ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ
ಈ ಹಿಂದಿನ ಲೇಖನದಲ್ಲಿ ನಾವು ಆಚಾರ್ಯ-ಶಿಷ್ಯ ಸಂಬಂಧದ ವೈಶಿಷ್ಟ್ಯವನ್ನು ಕಂಡೆವು.
ಕೆಲವರು “ನಮಗೂ ಭಗವಂತನಿಗೂ ನಡುವೆ ಆಚಾರ್ಯನೆಂಬುವನ ಅವಶ್ಯಕತೆಯಿದೆಯೇ? ಭಗವಂತನು ಈ ಮೊದಲೇ ಗಜೇಂದ್ರಾಳ್ವಾನ್, ಗುಹ, ಶಬರಿ, ಅಕ್ರೂರ, ತ್ರಿವಕ್ರಾ (ಕೃಷ್ಣಾವತಾರ ಕಾಲದಲ್ಲಿದ್ದ ಗೂನಿ), ಮಾಲಾಕಾರ (ಹೂಗಾರ) ಮುಂತಾದವರನ್ನು ನೇರವಾಗಿಯೇ ಅಂಗೀಕರಿಸಿರುವನಲ್ಲ?” ಎಂದು ಕೇಳಬಹುದು.
ಇದಕ್ಕೆ ನಮ್ಮ ಪೂರ್ವಾಚಾರ್ಯರುಗಳು ಕೊಡುವ ಸಮಜಾಯಿಷಿ ಹೀಗಿದೆ: ಭಗವಂತನು ಸರ್ವಸ್ವತಂತ್ರನು. ಅವನು ಎಲ್ಲಾ ಜೀವರುಗಳ ಮೇಲೆಯೂ ತನ್ನ ಕೃಪೆಯನ್ನು ವರ್ಷಿಸುತ್ತಾನೆ. ಹಾಗೆಯೇ ಆ ಜೀವರುಗಳ ಕರ್ಮಗಳಿಗೆ ತಕ್ಕ ಫಲವನ್ನೂ ನೀಡುತ್ತಾನೆ. ಇಲ್ಲಿಯೇ ಆಚಾರ್ಯನ ಮುಖ್ಯತ್ವವಿರುವುದು. ಭಗವಂತನು (ಎಲ್ಲರಲ್ಲಿಯೂ ಇರುವ ತನ್ನ ಸತತ ಸುಕೃತಗಳಿಂದ (ಸದ್ಭಾವನೆಗಳಿಂದ)) ದಣಿವಿಲ್ಲದೆ ಎಲ್ಲ ಜೀವರುಗಳಿಗೂ ನಿಜವಾದ ಜ್ಞಾನವನ್ನು ಉಪದೇಶಿಸಿ ಆಯಾ ಜೀವರುಗಳಿಗೆ ಭಗವಂತನನ್ನಡೆಯಲು ಸಹಕರಿಸುವ ಒಬ್ಬ ಸದಾಚಾರ್ಯನನ್ನು ಹೊಂದುವಂತೆ ಅನೇಕ ಅವಕಾಶಗಳನ್ನು ಸೃಷ್ಟಿಸುತ್ತಲೇ ಇದ್ದಾನೆ. ಈ ಸದಾಚಾರ್ಯನು ಪುರುಷಕಾರಭೂತೆಯಾದ ಶ್ರೀ ಮಹಾಲಕ್ಷ್ಮಿಯಂತೆ ತಾನೂ ಪ್ರಭಾವಶಾಲಿಯಾಗಿದ್ದು, ಈ ಜೀವಾತ್ಮನು ಎಲ್ಲ ಲೌಕಿಕ ಬಂಧಗಳಿಂದಲೂ ಮುಕ್ತನಾಗಿ ಕೇವಲ ಭಗವಂತನ ಕೃಪೆಯನ್ನೇ ಅವಲಂಬಿಸಿರುವನೆಂಬುದನ್ನು ಭಗವಂತನಿಗೆ ಮನಗಾಣಿಸುತ್ತಾನೆ.
