ಶ್ರೀಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರ ಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ನಾವು ಈಗ ಅಪೂರ್ವ ಕರುಣಾಮಯಿಯಾದ ಪಿಳ್ಳೈ ಲೋಕಾಚಾರ್ಯರ ಬಗ್ಗೆ ಒಂದು ನೋಟ ಹರಿಸೋಣ ಮತ್ತು ಅವರ ದಿವ್ಯ ಸಾಹಿತ್ಯವಾದ ತತ್ತ್ವ ತ್ರಯಮ್ ಅನ್ನು ಮತ್ತು ಇಂತಹ ಅದ್ಭುತ ಕೃತಿಗೆ ಮಣವಾಳ ಮಾಮುನಿಗಳ್ ಬರೆದಿರುವ ಅತ್ಯಂತ ಸುಂದರವಾದ ವ್ಯಾಖ್ಯಾನ ಅವತಾರಿಕಾ (ವ್ಯಾಖ್ಯಾನದ ಪರಿಚಯ) ವನ್ನು ಗಮನಿಸೋಣ.

ತತ್ತ್ವ ತ್ರಯಮ್, ಕುಟ್ಟಿಭಾಷ್ಯವೆಂದೂ ಪ್ರಸಿದ್ಧಿಯಾಗಿದೆ. (ಶ್ರೀಭಾಷ್ಯಮ್‍ನ ಒಂದು ಚಿಕ್ಕದಾದ ನಿರೂಪಣೆ) . ಎಂಪೆರುಮಾನಾರರು ಬ್ರಹ್ಮ ಸೂತ್ರಮ್‍ಗೆ ಬಹಳ ವಿಸ್ತಾರವಾದ ವಿವರಣೆಯನ್ನು ನೀಡಿದ್ದಾರೆ. ಇದು ಶ್ರೀಭಾಷ್ಯಮ್ ಎಂದೇ ಪ್ರಸಿದ್ಧವಾಗಿದೆ. ಮತ್ತು ಎಂಪೆರುಮಾನಾರರು ಶ್ರೀ ಭಾಷ್ಯಕಾರರೆಂದೇ ಪ್ರಸಿದ್ಧರಾಗಿದ್ದಾರೆ. ಏಕೆಂದರೆ, ಇದು ನಮ್ಮ ವಿಶಿಷ್ಟಾದ್ವೈತ ಸಿದ್ಧಾಂತದ ಎಲ್ಲಾ ಬಹು ಅತ್ಯಗತ್ಯವಾದ ತತ್ತ್ವಗಳನ್ನೂ ಅತ್ಯಂತ ಸರಳವಾಗಿ ಸೂತ್ರಗಳನ್ನು ಸ್ಥೂಲವಾದ ಚಿತ್ರಣವನ್ನು ತಮಿೞಿನಲ್ಲಿ ಹೊಂದಿದೆ. ಈ ಗ್ರಂಥವು ಮೂರು ಮೂಲಾಧಾರವಾದ ತತ್ತ್ವಗಳನ್ನು ವಿವರಿಸಿದೆ. ಅವುಗಳು ಚಿತ್ (ಜೀವಾತ್ಮಗಳು), ಅಚಿತ್ (ವಸ್ತುಗಳು) ಮತ್ತು ಈಶ್ವರನ್. ಇದರ ಒಂದು ಸೂಕ್ಷ್ಮ ವಿವರಣೆಯನ್ನು ಇಲ್ಲಿ ನೋಡಬಹುದು. https://granthams.koyil.org/thathva-thrayam-kannada/
ಇದರ ಹಿನ್ನೆಲೆಯಲ್ಲಿ ನಾವು ಈಗ ತತ್ತ್ವ ತ್ರಯಮ್‍ನ ಅನುವಾದವನ್ನು, ಈ ಗ್ರಂಥಕ್ಕೆ ಮಾಮುನಿಗಳ್ ನೀಡಿದ ಅದ್ಭುತವಾದ ಪರಿಚಯವನ್ನು ನೋಡೋಣ.
“ಅನಾದಿ ಮಾಯಯಾ ಸುಪ್ತಃ” ದಲ್ಲಿ ಉಲ್ಲೇಖಿಸಿರುವ ಹಾಗೆ, ನಮಗೆ ನೆನಪಿನಲ್ಲಿರುವ ಕಾಲದಿಂದಲೂ ಹಿಂದೆ, ಈ ಸಂಸಾರದಲ್ಲಿರುವ ಜೀವಾತ್ಮಗಳು, ಅಜ್ಞಾನವನ್ನು (ಕತ್ತಲೆಯನ್ನು) ತರುವ ವಸ್ತುಗಳೊಂದಿಗೆ ಇರುವ ಲಗತ್ತಿನಿಂದ ಬುದ್ಧಿಯು ಸಂಪೂರ್ಣವಾಗಿ ಅದರ ವಶವಾಗಿ , ಜೀವಾತ್ಮದ ಸಹಜ ಸ್ವಭಾವವಾದ ಜ್ಞಾನದಿಂದ ಮತ್ತು ಆನಂದದಿಂದ ಭರಿತವಾಗಿ, ಭಗವಂತನ ಆನಂದಕ್ಕಾಗಿಯೇ ಅಸ್ತಿತ್ವದಲ್ಲಿರುವುದನ್ನು ಮತ್ತು ತಾವುಗಳು ವಸ್ತುಗಳಿಂದ ಬೇರೆಯಾಗಿರುವುದನ್ನು ಮರೆತು ಬಿಡುತ್ತದೆ.
ಸರಿಯಾಗಿ ಅರ್ಥಮಾಡಿಕೊಳ್ಳದೆ,
- ಜೀವಾತ್ಮವು “ದೇವೋಹಮ್ ಮನುಷ್ಯೋಹಮ್” (ನಾನು ಒಬ್ಬ ದೇವ, ನಾನು ಒಬ್ಬ ಮನುಷ್ಯ) ಮತ್ತು ನಿರ್ಜೀವ ದೇಹವನ್ನೇ ನಾನು ಎಂದು ತಿಳಿದುಕೊಳ್ಳುವುದು.
- ದೇಹದಿಂದ ತಾನು ಬೇರೆ ಎಂದು ಅರ್ಥ ಮಾಡಿಕೊಂಡರೂ , “ಈಶ್ವರೋಹಮ್ ಅಹಮ್ ಭೋಗಿ” (ನಾನೇ ನಿಯಂತ್ರಕ , ನಾನೇ ಆನಂದಪಡುವವನು), ಮತ್ತು ಅವನು ತಾನು ಸಂಪೂರ್ಣವಾಗಿ ಸ್ವತಂತ್ರವೆಂದು ಯೋಚಿಸಲು ಆರಂಭಿಸುತ್ತಾನೆ.
- ತಾನು ಭಗವಂತನ ಅನುಯಾಯಿ (ಸೇವಕ) ಎಂದು ಅರ್ಥೈಸಿಕೊಂಡರೂ, ಅವನು ಲೌಕಿಕ ಆನಂದದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ , ಕೈಂಕರ್‍ಯಕ್ಕೆ ಬದಲಾಗಿ.
“ಯೋನ್ಯಾಥಾ ಸಂತಮಾನಮ್ ಅನನ್ಯಥಾ ಪ್ರತಿಪಥ್ಯದೇ, ಕಿಮ್ ತೇನ ನ ಕೃತಮ್ ಪಾಪಮ್ ಚೋರೇನಾತ್ಮಬಹಾರಿಣಾ” ದಲ್ಲಿ ಹೇಳಿರುವಂತೆ, ಜೀವಾತ್ಮವು ತನ್ನ ನಿಜ ಸ್ವರೂಪವನ್ನು ಅನರ್ಥೈಸಿಕೊಂಡು, ಎಲ್ಲಾ ಪಾಪಗಳಿಗಿಂತಾ ಹೆಚ್ಚಾಗಿರುವ (ಬೇರೆ ಪಾಪಗಳಿಗೂ ಕಾರಣವಾಗುವ) ಪಾಪವು ಭಗವಂತನ ಆಸ್ತಿಯಾಗಿರುವ ಜೀವಾತ್ಮವನ್ನು ಕದ್ದು, (ತನ್ನದೆಂದು ತಿಳಿದು) ಮತ್ತು ಅಗೌಣವಾದ ಮತ್ತು ತಾತ್ಕಾಲಿಕವಾದ ಲೌಕಿಕ ಆನಂದಗಳಿಗೆ ತನ್ನನ್ನು ತೊಡಗಿಸಿಕೊಳ್ಳುವುದು.
“ವಿಚಿತ್ರಾ ದೇಹಾ ಸಂಪತ್ತಿರ್ ಈಶ್ವರಾಯ ನಿವೇದಿತಮ್, ಪೂರ್ವಮೇವ ಕೃತಾ ಬ್ರಹ್ಮನ್ ಹಸ್ತಪಾದಾದಿ ಸಂಯುಕ್ತಾ” ದಲ್ಲಿ ಹೇಳಿರುವಂತೆ ಜೀವಾತ್ಮವು ಪ್ರಳಯ ಕಾಲದಲ್ಲಿ ನಿರ್ಜೀವ ವಸ್ತುವಿನಂತೆ ಮಲಗಿರುವಾಗ ಅವುಗಳಿಗೆ ಇಂದ್ರಿಯ ಜ್ಞಾನ ಮತ್ತು ದೇಹವಿಲ್ಲದ ಕಾರಣ, ಲೌಕಿಕವಾದ ಆನಂದದಲ್ಲೂ ಮತ್ತು ಮೋಕ್ಷಕ್ಕೆ ಪ್ರಯತ್ನ ಪಡಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಕರುಣಾಮಯನಾದ ಸರ್ವೇಶ್ವರನು ಇಂದ್ರಿಯಗಳು ಮತ್ತು ದೇಹವನ್ನು ಹೊಂದಿರುವ ಜೀವಾತ್ಮಗಳನ್ನು ಭಗವಂತನ ಚರಣ ಕಮಲಗಳನ್ನು ಸೇರಲು ಆರಂಭಿಸುವ ಕ್ರಿಯೆಯನ್ನು ಮಾಡುತ್ತಾನೆ.

ಜೀವಾತ್ಮವು ,ತನ್ನ ದೇಹವನ್ನು ಮತ್ತು ಇಂದ್ರಿಯಗಳನ್ನು ಭಗವಂತನನ್ನು ಸನ್ನಿಹಿಸಲು ಪ್ರಯತ್ನ ಪಡದೆ , ನಮ್ಮಾಳ್ವಾರರು ತಿರುವಾಯ್ಮೊೞಿ 3.2.1 ರಲ್ಲಿ ಹೇಳಿರುವ ಹಾಗೆ “ಅನ್ನಾಲ್ ನೀ ತಂದ ಆಕ್ಕೈಯಿನ್ ವಾೞಿ ಉೞಲ್ವೇನ್” ಇದು ದೈಹಿಕ ಮತ್ತು ಇಂದ್ರಿಯಗಳ ಆನಂದಕ್ಕೆ ಉಪಯೋಗಿಸಲ್ಪಡುತ್ತದೆ. ಹೇಗೆ ಒಬ್ಬ ವ್ಯಕ್ತಿಗೆ ದೋಣಿಯನ್ನೂ ಕೋಲನ್ನೂ , ನದಿಯನ್ನು ದಾಟಲು ಕೊಟ್ಟರೆ , ಅವನು ಅದನ್ನು ಉಪಯೋಗ ಪಡಿಸಿಕೊಳ್ಳದೇ ಹೇಗೆ ಆ ನದಿಯ ದಿಕ್ಕಿಗೇ ಹರಿದು ಸಮುದ್ರದಲ್ಲಿ ಬೀಳುವಂತೆ. ಈ ದೇಹವನ್ನೂ ಇಂದ್ರಿಯಗಳನ್ನೂ ಈ ಸಂಸಾರದಿಂದ ಮೇಲೆತ್ತಲು ಕೊಡಲಾಗಿದೆ, ಆದರೆ ಈ ಸಂಸಾರದಲ್ಲಿಯೇ ಆನಂದ ಪಡಲು ಉಪಯೋಗಿಸಿಕೊಳ್ಳುತ್ತಿರುವಂತೆ. ಜೀವಾತ್ಮವು ಬಹಳ ಹಿಂದಿನಿಂದಲೂ ಕೊನೆಯಿಲ್ಲದ ಪಾಪ ಕರ್ಮಗಳಿಂದ , ಅಜ್ಞಾನದಿಂದ ಹಲವು ಜನ್ಮಗಳನ್ನು ಪಡೆಯುತ್ತದೆ. ಆ ಜನ್ಮಗಳಲ್ಲಿ ಬಹಳ ಹಿಂಸಾಜನಕವಾದ ಯಾತನೆಗಳನ್ನು ಅನುಭವಿಸುತ್ತದೆ. (ತಾಪತ್ರಯಮ್ – ಮೂರು ವಿಧವಾದ ಯಾತನೆಗಳು) ಅದನ್ನು ಅರ್ಥ ಮಾಡಿಕೊಳ್ಳದೇ ಕರ್ಮದಲ್ಲಿ ವ್ಯಸ್ತಗೊಳ್ಳುತ್ತಾನೆ. ಹಲವು ಹಂತಗಳನ್ನು ತಲುಪುತ್ತಾನೆ, ಅವು ಗರ್ಭ (ತಾಯಿಯ ಹೊಟ್ಟೆಯಲ್ಲಿರುವುದು) ,ಜನ್ಮ (ಹುಟ್ಟುವುದು), ಬಾಲ್ಯ ( ಶಿಶುವಾಗಿ ತನ್ನನ್ನು ತಾನು ಆರೈಕೆ ಮಾಡಿಕೊಳ್ಳಲಾಗದ) , ಯೌವನ (ಇಂದ್ರಿಯಗಳ ಸಂತೋಷಕ್ಕಾಗಿ ಉಪಯೋಗಿಸುವನು) , ವಾರ್ದಕ (ಮುಪ್ಪು) , ಮರಣ (ಸಾವು) ಮತ್ತು ನರಕ (ಯಾತನೆಗಳಿಂದ ಕೂಡಿದ ಲೋಕದಲ್ಲಿ) ಮತ್ತು ಅಲ್ಲಿಂದ ಕೊನೆಯಿಲ್ಲದ ಹಿಂಸೆಗಳನ್ನು ಅನುಭವಿಸುತ್ತಾನೆ. ಈ ರೀತಿ ಜೀವಾತ್ಮವು ಕೊನೆಯಿಲ್ಲದ ಯಾತನೆಗಳನ್ನು ಈ ಸಂಸಾರವೆಂಬ ಸಾಗರದಲ್ಲಿ (ತೊಂದರೆಗಳಿಂದ ಕೂಡಿದ) ಅನುಭವಿಸುತ್ತಿರುವಾಗ, ಅತ್ಯಂತ ಕರುಣಾಮಯಿಯಾದ ಭಗವಂತನು , ಎಲ್ಲರ ಹಿತಚಿಂತಕನಾದವನು ಮತ್ತು ನಿರಂತರವಾಗಿ ಜೀವಾತ್ಮವನ್ನು ಮೇಲೆತ್ತಲು ಪ್ರಯತ್ನಿಸುವವನು ಜೀವಾತ್ಮವನ್ನು ನೋಡಿ ಸಹಾನುಭೂತಿಯನ್ನು ಹೊಂದಿ, “ಏವಮ್ ಸಂಸೃತಿ ಚಕ್ರಾಸ್ಥೇ ಬ್ರಾಮ್ಯಮಾಣೇ ಸ್ವಕರ್ಮಭಿಃ ಜೀವೇ ದುಃಖಾಕುಲೇ ವಿಷ್ಣೋಃ ಕೃಪಾ ಕಾಪಿ ಉಪಜಾಯತೇ” ನಲ್ಲಿ ಹೇಳಿರುವಂತೆ ಅವನ ದಿವ್ಯ ಹೃದಯದಲ್ಲಿರುವ ಶ್ರೇಷ್ಠ ಸಹಾನುಭೂತಿಯಿಂದ “ಜಾಯಮಾನಮ್ ಹಿ ಪುರುಷಮ್ ಯಮ್ ಪಶ್ಯೇನ್ ಮಧುಸೂಧನಃ ಸಾತ್ವಿಕಸ್ ಸ ತು ವಿಗ್ಯೇಯಸ್ ಸ ವೈ ಮೋಕ್ಷಾರ್ಥ ಚಿಂತಕಃ” ನಲ್ಲಿ ಹೇಳಿರುವಂತೆ ಭಗವಂತನು ಜೀವಾತ್ಮವನ್ನು ಜನ್ಮ ಪಡೆಯುವಾಗ ಈ ಸಂಸಾರದಿಂದ ಹೇಗೆ ಮೇಲೆತ್ತಪಡಬೇಕು ಎಂದು ಉಪದೇಶಿಸಿ ಹರಸುವನು. ಮುಮುಕ್ಷುವಿಗೆ (ಮೋಕ್ಷವನ್ನು ಬಯಸುವವನಿಗೆ) ಸರಿಯಾದ ನಿಜ ಜ್ಞಾನವಿಲ್ಲದೆ ಮೋಕ್ಷವನ್ನು ಹೊಂದಲು ಸಾಧ್ಯವಿಲ್ಲ.
ಯಾರಾದರೂ ನಿಜವಾದ ಜ್ಞಾನವನ್ನು ಪಡೆಯಲು ಎರಡು ದಾರಿಗಳಿವೆ, ಶಾಸ್ತ್ರದಿಂದ ಮತ್ತು ಉಪದೇಶದಿಂದ.
ಶಾಸ್ತ್ರಗಳಿಂದ ಕಲಿತುಕೊಳ್ಳಲು ಈ ಪರಿಮಿತಿಗಳಿವೆ.
- “ಶಾಸ್ತ್ರ ಜ್ಞಾನಮ್ ಬಹು ಕ್ಲೇಶಮ್” ನಲ್ಲಿ ಹೇಳಿರುವಂತೆ ಶಾಸ್ತ್ರಮ್ ಕೊನೆಯಿಲ್ಲದ್ದಾಗಿದೆ ಮತ್ತು ಬಹಳ ತದ್ವಿರುದ್ಧವಾದ ಗೊಂದಲವನ್ನುಂಟುಮಾಡುವ ಹೇಳಿಕೆಗಳಿವೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಶಾಸ್ತ್ರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಕ್ಲಿಷ್ಟವಾದ ಪದಗಳನ್ನು ಕಲಿಯಲು ಕಷ್ಟವಾಗುತ್ತದೆ. ಆದ್ದರಿಂದ ಇದು ಕಷ್ಟ ಸಾಧ್ಯ.
- ಆದರೂ ಒಬ್ಬರು ಈ ಕಷ್ಟಗಳನ್ನು ಅನುಭವಿಸಿ ಶಾಸ್ತ್ರಗಳನ್ನು ಕಲಿಯಲು ಹೋದರೆ, “ಅನಂತ ಭಾರಮ್ ಬಹುವೇದಿತವ್ಯಮ್ ಅಲ್ಪಚ್ಛ ಕಾಲೋ ಭಹವಚ್ಛ ವಿಘ್ನಾಃ “ನಲ್ಲಿ ಹೇಳಿರುವ ಹಾಗೆ, ಕಲಿಯಲು ಬಹಳಷ್ಟು ಇವೆ. ಆದರೆ ಜೀವಾತ್ಮಗಳಿಗೆ (ಬಂಧ ಆತ್ಮಗಳಿಗೆ) ಬುದ್ಧಿಯು ಸ್ವಲ್ಪವೇ ಇರುವುದು ಮತ್ತು ಜೀವನ ಅವಧಿಯೂ ಕೂಡಾ. ಮತ್ತು ಶಾಸ್ತ್ರವನ್ನು ಕಲಿಯಲು ಎಷ್ಟು ತೊಂದರೆಗಳು.
- ಕೊನೆಯಲ್ಲಿ, ಸ್ತ್ರೀಯರು ಮತ್ತು ಶೂದ್ರರು ಮುಮುಕ್ಷುವಾಗಲು (ಮೋಕ್ಷವನ್ನು ಪಡೆಯುವ ಆಸೆಯನ್ನು ಹೊಂದಿರುವವರು) ಅರ್ಹತೆ ಹೊಂದಿದ್ದರೂ, ಶಾಸ್ತ್ರವನ್ನು ಕಲಿಯಲು ಅರ್ಹರಾಗಿರುವುದಿಲ್ಲ.
ಗುರುವಿನ ಮೂಲಕ ಕಲಿಯಲು ಈ ಪರಿಮಿತಿಗಳು ಇರುವುದಿಲ್ಲ. (ಏಕೆಂದರೆ ಅವರಿಗೆ ಶಾಸ್ತ್ರದ ಸಾರಾಂಶ ಮತ್ತು ಉದ್ದೇಶ ಅರ್ಥವಾಗಿರುತ್ತದೆ. ಮತ್ತು ಅವರು ಅದನ್ನು ತಮ್ಮ ಹಿಂಬಾಲಕರಿಗೆ / ಶಿಷ್ಯರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ವಿವರಿಸುತ್ತಾರೆ.)
ಈ ತತ್ತ್ವವನ್ನು ವಿಚಾರ ಮಾಡಿದಾಗ, ಅತ್ಯಂತ ಕರುಣಾಮಯಿಯಾದ ಪಿಳ್ಳೈ ಲೋಕಾಚಾರ್‍ಯರು ಎಲ್ಲಾ ಶಾಸ್ತ್ರಗಳಲ್ಲೂ ಪಾಂಡಿತ್ಯ ಹೊಂದಿರುವವರು ಮತ್ತು ಎಲ್ಲಾ ಜೀವಾತ್ಮಗಳನ್ನೂ ಮೇಲೆತ್ತಲು ಕೇಂದ್ರೀಕೃತರಾದವರು ಮೂರು ವಿಧವಾದ ವಸ್ತುಗಳ ಸಹಜ (ನಿಜ) ಸ್ವರೂಪ ಮತ್ತು ಅವುಗಳ ಗುಣಗಳನ್ನು ಅತ್ಯಂತ ಸರಳವಾದ ಬಗೆಯಲ್ಲಿ ಮತ್ತು ಖಚಿತವಾಗಿ ವಿವರಿಸಿದ್ದಾರೆ. (ಚಿತ್, ಅಚಿತ್ ಮತ್ತು ಈಶ್ವರ). ಈ ತತ್ತ್ವಗಳು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿವೆ ಎಂದು ಗಮನಿಸಿ. ಆದರೆ ಅವುಗಳು ಎಲ್ಲರಿಗೂ ಸುಲಭವಾಗಿ ದೊರಕದು. ಆದ್ದರಿಂದ ಶ್ರೇಷ್ಠವಾದ ಕೃಪೆಯಿಂದ ಪಿಳ್ಳೈ ಲೋಕಾಚಾರ್‍ಯರು ತಮ್ಮ ಪ್ರಬಂಧದಲ್ಲಿ ಈ ತತ್ತ್ವಗಳನ್ನು ಶೇಖರಿಸಿದ್ದಾರೆ (ಸಂಗ್ರಹಿಸಿದ್ದಾರೆ) – ತತ್ತ್ವ ತ್ರಯಮ್ ನಲ್ಲಿ.
ಈ ಬಹು ಕ್ಲಿಷ್ಟವಾದ ತತ್ತ್ವಗಳನ್ನು ಸುಲಭವಾದ ಮಾರ್ಗದಲ್ಲಿ ಬರೆದಿರುವುದಕ್ಕೆ ಉದ್ದೇಶವೇನೆಂದರೆ , ಹಿಂದಿನ ಆಚಾರ್‍ಯರು ಅವರು – ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್, ಪೆರಿಯವಾಚ್ಚಾನ್ ಪಿಳ್ಳೈ ಮುಂತಾದವರೂ ಕೂಡಾ ತಮ್ಮ ನಿಜವಾದ ಜ್ಞಾನವನ್ನು ತಾವು ತಿಳಿದಿರುವುದನ್ನು ಸುಲಭವಾದ ಸರಳ ರೀತಿಯಲ್ಲಿ ಎಲ್ಲಾ ಜೀವಾತ್ಮಗಳ ಅಭಿವೃದ್ಧಿಗಾಗಿ ಬಹಿರಂಗ ಪಡಿಸುವುದು. ನಮ್ಮ ಮನಸ್ಸಿನಲ್ಲಿ ಒಂದೆರಡು ಪ್ರಶ್ನೆಗಳು ಉಂಟಾಗಬಹುದು. -ನಮ್ಮ ಪೂರ್ವಾಚಾರ್‍ಯರೆಲ್ಲರೂ
- ಅಹಂಕಾರದಿಂದ ಸಂಪೂರ್ಣವಾಗಿ ಹೊರತಾಗಿದ್ದರು .
- ಎಲ್ಲಾ ಜೀವಾತ್ಮಗಳ ಅಭಿವೃದ್ಧಿ ಒಳತನ್ನು ಸದಾ ಚಿಂತಿಸುವವರಾಗಿದ್ದರು.
- ತಮ್ಮ ವ್ಯಕ್ತಿಗತವಾದ ಪ್ರಸಿದ್ಧಿಯನ್ನು , ಒಳಿತನ್ನು ಎಂದಿಗೂ ಅಪೇಕ್ಷಿಸುತ್ತಿರಲಿಲ್ಲ.
ಆದರೆ ಬಹಳಷ್ಟು ಆಚಾರ್‍ಯರು ಏಕೆ ಅದೇ ವಿಷಯದ ಮೇಲೆ ಬರೆದಿದ್ದಾರೆ? ಅವರೆಲ್ಲರೂ ಮೊದಲನೆಯ ಗ್ರಂಥವನ್ನೇ ಒಪ್ಪಿಕೊಂಡು ಅದರ ಮೇಲೆ ತತ್ತ್ವಗಳನ್ನು ಮಾತ್ರ ವಿವರಿಸಿರಬಹುದಷ್ಟೇ? (ಇದರ ಮೇಲೆ ಮಾಮುನಿಗಳ ಅತ್ಯಂತ ಸುಂದರವಾದ ವಿವರಣೆಗಾಗಿ ಇಲ್ಲಿ ನೋಡಿ).
- ಆಳ್ವಾರರು ಏಕಕಂಠರ್ (ಒಂದೇ ಕತ್ತು ಮತ್ತು ಅನೇಕ ಮುಖಗಳು – ಇದರ ಅರ್ಥ ಅವರೆಲ್ಲರೂ ಒಂದೇ ತತ್ತ್ವವನ್ನು ವಿವರಿಸಿದ್ದಾರೆ. ) ಹಲವು ಆಳ್ವಾರರು ಒಂದೇ ತತ್ತ್ವವನ್ನು ವಿವರಿಸಿದಾಗ, ಆ ತತ್ತ್ವವು ಇನ್ನೂ ನಂಬಿಕೆಗೆ ಅರ್ಹವಾಗುತ್ತದೆ. ನಂಬಿಕೆಗೆ ಅರ್ಹವಾದ ವ್ಯಕ್ತಿಗಳು ಆ ವಿಷಯವನ್ನೇ ವೈಭವೀಕರಿಸಲು ಆ ವಿಷಯವು ಮತ್ತಷ್ಟು ಬಲವಾಗಿ ಸ್ಥಾಪಿತವಾಗುತ್ತದೆ. ಅದೇ ರೀತಿಯಲ್ಲಿ, ಏಕಕಂಠರಾದ ಅನೇಕ ಆಚಾರ್‍ಯರುಗಳು ಒಂದೇ ತತ್ತ್ವವನ್ನು ಅನೇಕ ಗ್ರಂಥಗಳಲ್ಲಿ ವಿವರಿಸಿದಾಗ, ಅತ್ಯಂತ ದಡ್ಡನಾದ ವ್ಯಕ್ತಿಯೂ ಸಹ ಅನೇಕ ಶ್ರೇಷ್ಠ ವ್ಯಕ್ತಿಗಳು ಒಂದೇ ವಿಷಯವನ್ನು ಬರೆದಿರುವುದನ್ನು ಕಂಡು , ಅದರ ಸತ್ಯದ ಬಗ್ಗೆ ಮನವರಿಕೆಯಾಗುತ್ತದೆ.
- ಮತ್ತು, ಯಾವ ವಿಷಯವು ಸೂಕ್ಷ್ಮವಾಗಿ ಒಂದು ಗ್ರಂಥದಲ್ಲಿ ಬರೆದಿದ್ದರೆ, ಇನ್ನೊಂದು ಗ್ರಂಥದಲ್ಲಿ ವಿಸ್ತಾರವಾದ ವಿವರಣೆಯಿರುತ್ತದೆ. ಆದ್ದರಿಂದ ಬೇರೆ ಬೇರೆ ಗ್ರಂಥಗಳು ಒಂದಕ್ಕೊಂದು ಪೂರಕವಾಗಿರುತ್ತದೆ.
ಈ ತತ್ತ್ವಗಳು ಒಬ್ಬರೇ ಆಚಾರ್‍ಯರು ಅನೇಕ ಗ್ರಂಥಗಳನ್ನು ಒಂದೇ ತತ್ತ್ವದ ಮೇಲೆ ಆಧಾರವಾಗಿ ಬರೆದಿರುವುದಕ್ಕೂ ಅನ್ವಯಿಸುತ್ತದೆ. ಈ ತತ್ತ್ವಗಳು ಬೇರೆ ಬೇರೆ ಗ್ರಂಥಗಳಲ್ಲಿ ಸರಿಯಾಗಿ ಸ್ಥಾಪಿತಗೊಂಡು ಒಂದಕ್ಕೊಂದು ಪೂರಕವಾಗಿರುತ್ತದೆ.

ಈ ರೀತಿಯಾಗಿ ತತ್ತ್ವತ್ರಯದ ಅದ್ಭುತವಾದ ಪರಿಚಯವು ಸಮಾಪ್ತಿಯಾಗುತ್ತದೆ. ಈ ಗ್ರಂಥವು ಅತ್ಯಂತ ಕ್ಲಿಷ್ಟವಾದ ನಮ್ಮ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಅತ್ಯಂತ ಸರಳವಾದ ರೀತಿಯಲ್ಲಿ ಪ್ರಸ್ತುತ ಪಡಿಸುವುದಕ್ಕಾಗಿ ಪ್ರಸಿದ್ಧವಾಗಿದೆ. ಮಾಮುನಿಗಳ ಅತಿ ಸುಂದರವಾದ ನಿಖರವಾದ ವ್ಯಾಖ್ಯಾನದಿಂದ ಈ ಗ್ರಂಥವು ಶ್ರೇಷ್ಠ ರೀತಿಯಲ್ಲಿ ಸವಿಯಲು ಆನಂದಮಯವಾಗಿದೆ. ಈ ಗ್ರಂಥವನ್ನು ಆಚಾರ್‍ಯರ ಮೂಲಕ ಕೇಳಿಸಿಕೊಳ್ಳುವುದರಿಂದ ತತ್ತ್ವಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಮಂಜಸವಾಗಿದೆ. ನಾವು ಈ ಶ್ರೇಷ್ಠ ಆಚಾರ್‍ಯರ ಚರಣ ಕಮಲಗಳಿಗೆ ವಂದಿಸಿ ಅವರಿಂದ ಆಶೀರ್ವಾದವನ್ನು ಪಡೆಯೋಣ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://granthams.koyil.org/2013/10/aippasi-anubhavam-pillai-lokacharyar-tattva-trayam/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಪಿಳ್ಳೈ ಲೋಕಾಚಾರ್‍ಯರ ತತ್ತ್ವ ತ್ರಯದ ಪರಿಚಯ”