ಕೃಷ್ಣ ಲೀಲೆಗಳ ಸಾರಾಂಶ– 18 –ಗೋಪಿಕೆಯರ ವಸ್ತ್ರಾಪಹರಣ ಮತ್ತು ಅದರ ಸಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ವೇಣುಗೋಪಾಲನ ವೇಣುಗಾನ

ಕೃಷ್ಣನ ಲೀಲೆಗಳಲ್ಲಿ, ಗೋಪಿಕೆಯರ ವಸ್ತ್ರಾಪಹರಣವು (ಬಟ್ಟೆಗಳನ್ನು ಕದಿಯುವುದು) ಒಂದು ಪ್ರಮುಖವಾದ ಲೀಲೆ. ಬನ್ನಿ, ಈ ಲೀಲೆ ಮತ್ತು ಅದರ ಹಿಂದಿರುವ ಸಾರವನ್ನು ತಿಳಿಯೋಣ.

ಕೃಷ್ಣನಿಗೆ ಗೋಪಿಕೆಯರ ಮೇಲೆ ಅಪಾರ ಪ್ರೀತಿ ಇತ್ತು. ಅವರಿಗೂ ಕೃಷ್ಣನೆಂದರೆ ಪಂಚಪ್ರಾಣ. ಆದರೂ, ಅವನು ಆಗಾಗ್ಗೆ ಅವರ ಜಡೆ ಎಳೆಯುವುದು, ಬಟ್ಟೆಗಳನ್ನು ಎಳೆಯುವುದು ಮುಂತಾದ ತುಂಟಾಟಗಳನ್ನು ಮಾಡಿ ಅವರನ್ನು ಕಾಡುತ್ತಿದ್ದನು. ಅವನ ಈ ಚೇಷ್ಟೆಗಳನ್ನು ಸಹಿಸಲಾರದೆ, ಅವರು ತಾಯಿ ಯಶೋದೆಯ ಬಳಿ ಹೋಗಿ ದೂರು ನೀಡುತ್ತಿದ್ದರು. ಅವರು ಕೃಷ್ಣನ ಮೇಲೆ ತಮ್ಮ ಕೋಪವನ್ನೂ ಪ್ರದರ್ಶಿಸುತ್ತಿದ್ದರು.

ಒಮ್ಮೆ ಗೋಪಿಕೆಯರೆಲ್ಲರೂ ಕೃಷ್ಣನಿಗೆ ತಿಳಿಯದಂತೆ ಕೊಳವೊಂದರಲ್ಲಿ ಸ್ನಾನ ಮಾಡಲು ತೆರಳಿದರು. ಆದರೆ, ಕೃಷ್ಣನು ಅವರಿಗೆ ತಿಳಿಯದಂತೆ ಅವರನ್ನು ಹಿಂಬಾಲಿಸಿದನು. ಅವರು ಮುಗ್ಧ ಬಾಲಕಿಯರಾಗಿದ್ದರಿಂದ, ತಮ್ಮ ಬಟ್ಟೆಗಳನ್ನು ಕಳಚಿ ಕೊಳದ ದಡದಲ್ಲಿಟ್ಟು ನೀರಿಗಿಳಿದರು. ಅವರು ನೀರಿಗಿಳಿದ ಕೂಡಲೇ, ಕೃಷ್ಣನು ಆ ಬಟ್ಟೆಗಳನ್ನು ಕದ್ದುಕೊಂಡು, ಹತ್ತಿರದಲ್ಲಿದ್ದ ಕದಂಬ ಮರವನ್ನು ಏರಿ, ಅದರ ಕೊಂಬೆಯ ಮೇಲೆ ಕುಳಿತುಕೊಂಡನು.