ಭಗವಂತನು ಜೀವಾತ್ಮನ ಕರ್ಮಾನುಸಾರವಾಗಿ ಸಂಸಾರವನ್ನೂ ಕೊಡಬಲ್ಲ, ಮೋಕ್ಷವನ್ನೂ ತರಬಲ್ಲನೆಂಬುದು ಪ್ರಸಿದ್ಧಿ. ಆದರೆ ಆಚಾರ್ಯನಾದವನು ತನ್ನಲ್ಲಿ ಶರಣಾದ ಜೀವರುಗಳಿಗೆ ಎಂದಿಗಾದರೂ ಮೋಕ್ಷವೊಂದನ್ನೇ ತರುವನು. ಇಷ್ಟೇ ಅಲ್ಲದೆ, ಭಗವಂತನಲ್ಲಿ ನೇರವಾಗಿ ಹೋಗುವುದು ಅವನ ಕೈ ಹಿಡಿದು ಕಾರ್ಯ ಸಾಧಿಸುವಂತೆ; ಆಚಾರ್ಯನ ಮೂಲಕ ಅವನನ್ನು ಹೊಂದುವುದು ಅವನ ಪಾದಪದ್ಮಗಳನ್ನು ಹಿಡಿದು ಕಾರ್ಯ ಸಾಧಿಸುವಂತೆ (ಆಚಾರ್ಯರುಗಳೆಲ್ಲರೂ ಅವನ ಶ್ರೀಪಾದ ಸ್ಥಾನೀಯರಾದ್ದರಿಂದ) ಎಂಬುದು ನಮ್ಮ ಪೂರ್ವಾಚಾರ್ಯರುಗಳು ತೋರಿರುವ ಸತ್ಯ. ಭಗವಂತನು ನೇರವಾಗಿ ಜೀವಾತ್ಮರನ್ನು ಅಂಗೀಕರಿಸುವುದು ಅಪರೂಪದ ವಿಷಯ. ಆದರೆ ಒಬ್ಬ ಆಚಾರ್ಯನ ಮೂಲಕ ಜೀವಾತ್ಮರನ್ನು ಅಂಗೀಕರಿಸುವುದು ಸಾಮಾನ್ಯ/ಸೂಕ್ತ ಕ್ರಮವೆಂಬುದಾಗಿ ನಮ್ಮ ಪೂರ್ವಾಚಾರ್ಯರುಗಳೆಲ್ಲ ನಿರೂಪಿಸಿದ್ದಾರೆ.
ನಾವಿಲ್ಲಿ ಆಚಾರ್ಯರ ಬಗ್ಗೆ ಮಾತನಾಡುತ್ತಿರುವುದರಿಂದ ನಮ್ಮ ಆಚಾರ್ಯಪರಂಪರೆಯನ್ನು ಇಲ್ಲಿ ಅರಿಯುವುದು/ಸ್ಮರಿಸುವುದು ಸೂಕ್ತವೇ ಆಗಿದೆ. ಇದನ್ನರಿಯುವುದರಿಂದ ನಮಗೆ ಭಗವಂತನಿಂದ ಈವರೆಗೆ ಈ ಅಮೂಲ್ಯವಾದ ಜ್ಞಾನವು ಹೇಗೆ ಹರಿದು ಬಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ನಮ್ಮಲ್ಲಿ ಅನೇಕರಿಗೆ ಈಗಾಗಲೇ ತಿಳಿದಿರಬಹುದು. ಆದರೂ ಇದನ್ನಿಲ್ಲಿ ಹಂಚಿಕೊಳ್ಳುವ ಹಂಬಲ; ಏಕೆಂದರೆ ಈ ಆಚಾರ್ಯಪರಂಪರೆಯಿಲ್ಲದೆ ಹೋಗಿದ್ದರೆ ನಾವೂ ಇತರ ಸಂಸಾರಿಗಳಂತೆಯೇ ಈ ಜಗತ್ತಿನಲ್ಲಿಯೇ ಬಿದ್ದು ಕಷ್ಟಪಡುತ್ತಿದ್ದೆವು.
ಶ್ರೀವೈಷ್ಣವ ಧರ್ಮವು (ಸನಾತನ ಧರ್ಮ) ಒಂದು ಸನಾತನ ಸಂಪ್ರದಾಯ. ಇದನ್ನು ಪೂರ್ವದಲ್ಲಿ ಅನೇಕ ಮಹನೀಯರುಗಳು ಪ್ರಚಾರಪಡಿಸಿದ್ದಾರೆ. ದ್ವಾಪರಯುಗದ ಅಂತ್ಯದಲ್ಲಿ ದಕ್ಷಿಣ ಭಾರತದ ಹಲವಾರು ಪುಣ್ಯನದೀತೀರಗಳಲ್ಲಿ ಆಳ್ವಾರುಗಳು ಅವತರಿಸತೊಡಗಿದರು. ಕಟ್ಟಕಡೆಯ ಆಳ್ವಾರರು ಕಲಿಯುಗದ ಆರಂಭದಲ್ಲಿ ಅವತರಿಸಿದರು. ಈ ಆಳ್ವಾರುಗಳ ಅವತಾರವಿಷಯವನ್ನು ವ್ಯಾಸರು ಶ್ರೀ ಭಾಗವತದಲ್ಲಿ ಉಲ್ಲೇಖಿಸಿ ಅನೇಕ ನದೀತೀರಗಳಲ್ಲಿ ಶ್ರೀಮನ್ನಾರಾಯಣನ ಪರಮೋನ್ನತ ಭಕ್ತರು ಅವತರಿಸಿ ಭಗವಂತನ ಬಗೆಗಿನ ಜ್ಞಾನವನ್ನು ಜಗತ್ತಿನಲ್ಲಿ ಪಸರಿಸುತ್ತಾರೆಂಬುದಾಗಿ ತೋರಿಕೊಟ್ಟಿದ್ದಾರೆ. ಈ ಆಳ್ವಾರುಗಳು ಒಟ್ಟು ಹತ್ತು ಜನ: ಪೊಯ್ಗೈ ಆಳ್ವಾರ್, ಬೂದತ್ತಾಳ್ವಾರ್, ಪೇಯಾಳ್ವಾರ್, ತಿರುಮಳಿಶೈ ಆಳ್ವಾರ್, ನಮ್ಆಳ್ವಾರ್, ಕುಲಶೇಖರಾಳ್ವಾರ್, ಪೆರಿಯಾಳ್ವಾರ್, ತೊಂಡರಡಿಪ್ಪೊಡಿಯಾಳ್ವಾರ್, ತಿರುಪ್ಪಾಣಾಳ್ವಾರ್ ಮತ್ತು ತಿರುಮಂಗೈಯಾಳ್ವಾರ್. ಆಚಾರ್ಯನಿಷ್ಠರಾದ (ಆಚಾರ್ಯ ಪರತಂತ್ರರಾದ) ಮಧುರಕವಿ ಆಳ್ವಾರ್ ಮತ್ತು ಆಂಡಾಳ್ ಕೂಡ ಆಳ್ವಾರುಗಳ ಪೈಕಿ ಸೇರಿಸಲ್ಪಡುತ್ತಾರೆ (ಆಗ ಆಳ್ವಾರುಗಳ ಸಂಖ್ಯೆ ೧೨). ಆಂಡಾಳ್ ಭೂಮಿದೇವಿಯ ಅವತಾರ. ಮಿಕ್ಕೆಲ್ಲ ಆಳ್ವಾರುಗಳೂ ಭಗವಂತನಿಂದ ಈ ಸಂಸಾರದಲ್ಲಿ ಆಯ್ದುಕೊಳ್ಳಲ್ಪಟ್ಟ ಜೀವಾತ್ಮರುಗಳು. ಆಳ್ವಾರುಗಳಿಗೆ ಭಗವಂತನು ತನ್ನದೇ ಸಂಕಲ್ಪದಿಂದ ಚಿದ ಚಿದ್ ವಿಷ್ಯಯ ಎಂಬ ಮೂರು ತತ್ತ್ವಗಳ ಬಗೆಗೂ ಪರ್ಯಾಪ್ತವಾದ ಜ್ಞಾನವನ್ನು ಕರುಣಿಸಿ, ಅವರುಗಳ ಮೂಲಕ ಕಾಲಕ್ರಮದಲ್ಲಿ ಕಳೆದುಹೋಗಿದ್ದ ಭಕ್ತಿ/ಪ್ರಪತ್ತಿ ಮಾರ್ಗವನ್ನು ಪುನಃ ಸ್ಥಾಪಿಸಿದನು. ಅವರೆಲ್ಲರಿಗೂ ಭಗವಂತನು ಭೂತ-ಭವ್ಯ-ಭವಿಷ್ಯತ್ಕಾಲದ ಆಗುಹೋಗುಗಳನ್ನೆಲ್ಲ ಸಂಪೂರ್ಣವಾಗಿ ಮತ್ತು ಸುಸ್ಪಷ್ಟವಾಗಿ ತೋರಿಸಿಕೊಟ್ಟನು. ಈ ಆಳ್ವಾರುಗಳು ತಮ್ಮ ಭಗವದನುಭವದ ಕೃತಿಗಳಾದ ಅರುಳಿಚ್ಚೆಯಲ್ ಎಂದು ಪ್ರಸಿದ್ಧವಾದ ೪೦೦೦ ದಿವ್ಯಪ್ರಬಂಧಗಳನ್ನು ರಚಿಸಿದರು. ಈ ಅರುಳಿಚ್ಚೆಯಲ್ ಎಂಬ ದಿವ್ಯಪ್ರಬಂಧಗಳ ಸಾರವು ನಮ್ಆಳ್ವಾರ್ ಅನುಗ್ರಹಿಸಿರುವ ತಿರುವಾಯ್ಮೊಳಿ ಎಂಬ ದಿವ್ಯ ಶ್ರೀಸೂಕ್ತಿಗಳಲ್ಲ ಅಡಕವಾಗಿದೆ .
ಆಳ್ವಾರುಗಳ ಕಾಲದ ನಂತರ ಆಚಾರ್ಯರುಗಳು ಅವತರಿಸತೊಡಗಿದರು. ನಾಥಮುನಿಗಳು, ಉಯ್ಯಕ್ಕೊಂಡಾರ್, ಮಣಕ್ಕಾಲ್ ನಂಬಿ, ಆಳವಂದಾರ್, ಪೆರಿಯ ನಂಬಿ, ಪೆರಿಯ ತಿರುಮಲೈ ನಂಬಿ, ತಿರುಕ್ಕೋಷ್ಠಿಯೂರ್ ನಂಬಿ, ತಿರುಮಾಲೈ ಆಂಡಾನ್, ಆಳ್ವಾರ್ ತಿರುವರಂಗಪ್ಪೆರುಮಾಳ್ ಅರೈಯರ್, ಎಂಪೆರುಮಾನಾರ್, ಎಂಬಾರ್, ಕೂರತ್ತಾಳ್ವಾನ್, ಮುದಲಿಯಾಂಡಾನ್, ಅರುಳಾಳಪ್ಪೆರುಮಾಳ್ ಎಂಪೆರುಮಾನಾರ್, ಅನಂತಾಳ್ವಾನ್, ತಿರುಕ್ಕುರುಗೈಪ್ಪಿರಾನ್ ಪಿಳ್ಳಾನ್, ಎಂಗಳಾಳ್ವಾನ್, ನಡಾದೂರಮ್ಮಾಳ್, ಭಟ್ಟರ್, ನಂಜೀಯರ್, ನಂಪಿಳ್ಳೈ, ವಡಕ್ಕುತ್ತಿರುವೀದಿಪ್ಪಿಳ್ಳೈ, ಪೆರಿಯವಾಚ್ಚಾನ್ ಪಿಳ್ಳೈ, ಪಿಳ್ಳೈ ಲೋಕಾಚಾರ್ಯರು, ಅಳಗಿಯ ಮಣವಾಳಪ್ಪೆರುಮಾಳ್ ನಾಯನಾರ್, ಕೂರಕುಲೋತ್ತಮ ದಾಸರು, ತಿರುವಾಯ್ಮೊಳಿಪ್ಪಿಳ್ಳೈ, ವೇದಾಂತಾಚಾರ್ಯರು ಮತ್ತು ಮಣವಾಳ ಮಾಮುನಿಗಳೆಂಬ ಹಲವು ಆಚಾರ್ಯರುಗಳು ಅವತರಿಸಿ ನಮ್ಮ ಸಂಪ್ರದಾಯವನ್ನು ಬೆಳೆಸಿದರು. ಈ ಆಚಾರ್ಯ ಪರಂಪರೆಯು ಎಂಪೆರುಮಾನಾರ್ ಸ್ಥಾಪಿಸಿದ ೭೪ ಸಿಂಹಾಸನಾಧಿಪತಿಗಳ ಮೂಲಕವೂ, ಎಂಪೆರುಮಾನಾರ್ ಮತ್ತು ಮಣವಾಳ ಮಾಮುನಿಗಳು ಸ್ಥಾಪಿಸಿದ ಜೀಯರ್ ಮಠಗಳ ಮೂಲಕವೂ ಇಂದಿನ ವರೆಗೂ ಹರಿದು ಬಂದಿದೆ. ಈ ಆಚಾರ್ಯರುಗಳು ಅರುಳಿಚ್ಚೆಯಲ್ ಎಂಬ ದಿವ್ಯಪ್ರಬಂಧಗಳಿಗೆ ಅನೇಕ ವ್ಯಾಖ್ಯಾನಗಳನ್ನು ಬರೆದು ಆ ಪಾಶುರಗಳ ಅರ್ಥವಿಶೇಷಗಳನ್ನು ವಿಶದವಾಗಿ ವಿವರಿಸಿದ್ದಾರೆ. ಈ ವ್ಯಾಖ್ಯಾನಗಳೇ ಅವರೆಲ್ಲರೂ ನಮಗಾಗಿ ಬಿಟ್ಟು ಹೋಗಿರುವ ದೊಡ್ಡ ನಿಧಿ. ನಾವುಗಳು ಇದನ್ನವಲಂಬಿಸಿ, ಈ ವ್ಯಾಖ್ಯಾನಗಳನ್ನು ಓದಿ , ಭಗವದನುಭವದಲ್ಲಿ ಮುಳುಗಿರುವುದಕ್ಕಾಗಿಯೇ ಅವರು ಈ ನಿಧಿಯನ್ನು ಬಿಟ್ಟು ಹೋಗಿದ್ದಾರೆ. ಮೇಲ್ಕಂಡ ಆಚಾರ್ಯರುಗಳೆಲ್ಲರೂ ಆಳ್ವಾರುಗಳ ವಿಶೇಷ ಕೃಪೆಯ ಮೂಲಕ ಆ ಪಾಶುರಗಳ ನಿಜಾರ್ಥಗಳನ್ನರಿತು ನಮಗೆಲ್ಲ ತಿಳಿಯುವಂತೆ ಅನೇಕ ವಿಧಗಳಲ್ಲಿ ವಿವರಿಸಿದ್ದಾರೆ.
ತಮ್ಮ ಉಪದೇಶ ರತ್ತಿನಮಾಲೈ ಎಂಬ ಕೃತಿಯಲ್ಲಿ ಮಣವಾಳ ಮಾಮುನಿಗಳು ಈ ಎಲ್ಲಾ ವ್ಯಾಖ್ಯಾನಗಳು ಇರುವುದರಿಂದಲೇ ನಮಗೆ ದಿವ್ಯಪ್ರಬಂಧಗಳ ನಿಜಾರ್ಥಗಳು ತಿಳಿಯಲು ಸಾಧ್ಯವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ವ್ಯಾಖ್ಯಾನಗಳಿಲ್ಲದೆ ಹೋಗಿದ್ದಲ್ಲಿ ನಮ್ಮ ದಿವ್ಯಪ್ರಬಂಧಗಳೂ ಇತರ ತಮಿಳು ಸಾಹಿತ್ಯದಂತೆ ಕೆಲವು ಜ್ಞಾನಿಗಳು ಮಾತ್ರವೇ ತಿಳಿಯುವ ಸಾಹಿತ್ಯವಾಗಿರುತ್ತಿತ್ತು. ನಮ್ಮ ಪೂರ್ವಾಚಾರ್ಯರುಗಳು ಆ ಪಾಶುರಗಳ ಸಂದೇಶಗಳನ್ನು ಯಥಾರ್ಥವಾಗಿ ತಿಳಿದಿದ್ದ ಕಾರಣ ಈ ಪ್ರಬಂಧಗಳನ್ನು ಮನೆಗಳಲ್ಲೂ ದೇವಾಲಯಗಳಲ್ಲೂ ನಿತ್ಯಾನುಸಂಧಾನದ (ನಿತ್ಯ ಪಠಣದ) ಭಾಗವಾಗಿಟ್ಟರು. ಇದನ್ನು ಪ್ರತ್ಯಕ್ಷವಾಗಿ ಕಾಣಲು ನಾವು ತಿರುವಲ್ಲಿಕ್ಕೇಣಿ ದಿವ್ಯದೇಶಕ್ಕೆ ಹೋಗಿ ನೋಡಬಹುದು. ಅಲ್ಲಿ ಪ್ರತಿ ಶುಕ್ರವಾರ ನಡೆಯುವ ಶಿರಿಯ ತಿರುಮಡಲ್ ಗೋಷ್ಠಿಯಲ್ಲಿ ಐದಾರು ವರ್ಷದ ಮಕ್ಕಳೂ ಇತರ ಹಿರಿಯರಿಗಿಂತಲೂ ಜೋರಾದ
ಧ್ವನಿಯಲ್ಲಿ ಪಾಶುರಗಳನ್ನು ಸೇವಿಸುವುದನ್ನು ನಾವಲ್ಲಿ ಕಾಣಬಹುದು. ಅಲ್ಲದೆ, ನಮಗೆಲ್ಲರಿಗೂ ತಿರುಪ್ಪಾವೈ ಚಿರಪರಿಚಿತ. ಮಾರ್ಗಳಿ (ಧನುರ್ಮಾಸ) ಮಾಸದಲ್ಲಿ ಮೂರ್ನಾಲ್ಕು ವರ್ಷದ ಮಕ್ಕಳೂ ಆಂಡಾಳ್ ರಚಿಸಿದ ಅದ್ಭುತವಾದ ತಿರುಪ್ಪಾವೈ ಪಾಶುರಗಳನ್ನು ಸುಮಧುರವಾಗಿ ಪಠಿಸುವುದನ್ನು ನಾವು ಎಲ್ಲಿಯೂ ಕಾಣಬಹುದು.
ಈ ರೀತಿಯಲ್ಲಿ ನಾವು ನಮ್ಮ ಗುರುಪರಂಪರೆಯ ಮುಖ್ಯತ್ತ್ವವನ್ನರಿತು ಇದರ ಮಹಿಮೆಯನ್ನು ದಿನವೂ ಆಸ್ವಾದಿಸಬಹುದು.
ನಮ್ಮ ಪೂರ್ವಾಚಾರ್ಯರುಗಳ ಬಗೆಗೆ ಇನ್ನೂ ಹೆಚ್ಚಿನ ವಿವರಗಳನ್ನು ವಿಭಿನ್ನ ಭಾಷೆಗಳಲ್ಲಿ ತಿಳಿಯಲು ಇಲ್ಲಿಗೆ ಭೇಟಿ ನೀಡಿ: https://acharyas.koyil.org
ಆಳ್ವಾರ್‌ಗಳ್ ವಾಳಿ, ಅರುಳಿಚ್ಚೆಯಲ್ ವಾಳಿ, ತಾಳ್ವಾದುಮಿಲ್ ಕುರವರ್ ತಾಮ್ ವಾಳಿ (ಆಳ್ವಾರುಗಳು ಚಿರಕಾಲವಿರಲಿ, ದಿವ್ಯಪ್ರಬಂಧಗಳು ಚಿರಕಾಲವಿರಲಿ, ಈ ದಿವ್ಯಪ್ರಬಂಧಗಳನ್ನು ಸ್ವಯಂ ಅನುಸಂಧಾನ ಮಾಡಿ ಇತರರಿಗೂ ಉಪದೇಶಿಸಿದ ನಮ್ಮ ಶ್ರೇಷ್ಠ ಆಚಾರ್ಯರುಗಳು ಚಿರಕಾಲವಿರಲಿ) – ಉಪದೇಶ ರತ್ತಿನಮಾಲೈ – ೩.
ಅಡಿಯೇನ್ ಶ್ರೀನಿವಾಸ ರಾಮಾನುಜ ದಾಸನ್
ಮೂಲ: https://granthams.koyil.org/2015/12/simple-guide-to-srivaishnavam-guru-paramparai/
ರಕ್ಷಿತ ಮಾಹಿತಿ: https://granthams.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org
1 thought on “ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಗುರುಪರಂಪರೆ”