ನಾಯನಾರ್ ವಿರಚಿತ ತಿರುಪ್ಪಾವೈ ಸಾರಾಂಶ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಆಂಡಾಳ್ ಭೂದೇವಿಯ ಅವತಾರ ಸ್ವರೂಪಿಣಿ, ಶ್ರೀಮನ್ನಾರಾಯಣನ ದಿವ್ಯಮಹಿಷಿ. ಭೂದೇವೀ ಅಮ್ಮನವರು ಈ ಭೂಲೋಕದಲ್ಲಿ ಆಂಡಾಳ್ (ಗೋದಾದೇವಿ) ಆಗಿ ಅವತರಿಸಿ, ಸಕಲ ಜೀವರಾಶಿಗಳ ಉದ್ಧಾರಕ್ಕಾಗಿ, ಭಕ್ತರ ಸಂಸಾರದ ಭೀತಿ ನೀಗಿಸಲು, ಭಗವಂತನ ದಿವ್ಯ ಗುಣಗಳ ಚರಿತ್ರೆಯನ್ನು ಸರಳವಾದ ತಮಿಳಿನಲ್ಲಿ ರಚಿಸಿ, ನಮಗೆ ಪುರುಷಾರ್ಥವಾದ ಭಗವದ್ ಕೈಂಕರ್ಯ ಪ್ರಾಪ್ತಿಯ ಉದ್ದೇಶವನ್ನು ಸಾಧಿಸಲು ಸರಳವಾದ ಮಾರ್ಗವನ್ನು ಅನುಗ್ರಹಿಸಿದಾಳೆ.

ಗೋದಾದೇವಿಯು ಸಣ್ಣ ಬಾಲೆಯಾಗಿದಾಗಲೇ ಎರಡು ದಿವ್ಯಪ್ರಬಂದ (ಪದ್ಯಗಳು) ಗಳನ್ನು ಶುದ್ಧ ತಮಿಳಿನಲ್ಲಿ ರಚಿಸಿದ್ದಾಳೆ. ಮೊದಲಿಗೆ, ತಿರುಪ್ಪಾವೈಯನ್ನು, ಭಗವದ್ ಪ್ರೀತ್ಯರ್ಥಕಾಗಿಯೇ ಭಗವದ್ ಕೈಂಕರ್ಯ ಪ್ರಾಪ್ತಿಗಾಗಿ ಸುಂದರವಾದ ಪದ್ಯಮಾಲೆಯನ್ನು ವರ್ಣಿಸಿ, ಪ್ರಾರ್ಥಿಸಿದ್ದಾಳೆ. ನಂತರ, ಭಗವಂತನ ಸಾಯುಜ್ಯ, ಕೈಂಕರ್ಯ ಸಿಕ್ಕದೇ ಪರಿತಪಿಸುತ್ತ, ಶ್ರೀಹರಿಯನ್ನು ಅಗಲಿರದೆ ರಚಿಸಿದ್ದು ನಾಚ್ಚಿಯಾರ್ ತಿರುಮೊಳಿ.

ಅಂತಿಮವಾಗಿ ಶ್ರೀ ರಂಗನಾಥನು (ಪೆರಿಯಪೆರುಮಾಳ್) ಗೋದಾದೇವಿಯನ್ನು ಶ್ರೀರಂಗಕ್ಕೆ ಸ್ವಾಗತಿಸಿ, ಅವಳನ್ನು ಸ್ವೀಕರಿಸುತ್ತಾನೆ. ಭೂದೇವಿಯು ಅತ್ಯುತ್ತಮವಾದ ಎರಡು ದಿವ್ಯ ಗ್ರಂಥಗಳನ್ನು(ತಿರುಪ್ಪಾವೈ ಮತ್ತು ನಾಚ್ಚಿಯಾರ್ ತಿರುಮೊಳಿ) ನಮಗೆ ಕರುಣಿಸಿ ಮತ್ತೆ ಶ್ರೀವೈಕುಂಠಕ್ಕೆ (ಪರಮಪದ) ತೆರಳುತ್ತಾಳೆ. ಶ್ರೀವೈಷ್ಣವ ಪೂರ್ವಾಚಾರ್ಯರುಗಳಾದ ಎಂಬೆರುಮಾನಾರ್, ಭಟ್ಟರ್, ಪೆರಿಯಾವಾಚ್ಚಾನ್ ಪಿಳ್ಳೈ, ಪಿಳ್ಳೈ ಲೋಕಾಚಾರ್ಯರ್, ವೇದಾಂತಾಚಾರ್ಯರ್, ಮಣವಾಳಮಾಮುನಿಗಳ್, ಪೊನ್ನಡಿಕ್ಕಾಲ್ ಜೀಯರ್ ಎಲ್ಲರೂ ಗೋದಾದೇವಿಯನ್ನು, ತಿರುಪ್ಪಾವೈಯನ್ನೂ ತಮ್ಮ ಪದ್ಯಗಳಲ್ಲಿ (ಪಾಶುರಮ್) ಶ್ಲೋಕಗಳಲ್ಲಿ, ಐತಿಹ್ಯಗಳಲ್ಲಿ, ವ್ಯಾಖ್ಯಾನಗಳಲ್ಲಿ ಹೃದಯಂಗಮವಾಗಿ ವರ್ಣಿಸಿದ್ದಾರೆ.

ನಮ್ಮ ಪೂರ್ವಾಚಾರ್ಯರು ತಿರುಪ್ಪಾವೈ ಎಂಬ ದಿವ್ಯ ಪ್ರಬಂಧವನ್ನು ಹೀಗೆ ವೈಭವೀಕರಿಸಿದ್ದಾರೆ.

“ಪಾದಂಗಳ್ ತೀರ್ಕುಮ್, ಪರಮನ್ ಅಡಿಕಾಟ್ಟುಮ್ ವೇದಂ ಅನೈತ್ತುಕ್ಕುಮ್ ವಿತ್ತಾಹುಂ, ಕೊಧೈ ತಮಿಳ್ ಐಐಂದುಮ್ ಐಂದುಮ್ ಅರಿಯಾದ ಮಾನಿಡರೈ ವೈಯಮ್ ಶುಮಪ್ಪದುಮ್ ವಂಬು”

ತಿರುಪ್ಪಾವೈ, ಕೈಂಕರ್ಯ ಪ್ರಾಪ್ತಿಯ ಪರಮೋದ್ದೇಶ ಸಾಧನೆಗೆ ಬಂದೊದಗುವ ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸುತ್ತದೆ. ಭಗವದ್ ಪ್ರೀತಿಗಾಗಿ ಕೈಂಕರ್ಯ ಪ್ರಾಪ್ತಿ ಹಾಗು ಶ್ರೀಯಾಃ ಪತಿಯ ಚರಣಾರವಿಂದಗಳನ್ನು ಸೇರುವ ಪರಮೋದ್ದೇಶಕ್ಕೆ ದಾರಿಯಾಗುತ್ತದೆ. ಸಮಸ್ತ ವೇದಗಳ ಸಾರವಾದ ತಿರುಪ್ಪಾವೈಯನ್ನು ಅರಿಯದ, ಪಠಿಸದ ವ್ಯಕ್ತಿಯು ಭೂಮಿಗೆ ಭಾರವಾಗುತ್ತಾರೆ.

ಪ್ರತಿ ಮಾರ್ಗಶಿರ (ಮಾರ್ಹಳಿ ) ಮಾಸದಲ್ಲೂ ತಿರುಪ್ಪಾವೈ ಶ್ಲೋಕಾವನ್ನೂ, ಉಪನ್ಯಾಸ, ಹಾಡುಗಳನ್ನೂ ದೇಶಾದ್ಯಂತ (ಹೊರ ದೇಶಗಳಲ್ಲೂ) ಕೇಳಿ, ನೋಡಿ, ಆನಂದದಿಂದ ಅನುಭವಿಸಬಹುದು. ಮೂರು ವರ್ಷದ ಮಗುವಿನಿಂದ ತೊಂಬತ್ತು ವರ್ಷದ ವೃದ್ಧರವರೆಗೆ ಪ್ರತಿಯೊಬ್ಬರೂ ಆಸೆಯಿಂದ ಅನುಭವಿಸುವ ಸರಳ, ಸುಲಭ, ಗ್ರಂಥ ತಿರುಪ್ಪಾವೈ. ಇಷ್ಟು ಅಧ್ಭುತವಾದ ಪ್ರಬಂದದ ಶಕ್ತಿ ಮತ್ತು ಆಕರ್ಷಣೆಗೆ ಮೂಲಕಾರಣ ಗೋದಾದೇವಿಯು ಸಕಲ ಶಾಸ್ತ್ರಗಳ ಸಾರವನ್ನು ತಿರುಪ್ಪಾವೈ ೩೦ ಪದ್ಯಗಳಲ್ಲಿ ಅಡಗಿಸಿರುವುದೇ ಆಗಿದೆ. ಶಾಸ್ತ್ರಗಳ ಪ್ರಾಮುಖ್ಯತೆ ಏನು? ಇದನ್ನು ನಮ್ಮಾಳ್ವಾರ್ರರು ತಮ್ಮ ತಿರುವಾಯ್ ಮೊಳಿ ೪. ೬. ೮ ನಲ್ಲಿ ಸರಳವಾಗಿ ವಿವರಿಸಿದ್ದಾರೆ.

“ವೇದಂ ವಲ್ಲಾರ್ಗಳೆ ಕೊಂಡು ವಿಣ್ಣೋರ್ ಪೆರುಮಾನ್ ತಿರುಪ್ಪಾದಂ ಪಣಿ ” ಇದರ ಅರ್ಥ ವೇದವೇದಾಂತಗಳಲ್ಲಿ ವಿದ್ವಾಂಸರಾಗಿರುವ ಪೂರ್ವಾಚಾರ್ಯರುಗಳನ್ನು ಆಶ್ರಯಿಸಿ,ವೈರಾಗ್ಯಗಳನ್ನು ಸಂಪಾದಿಸಿ ಒಬ್ಬರು ಶಾಸ್ತ್ರದಲ್ಲಿ ತಜ್ಞರ (ಪೂರ್ವಾಚಾರ್ಯರು) ಸಹಾಯವನ್ನು ಪಡೆದು ನಿತ್ಯಸೂರಿಗಳ (ಪೇರಿಯ ಪಿರಾಟ್ಟಿ, ಇತ್ಯಾದಿ) ಮೂಲಕ ಸುಲಭೋಪಾಯದಲ್ಲಿ ಭಗವಂತನ ಸಾನಿಧ್ಯವನ್ನು ಸೇರಿ ಅವನ ಪಾದಾರವಿಂದಗಳಲ್ಲಿ ಭಕ್ತಿಯಿಂದ ಕೈಂಕರ್ಯಗಳನ್ನು ಮಾಡಬೇಕು.

ಆಳ್ವಾರುಗಳಲ್ಲಿ ಪ್ರಪ್ರಥಮರೂ, ಅವತಾರಪುರುಷರೂ ಆದ ನಮ್ಮಾಳ್ವಾರರು ತಮ್ಮ ದಿವ್ಯಜ್ಞಾನದಿಂದ ಸಕಲ ಶಾಸ್ತ್ರವನ್ನು ಅತಿ ಸರಳವಾದ ತಮಿಳು ಪದ್ಯಮಾಲೆಯಲ್ಲಿ ವಿವರಿಸಿದ್ದಾರೆ. ಇದನ್ನು ನಾವು ಚೆನ್ನಾಗಿ ತಿಳಿದು, ನಿತ್ಯವೂ ಶ್ರದ್ಧಾಭಕ್ತಿಗಳಿಂದ ಪಠಿಸುತ್ತಾ, ಅದರಂತೆ ನಡೆದರೆ, ಆಳ್ವಾರ್ ಆಚಾರ್ಯರ ಅನುಗ್ರಹದಿಂದ ವೈಕುಂಠ ಪ್ರಾಪ್ತಿಯಾಗಿ, ಭಗವದ್ ಕೈಂಕರ್ಯ ಸಾಧನೆಯಾಗುವುದರಲ್ಲಿ ಯಾವ ಸಂದೇಹವು ಇಲ್ಲಾ.

ಪಿಳ್ಳೈ ಲೋಕಾಚಾರ್ಯರ ತಮ್ಮನಾದ ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರು ತಮ್ಮ ವ್ಯಾಖ್ಯಾನದಲ್ಲಿ ತಿರುಪ್ಪಾವೈಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಅರುಳಿಚ್ಚಯಲ್ (ಆಳ್ವಾರ್ ಗಳ ದಿವ್ಯ ಪ್ರಬಂಧಮ್) ನಲ್ಲಿ ಇವರಿಗೆ ಇರುವ ಅನುಭವಕ್ಕೆ ಸಮನಾದವರು ಮತ್ತೊಬ್ಬರಿಲ್ಲಾ. ಇವರು ಸಂಪೂರ್ಣ ರಹಸ್ಯ ತ್ರಯವನ್ನು (ತಿರುಮಂತಿರ, ದ್ವಯ, ಚರಮ ಶ್ಲೋಕ) ಆಳ್ವಾರ್ ಗಳ ದಿವ್ಯಪ್ರಬಂದವನ್ನು ಮಾತ್ರವೇ ಆದರಿಸಿ ಅತ್ಯುತ್ತಮವಾದ ” ಅರುಳಿಚ್ಚಯಲ್ ರಹಸ್ಯಮ್” ಎನ್ನುವ ಪ್ರಬಂಧವನ್ನು ರಚಿಸಿದ್ದಾರೆ.

ನಾಯನಾರ್ ಅವರ ೬೦೦೦ ಪಡಿ ವ್ಯಾಖ್ಯಾನದಲ್ಲಿ ವಂಗಕಡಲ್ ಪದ್ಯದ (ಕೊನೆಯ) ಅವತಾರಿಕೆಯಲ್ಲಿ ತಿರುಪ್ಪಾವೈಯಲ್ಲಿನ ೨೯ ಪದ್ಯಗಳ ಅರ್ಥವನ್ನು ಸುಂದರವಾಗಿ ಸಂಕ್ಷಿಪ್ತವಾಗಿ ವರ್ಣಿಸಿದ್ದಾರೆ.ಸಂಪೂರ್ಣ ಪದ್ಯದ ಸಾರವನ್ನು ಒಂದೇ ವಾಕ್ಯದಲ್ಲಿ ವಿವರಿಸುವ ನಾಯನಾರರ ನಿಪುಣತೆಯನ್ನು ವಿದ್ವಾಂಸೋತ್ತಮರು ಅಪಾರವಾಗಿ ಮೆಚ್ಚಿದ್ದಾರೆ. ತಿರುಪ್ಪಾವೈಯ ಸಾರವನ್ನು ನಾಯನಾರರ ದಿವ್ಯವಾದ ಪದಗಳ ಮೂಲಕ ಈಗ ನೋಡೋಣ.

ಗೋದಾದೇವಿಯ ನಿರ್ಹೇತುಕ ಕೃಪೆ ಹಾಗು ಅಸಾಮಾನ್ಯವಾದ ಅನುಗ್ರಹಕ್ಕೆ ಸಾಕ್ಷಿ ಅವಳು ಎಲ್ಲಾರನ್ನೂ ಭಗವದ್ ಅನುಭವದಲ್ಲಿ ತೊಡಗಿಸಿಕೊಂಡಿರುವುದು. ಶಾಸ್ತ್ರದಲ್ಲಿ ಹೇಳಿರುವಂತೆ “ಏಕ ಸ್ವಾತ್ ನ ಭುಂಜೀತ”ಅಂದರೆ ಇನ್ನೊಬ್ಬರ ಜೊತೆ ಹಂಚಿಕೊಳ್ಳದೇ ಯಾವುದನ್ನೂ ಯಾರು ಅನುಭವಿಸಬಾರದು ಎನ್ನುವುದು ಇದರ ಸಾರ. ಭಗವದ್ ವಿಷಯದಲ್ಲಿ ಇದು ಅತ್ಯಂತ ಪ್ರಮುಖ್ಯವಾಗಿದೆ.ದೋಷಪೂರಿತ ಸ್ವಭಾವದ ಲೌಕಿಕ, ಪ್ರಾಪಂಚಿಕ (ವಿಷಯಾಂತರ)ವಿಷಯಗಳನ್ನು ವೈಯಕ್ತಿಕವಾಗಿ ಅನುಭವಿಸಬಹುದಾದರೂ, ಭಗವದ್ ವಿಷಯವು ಎಲ್ಲರಿಗೂ ಸಾರ್ವರ್ತ್ರಿಕವಾದ ಅನುಭವ ಇದನ್ನು ಎಲ್ಲರೂ ಕೂಡಿಯೇ ಹೊಂಚಿಕೊಂಡು ಅನುಭವಿಸಬೇಕು. ಇದನ್ನು ಆಂಡಾಳ್, ತಂದೆಯವರಾದ ಪೆರಿಯಾಳ್ವಾರರನ್ನು ಅನುಕರಿಸಿ ಅವರಂತೆಯೇ ತಾನೂ ಆಚರಿಸಿ ತೊರಿಸಿದ್ದಾಳೆ. ಪೆರಿಯಾಳ್ವಾರರು ಐಶ್ವರ್ಯಾರ್ಥಿಗಳನ್ನ(ಐಶ್ವರ್ಯಾನುಭವದಲ್ಲಿ ಆಸೆ ಉಳ್ಳವರು), ಕೈವಲ್ಯಾರ್ಥಿಗಳನ್ನೂ (ಆತ್ಮಾನುಭವದಲ್ಲಿ ಆಸೆಯುಳ್ಳವರು), ಮತ್ತು ಭಗವದ್ ಕೈಂಕರ್ಯಾರ್ಥಿಗಳನ್ನೂ (ಭಗವಂತನ ಕೈಂಕರ್ಯದಲ್ಲಿ ಆಸಕ್ತರಾಗಿರುವವರು) ತಮ್ಮ ತಿರುಪೆಲ್ಲಾಂಡು ಅರುಳಿಚ್ಚಯಲ್ ನಲ್ಲಿ ಶ್ರೀಮನ್ನಾರಾಯಣನಿಗೆ ಮಂಗಳಾಶಾಸನ ಮಾಡಲು ಆಹ್ವಾನಿಸುತ್ತಾರೆ. ಅಂತೆಯೇ ಆಂಡಾಳ್ ಕೂಡ ಎಲ್ಲರನ್ನೂ ಭಗವದ್ ಕೈಂಕರ್ಯಕ್ಕೆ ಆಹ್ವಾನಿಸುತ್ತಾಳೆ.

ಮೊದಲನೆಯ ಪದ್ಯದಲ್ಲಿ ಆಂಡಾಳ್ ಕಾಲವನ್ನು (ಕಾಲ-ಮಾರ್ಗಶಿರ ಮಾಸದ ಸುಂದರವಾದ ದಿನ) ವೈಭವೀಕರಿಸಿದ್ದಾಳೆ. ಕೃಷ್ಣನನ್ನೇ ಪರಿಪೂರ್ಣವಾಗಿ ಅವಲಂಬಿಸಿದ್ದ ಗೋಪ ಗೋಪಿಯರು ಗೋದಾದೇವಿಗೆ ಕೃಷ್ಣಾನುಭವಕ್ಕೆ ಸಹಾಯ ಮಾಡುತ್ತಾರೆ. ಉಪಾಯವೂ (ದಾರಿ) ಉಪೇಯವೂ (ಗುರಿ) ಎರಡೂ ಆಗಿರುವ ಶ್ರೀಮನ್ನಾರಾಯಣನನ್ನೇ ಆಂಡಾಳ್ ತೊರಿಸಿಕೊಡುತ್ತಾಳೆ. ಅವಳ ಮೂಲ ಗುರಿ ಕೃಷ್ಣಾನುಭವವೇಯಾದರೂ, ಆಂಡಾಳ್ ವ್ರತವನ್ನು ಆಚರಿಸಿ(ಎರಡನೇ ಕಾರಣ), ತನ್ನನ್ನೂ ತನ್ನ ಗೋಪಿಕಾ ಸಖಿಯರನ್ನೂ ಭಗವದ್ ಅನುಭವದಲ್ಲಿ ತೊಡಗಿಸುತ್ತಾಳೆ.

ಎರಡನೆಯ ಪದ್ಯದಲ್ಲಿ, ಭಗವದ್ ಅನುಭವಕ್ಕೆ, ಅದರ ಆಚರಣೆಗೆ ಯಾವುದು ಮಾಡಬೇಕು, ಯಾವುದು ಬಿಡಬೇಕು ಎಂದು ಗುರುತಿಸುತ್ತಾಳೆ. ಅವಳು ಸ್ಪಷ್ಟವಾಗಿ “ಮೇಲೆಯಾರ್ ಶೈಯ್ವನಹಳ್” (ದೊಡ್ಡವರು, ಪೂರ್ವಾಚಾರ್ಯರುಗಳು ಮಾಡಿ ತೋರಿಸಿದ) ಅನ್ನುವುದು ಪ್ರಪನ್ನರಾದ ನಮಗೆ ಮುಖ್ಯವಾದ ಪ್ರಮಾಣ ಎಂದು ಸ್ಥಾಪಿಸಿದ್ದಾಳೆ.

ಮೂರನೆಯ ಪದ್ಯದಲ್ಲಿ, ವೃಂದಾವನದ ಎಲ್ಲಾ ಜನರ ಕ್ಷೇಮಾಭಿವೃದ್ಧಿಯನ್ನು ಉಪಯೋಗವಾಗಿ ಆಶಿಸುತ್ತಾಳೆ. ಅವಳಿಗೂ ಅವಳ ಗೋಪಿಕಾ ಸ್ನೇಹಿತೆಯರಿಗೂ ಕೃಷ್ಣಾನುಭವವನ್ನು ಪಡೆಯಲು ಅನುಮತಿಸಿದ್ದ ಜನರ ಒಳಿತಿಗಾಗಿ ಪ್ರಾರ್ಥಿಸಿದರೂ, ಮೊದಲನೆಯ ಗುರಿಯು ಎಲ್ಲರಿಗೂ ಕೃಷ್ಣಾನುಭವವನ್ನು ನೀಡುವುದೇ ಆಗಿದೆ.

ನಾಲ್ಕನೆಯ ಪದ್ಯದಲ್ಲಿ, ಪರ್ಜನ್ಯ ದೇವನಿಗೆ (ವರುಣದೇವ) ಅಗತ್ಯವಾದ (ತಿಂಗಳಿಗೆ ೩ ಸಲ – ೧೦ ದಿನಗಳಿಗೊಮ್ಮೆ – ಬ್ರಾಹ್ಮಣರಿಗೆ ೧ ದಿನ, ರಾಜನಿಗೆ ೧ ದಿನ ಮತ್ತು ಪರಿಶುದ್ಧ ಮಹಿಳೆಯರಿಗೆ ೧ ದಿನ) ಮಳೆಯನ್ನು ಸುರಿಸುವಂತೆ ಆಜ್ಞಾಪಿಸುತ್ತಾಳೆ. ಅದರಿಂದ ವೃಂದಾವನದ ಜನರು ಸಮೃದ್ಧಿಯನ್ನು ಹೊಂದಿ ಕೃಷ್ಣಅನುಭವವು ಯಾವ ಅಡ್ಡಿ ಆತಂಕಗಳಿಲ್ಲದೇ ಮುಂದುವರಿಯಬಹುದು.

ಐದನೆಯ ಪದ್ಯದಲ್ಲಿ, ನಿರಂತರ ನಾಮ ಸಂಕೀರ್ತನದಿಂದ ಹಿಂದಿನ ಕರ್ಮಗಳೂ, ಮುಂದೆ ಮಾಡಬಹುದಾದ ಕರ್ಮಗಳೂ, ನಾಶಹೊಂದುವುದನ್ನು ಗುರುತಿಸುತ್ತಾಳೆ. ಉಪನಿಷತ್ತುಗಳು ತೋರುವಂತೆ ಭಗವಂತನಲ್ಲಿ ಶರಣಾಗತಿ ಮಾಡಿದವರ ಹಿಂದಿನ ಕರ್ಮಗಳು ಬೆಂಕಿಯಲ್ಲಿ ಬಿದ್ದ ಹತ್ತಿಯಂತೆ ಕ್ಷಣಮಾತ್ರದಲ್ಲಿ ಉರಿದು ಬೂದಿಯಾಗುತ್ತವೆ ಹಾಗು ಮುಂದೆ ಮಾಡಬಹುದಾದ ಕರ್ಮಗಳೂ ಕಮಲದ ಮೇಲಿನ ನೀರಿನಂತೆ ಅಂಟದೇ ಜಾರಿಬೀಳುತ್ತದೆ. ಇದರಿಂದ ತಿಳಿಯಬೇಕಾದದ್ದು, ಎಲ್ಲಾ ಹಿಂದಿನ ಕರ್ಮಗಳನ್ನು ಭಗವಂತನು ಯಾವ ಶರತ್ತುಗಳಿಲ್ಲದೇ ನಾಶಮಾಡುತ್ತಾನೆ. ಭವಿಷ್ಯದಲ್ಲಿ ಮಾಡಬಹುದಾದ ಕರ್ಮಗಳಲ್ಲಿ, ಉದ್ದೇಶ್ಯಪೂರ್ವಕವಲ್ಲದ ಕರ್ಮಗಳು ಸೇರಿದರೆ ಅದನ್ನು ಭಗವಂತನು ನಿರ್ಮೂಲಮಾಡುವನು. ಉದ್ದೇಶ್ಯಪೂರ್ವಕವಾದ ಕರ್ಮಗಳ ಫಲವನ್ನು ಅನುಭವಿಸಿಯೇ ತೀರಬೇಕು.

ಆರನೆಯ ಪದ್ಯದಿಂದ ಹದಿನೈದನೆಯ ಪದ್ಯದವರೆಗೆ ಆಂಡಾಳ್ ೧೦ ವಿಶಿಷ್ಟಗುಣಯುಕ್ತ ಗೋಪಿಕೆಯರ (ಕೃಷ್ಣನಲ್ಲೇ ಸಂಪೂರ್ಣ ಅನುರಕ್ತರಾಗಿರುವ) ಮನೆಗಳಿಗೆ ಹೋಗಿ ಅವರನ್ನು ಎಬ್ಬಿಸುತ್ತಾಳೆ. ಹೀಗೆ ಹೋಗುವಾಗ ಅವಳು ಕೃಷ್ಣಾನುಭವಕ್ಕೆ ವ್ಯಾಕುಲರಾಗಿ ನಂದಗೋಪನ ಅರಮನೆಗೆ ಹೊರಟಿರುವ ಮತ್ತೂ ಕೆಲ ಗೋಪಿಕೆಯರನ್ನು ಜೊತೆಯಲ್ಲಿ ಕರೆದೊಯ್ಯುತ್ತಾಳೆ.

ಆರನೆಯ ಪದ್ಯದಲ್ಲಿ ಅವಳು ಕೃಷ್ಣಾನುಭವಕ್ಕೆ ತೀರಾ ಹೊಸಬಳಾದ ಒಬ್ಬ ಗೋಪಿಕೆಯನ್ನು ಎಬ್ಬಿಸುತ್ತಾಳೆ. ಇದರ ಅರ್ಥ ಆ ಗೋಪಿಕೆಯು ಕೃಷ್ಣನನ್ನು ವೈಯಕ್ತಿಕವಾಗಿ ಅನುಭವಿಸುವುದರಲ್ಲೇ ತೃಪ್ತಳಾಗಿದ್ದಾಳೆ. ಇದು ಇನ್ನೂ ಮೊದಲನೆಯ ಹಂತ (ಪ್ರಥಮ ಪರ್ವ ನಿಷ್ಠೆ). ಒಮ್ಮೆ ಭಾಗವತ ಸಂಸ್ಲೇಷ (ಸಂಘ)ದ ಆಧಾರ ತತ್ವದ ಅರ್ಥ ಗ್ರಹಿತವಾದರೆ ಅದು ಚರಮ (ಅಂತಿಮ) ಪರ್ವ ನಿಷ್ಠೆಗೆ ನಾಂದಿಯಾಗುತ್ತದೆ.

ಏಳನೆಯ ಪದ್ಯದಲ್ಲಿ, ಕೃಷ್ಣಾನುಭವದಲ್ಲಿ ನಿಪುಣಳಾಗಿಯೂ ಎದ್ದುಬರದೇ, ಉದ್ದೇಶ್ಯಪೂರ್ವಕವಾಗಿ ಆಂಡಾಳ್ ಮತ್ತು ಸಖಿಯರ ಮಧುರವಾದ ಕಂಠವನ್ನು ಆಲಿಸಲು ಒಳಗಡೆಯೇ ಕಾಯುತ್ತಿರುವ ಒಬ್ಬ ಗೋಪಿಕೆಯನ್ನು ಎಬ್ಬಿಸುತ್ತಾಳೆ.

ಎಂಟನೆಯ ಪದ್ಯದಲ್ಲಿ, ಕಣ್ಣನಿಗೆ ಅಚ್ಚುಮೆಚ್ಚಾದ, ಶ್ರೀ ಕೃಷ್ಣಾನುಭವದಲ್ಲಿ ತುಂಬಾ ಕುತೂಹಲವುಳ್ಳ ಭಕ್ತೆಯನ್ನು ಎಬ್ಬಿಸುವ ಬಗೆ ಚೇತೋಹಾರಿಯಾಗಿದೆ.

ಒಂಬತ್ತನೆಯ ಪದ್ಯದಲ್ಲಿ, ಕೃಷ್ಣನೇ ಉಪಾಯವೆಂದು ಸ್ಥಿರವಾಗಿ ನಂಬಿದ, ಅವನೊಡನೆ ವಿಧವಿಧವಾದ ಅನುಭವಗಳನ್ನು ಆನಂದಿಸುವ ಒಬ್ಬ ಗೋಪಿಕಾ ಭಕ್ತೆಯನ್ನು ಎಬ್ಬಿಸುತ್ತಾಳೆ. ಈ ಗೋಪಿಕೆಯು ಸೀತಾ ಮಾತೆಯಂತೆ “ಶ್ರೀರಾಮನೇ ಬಂದು ನನ್ನನ್ನು ರಕ್ಷಿಸಲಿ” ಎಂದು ಹನುಮಂತನಿಗೆ ತಿಳಿಸಿದಂತೆ ಸ್ಥಿರವಾಗಿದ್ದಾಳೆ.

ಹತ್ತನೆಯ ಪದ್ಯದಲ್ಲಿ, ಆಂಡಾಳ್, ಕೃಷ್ಣನಿಗೆ ತೀರಾ ಆಪ್ತಳಾದ, ಒಬ್ಬ ಗೋಪಿಕೆಯನ್ನು ಎಬ್ಬಿಸುತ್ತಾಳೆ. ಅವಳು ಸಿದ್ದ ಸಾಧನ ನಿಷ್ಠರಂತೆ ಶ್ರೀಮನ್ನಾರಾಯಣನಲ್ಲಿ ಪರಿಪೂರ್ಣ ಶರಣಾಗತಿ ಆಚರಿಸಿದ್ದಾಳೆ, ಹಾಗಾಗಿ ಕೃಷ್ಣನಿಗೆ ಅವಳಲ್ಲಿ ವಿಶೇಷ ಆಸಕ್ತಿ.

ಹನ್ನೊಂದನೆಯ ಪದ್ಯದಲ್ಲಿ, ವೃಂದಾವನವಾಸಿಗಳಿಗೆ ಅಚ್ಚುಮೆಚ್ಚಿನ ಒಬ್ಬ ಗೋಪಿಕೆಯುನ್ನು (ಕೃಷ್ಣನು ವೃಂದಾವನದ ಅಚ್ಚುಮೆಚ್ಚಿನ ಹುಡುಗನು ಹೇಗೋ) ಎಬ್ಬಿಸುತ್ತಾಳೆ. ಈ ಪದ್ಯದಲ್ಲಿ ವರ್ಣಾಶ್ರಮ ಧರ್ಮ ಆಚರಣೆಯ ಪ್ರಾಮುಖ್ಯತೆಯನ್ನು ಅತ್ಯುತ್ತಮವಾಗಿ ವಿವರಿಸಿದ್ದಾಳೆ.

ಹನ್ನೆರಡನೆಯ ಪದ್ಯದಲ್ಲಿ, ಕೃಷ್ಣನ ಅತ್ಯಂತ ಆಪ್ತ ಸ್ನೇಹಿತನ ತಂಗಿಯನ್ನು, ವರ್ಣಾಶ್ರಮ ಧರ್ಮದ ಯಾವ ಆಚರಣೆಯನ್ನು ಮಾಡದ ಒಬ್ಬ ಗೋಪಿಕೆಯನ್ನು ಎಬ್ಬಿಸುತ್ತಾಳೆ. ಕೃಷ್ಣನ ಆನಂದಾನುಭವದ ಸೇವೆಯಲ್ಲಿ ನಿರಂತರ ನಿರತರಾದವರಿಗೆ, ಬಾಹ್ಯ ಕರ್ಮಗಳನ್ನು ಆಚರಿಸಲು ಸಮಯ ಮತ್ತು ಅವಶ್ಯಕತೆ ಇಲ್ಲದೇ ಹೋಗಬಹುದು. ಆದರೆ ಒಮ್ಮೆ ಭಕ್ತಿಪರವಶತೆ ಇಂದ ಹೊರಬಂದರೆ, ಬಾಹ್ಯ ಕರ್ಮಗಳನ್ನು ತ್ವರಿತವಾಗಿ ಆಚರಿಸುವುದು ಪ್ರಾಮುಖ್ಯವಾಗುತ್ತದೆ.

ಹದಿಮೂರನೆಯ ಪದ್ಯದಲ್ಲಿ, ಒಬ್ಬ ಗೋಪಿಕೆಯು ತನ್ನ ಸುಂದರವಾದ ಕಣ್ಣುಗಳನ್ನು ( ಕಣ್ಣು ಸಾಮಾನ್ಯವಾಗಿ ಜ್ಞಾನಕ್ಕೆ ಪ್ರತೀಕ) ತಾನೇ ಆನಂದದಿಂದ ವೈಯಕ್ತಿಕವಾಗಿ ಅನುಭವಿಸುತ್ತಿದ್ದಾಳೆ. ಅವಳಿಗೆ ಶ್ರೀಮನ್ನಾರಾಯಣನ ಬಗ್ಗೆ ಸಂಪೂರ್ಣ ಜ್ಞಾನವಿರುವುದರಿಂದ, ಕೃಷ್ಣನು ಅವಳಲ್ಲಿಗೆ ಸ್ವಯಂ ಓಡಿಬರುತ್ತಾನೆ ಎಂಬ ವಿಶ್ವಾಸ. ಕೃಷ್ಣ ಪರಮಾತ್ಮನು ಅರವಿಂದ ಲೋಚನನಾದುದರಿಂದ (ಕಮಲದಂತ ಕಣ್ಣುಗಳುಳ್ಳವನು) ಸುಂದರವಾದ ಕಣ್ಣುಗಳುಳ್ಳ ಈ ಗೋಪಿಕೆಯು ಅವನಿಗೆ ಸರಿಯಾದ ಜೋಡಿ ಎಂದು ವಿವರಿಸಿದ್ದಾರೆ.

ಹದಿನಾಲ್ಕನೆಯ ಪದ್ಯದಲ್ಲಿ, ಒಬ್ಬ ಗೋಪಿಕೆಯು ಎಲ್ಲರನ್ನೂ ತಾನೇ ಬಂದು ಎಬ್ಬಿಸುವುದಾಗಿ ಮಾತು ಕೊಟ್ಟು, ಈಗ ಮರೆತು, ಹೊರಗೆ ಬರದೇ ಒಳಗೇ ಇರುವುದನ್ನು ಕಂಡು ಆಂಡಾಳ್ ಅವಳನ್ನು ಎಬ್ಬಿಸುತ್ತಾಳೆ .

ಹದಿನೈದನೇ ಪದ್ಯದಲ್ಲಿ, ಒಬ್ಬ ಗೋಪಿಕೆಯು, ಆಂಡಾಳ್ ಮತ್ತು ಎಲ್ಲಾ ಸಖಿಯರು ಅವಳ ಮನೆಗೆ ಬರುವಿಕೆಯ ಸುಂದರ ದೃಶ್ಯವನ್ನು ನೋಡಲು ಕಾಯುತ್ತಿದ್ದಾಳೆ. ಅವಳನ್ನು ಈ ಪದ್ಯದಲ್ಲಿ ಎಬ್ಬಿಸುತ್ತಾಳೆ.

ಹದಿನಾರು ಮತ್ತು ಹದಿನೇಳನೆಯ ಪದ್ಯಗಳಲ್ಲಿ ಗೋದಾದೇವಿಯು ನಿತ್ಯಸೂರಿಗಳ ಪ್ರತಿನಿಧಿಗಳೂ, ಕ್ಷೇತ್ರಪಾಲಕರೂ, ದ್ವಾರಪಾಲಕರೂ (ಗೇಟ್ ಕೀಪರ್ಸ್), ಆದಿಶೇಷ, ಮೊದಲಾದವರನ್ನು ಎಬ್ಬಿಸುತ್ತಾಳೆ.

ಹದಿನಾರನೆಯ ಪದ್ಯದಲ್ಲಿ ಗೋದಾದೇವಿಯು ಮುಖ್ಯದ್ವಾರದ (ಹೆಬ್ಬಾಗಿಲಿನ) ದ್ವಾರಪಾಲಕರನ್ನೂ, ನಂದಗೋಪಾಲನ ಶಯ್ಯಾಗೃಹದ ದ್ವಾರಪಾಲಕರನ್ನೂ ಎಬ್ಬಿಸುತ್ತಾಳೆ.

ಮುಂದೆ ಹದಿನೇಳನೇ ಪದ್ಯದಲ್ಲಿ ನಂದಗೋಪ, ಯಶೋದಾ ಹಾಗು ಬಲರಾಮ ಎಲ್ಲರನ್ನು ಎಬ್ಬಿಸುತ್ತಾಳೆ.

ಪುರುಷಕಾರರೂಪಿಣಿಯಾದ ನಪ್ಪಿನೈ ದೇವಿಯನ್ನು ಸ್ಮರಿಸದ ಅರಿವಾಗಿ, ಹದಿನೆಂಟು, ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಪದ್ಯಗಳಲ್ಲಿ ಅಂಡಾಳ್ ದೇವಿಯು ನಪ್ಪಿನ್ನೈ ದೇವಿಯ ಮಹಿಮೆಯನ್ನು ಕೊಂಡಾಡುತ್ತಾಳೆ.

ಶ್ರಿಕೃಷ್ಣ ಪರಮಾತ್ಮನ ಜೊತೆಗಿನ ನಿಕಟ ಒಡನಾಟ, ಪರಸ್ಪರ ಆಲಿಂಗನ ಸೌಖ್ಯದಲ್ಲಿ ಮೈಮರೆತಿರುವ ಭಾವ, ಅನಿಯಮಿತ ಸಂತೋಷವನ್ನೊದಗಿಸುವ ಸಾಮರ್ಥ್ಯ, ಸೂಕ್ಷ್ಮವಾದ ಮೃದುಹೃದಯದ ಪ್ರಕೃತಿ, ಆಕರ್ಷಕವೂ, ಅಧ್ಭುತವೂ ಆದ ಸೌಂದರ್ಯ, ಶ್ರೀಕೃಷ್ಣನಿಗೆ ಪ್ರಿಯಳಾದವಳೂ, ಮುಖ್ಯವಾಗಿ ಪುರುಷಾಕಾರ ಸ್ವರೂಪಿಣಿಯಾಗಿ ಭಗವಂತನಿಗೆ ನಮ್ಮನ್ನು ಶಿಫಾರಸ್ಸು ಮಾಡುವವಳಾಗಿದ್ದಾಳೆ. ಮಹಾಮಾತೆಯನ್ನು ಮರೆತು ಭಗವಂತನನ್ನು ಮಾತ್ರವೇ ಬಯಸುವುದು ಶೂರ್ಪನಖಿಯು ಶ್ರೀರಾಮನನ್ನು ಆಸೆಪಟ್ಟಂತೆ, ಹಾಗೇ, ಭಗವಂತನನ್ನು ತೊರೆದು ದೇವಿಯನ್ನು ಆಶಿಸುವುದು ರಾವಣನು ಸೀತಾಮಾತೆಯನ್ನು ಬಯಸಿದಂತೆ. ಹದಿನೆಂಟನೇ ಪದ್ಯವಾದ “ಉಂದು ಮದಗಳಿತ್ತನ್” ಪದ್ಯವು ಶ್ರೀಮನ್ನಾರಾಯಣನಿಗೆ ಅತ್ಯಂತ ಪ್ರಿಯವಾದ ಪದ್ಯವಾಗಿದೆ.

ಇಪ್ಪತ್ತೊಂದನೆಯ ಪದ್ಯದಲ್ಲಿ, ಗೋದಾದೇವಿಯು ಶ್ರೀಕೃಷ್ಣ ಪರಮಾತ್ಮನ ಗುಣ ವಿಶೇಷಗಳನ್ನು ವೈಭವೀಕರಿಸುತ್ತಾಳೆ. ಕೃಷ್ಣಾವತಾರದಲ್ಲಿ ಪರಮಾತ್ಮನು ತೋರಿದ ಸರಳತೆ ಬೇರೆಲ್ಲೂ ತೋರಲಿಲ್ಲ. ಪರತ್ವವನ್ನು ತೊರೆದು ಗೊಲ್ಲರ ನಡುವೆ ನಂದಗೋಪನ ಮಗನಾಗಿ ಜನಿಸಿದ, ಹಸುಗಳನ್ನು ಮೇಯಿಸಿ, ಗೊಲ್ಲರೊಡನೆ ಒಂದಾಗಿ ಗೋಪಿಯರೊಡನೆ ಹಾದಿ ಕುಣಿದ. ಶಾಸ್ತ್ರವು ಅವನ ಪರತ್ವವನ್ನೂ, ದೃಢ ಪ್ರಾಮಾಣ್ಯತ್ವವನ್ನೂ ಸ್ಥಾಪಿಸಿ ತೋರಿಸಿದೆ.

ಇಪ್ಪತ್ತೆರಡೆನೆಯ ಪದ್ಯದಲ್ಲಿ, ಗೋದಾದೇವಿಯು ತನ್ನ ಜೊತೆಯುಳ್ಳ ಗೋಪಿಯರೊಂದಿಗೆ ಶ್ರೀಮನ್ನಾರಾಯಣನನ್ನು ಬೇಡುತ್ತಾಳೆ, “ಸ್ವಾಮೀ” ನಮಗೆ ನಿನ್ನ ಬಿಟ್ಟರೆ ಬೇರಾವ ಆಶ್ರಯವೂ ಇಲ್ಲಾ. ವಿಭಿಷಣನು ಶ್ರೀರಾಮನಲ್ಲಿ ಶರಣಾದಂತೆ ನಾವು ಸರ್ವಸ್ವವನ್ನೂ ತೊರೆದು ನಿನ್ನಲ್ಲಿ ಶರಣು ಬಂದಿದ್ದೇವೆ. ಸ್ವಾಮೀ, ನಾವು ಎಲ್ಲಾ ವ್ಯಾಮೋಹವನ್ನೂ, ಅಭಿಮಾನವನ್ನೂ ತ್ಯಜಿಸಿ ನಿನ್ನಲ್ಲೇ ಭಕ್ತಿಯಿಂದ, ನೀನೇ ಗತಿಯೆಂದು ಬಂದಿದ್ದೇವೆ. ನಮ್ಮ ಮೇಲೆ ಕರುಣೆ ತೋರಿ, ನಿನ್ನ ಅಪೂರ್ವ ಕಟಾಕ್ಷದಿಂದ ನಮ್ಮನ್ನು ಅನುಗ್ರಹಿಸು ಎಂದು ಕೋರುತ್ತಾಳೆ.

ಇಪ್ಪತ್ತಮೂರು ಪದ್ಯದಲ್ಲಿ ಆಂಡಾಳ್ ದೇವಿಯನ್ನು ಇಷ್ಟು ಸಮಯ ಕಾಯಿಸಿದ್ದಕ್ಕೆ ಶ್ರೀಕೃಷ್ಣನು ಕರುಣೆಯಿಂದ ಅವಳಿಗೆ ಏನುಬೇಕು ಎಂದು ಕೇಳುತ್ತಾನೆ. ಅದಕ್ಕೆ ಗೋದಾದೇವಿಯು “ನೀನು ನಿದ್ದೆ ತಿಳಿದು ನಿನ್ನ ಆಲಯದಿಂದ ಹೊರಬಂದು, ಠೀವಿಯಿಂದ ಗಂಭೀರವಾಗಿ ನಡೆದು ಬಂದು ಈ ಸಿಂಹಾಸನದಲ್ಲಿ ಕುಳಿತು ನಮ್ಮ ಮನದಿಂಗಿತವನ್ನು ಆಲಿಸು ಎಂದು ಕೋರುತ್ತಾಳೆ.

ಮುಂದೆ ಇಪ್ಪತ್ತನಾಲ್ಕನೇ ಪದ್ಯದಲ್ಲಿ, ಸಿಂಹಾಸನದಲ್ಲಿ ಶ್ರೀ ಕೃಷ್ಣನು ಕುಳಿತ ಸೌಂದರ್ಯವನ್ನು ಅನುಭವಿಸುತ್ತಾ, ನೋಡಿದಷ್ಟೂ ತಣಿಯದೆ ಮಂಗಳಾಶಾಸನವನ್ನು ಮಾಡುತ್ತಾಳೆ. ಅವಳ ತಂದೆ ವಿಷ್ಣುಚಿತ್ತರು ಕೃಷ್ಣನಿಗೆ ಹಾಡಿದ್ದ ಪಲ್ಲಾಂಡು, ನೂರಾರು ಕಾಲ ಬಾಳು ಎಂಬ ಆಶೀರ್ವಾದ, ಅದನ್ನು ಅನುಕರಿಸುವುದೇ ದೇವಿಯ ಮುಖ್ಯ ಉದ್ದೇಶ. ಸೀತಾಮಾತೆ, ದಂಡಕಾರಣ್ಯದ ಋಷಿಗಳು ಹಾಗು ಪೆರಿಯಾಳ್ವಾರರ ಹಾಗೆ ಗೋದಾದೇವಿ ಮತ್ತವಳ ಗೋಪಿಕಾ ಸ್ನೇಹಿತೆಯರು ಭಗವಂತನಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ಶ್ರೀಕೃಷ್ಣನು ಸಿಂಹನಡೆ ನಡೆದು ಬಂದು ಸಿಂಹಾಸನದಲ್ಲಿ ಕುಳಿತಿರುವುದನ್ನು ಅಡಿಯಿಂದ ಮುಡಿಯವರೆಗೆ ನೋಡಿ ಕಣ್ತುಂಬಿಕೊಂಡು, ಕ್ಷಣದಲ್ಲಿ ಎಚ್ಛೆತ್ತು, ನಾವು ಇಂಥಾ ಸುಕೋಮಲವಾದ ಚರಣಕಮಲಾರವಿಂದಗಳನ್ನು ನಡೆಸಿದೆವಲ್ಲಾ ಎಂದು ಮರುಗಿ, ಮಂಗಳಾಶಾಸನವನ್ನು ಮಾಡುತ್ತಾರೆ.

ಇಪ್ಪತ್ತೈದನೆಯ ಪದ್ಯದಲ್ಲಿ, ಭಗವಾನ್ ಶ್ರೀಕೃಷ್ಣನು ನಿಮ್ಮ ವ್ರತಕ್ಕೆ ಉಪಯುಕ್ತವಾಗುವ ಏನಾದರೂ ಬೇಕೇ ಎಂದು ಗೋದಾದೇವಿಯನ್ನು ಕೇಳುತ್ತಾನೆ. ಅದಕ್ಕೆ ದೇವಿಯು, ನಿನ್ನ ಅಧ್ಬುತ ಅವತಾರ ವೈಭವಗಳನ್ನು ಬಣ್ಣಿಸಿ, ನಿನ್ನ ಲೀಲೆಗಳನ್ನು ಹಾಡಿ ನೆನೆದು ನಮ್ಮ ದುಃಖಗಳೆಲ್ಲಾ ಅಳಿಸಿಹೋಗಿವೆ. ಈಗ ನಿನ್ನ ಸೇವೆಮಾಡುವ (ಪರೈ) ಭಾಗ್ಯ, ಕೈಂಕರ್ಯವೆಂಬ ವರವೊಂದೇ ಬೇಕು ಎಂದು ಕೋರುತ್ತಾಳೆ.

ಇಪ್ಪತ್ತಾರನೆಯ ಪದ್ಯದಲ್ಲಿ, ಗೋದಾದೇವಿಯು ವ್ರತಕ್ಕೆ ಬೇಕಾಗುವ ಕೆಲವು ಸಲಕರಣೆಗಳನ್ನು ಬೇಡುತ್ತಾಳೆ. ಹಿಂದಿನ ಪದ್ಯದಲ್ಲಿ ಪರೈ ಎನ್ನುವ ಕೈಂಕರ್ಯವನ್ನೇ ಕೇಳಿದ್ದರೂ, ಪರಿಪೂರ್ಣವಾದ ವ್ರತಾಚರಣೆಗೆ ಬೇಕಾದ ಪಾಂಚಜನ್ಯ ಶಂಖ, ನಿನ್ನ ಮಂಗಳಾಶಾಸನಕ್ಕೆ ಕೆಲವು ಕೈಂಕರ್ಯಪರರು, ನಿನ್ನ ವದನಾರವಿಂದವನ್ನು ಕಾಣಲು ನಿನ್ನ ಮುಂದೆ ಜ್ಯೋತಿ ಬೆಳಗಲು ದೀಪ, ಜೊತೆಗೆ ನಿನ್ನ ಘನತೆಗೆ ತಕ್ಕಂತೆ ನಿನ್ನ ಮಹಿಮೆಯನ್ನು ಸಾರಲು ಅಷ್ಟೆತ್ತರಕ್ಕೆ ಹಾರಾಡುವ ಧ್ವಜ, ಹಾಗು ಛತ್ರ ಚಾಮರಗಳು ಬೇಕು ಎಂದು ಕೇಳುತ್ತಾಳೆ. ಗೋದಾದೇವಿಯು ಇವೆಲ್ಲ ಸಲಕರಣೆಗಳ ಸಹಾಯದಿಂದ ವ್ರತವನ್ನು ಪರಿಪೂರ್ಣವಾಗಿ ನಡೆಸಿ, ಸ್ತೋತ್ರಮಾಡಿ, ಭಜಿಸಿ ಆನಂದಿಸಿ, ಅವನನ್ನೂ ಪ್ರಸನ್ನಗೊಳಿಸುವ ಇಚ್ಛೆಯಿಂದ ಬೇಡುತ್ತಾಳೆ. ಈ ಪದ್ಯದಲ್ಲಿ ದೇವಿಯು ಕೃಷ್ಣನಿಗೆ ಆಂಡಾಳ್ ಮತ್ತು ಗೋಪಿಯರ ಮೇಲಿನ ಪ್ರೀತಿಯು ಅವರಿಗೆ ಕೃಷ್ಣನ ಮೇಲಿರುವ ಪ್ರೀತಿಗಿಂತ ಅತ್ಯಂತ ದೊಡ್ಡದು ಎಂದು ತೋರಿಸುತ್ತಾಳೆ.

ಮುಂದೆ ಇಪ್ಪತ್ತೇಳು ಮತ್ತು ಇಪ್ಪತ್ತೆಂಟನೆಯ ಪದ್ಯಗಳಲ್ಲಿ ಪ್ರಾಪ್ಯಮ್ (ಗುರಿ) ಮತ್ತು ಪ್ರಪಕಮ್ (ದಾರಿ) ಎರಡೂ ಶ್ರೀಮನ್ನಾರಾಯಣ ಒಬ್ಬನ್ನೇ ಎನ್ನುವ ವಿಷಯವನ್ನು ಸ್ಪಷ್ಟಪಡಿಸುತ್ತಾಳೆ.

ಇಪ್ಪತ್ತೇಳನೆಯ ಪದ್ಯದಲ್ಲಿ ಗೋವಿಂದನ ವಿಶೇಷಗುಣವಾದ ಅನುಕೂಲರು (ಭಕ್ತರೂ, ಅವನನ್ನು ಬಯಸುವವರೂ) ಮತ್ತು ಪ್ರತಿಕೂಲರು (ಅವನನ್ನು ದ್ವೇಷಿಸುವವರೂ, ಸೇರದವರೂ) ಇಬ್ಬರನ್ನೂ ಸೆಳೆಯುವ ಅಸಾಧಾರಣ ಗುಣವನ್ನು ವಿವರಿಸುತ್ತಾಳೆ. ಇಲ್ಲಿ ಗೋದಾದೇವಿಯು, ಅಂತಿಮ ಗುರಿಯಾದ ಕೈಂಕರ್ಯ, ಸಾಯುಜ್ಯ ಮೋಕ್ಷ, ಶಾಶ್ವತವಾಗಿ ಪರಮಾತ್ಮನಲ್ಲೇ ಬೆರೆತು ಅವನ ಸಂತೋಷಕ್ಕಾಗಿ, ಅವನಿಗೆ ಯಾವ ಅಡಚಣೆ ಇಲ್ಲದ ಕೈಂಕರ್ಯ ಮಾಡುವ ಅನುಭೂತಿಯನ್ನು ಹೇಳಿದ್ದಾಳೆ.

ಇಪ್ಪತ್ತೆಂಟನೇ ಪದ್ಯದಲ್ಲಿ ಗೋದಾದೇವಿಯು ಶ್ರೀಮನ್ನಾರಾಯಣನಿಗೂ, ಜೀವಾತ್ಮರಿಗೂ ಇರುವ (ನಿರುಪಾಧಿಕ ಸಂಬಂಧ)ಅಳಿಸಲಾಗದ ಸಂಬಂಧವನ್ನು ವಿವರಿಸುತ್ತಾಳೆ. ಯಾವ ಸಾಧನೆ, ಅನುಷ್ಠಾನಗಳಿಗೂ ಅಸಮರ್ಥರು ನಾವು. ನಮ್ಮ ಸ್ವಂತ ಸಾಧನೆಯಿಂದ ನಿನ್ನ ಬಂದು ಸೇರುವ ಸಾಮರ್ಥ್ಯ ನಮಗಿಲ್ಲ. ನಿನ್ನ ಕಾರುಣ್ಯ, ಸೌಶೀಲ್ಯ, ಸೌಲಭ್ಯಗಳಿಂದ ನಿರಪೇಕ್ಷಿತನಾಗಿ ನೀನೆ ನಮ್ಮನ್ನೆಲ್ಲ ಉದ್ಧರಿಸಬೇಕು. ವೃಂದಾವನದ ಹಸುಗಳ ರೀತಿ. ಈ ಪದ್ಯವು ನಮಗೆಲ್ಲಾ ಬಹು ಮುಖ್ಯವಾದ ಪದ್ಯವಾಗಿದೆ. ನಾಯನಾರರು ಶರಣಾಗತನಿಗೆ ಅಗತ್ಯವಾದ ಆರು ಅವಶ್ಯಕತೆಗಳನ್ನು ಗುರುತಿಸುತ್ತಾರೆ, ಅವುಗಳು ಇಲ್ಲಿವೆ.

*ಯಾರು ಸಿಧ್ದೋಪಾಯ ನಿಷ್ಠರಾಗಿ ಇರುವರೋ, (ಪರಮಾತ್ಮನೇ ಅವನನ್ನು ಸೇರುವ ಗುರಿ) ಅವನನ್ನು ಸೇರಲು ತನ್ನ ಬಳಿ ಯಾವ ಉಪಾಯವೂ ಇಲ್ಲಾ, ಅವನೇ ಉಪಾಯ, ಅವನೇ ಮಾರ್ಗ, ಅವನೇ ಅಡೆಯಬೇಕಾದ ಗುರಿ ಎಂದು ಇರುವವರು.

*ಯಾವ ಅರ್ಹತೆಯೂ ಇಲ್ಲದೆ, ಯಾವ ಆಚಾರ ಅನುಷ್ಠಾನ ಒಂದೂ ತಿಳಿಯದೆ, ಅಜ್ಞಾನದಲ್ಲೇ ಮುಳುಗಿ ಕೀಳುಮಟ್ಟದಲ್ಲಿರುವವರು ನಾವು ಎಂದು ತಿಳಿಯಬೇಕು. ಅಕಿಂಚನ್ಯ ಭಾವ ಇರಬೇಕು.

* ಅನವರತ ಶ್ರೀಮನ್ನಾರಾಯಣನ ಕಲ್ಯಾಣಗುಣಗಳನ್ನು ಮನದಲ್ಲೇ ನೆನೆಯುತ್ತಿರಬೇಕು. ಮೂಲ ಸುಕ್ರುತನೂ, ಸರ್ವ ಮಂಗಳ ಕಾರಣನೂ, ಸರ್ವಜ್ಞನೂ, ವಿಶ್ವಕ್ಕೇ ಬೆಳಕು ನೀಡುವವನೂ ಆದ ಪರಮಾತ್ಮನನ್ನು ಎಡೆಬಿಡದೆ ನೆನೆಯುತ್ತಿರಬೇಕು.

* ನಮಗೂ ಅವನಿಗೂ ಇರುವ ಶಾಶ್ವತ ಸಂಬಂಧದ ಪರಿಪೂರ್ಣ ಅರಿವಿರಬೇಕು.

* ಜನ್ಮ ಜನ್ಮಾಂತರಗಳಿಂದ, ಜನ್ಮ-ಕರ್ಮಾ ಚಕ್ರದಲ್ಲಿ ಸಿಲುಕಿ ಅಜ್ಞಾನದಿಂದ ಮಾಡಿರುವ ಕೋಟ್ಯಾನುಕೋಟಿ ಪಾಪಕರ್ಮಗಳನ್ನು ಮನ್ನಿಸಿ, ದಂಡಿಸದೆ ದಯೆತೋರು ಎಂದು ಸದಾಕಾಲ ಪ್ರಾರ್ಥಿಸುವುದು.

* ಕೈಂಕರ್ಯವೇ ಜೀವನದ ಗುರಿ, ಅದೇ ಕೊನೆಯ ಪುರುಷಾರ್ಥ, ನಿನ್ನೊಡನೆಯೇ ನೀನು ವಿಧಿಸಿದ ಕೈಂಕರ್ಯವನ್ನೇ ಮಾಡುತ್ತಿರುವ ಭಾಗ್ಯಕೊಡು ಎಂದು ಪ್ರಾರ್ಥಿಸುವುದು.

ಇಪ್ಪತ್ತೊಂಬತ್ತನೆಯ ಪದ್ಯದಲ್ಲಿ, ಗೋದಾದೇವಿಯು ಎಂಬೆರುಮಾನನ ಪ್ರೀತಿಗೋಸ್ಕರವೇ (ಶ್ರೀಮನ್ನಾರಾಯಣ ಪ್ರೀತ್ಯರ್ಥಂ ) ಕೈಂಕರ್ಯ ಮಾಡುವುದು ಅತಿ ಮುಖ್ಯವಾದ ಉದ್ದೇಶವೆಂದು ಪ್ರಕಟಿಸುತ್ತಾಳೆ. ಹಾಗು, ಕೃಷ್ಣಾನುಭವದ ಅನನ್ಯ ಆಸೆಯಿಂದ ಈ ವ್ರತವನ್ನು (ನೋಂಬು) ಒಂದು ವ್ಯಾಜ (ಕಾರಣ, ಉಪಾಯ) ವಾಗಿ ಪರಿಗಣಿಸಿರುವುದಾಗಿ ಹೇಳುತ್ತಾಳೆ.

ಈ ಹಿಂದಿನ ೨೯ ಪದ್ಯಗಳಲ್ಲೂ ಗೋಪಿಕಾಸ್ತ್ರೀ ಭಾವದಿಂದ ಇತರ ಗೋಪಕನ್ಯೆಯರೊಡನೆ ವ್ರತವನ್ನು ಆಚರಿಸಿ, ಅದರಿಂದ ಸಂಪ್ರೀತನಾದ ಶ್ರೀಕೃಷ್ಣನ ಅನುಗ್ರಹ, ದರ್ಶನ ಹಾಗೂ ಕೃಷ್ಣಪ್ರೇಮಪ್ರಾಪ್ತಿಯ ಆನಂದದಿಂದ ೩೦ ನೆಯ ಪದ್ಯವನ್ನು ವಿಷ್ಣುಚಿತ್ತರ ಮಗಳಾದ ಆಂಡಾಳ್ ಭಾವದಲ್ಲಿ ಹಾಡುತ್ತಾಳೆ. ಯಾರು ಈ ೩೦ ಅಧ್ಭುತವಾದ ಪದ್ಯಗಳನ್ನು ಕಲಿತು, ತಪ್ಪದೇ ದಿನ ದಿನವೂ ಹಾಡುತ್ತಾರೋ, ಅವರು ಗೋದಾದೇವಿಯಷ್ಟು ಪರಿಪೂರ್ಣ ಭಾವದವರಾಗಿರದಿದ್ದರೂ, ಅವಳ ಸಮಾನವಾದ ಕೈಂಕರ್ಯಪ್ರಾಪ್ತಿಗೆ ಪಾತ್ರರಾಗುವರು.

ವೃಂದಾವನದಲ್ಲಿ ಉಪಸ್ಥಿತನಾಗಿದ್ದ ಕಣ್ಣನ್ ಎಂಬೆರುಮಾನನಲ್ಲಿ ಅಲ್ಲಿನ ಗೋಪಿಯರಿಗೆ ಇದ್ದ ಅಪಾರ ಪ್ರೀತಿ, ಅದನ್ನೇ ಅನುಕರಿಸಿ, ಪುನರಾವರ್ತಿಸಿ ಅದೇ ಭಾವದಲ್ಲಿ ಶ್ರೀವಿಲ್ಲಿಬುತ್ತೂರಿನಲ್ಲಿ ವ್ರತವನ್ನಾಚರಿಸಿ ಕರುಣಿಸಿದ ೩೦ ಪದ್ಯಗಳನ್ನು ಯಾರು ಕಲಿತು ಭಕ್ತಿಯಿಂದ ಹಾಡುತ್ತಾರೋ, ಅವರಿಗೆ ಕೃಷ್ಣಾನುಭವದ ಫಲ ಸಮನಾಗಿ ದೊರಕುತ್ತದೆ.

ಪರಾಶರ ಭಟ್ಟರು ಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೆಯನ್ನು ಹೀಗೆ ಗುರುತಿಸುತ್ತಾರೆ. ಹೇಗೆ ಒಂದು ಹಸುವು ತನ್ನ ಕರುವನ್ನು ಕಳೆದುಕೊಂಡು, ಕೃತಕ ಕರುವನ್ನು ನೋಡಿಯೇ ಹಾಲುಕೊಡುವಂತೆ, ಯಾರು ಈ ಭಕ್ತಿಪೂರ್ವಕವಾದ ಪದ್ಯಗಳನ್ನು ಹಾಡುತ್ತಾರೋ, ಅವರು ಭಾಗವತ್ ಪ್ರೀತಿಯ ಸಮಾನ ಫಲವನ್ನು ಪಡೆಯುತ್ತಾರೆ.

ತಿರುಪ್ಪಾವೆಯ ಅಂತ್ಯದಲ್ಲಿ ಗೋದಾದೇವಿಯು ಹಾಲ್ಗಡಲನ್ನು ಕಡೆದ ಚರಿತ್ರವನ್ನು ಹಾಡುತ್ತಾಳೆ. ಹೇಗೆ ಗೋಪಿಯರು ಶ್ರೀಕೃಷ್ಣನೇ ಬೇಕೆಂದು ಆಸೆಪಟ್ಟರೂ, ಅದಕ್ಕೆ ಲಕ್ಷ್ಮೀದೇವಿಯ (ತಯಾರ್, ಪಿರಾಟ್ಟಿ) ಅನುಗ್ರಹ, ಪುರುಷಾಕಾರ ಅತ್ಯಗತ್ಯ. ಅವಳ ಅನುಗ್ರಹವಿಲ್ಲದೇ ಭಗವಂತನ ದರ್ಶನವಾಗದು. ಅಂತೆಯೇ, ಕ್ಷೀರಸಾಗರ ಮಂಥನವು ಮುಖ್ಯವಾಗಿ ಲಕ್ಷ್ಮೀದೇವಿಯು (ಪಿರಾಟ್ಟಿ) ಸಮುದ್ರದಿಂದ ಮೇಲೆ ಉದಿಸಿಬಂದು ಶ್ರೀಹರಿಯನ್ನು ವರಿಸುವುದಕ್ಕೋಸ್ಕರವೇ ಮಾಧವನು ಸಂಕಲ್ಪಿಸಿ ನಡೆಸಿದುದು. ಅದಕ್ಕೇ ಗೋದಾದೇವಿಯು ಈ ಪ್ರಬಂಧದ ಅಂತ್ಯದಲ್ಲಿ ಸಮುದ್ರಮಂಥನ ಚರಿತ್ರವನ್ನು ಪ್ರಕಾಶಪಡಿಸಿರುವುದು. ಗೋದಾದೇವಿಯು ಆಚಾರ್ಯ ಅಭಿಮಾನ ನಿಷ್ಠೆಯವಳಾದ್ದರಿಂದ, ಪ್ರಬಂಧದ ಅಂತ್ಯದಲ್ಲಿ ತಾನು ಭಟ್ಟರ್ಪೀರಾನ್ ಕೋದೈ (ಪೆರಿಯಾಳ್ವಾರ್ ಪುತ್ರಿ) ಎಂದು ತಿಳಿಸುತ್ತಾಳೆ.

ಹೀಗೆ, ನಾಯನಾರರು ತಮ್ಮ ಅವತಾರಿಕೆಯಲ್ಲಿ ಸಂಪೂರ್ಣ ತಿರುಪ್ಪಾವೈಯನ್ನು ಅತ್ಯಂತ ಸುಂದರವಾಗಿ ಸಂಗ್ರಹಿಸಿದ್ದಾರೆ. ಇವರ ಅಪ್ರತಿಮ ಪಾಂಡಿತ್ಯ ಹಾಗು ಇವರ ತಿರುಪ್ಪಾವೈ ಸಾರಾಂಶದ ಕುರಿತು ಮಾತನಾಡಲು ನಮಗೆ ಯಾವುದೇ ಅರ್ಹತೆ ಇಲ್ಲವಾದರೂ, ಇವರ ಬುದ್ಧಿಶಕ್ತಿ, ವಿಚಾರ ಚಾತುರ್ಯತೆಯನ್ನು ಕಂಡು ವಿಸ್ಮಯವಾಗುತ್ತದೆ. ಎಂಬೆರುಮಾನನಲ್ಲಿ ಇವರಿಗಿರುವ ಭಕ್ತಿರೂಪಾಪನ್ನ ಜ್ಞಾನದ ಫಲಿತಾಂಶವೇ ನಮಗೆ ದೊರೆತಿರುವ ಉತ್ಕ್ರಷ್ಟ ಭಗವತ್ ಅನುಭವ.

ನಮ್ಮ ಎಲ್ಲಾ ಪೂರ್ವಾಚಾರ್ಯರುಗಳು ತಿರುಪ್ಪಾವೈ ಪ್ರಬಂಧವನ್ನು ಪ್ರಧಾನವಾಗಿ ವೈಭವೀಕರಿಸಿದ್ದಾರೆ. ಹಾಗೂ ನಮ್ಮ ಸಂಪ್ರದಾಯದಲ್ಲಿ ವಿಶೇಷ ಸ್ಥಾನಪಡೆದು, ನಿತ್ಯ ಅನುಸಂಧಾನ ಗ್ರಂಥವಾಗಿದೆ.

ಗೋದಾದೇವಿಯ ನಿರ್ಹೇತುಕ ಕೃಪೆಯಿಂದ ನಮಗೆಲ್ಲರಿಗೂ ಕಿಂಚಿತ್ ಭಗವತ್ ಭಾಗವತ ಭಕ್ತಿಯು ಬೆಳೆಯಲಿ ಎಂದು ಆಂಡಾಳ್ ದೇವಿಯ ಚರಣಕಮಲಗಳಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ

ಅಡಿಯೇನ್ ಗೋದಾ ರಾಮಾನುಜ ದಾಸಿ

ಮೂಲ : https://granthams.koyil.org/2012/12/thiruppavai-saram-by-nayanar/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment