹೇಳುತ್ತಾರೆ:

ದೇಹಾಸಕ್ತಾತ್ಮ ಬುದ್ಧಿರ್ ಯದಿ ಭವತಿ ಪದಮ್
ಸಾಧು ವಿದ್ಯಾತ್ ತೃತೀಯಮ್
ಸ್ವತಂತ್ರ್ಯಾಂಧೋ ಯದಿ ಸ್ಯಾತ್ ಪ್ರಥಮಮ್ ಇತರ
ಶೇಷತ್ವಧೀಶ್ಚೇದ್ ದ್ವಿತೀಯಮ್
ಆತ್ಮತ್ರಾಣಾ ಉನ್ಮುಖಶ್ಚೇನ್ ನಮ ಇತಿ ಚ ಪದಮ್
ಭಾಂಧವಾಭಾಸ ಲೋಲಾ:
ಶಬ್ದಮ್ ನಾರಾಯಣಾಖ್ಯಮ್ ವಿಷಯ ಚಪಲ ಧಿಶ್ಚೇತ್
ಚತುರ್ಥೀಮ್ ಪ್ರಪನ್ನ

ಈ ಮಂತ್ರವು ಅದರ ಬಗ್ಗೆ ವಿಚಾರಮಾಡುವವರನ್ನು ಸಲಹುತ್ತದೆ. ದೇಹವನ್ನೇ ಆತ್ಮವೆಂದು ಭಾವಿಸುವ, ಎಂಪೆರುಮಾನರನ್ನು ಬಿಟ್ಟು ವ್ಯರ್ಥವಾಗಿ ಸ್ವತಂತ್ರವಾಗಿ ಜೀವಿಸುವುದರ, ಅವನನ್ನು ಬಿಟ್ಟು ಬೇರೆಯವರ ಮೇಲೆ ಅವಲಂಬಿಸಿರುವ , ತನ್ನ ಸ್ವಪ್ರಯತ್ನದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲೆ ಎಂಬ , ಭ್ರಮೆಯನ್ನು ಹೋಗಲಾಡಿಸುತ್ತದೆ. ಮತ್ತು   ಚಂಚಲ ಸ್ವಭಾವದವರ ಜೊತೆಗೆ ಸ್ನೇಹವನ್ನು, ಇಂದ್ರಿಯಗಳ ವ್ಯಾಮೋಹವನ್ನೂ ಹೋಗಲಾಡಿಸುತ್ತದೆ.

 

ಸೂತ್ರಮ್ – 3

ಪರಿಚಯ: ಈಗ ಮೂರನೆಯ ಸೂತ್ರದಲ್ಲಿ, ಲೋಕಾಚಾರ್‍ಯರು, ಈ ಮಂತ್ರದ (ತಿರುಮಂತ್ರದ) ಶ್ರೇಷ್ಠತೆಯನ್ನು ಸೂಕ್ಷ್ಮವಾಗಿ ವರ್ಣಿಸುವ ಅಪೇಕ್ಷೆಯಿಂದ, ಮೊದಲು ಅದರ ಪ್ರತ್ಯೇಕವಾದ ವಿಶೇಷತೆಯನ್ನು ಅದನ್ನು ಹೇಗೆ ಜಪಿಸಬೇಕೆಂಬ ಸವಿವರವನ್ನು ನೀಡಿದ್ದಾರೆ.

ತಿರುಮಂತ್ರತ್ತಿನುಡೈಯ ಶೀರ್‌ಮೈಕ್ಕುಪ್ ಪೋರುಂಪಡಿ
ಪ್ರೇಮತ್ತೋಡೇ ಪೇಣಿ ಅನುಸಂದಿಕ್ಕ ವೇಣುಮ್.

ಸರಳ ಅರ್ಥ: ತಿರುಮಂತ್ರಮ್‍ನನ್ನು ಅತ್ಯಂತ ಶ್ರದ್ಧೆಯಿಂದ, ಗೌರವದಿಂದ ಮತ್ತು ಪ್ರೀತಿಯಿಂದ ಅದಕ್ಕೆ ಹೊಂದುವ ಭಾವನೆಯೊಂದಿಗೆ ಪಠಿಸಬೇಕು.

ವ್ಯಾಖ್ಯಾನಮ್:

ತಿರುಮಂತ್ರದ ಪ್ರತ್ಯೇಕ ಶ್ರೇಷ್ಠತೆ ಏನೆಂದರೆ, ಅದು ಎಲ್ಲಾ ವೇದಗಳ ಸಾರಾಂಶವಾಗಿದೆ (ತಿರುಳು). “ರುಚೋ ಯಜೂಂಶಿ ಸಾಮಾನಿ ತತೈವ ಆಥರ್ವಣಾನಿಚ ಸರ್ವಮ್ ಅಷ್ಟಾಕ್ಷರಾಂತಸ್ಥಮ್” ಎಂದು ವೃದ್ಧಹಾರಿತಸ್ಮೃತಿ 6-48 ನಲ್ಲಿ ಹೇಳಲಾಗಿದೆ, ಇದು ಎಲ್ಲಾ ನಿಗೂಢ ವಿಷಯಗಳನ್ನು ವಿವರಿಸುತ್ತದೆ ಎಂದು ಪೆರಿಯ ತಿರುಮೊೞಿ 8-10-3 ನಲ್ಲಿ “ಮಱ್ಱೆಲ್ಲಾಮ್ ಪೇಸಿಲುಮ್” ಹೇಳಲಾಗಿದೆ ; ಎಲ್ಲಾ ಮಂತ್ರಗಳಲ್ಲಿಯೂ ಇದು ಹಿರಿದಾದುದು, ಶ್ರೇಷ್ಠವಾದುದು, ಎಲ್ಲಾ ನಿಗೂಢಗಳಲ್ಲಿಯೂ(ಗುಪ್ತ ಶ್ಲೋಕಗಳಲ್ಲಿಯೂ) ಇದು ಅತ್ಯಂತ ನಿಗೂಢವಾದದ್ದು, ಎಲ್ಲಾ ಪವಿತ್ರ ಮಂತ್ರಗಳಲ್ಲಿಯೂ ಇದು ಅತ್ಯಂತ ಪವಿತ್ರವಾದದ್ದು ಎಂದು ನಾರದೀಯ ಕಲ್ಪಮ್ ಅಷ್ಟಾಕ್ಷರ ಬ್ರಹ್ಮವಿದ್ಯೈ 1-11 ನಲ್ಲಿ ಹೇಳಲಾಗಿದೆ.

ಮಂತ್ರಾಣಾಮ್ ಪರಮೋ ಮಂತ್ರೋ ಗುಹ್ಯಾನಾಮ್ ಗುಹ್ಯಮ್ ಉತ್ತಮಮ್
ಪವಿತ್ರಾಮ್ ಚ ಪವಿತ್ರಾಣಾಮ್ ಮೂಲ ಮಂತ್ರಸ್ ಸನಾತನಃ

ಈ ರೀತಿಯ ಮುಖ್ಯತ್ವವನ್ನು ಪಡೆದಿರುವ ಈ ಮಂತ್ರವು, ಅತ್ಯಂತ ಪ್ರೀತಿ, ಗೌರವದಿಂದ ಪಠಿಸಲು ಯೋಗ್ಯವಾದದ್ದು. ಏನೂ ನೆಪ ಹೂಡದೇ, ಅಡೆತಡೆಗಳಿಲ್ಲದೇ, ಸಂತೋಷದಿಂದ ಮತ್ತು ಭಕ್ತಿಭಾವದಿಂದ ಪಠಿಸಬೇಕು. ಇದನ್ನು ನಂಬದ ಜನಗಳ ಕಿವಿಗೆ ಬೀಳದ ಹಾಗೆ “ಮಂತ್ರಮ್ ಯತ್ನೇನ ಗೋಪಯೇತ್” ನಲ್ಲಿ ಹೇಳಿದ ಹಾಗೆ ಪಠಿಸಬೇಕು. ಇದನ್ನು ಈ ರೀತಿ ಪಠಿಸಬೇಕು ಎಂದು ಸೂಚಿಸಿರುವುದರಿಂದ ಈ ಮಂತ್ರವನ್ನು ಬೇರೆ ಯಾವ ರೀತಿಯಲ್ಲಿಯೂ ಪಠಿಸಲು ಸಾಧ್ಯವಿಲ್ಲ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://granthams.koyil.org/2020/01/22/mumukshuppadi-suthrams-1-3-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

 

2 thoughts on “ಮುಮುಕ್ಷುಪ್ಪಡಿ – ಸೂತ್ರಮ್ 1-3”

Leave a Comment