ಸ್ನಾನ ಮುಗಿಸಿ ಹೊರಬಂದ ಗೋಪಿಕೆಯರು ತಮ್ಮ ಬಟ್ಟೆಗಳು ಕಾಣೆಯಾಗಿರುವುದನ್ನು ಕಂಡು ಕಂಗಾಲಾದರು. ಯಾವುದೋ ದೇವತೆಗಳೋ ಅಥವಾ ಅದೃಶ್ಯ ಶಕ್ತಿಗಳೋ ಅವುಗಳನ್ನು ಒಯ್ದಿರಬಹುದೆಂದು ಅವರು ಭಾವಿಸಿದರು. ಆ ಸಮಯದಲ್ಲಿ, ಮರದ ಮೇಲಿದ್ದ ಕೃಷ್ಣನು ಅವರನ್ನು ಕರೆದು, “ನಿಮಗೆ ನಿಮ್ಮ ಬಟ್ಟೆಗಳು ಹಿಂತಿರುಗಿ ಬೇಕೆಂದರೆ, ನಿಮ್ಮ ಎರಡೂ ಕೈಗಳನ್ನು ಎತ್ತಿ, ಅಂಗೈಗಳನ್ನು ಜೋಡಿಸಿ ನನ್ನನ್ನು ಪ್ರಾರ್ಥಿಸಿ” ಎಂದು ಹೇಳಿದನು. ಆರಂಭದಲ್ಲಿ ನಾಚಿಕೆಯಿಂದ ಅವರು ಇದಕ್ಕೆ ಒಪ್ಪದಿದ್ದರೂ, ನಂತರ ಕೃಷ್ಣನ ಮೇಲಿನ ಭಕ್ತಿಯಿಂದಾಗಿ, ತಮ್ಮ ಕೈಗಳಿಂದ ದೇಹವನ್ನು ಮುಚ್ಚಿಕೊಳ್ಳುವ ಬದಲು, ಎರಡೂ ಕೈಗಳನ್ನು ಮೇಲಕ್ಕೆತ್ತಿ ಮುಗಿದು ಅವನನ್ನು ಪ್ರಾರ್ಥಿಸಿದರು. ಇದರಿಂದ ಪ್ರಸನ್ನನಾದ ಕೃಷ್ಣನು ಅವರ ಬಟ್ಟೆಗಳನ್ನು ಹಿಂದಿರುಗಿಸಿದನು.

ಆಳ್ವಾರ್‌ಗಳ ಅನುಭವ:

  • ಪೆರಿಯಾಳ್ವಾರ್ ತಮ್ಮ ‘ಪೆರಿಯಾಳ್ವಾರ್ ತಿರುಮೊಳಿ’ಯಲ್ಲಿ ಈ ಸನ್ನಿವೇಶವನ್ನು ಅನುಭವಿಸುತ್ತಾ, “ವಣ್ಡಮರ್ ಪೂಂಗುಳಲಾರ್ ತುಗಿಲ್ ಕೈಕ್ಕೊಂಡು ವಿಣ್ಡೋಯ್ ಮರತ್ತಾನ್” (ದುಂಬಿಗಳು ಮುತ್ತುವ ಹೂವುಗಳನ್ನು ಮುಡಿದಿರುವ ಸುಂದರ ಕೇಶರಾಶಿಯುಳ್ಳವರ ವಸ್ತ್ರಗಳನ್ನು ಅಪಹರಿಸಿ, ಆಕಾಶದೆತ್ತರದ ಮರವನ್ನು ಏರಿದವನು) ಎಂದು ಹಾಡಿ ಹೊಗಳಿದ್ದಾರೆ.
  • ಆಂಡಾಳ್ ತಮ್ಮ ‘ನಾಚ್ಚಿಯಾರ್ ತಿರುಮೊಳಿ’ಯಲ್ಲಿ “ಕೋಳಿಯಲೈಪ್ಪದನ್ ಮುನ್ನಂ” ಎಂಬ ಪೂರ್ತಿ ದಶಕದಲ್ಲಿ (ಪದಿಗಂ) ಈ ಲೀಲೆಯನ್ನು ಆಸ್ವಾದಿಸಿದ್ದಾರೆ.
  • ತಿರುಮಂಗೈ ಆಳ್ವಾರ್ ತಮ್ಮ ‘ಪೆರಿಯ ತಿರುಮೊಳಿ’ಯಲ್ಲಿ “ತುಳೈಯಾರ್ ಕರುಮೆನ್ ಕುಳಲ್ ಆಯ್ಚಿಯರ್ ತಮ್ ತುಗಿಲ್ ವಾರಿಯಮ್” (ಕಪ್ಪನೆಯ ಮೃದುವಾದ ಕೂದಲನ್ನು ಹೊಂದಿರುವ ಗೋಪಿಕೆಯರ ವಸ್ತ್ರಗಳನ್ನು ಬಾಚಿ ತೆಗೆದುಕೊಂಡು…) ಎಂದು ಆನಂದಿಸಿದ್ದಾರೆ.

ಈ ಲೀಲೆಯ  ಸಾರಂಶ: 

  •  ಭಗವಂತನಿಗೆ ಶರಣಾಗುವಾಗ (ಶರಣಾಗತಿ), ಭಕ್ತನು ತನ್ನ ಕೈಯಲ್ಲಿ ರಕ್ಷಣೆಗಾಗಿ ಬೇರೇನೂ ಇಲ್ಲ ಮತ್ತು ಆತನೇ ಏಕೈಕ ಗತಿ ಎಂದು ನಿವೇದಿಸಿಕೊಳ್ಳಬೇಕು. ಲೌಕಿಕವಾದ ಎಲ್ಲಾ ನಾಚಿಕೆಯನ್ನು ತೊರೆದು, ಭಗವಂತನ ದಿವ್ಯ ಚರಣಗಳೇ ಏಕೈಕ ರಕ್ಷಣೆ ಎಂದು ಒಪ್ಪಿಕೊಳ್ಳಬೇಕು. ಗೋಪಿಕೆಯರಿಗೆ ಕೃಷ್ಣನ ಮೇಲೆ ಅಪಾರ ಪ್ರೀತಿಯಿದ್ದರೂ, ಕೃಷ್ಣನೇ ತಮ್ಮ ಸಂಪೂರ್ಣ ರಕ್ಷಕ ಎಂಬ ಪೂರ್ಣ ಅರಿವು ಅವರಿಗಿರಲಿಲ್ಲ. ಅವರಿಗೆ ಈ ತತ್ವವನ್ನು ಮನವರಿಕೆ ಮಾಡಿಕೊಡಲು ಕೃಷ್ಣನು ಈ ಲೀಲೆಯನ್ನು ಮಾಡಿದನು.
  • ತಪ್ಪು ಕಲ್ಪನೆಗಳ ನಿವಾರಣೆ: ಕೆಲವರು ಈ ಘಟನೆಯನ್ನು ವಿಕೃತ ರೀತಿಯಲ್ಲಿ ಅರ್ಥೈಸುತ್ತಾರೆ. ಅಂದರೆ, ಕೃಷ್ಣನು ನಾಚಿಕೆಗೇಡಿನ ಕೆಲಸ ಮಾಡಿದನೆಂದು ಅವರು ಹೇಳುತ್ತಾರೆ. ಆದರೆ ಇಲ್ಲಿ ಗೋಪಿಕೆಯರು ತೀರಾ ಚಿಕ್ಕ ಮಕ್ಕಳು. ಕೃಷ್ಣನು ಹೇಗೆ ಸುಮಾರು ಆರು ಅಥವಾ ಏಳು ವರ್ಷದ ಬಾಲಕನಾಗಿದ್ದನೋ, ಅವರೂ ಕೂಡ ಅದೇ ವಯಸ್ಸಿನವರಾಗಿದ್ದರು. ಆದ್ದರಿಂದ, ಇಲ್ಲಿ ಯಾವುದೇ ವಿಕೃತ ದೃಷ್ಟಿಕೋನಕ್ಕೆ ಆಸ್ಪದವಿಲ್ಲ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/09/23/krishna-leela-18-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment