ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಈಗ, ತಿರುಮಲೈ ನಿರೂಪಣೆ

ಪುರಟ್ಟಾಸಿ ಮಾಸದ (ಕನ್ಯಾಮಾಸ) ಮೊದಲ ದಿನದಂದು, ತಿರುವೇಂಗಡಂ ಬೆಟ್ಟಗಳಲ್ಲಿ ಬ್ರಹ್ಮೋತ್ಸವ ಪ್ರಾರಂಭವಾಗುತ್ತದೆ. ಪೆರಿಯ ಕೇಳ್ವಿ ಜೀಯರ್ (ಅಲ್ಲಿನ ದೇವಾಲಯವನ್ನು ನೋಡಿಕೊಳ್ಳುವ ಪ್ರಮುಖ ವ್ಯಕ್ತಿ) ಆ ರಾತ್ರಿ ಒಂದು ಕನಸನ್ನು ಕಂಡರು, ಅಲ್ಲಿ ಜನರು ಅವರಿಗೆ ಪೆರಿಯ ಪೆರುಮಾಳ್ (ಶ್ರೀ ರಂಗನಾಥನ್) ನಂತೆ ಮಲಗಿರುವ ಶ್ರೀವೈಷ್ಣವನನ್ನು ಬೆಟ್ಟದ ತಪ್ಪಲಿನಲ್ಲಿ, ತೋಪುಗಳ ಬಳಿ ನೋಡಿದ್ದೇವೆಂದು ಹೇಳಿದರು. ಅವರು ತಿರುಮಲೈ ಬೆಟ್ಟಗಳ ಉದ್ದಕ್ಕೆ ಸಮಾನವಾದ ಬೃಹತ್ ರೂಪವನ್ನು ಹೊಂದಿದ್ದರು . ಅವರ ದೈವಿಕ ತಲೆ ಪಶ್ಚಿಮ ದಿಕ್ಕಿನಲ್ಲಿತ್ತು ಮತ್ತು ದೈವಿಕ ಪಾದಗಳು ಪೂರ್ವ ದಿಕ್ಕಿನಲ್ಲಿತ್ತು, ಅವರು ದಕ್ಷಿಣ ದಿಕ್ಕಿನ ಕಡೆಗೆ ನೋಡುತ್ತಿದ್ದರು. ಒಬ್ಬ ಜೀಯರ್ ಅವರ ದಿವ್ಯ ಪಾದಗಳ ಬಳಿ ನಿಂತಿದ್ದರು. ಅವರು ಯಾರೆಂದು ಅವರನ್ನು ಕೇಳಿದಾಗ, ಅವರು “ಅೞಗಿಯ ಮಣವಾಳ ಪೆರುಮಾಳ್ ನಾಯನಾರ್, ಅವರು ಮುಪ್ಪತ್ತಾರಾಯಿರಂ (ಇದು, ತಿರುವಾಯ್ಮೊಳಿ ವ್ಯಾಖ್ಯಾನ) ದಲ್ಲಿ ಪರಿಣಿತರು. ಅವರ ದಿವ್ಯ ಪಾದಗಳ ಬಳಿ ನಿಂತಿರುವ ವ್ಯಕ್ತಿ “ಪೊನ್ನಡಿಕ್ಕಾಲ್ ಜೀಯರ್” ಎಂದು ಹೇಳಿದರು. ಮರುದಿನ ಮುಂಜಾನೆ, ಪೆರಿಯ ಕೇಳ್ವಿ ಜೀಯರ್ ಬೆಳಗಿನ ಪೂಜೆಗೆ ದೇವಸ್ಥಾನಕ್ಕೆ ಹೋದಾಗ, ಅವರು ಇಯಲ್ ಸಭೆಗೆ (ತಿರುಪ್ಪಲ್ಲಾಂಡು, ತಿರುಪ್ಪಾವೈ ಇತ್ಯಾದಿಗಳಿಂದ ಪಾಸುರಗಳನ್ನು ಪಠಿಸುವ ಗೋಷ್ಟಿ) ಕನಸನ್ನು ಹೇಳಿದರು, ಇದನ್ನು ಕೇಳಿದ ತೋಳಪ್ಪರ್ ಒಂದು ಶ್ಲೋಕವನ್ನು ರಚಿಸಿದರು.

ಸ್ವಪ್ನೇ ಬೃಹತ್ ಯತೀಂದ್ರಸ್ಯ ಶ್ರೀ ಶೈಲಸಮಿತೋಮಹಾನ್
ಶಯಾನ: ಪುರುಷೋಧ್ರುಷ್ಟ: ಸೌಮ್ಯಜಾಮಾತೃ ದೇಶಿಕ:
ತದರ್ಶ ಪಶ್ಚಾತ್ ತಸ್ಯೈವ ಪಾದಮೂಲೇ ಯತೀಶ್ವರಂ
ಪ್ರಾಂಜಲಿಮ್ ನಿಭ್ರುತಂ ಪ್ರಹ್ವಮ್ ಸ್ವರ್ಣಾಧಿಪತಿ ಪದಸಂಜ್ಞಕಮ್

(ಪೆರಿಯ ಜೀಯರ್ ಅವರ ಕನಸಿನಲ್ಲಿ, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಎಂಬ ಗಣ್ಯ ವ್ಯಕ್ತಿ ಒರಗಿಕೊಂಡಿರುವುದು ಕಂಡುಬಂದಿತು. ಪೆರಿಯ ಜೀಯರ್ ಕೂಡ ಆ ಗಣ್ಯ ವ್ಯಕ್ತಿಯ ದಿವ್ಯ ಪಾದಗಳ ಬಳಿ, ವಿನಮ್ರತೆಯಿಂದ, ಅಂಗೈಗಳನ್ನು ನಮಸ್ಕರಿಸುತ್ತಾ ನಿಂತಿದ್ದ ಪೊನ್ನಡಿಕ್ಕಾಲ್ ಜೀಯರ್ ಅವರನ್ನು ಕಂಡರು). ಇದನ್ನು ಕೇಳಿ ಎಲ್ಲರೂ ಸಂತೋಷಪಟ್ಟರು. ದೂರ ಪ್ರದೇಶಗಳಿಂದ ದೇವಸ್ಥಾನಕ್ಕೆ ಬರುತ್ತಿದ್ದ ಕೆಲವು ಜನರು, ಅವರು ಕೊಯಿಲ್ ನಾಯನಾರ್ ಎಂದು ಹೇಳಿದರು. ಇನ್ನು ಕೆಲವರು ಅವರು ಉತ್ಸವಕ್ಕೆ (ಬ್ರಹ್ಮೋತ್ಸವ) ಬರುತ್ತಿದ್ದಾರೆಂದು ಹೇಳಿದರು; ಇನ್ನು ಕೆಲವರು “ನಾಯನಾರ್ ತಮ್ಮ ಶಿಷ್ಯ ವಾನಮಾಮಲೈ ಜೀಯರ್ ಅವರನ್ನು ತಮ್ಮ ಹೃದಯಕ್ಕೆ ಪ್ರಿಯರೆಂದು ಪರಿಗಣಿಸುತ್ತಾರೆ; ಅವರನ್ನು ಪೊನ್ನಡಿಕ್ಕಾಲ್ ಜೀಯರ್ ಎಂದೂ ಕರೆಯುತ್ತಾರೆ” ಎಂದು ಹೇಳಿದರು. ಬ್ರಹ್ಮೋತ್ಸವದ ಸಮಯದಲ್ಲಿ ನಡೆಯುವ ಒಂದು ಮಹಾನ್ ಕಾರ್ಯಕ್ರಮಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದರು.

ನಾಯನಾರ್, ತಮ್ಮ ಪ್ರವಾಸದ ಭಾಗವಾಗಿ, ತಿರುಮಲೈಯಾಳ್ವಾರ್ ಅನ್ನು ಪೂಜಿಸಿದರು, ತಿರುವಾಯ್ಮೊಳಿ 3.3.8 “ತಿರುವೆಂಗಡ ಮಾಮಲೈ ಒನ್ಡ್ರು ಮೇ ತೊೞ ನಮ್ ವಿನೈ ಓಯುಮೇ ” (ನಾವು ತಿರುವೇಂಗಡಂನ ದೈವಿಕ ಬೆಟ್ಟಗಳನ್ನು ಪೂಜಿಸಿದ ತಕ್ಷಣ, ನಮ್ಮ ಹಿಂದಿನ ಎಲ್ಲಾ ಕರ್ಮಗಳು ಮಾಯವಾಗುತ್ತವೆ).ಅವರು ತಿರುಮಲೈಯಾಳ್ವಾರರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, ಬೆಟ್ಟಗಳಿಂದ ಕಣ್ಣು ತೆಗೆಯದೆ ಬೆಟ್ಟಗಳನ್ನು ನೋಡುತ್ತಾ, “ಸುವರ್ಣಮುಖರೀಂ ತತ್ರ ಸಂಗತಾಮ್ ಮಂಗಳಾಸ್ವನಾಮ್” (ಸುವರ್ಣಮುಖಿ, ಮಧುರವಾದ ಶಬ್ದಗಳೊಂದಿಗೆ, ಆ ತಿರುಮಲೈಯ ಪಕ್ಕದಲ್ಲಿ ಹರಿಯುತ್ತಾ) ಎಂದು ಸ್ವರ್ಣಮುಖಿ ನದಿಯನ್ನು ತಲುಪಿದರು. ಅದರಲ್ಲಿ ದಿವ್ಯ ಸ್ನಾನ ಮಾಡಿ, ಕೇಶವದಿಂದ ಪ್ರಾರಂಭವಾಗುವ ಹನ್ನೆರಡು ಊರ್ಧ್ವ ಪುಂಡ್ರಗಳನ್ನು ಹಚ್ಚಿದರು. ಗೋವಿಂದರಾಜನ ಅಭಯಹಸ್ತ (ಆಶ್ರಯವನ್ನು ವ್ಯಕ್ತಪಡಿಸುವ ಹಸ್ತ ಚಿಹ್ನೆ), ಮಧುರವಾದ ಸುವಾಸನೆ ಮತ್ತು ದಿವ್ಯ ಮಾಲೆಯು ಅಲ್ಲಿಗೆ ಬಂದಾಗ, ಅವರು ಅವುಗಳನ್ನು ಸ್ವೀಕರಿಸಿ ತಮ್ಮ ಶಿಷ್ಯರಿಗೆ ನೀಡಿದರು. ಅವರು ದಯೆಯಿಂದ ಗೋವಿಂದರಾಜರ ಸನ್ನಿಧಿಗೆ ಹೋಗಿ, ಅವರಿಗೆ ಮಂಗಳಾಶಾಸನ ಮಾಡಿ, ದೇವಾಲಯದ ಗೌರವಗಳನ್ನು (ಪವಿತ್ರ ತೀರ್ಥ , ಶ್ರೀ ಶಟಾರಿ, ತುಳಸಿ ಇತ್ಯಾದಿ) ಸ್ವೀಕರಿಸಿದರು, ಬೆಟ್ಟದ ತಪ್ಪಲಿನಲ್ಲಿ ಅಳಗಿಯಸಿಂಗರ (ನರಸಿಂಹ) ಪೂಜೆ ಮಾಡಿದರು.” ಏವಂವಿತ್ ಪಾದೇನ ಅಧ್ಯಾರೋಹತಿ” (ಈ ರೀತಿ ಪೂಜಿಸುವವನು ತನ್ನ ಪಾದಗಳಿಂದ ಏರುತ್ತಾನೆ) ಎಂದು ಉಪನಿಷತ್ತಿನಲ್ಲಿ ಉಲ್ಲೇಖಿಸಿದಂತೆ, ಅವರು ಬೆಟ್ಟವನ್ನು ಹತ್ತಲು ಪ್ರಾರಂಭಿಸಿದರು . ದಾರಿಯಲ್ಲಿ, ಅವರು ಪರಿಷದ್ ತಿರುವೇಂಗಡಂ ಉಡೈಯಾನ್ ಅವರನ್ನು ಪೂಜಿಸಿದರು (ಪರಿಷದ್ ತಿರುವೇಂಗಡಮುಡೈಯಾನ್ ಅವರು ಎಂಪೆರುಮಾನ್ ಅವರ ಅರ್ಚಾ ರೂಪವಾಗಿದ್ದು, ಅವರು ತಮ್ಮ ದಿವ್ಯ ಶಂಖ ಮತ್ತು ದಿವ್ಯ ಚಕ್ರದೊಂದಿಗೆ ತೋಂಡೈಮಾನ್ ಚಕ್ರವರ್ತಿಗೆ ಸಹಾಯ ಮಾಡಲು ತಮ್ಮ ಶತ್ರುಗಳೊಂದಿಗೆ ಹೋರಾಡಲು ಬಂದರು; ತೋಂಡೈಮಾನ್ ಚಕ್ರವರ್ತಿ ತಿರುವೇಂಗಡಮುಡೈಯಾನ್ ಅವರ ಅತ್ಯಂತ ನಿಷ್ಠಾವಂತ ಶಿಷ್ಯರಾಗಿದ್ದರು). ನಂತರ, ಹತ್ತಿರದ ಕರ್ಪೂರ ಕಾ (ಕರ್ಪೂರದ ತೋಟ) ದಲ್ಲಿ ಅವರು ದಯೆಯಿಂದ ನೀರನ್ನು ತೆಗೆದುಕೊಂಡು, ನಂತರ ಕಾಟ್ ಅೞಗಿಯ ಸಿಂಗರ್ ಮತ್ತು ಮಾಂಬೞ ಎಂಪೆರುಮಾನಾರ್ ಅವರನ್ನು ಪೂಜಿಸಿದರು.

(ಮಾಂಬೞ ಎಂಪೆರುಮಾನಾರ್ ಬಗ್ಗೆ ಒಂದು ಕುತೂಹಲಕಾರಿ ವೃತ್ತಾಂತವಿದೆ: ಎಂಪೆರುಮಾನಾರ್ (ರಾಮಾನುಜರ್) ತಿರುವೇಂಗಡಂ ಹತ್ತುತ್ತಿದ್ದಾಗ, ತಿರುವೇಂಗಡಮುಡೈಯಾನ್, ಅನಂತಾಳ್ವಾನ್ (ಎಂಪೆರುಮಾನಾರ್ ಅವರ ಶಿಷ್ಯ ಮತ್ತು ಅವರ ಅಗತ್ಯಗಳನ್ನು ಪೂರೈಸಲು ಅವರಿಂದ ಕಳುಹಿಸಲ್ಪಟ್ಟ) ಅವರ ಶಿಷ್ಯರಲ್ಲಿ ಒಬ್ಬರಾದ ಶ್ರೀವೈಷ್ಣವರ ವೇಷ ಧರಿಸಿ, ಮೊಸರು ಅನ್ನ ಮತ್ತು ಮಾವಿನಹಣ್ಣಿನೊಂದಿಗೆ ಎಂಪೆರುಮಾನಾರ್ ಬಳಿಗೆ ಹೋಗಿ, ಇವುಗಳನ್ನು ತಿರುವೇಂಗಡಮುಡೈಯಾನ್ ಕಳುಹಿಸಿದ್ದಾರೆಂದು ಹೇಳಿದರು.ಅವರ ಆಚಾರ್ಯರು ಯಾರು ಎಂದು ಕೇಳಿದಾಗ, ಅವರು ತಮ್ಮ ಆಚಾರ್ಯರು ಅನಂತಾಳ್ವಾನ್ ಎಂದು ಹೇಳಿದರು. ನಂತರ ಎಂಪೆರುಮಾನಾರ್ ತಮ್ಮ ಆಚಾರ್ಯರ ತನಿಯನ್ ಅನ್ನು ಪಠಿಸಲು ಕೇಳಿಕೊಂಡರು; ತಕ್ಷಣ, ಶ್ರೀವೈಷ್ಣವರು ತನಿಯನ್ ಅನ್ನು ಪಠಿಸಿದರು.

ಅಖಿಲಾತ್ಮ ಗುಣಾವಾಸ೦ ಅಜ್ಞಾನ ತಿಮಿರಾಪಹಮ್
ಆಶ್ರಿತಾನಾಮ್ ಸುಚರಣಾಮ್ ವಂದೇ ಅನಂತಾರ್ಯ ದೇಶಿಕಮ್
ಯತೀಂದ್ರ ಪಾದಾಂಬುಜ ಸಂಚರೀಕಂ ಶ್ರೀಮದ್ ದಯಾಪಾಲ ದಯೈಕ ಪಾತ್ರಮ್
ಶ್ರೀವೇಂಕಟೇಶಾಂಗ್ರಿ ಯುಗಾಂತರಮ್ ನಮಾಮಿ ಅನಂತಾರ್ಯಮ್ ಅನಂತಕೃತ್ತ್ವ:

ನಂತರ ಕಣ್ಮರೆಯಾದರು. ಇದನ್ನು ನೋಡಿ ಎಂಪೆರುಮಾನಾರ್ ಆಶ್ಚರ್ಯಚಕಿತರಾದರು; ಪ್ರಸಾದದೊಂದಿಗೆ ಬಂದಿರುವುದು ತಿರುವೇಂಗಡಮುಡೈಯಾನ್ ಎಂದು ಅವರಿಗೆ ಅರಿವಾಯಿತು. ಅವರು ಆ ಜಾಗದಲ್ಲಿ ಮೊಸರು ಅನ್ನವನ್ನು ತಿಂದು, ಮಾವಿನ ಹಣ್ಣನ್ನು ತಿಂದು, ಆ ಜಾಗದಲ್ಲಿ ಮಾವಿನ ಬೀಜವನ್ನು ನೆಟ್ಟರು. ನಂತರ ತಿರುವೇಂಗಡಮುಡೈಯಾನ್ ಅವರ ದಿವ್ಯ ಪಾದಗಳು ಆ ಸ್ಥಳದಲ್ಲಿ ಕಾಣಿಸಿಕೊಂಡಾಗ, ನಂತರದ ಅವಧಿಯಲ್ಲಿ ಬಂದ ಜನರು ಅಲ್ಲಿ ಎಂಪೆರುಮಾನಾರ್ ಅವರ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಮತ್ತು ಈ ವಿಗ್ರಹವನ್ನು ಮಾಂಬೞ ಎಂಪೆರುಮಾನಾರ್ ಎಂದು ಕರೆಯಲಾಗುತ್ತದೆ.)

ಮೂಲ : https://granthams.koyil.org/2021/08/16/yathindhra-pravana-prabhavam-34-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment