ತತ್ತ್ವ ತ್ರಯಮ್ – ಚಿತ್ – ನಾನು ಯಾರು?

ಶ್ರೀಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ ವರವರ ಮುನಯೇ ನಮಃ  ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಶೀರ್ಷಿಕೆ

ಚಿತ್ (ಆತ್ಮ) ತತ್ತ್ವಮ್ ನನ್ನು ಬುದ್ಧಿವಂತರ ಬೋಧನೆಯಿಂದ ತಿಳಿದುಕೊಳ್ಳುವುದು

ಪರಿಚಯ:

  • ಆತ್ಮದ, ವಸ್ತುವಿನ ಮತ್ತು ದೇವರ ಸಹಜ ನಿಜ ಸ್ವರೂಪವನ್ನು ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲಕಾರಿಯಾದ ವಿಷಯ.
  • ಎಲ್ಲಾ ನಾಗರೀಕತೆಗಳಲ್ಲೂ , ಈ ಮೂರೂ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಬುದ್ಧಿಜೀವಿಗಳಿಗೆ ಒಂದು ಸಾಮಾನ್ಯವಾದ ವಿಷಯವಾಗಿರುತ್ತದೆ.
  • ವೇದಮ್, ವೇದಾಂತಮ್, ಸ್ಮೃತಿಗಳು, ಪುರಾಣಗಳು, ಇತಿಹಾಸಗಳನ್ನು ಅವಲಂಬಿಸಿರುವ ಸನಾತನ ಧರ್ಮದಲ್ಲಿ ಜೀವಾತ್ಮಾಗಳ(ಆತ್ಮಗಳ), ಪ್ರಕೃತಿಯ (ವಸ್ತುಗಳ) ಮತ್ತು ಈಶ್ವರನ ನಿಜವಾದ ಜ್ಞಾನವನ್ನು ಅತಿ ಸುಂದರವಾಗಿ ವಿವರಿಸಲಾಗಿದೆ.
  • ಶ್ರೀಮನ್ನಾರಾಯಣನ್ (ಗೀತಾಚಾರ್‍ಯರಾಗಿ) , ನಮ್ಮಾಳ್ವಾರ್, ಎಂಪೆರುಮಾನಾರ್, ಪಿಳ್ಳೈ ಲೋಕಾಚಾರ್‍ಯರ್ ಮತ್ತು ಮನವಾಳ ಮಾಮುನಿಗಳ್ ಅನೇಕ ಗ್ರಂಥಗಳಲ್ಲಿ ಈ ಮೂರೂ ವಸ್ತುಗಳ ಸ್ವಭಾವವನ್ನು ಅವರ ದಿವ್ಯ ಉಪದೇಶಗಳ ಮೂಲಕ ವಿವರಿಸಿದ್ದಾರೆ.
  • ಇವುಗಳಲ್ಲಿ ನಿರ್ದಿಷ್ಟವಾಗಿ, ಪಿಳ್ಳೈ ಲೋಕಾಚಾರ್‍ಯರ ತತ್ತ್ವ ತ್ರಯಮ್ ಮತ್ತು ಮಾಮುನಿಗಳ ಅದ್ಭುತ ವ್ಯಾಖ್ಯಾನವು ಎಲ್ಲಾ ಮೂರು ತತ್ವಗಳಾದ ಚಿತ್, ಅಚಿತ್ ಮತ್ತು ಈಶ್ವರನ ಸ್ವಭಾವವನ್ನು ಸ್ಫಟಿಕದಂತೆ ಸ್ವಚ್ಛವಾಗಿ ತಿಳಿಯಾಗಿ ಅನಾವರಣಗೊಳಿಸಿದ್ದಾರೆ.
  • ತನ್ನ/ಆತ್ಮದ ನಿಜ ಸ್ವಭಾವವನ್ನು ತಿಳಿದುಕೊಳ್ಳದೆ ಇದ್ದರೆ ಅವರ ಆಧ್ಯಾತ್ಮಿಕ ಬೆಳವಣಿಗೆಯು ಬಹಳ ಕುಂಠಿತವಾಗುತ್ತದೆ.
  • ನಾವು ಮೊದಲು ಆತ್ಮದ ಬಗ್ಗೆ ಆಳವಾದ ಅಧ್ಯಯನ ಮಾಡೋಣ , ಬನ್ನಿ.
ಭಗವಂತನಿಂದಲೇ ಉಪದೇಶವನ್ನು ಪಡೆದ ಅರ್ಜುನ
ಆಳ್ವಾರ್, ಎಂಪೆರುಮಾನಾರ್, ಪಿಳ್ಳೈ ಲೋಕಾಚಾರ್‍ಯರ್, ಜೀಯರ್

ಆತ್ಮದ ನಿಜ ಸ್ವಭಾವ:

  • ಆತ್ಮವು ದೇಹ, ಇಂದ್ರಿಯಗಳು, ಬುದ್ಧಿ, ಪ್ರಾಣ ವಾಯು ಮತ್ತು ವಿವೇಕದಿಂದ ಬೇರೆಯಾಗಿರುತ್ತದೆ.
  • ಸಹಜವಾಗಿ ಆತ್ಮವು
    • ಸ್ವಯಂ ಪ್ರೇರಿತ ಮತ್ತು ಸ್ವಯಂ ಪ್ರಕಾಶಮಾನವಾಗಿರುತ್ತದೆ.
    • ಆನಂದಮಯ – ಸಹಜವಾದ ಆನಂದ
    • ನಿರಂತರ – ಅದನ್ನು ಸೃಷ್ಟಿಸಲು ಮತ್ತು ನಶಿಸಲು ಸಾಧ್ಯವಿಲ್ಲ
    • ಅಪ್ರತಿಷ್ಠಿತ – ಹೊರಗಿನ ಬಾಹ್ಯ ಕಣ್ಣುಗಳಿಗೆ ಕಾಣುವುದಿಲ್ಲ.
    • ಬಹಳ ಚಿಕ್ಕದಾಗಿರುತ್ತದೆ
    • ಅದನ್ನು ಮತ್ತೆ ಭಾಗಿಸಲು ಬರುವುದಿಲ್ಲ
    • ಅದನ್ನು ಪರಿವರ್ತಿಸಲು – ಬೇರೆ ರೂಪವನ್ನು ಪಡೆಯಲು ಆಗುವುದಿಲ್ಲ
    • ಜ್ಞಾನಮಯ
    • ಭಗವಂತನಿಂದ ನಿಯಂತ್ರಿತ ಮತ್ತು ಭಗವಂತನಿಂದಲೇ ಮೇಲೆತ್ತಲು ಸಾಧ್ಯವಿರುವ
    • ಭಗವಂತನಿಗೆ ಸೇವೆ ಸಲ್ಲಿಸುವ – ಸೇವಕನಾಗಿರುತ್ತದೆ

ಆತ್ಮದ, ದೇಹದ, ಇಂದ್ರಿಯಗಳ, ಬುದ್ಧಿಯ, ಪ್ರಾಣ ವಾಯುವಿನ, ಮತ್ತು ವಿವೇಕದ ನಡುವಿನ ವ್ಯತ್ಯಾಸಗಳು:

  • ದೇಹ ಮುಂತಾದುವುಗಳನ್ನು “ನನ್ನ ದೇಹ” ಎಂದೂ, “ನನ್ನ ಇಂದ್ರಿಯಗಳು”, “ನನ್ನ ಮನಸ್ಸು”, ಮುಂತಾದುವುಗಳು “ನನ್ನ” ಎಂಬುದನ್ನು ಆತ್ಮವನ್ನು ಸೂಚಿಸುತ್ತವೆ. ಆತ್ಮವನ್ನು ನಾವು “ನಾನು” ಎಂದು ಕರೆಯುತ್ತೇವೆ , ಆದರೆ ದೇಹ, ಮನಸ್ಸು ಮುಂತಾದುವುಗಳನ್ನು “ನನ್ನದು” ಎಂದು ಕರೆಯುತ್ತೇವೆ.
  • ಆತ್ಮವು ಯಾವಾಗಲೂ ಗ್ರಹಿಸುತ್ತದೆ, ಆದರೆ, ದೇಹ ಮುಂತಾದುವುಗಳು ಕೆಲ ಸಮಯ ಗ್ರಹಿಸುತ್ತವೆ ಕೆಲ ಸಮಯ ಗ್ರಹಿಸುವುದಿಲ್ಲ.
  • ಇದಕ್ಕೆ ಉದಾಹರಣೆಯಾಗಿ, ನಾವು ನಿದ್ರಿಸುವಾಗ ಆತ್ಮವು ಎಚ್ಚರವಾಗಿರುತ್ತದೆ. ಆದರೆ ಆತ್ಮವು ಗ್ರಹಿಸುವ ಮಟ್ಟದಲ್ಲಿರುವುದಿಲ್ಲ. ನಾವು ಎಚ್ಚರ ಹೊಂದಿದ ಮೇಲೆ ಆತ್ಮದ ನಿರಂತರ ಗ್ರಹಿಕೆಯಿಂದಾಗಿ ನಮಗೆ ತಕ್ಷಣವೇ ನಾವು ಯಾರೆಂಬುದನ್ನು ತಿಳಿದುಕೊಳ್ಳುತ್ತೇವೆ.
  • ಒಬ್ಬ ಮನುಷ್ಯನನ್ನು ಉದಾಹರಣೆಗೆ ತಗೆದುಕೊಂಡರೆ, ಆತ್ಮವು ಒಂದೇ ಆಗಿರುತ್ತದೆ, ಆದರೆ ದೇಹ, ಇಂದ್ರಿಯಗಳು, ಮನಸ್ಸು ಮುಂತಾದುವುಗಳ ಸಂಯೋಜನೆಯು ಬಹಳವಾಗಿರುತ್ತದೆ.

ಈ ಮೇಲಿನ ಉದಾಹರಣೆಗಳಿಂದ, ನಮಗೆ ಆತ್ಮ ಮತ್ತು ದೇಹ ಮುಂತಾದುವುಗಳ ಮಧ್ಯೆ ಇರುವ ವ್ಯತ್ಯಾಸವು ಸ್ಪಷ್ಟವಾಗಿ ತಿಳಿದು ಬರುತ್ತದೆ.

ಆದರೂ ಯಾರಿಗಾದರೂ ಈ ತರ್ಕಬದ್ಧವಾದ ವಿವರಣೆಯಲ್ಲಿ ಸ್ವಲ್ಪವಾದರೂ ಸಂದೇಹವಿದ್ದಲ್ಲಿ, ಶಾಸ್ತ್ರದಲ್ಲಿ ಆತ್ಮವು ದೇಹ ಮುಂತಾದುವುಗಳಿಂದ ಬೇರೆಯಾದದ್ದು ಎಂದು ಹೇಳಿಕೆಯಿರುವುದರಿಂದ ನಾವು ಅದನ್ನು ಒಪ್ಪಿಕೊಳ್ಳಬೇಕು. ಶಾಸ್ತ್ರವು ಶಾಶ್ವತವಾಗಿರುವುದರಿಂದ, ಮತ್ತು ಅದು ಯಾರೊಬ್ಬರಿಂದ ಸೃಷ್ಟಿಯಾಗಿಲ್ಲದಿರುವುದರಿಂದ , ಅದು ನ್ಯೂನ್ಯತೆಗಳಿಂದ ಮುಕ್ತವಾಗಿರುವುದರಿಂದ, ಶಾಸ್ತ್ರಗಳು ಹೇಳಿರುವ ತತ್ತ್ವಗಳನ್ನು ಸಂಪೂರ್ಣವಾಗಿ ಅಂಗೀಕರಿಸಬೇಕು.

ಆತ್ಮದ ಮತ್ತು ದೇಹದ ನಡುವಿನ ವ್ಯತ್ಯಾಸಗಳು – ನಿಜ ಉದಾಹರಣೆಯ ಸಹಿತ.

“ನಾನು” ಎಂಬ ಆತ್ಮಕ್ಕೆ ಒಂದು ದೇಹವಿರುವಂತೆ. ದೇಹ ಮತ್ತು ಆತ್ಮವು ಒಂದಕ್ಕೊಂದು ಬೇರೆಯಾಗಿರುತ್ತದೆ ಆದರೆ ಪರಸ್ಪರ ಕೂಡಿಕೊಂಡಿರುತ್ತದೆ. ಯಾವಾಗ ನಮಗೆ ನಾವು ಎಂಬುದು ಆತ್ಮವನ್ನು ಸೂಚಿಸುತ್ತದೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆಯೋ, ಆಗ ನಾವು ನಮ್ಮ ದೇಹಕ್ಕಾಗಿ ಯಾವಾಗಲೂ ಯೋಚಿಸುವುದನ್ನು ನಿಲ್ಲಿಸುತ್ತೇವೆ.

ದೇಹದ ಬದಲಾಗುವಿಕೆಯ ಗುಣ ಮತ್ತು ಆತ್ಮವು ದೇಹದಿಂದ ದೇಹಕ್ಕೆ ಬದಲಾಯಿಸುವ ಕ್ರಿಯೆ

  • ಭಗವಂತನಾದ ಕೃಷ್ಣನು ಆತ್ಮದ ಸ್ವಭಾವವನ್ನು ಮತ್ತು ದೇಹದ ಸ್ವಭಾವವನ್ನು ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ ವಿವರಿಸಿ ಹೇಳಿದ್ದಾರೆ.
  • 13ನೆಯ ಶ್ಲೋಕದಲ್ಲಿ ಅವರು ಹೇಳುತ್ತಾರೆ, “ ದೇಹದಿಂದ ಬಂಧಿಸಲ್ಪಟ್ಟ ಆತ್ಮವು ಅನೇಕ ಹಂತಗಳನ್ನು ಪಡೆಯುವಂತೆ , ಶಿಶು, ಯೌವನ, ಮುಂತಾದುವುಗಳು, ಮರಣಿಸಿದ ಮೇಲೆ ಆ ಆತ್ಮವು ಇನ್ನೊಂದು ಶರೀರವನ್ನು ಆಕ್ರಮಿಸುತ್ತದೆ. ಆತ್ಮದ ಸ್ವಭಾವವನ್ನು ತಿಳಿದವರು ಈ ರೀತಿಯ ಆತ್ಮದ ಪರಿವರ್ತನೆಯನ್ನು ಕಂಡು ವಿಸ್ಮಿತರಾಗುವುದಿಲ್ಲ.
  • 22ನೆಯ ಶ್ಲೋಕದಲ್ಲಿ ಅವರು ಹೇಳುತ್ತಾರೆ, “”ನಾವು ಹಳೆಯ , ಹರಿದ ಬಟ್ಟೆಯನ್ನು ಬದಲಾಯಿಸುವಂತೆ, ಆತ್ಮವು ಜೀರ್ಣವಾದ, ಮರಣಿಸಿದ ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಆಶ್ರಯಿಸುತ್ತದೆ.”
ಆತ್ಮವು ಜೀವಾತ್ಮದ ವಿವಿಧ ಹಂತಗಳನ್ನು ದಾಟುತ್ತಿರುವುದು ಮತ್ತು ಕೊನೆಯಲ್ಲಿ ಮರಣಿಸಿದ ಬಳಿಕ ದೇಹವನ್ನು ಬಿಟ್ಟು ಮತ್ತೊಂದು ದೇಹವನ್ನು ಹೊಕ್ಕಿರುವುದು

ತಿಳಿದವನು, ಮಾಡುವವನು ಮತ್ತು ಆನಂದಿಸುವವನು:

  • ಜ್ಞಾನಕ್ಕೆ ಆಶ್ರಯವಾಗಿರುವುದರಿಂದ, ಆತ್ಮವನ್ನು ತಿಳಿದವನ್ನು (ಬಲ್ಲವನು) ಎಂದು ಕರೆಯುತ್ತಾರೆ.
  • ಆತ್ಮವು ಬರಿಯ ಜ್ಞಾನವಲ್ಲ, ಅವನು ತಿಳಿದವನು ಏಕೆಂದರೆ ಶಾಸ್ತ್ರವು ಆ ರೀತಿ ಘೋಷಿಸುತ್ತದೆ.
  • ಜ್ಞಾನವು ಕ್ರಿಯೆಗೆ ತಾನೇ ತಾನಾಗಿ ಪ್ರೇರೇಪಿಸುತ್ತದೆ.ಮತ್ತು ಆ ಕ್ರಿಯೆಯ ಫಲಿತಾಂಶವನ್ನು ಆನಂದಿಸುತ್ತದೆ. ಏಕೆಂದರೆ ಮಾಡುವುದು ಮತ್ತು ಆನಂದಿಸುವುದು ಜ್ಞಾನವನ್ನು ಪ್ರತಿಪಾದಿಸುವುದರ ಫಲ.
  • ಆತ್ಮವು ಈ ಲೌಕಿಕ ಜಗತ್ತಿನಲ್ಲಿ ಮೂರು ವಿಧವಾದ ವಸ್ತುಗಳಿಂದ ಪ್ರಭಾವಿತಗೊಳ್ಳುತ್ತದೆ. – ಸತ್ವಮ್, ರಜಸ್ ಮತ್ತು ತಮಸ್ (ಒಳ್ಳೆಯತನ, ಕಾಮ ಮತ್ತು ಅಜ್ಞಾನ) ಮತ್ತು ಇವುಗಳಿಂದ ಆತ್ಮದ ಕ್ರಿಯೆಯು ಪ್ರಭಾವಿತವಾಗುತ್ತದೆ.
  • ಆತ್ಮಕ್ಕೆ ಅದರ ತನ್ನದೇ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವನ್ನು ಭಗವಂತನು ಕೊಟ್ಟಿರುತ್ತಾನೆ.
  • ಆದರೆ ಭಗವಂತನು ಅತ್ಯಂತ ಉನ್ನತವಾದ ಅಧಿಕಾರಿಯಾದ್ದರಿಂದ ಅವನ ಸಹಮತವಿಲ್ಲದೇ ಯಾವುದೂ ನಡೆಯುವುದಿಲ್ಲ.
  • ಪ್ರತಿಯೊಂದು ಕ್ರಿಯೆಗೂ, ಆತ್ಮಕ್ಕೆ, ಪ್ರತಿಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಕೊಟ್ಟಿರುತ್ತಾನೆ. ಭಗವಂತನು ಮೊದಲು ಸಾಕ್ಷಿಯಾಗಿ ನಿಲ್ಲುತ್ತಾನೆ ಆಮೇಲೆ, ಆತ್ಮವು ಆಯ್ಕೆಯನ್ನು ಮಾಡಲು ಬಿಡುತ್ತಾನೆ.
  • ನಂತರದಲ್ಲಿ , ಆ ಆಯ್ಕೆಯ ಮೇಲೆ ಆಧಾರಿತವಾಗಿ (ಆ ಕ್ರಿಯೆಯು ಶಾಸ್ತ್ರದ ಪ್ರಕಾರವಾಗಿ, ಇಲ್ಲದೇ ಶಾಸ್ತ್ರದ ವಿರುದ್ಧವಾಗಿರುತ್ತದೆಯೋ) ಭಗವಂತನು ಆತ್ಮವನ್ನು ಆ ಕ್ರಿಯೆಯ ಪ್ರಕಾರವಾಗಿ ನಡೆಯಲು ಸಹಕರಿಸುತ್ತಾನೆ. ಆದ್ದರಿಂದ ಭಗವಂತನು ಆ ಆತ್ಮದ ಎಲ್ಲಾ ಕ್ರಿಯೆಗೂ ಸಹ ಪರಮ ಅಧಿಕಾರಿಯಾಗಿ ಇದ್ದುಕೊಂಡು, ಆದರೆ ಆ ಆತ್ಮವು ತನ್ನ ಕ್ರಿಯೆಗೆ ತಾನೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವ ಹಾಗೆ ಅದನ್ನು ಬಿಡುತ್ತಾನೆ.
  • ಆದರೆ ಕೆಲವೊಂದು ವಿಶಿಷ್ಟವಾದ ಪ್ರಕರಣದಲ್ಲಿ , ಕೆಲವೊಂದು ಕಾರಣಗಳಿಗಾಗಿ, ಭಗವಂತನು ಪೂರ್ಣವಾಗಿ ತಾನೇ ಆತ್ಮದ ಜೀವನದ ಮತ್ತು ಕ್ರಿಯೆಯ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾನೆ .

ಭಗವಂತನಿಂದ ನಿಯಂತ್ರಿತ, ಸಮರ್ಥಿತ ಮತ್ತು ಅವನ ಸೇವಕನಾಗಿರುವ ಆತ್ಮ

  • ಆತ್ಮವು ಸಂಪೂರ್ಣವಾಗಿ ಭಗವಂತನಿಂದ ನಿಯಂತ್ರಿತವಾಗಿರುತ್ತದೆ. ಇದರ ಅರ್ಥ ಆತ್ಮದ ಎಲ್ಲಾ ಕ್ರಿಯೆಗಳೂ, ಭಗವಂತನಿಂದ ಆಣತಿ ಪಡೆಯಬೇಕು.
  • ದೇಹದ ಎಲ್ಲಾ ಕ್ರಿಯೆಗಳೂ ಆತ್ಮದ ನಿಯಂತ್ರಣದಲ್ಲಿ ನಡೆಯುವಂತೆ, ಆತ್ಮದ ಎಲ್ಲಾ ಕ್ರಿಯೆಗಳೂ ಅಸ್ತಿತ್ವದಲ್ಲೇ ಪರಮೋಚ್ಚವಾಗಿರುವ ಆತ್ಮದ (ಭಗವಂತನ) ನಿಯಂತ್ರಣದಲ್ಲಿರುತ್ತದೆ.
  • ಆದರೂ, ಭಗವಂತನು ಆತ್ಮಗಳಿಗೆ ಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರವನ್ನು ಕೊಟ್ಟಿರುತ್ತಾನೆ, ಏಕೆಂದರೆ ಆತ್ಮಕ್ಕೆ ಜ್ಞಾನವಿರುತ್ತದೆ, ಆ ಜ್ಞಾನವು ನಿರ್ಧಾರವನ್ನು ತೆಗೆದುಕೊಳ್ಳಲು ಉಪಯೋಗಿಸಲ್ಪಡುತ್ತದೆ.
  • ಇದಿಲ್ಲದಿದ್ದರೆ, ಶಾಸ್ತ್ರವು ಅರ್ಥರಹಿತವಾಗುತ್ತದೆ.
  • ಭಗವಂತನಿಂದ ನಿಯಂತ್ರಿತ, ಬೆಂಬಲಿತ ಮತ್ತು ಅವನಿಗೇ ಸೇವಕನಾಗಿರುವುದು.
  • ಶಾಸ್ತ್ರವು ಆತ್ಮವು ಕಲಿತುಕೊಳ್ಳಲು, ಅರ್ಥಮಾಡಿಕೊಳ್ಳಲು ಮತ್ತು ಬೇರೆ ಬೇರೆ ಕ್ರಿಯೆಗಳ ವ್ಯತ್ಯಾಸಗಳು ಮತ್ತು ಅದರ ಅನುಕೂಲ ಮತ್ತು ಅನಾನುಕೂಲ (ತೊಂದರೆ) ಗಳನ್ನು ವಿಂಗಡಿಸಿ , ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯವಾಗಿರುತ್ತದೆ.
  • ಆದ್ದರಿಂದ, ಆತ್ಮದ ಕ್ರಿಯೆಗಳಿಗೆ ಭಗವಂತನು ಈ ಸ್ಥಿತಿಯಲ್ಲಿ ಇರುತ್ತಾನೆ:
    • ಸಾಕ್ಷಿಯಾಗಿ – ಆತ್ಮವು ಮೊದಲನೆಯ ಸಲ ಮಾಡುವ ಕಾರ್ಯಕ್ಕೆ ಪ್ರಯತ್ನಿಸುವಾಗ, ನಿಷ್ಕ್ರಿಯನಾಗಿಯೂ
    • ಅಂಗೀಕರಿಸುವವನಾಗಿ – ಆತ್ಮವು ನಿರ್ಧರಿಸಿದ ನಿಶ್ಚಿತ ಕ್ರಿಯೆಗೆ ಸಮ್ಮತಿಸುತ್ತಾನೆ
    • ಪೋಷಕನಾಗಿ – ಒಮ್ಮೆ ಆತ್ಮವು ಕ್ರಿಯೆಯನ್ನು ಪ್ರಾರಂಭಿಸಿದ ಮೇಲೆ, ಭಗವಂತನು ಮೊದಲ ಪ್ರಯತ್ನಕ್ಕೆ ಪೋಷಕನಾಗಿರುತ್ತಾನೆ. (ಈ ಒಂದು ನಿಶ್ಚಿತ ಕ್ರಿಯೆಗೆ)
  • ಆತ್ಮವು ಭಗವಂತನಿಂದ ಮೇಲೆತ್ತಲ್ಪಡುತ್ತದೆ. ಮೇಲೆತ್ತಲ್ಪಡುತ್ತದೆ ಎಂದರೆ ಆತ್ಮವು ತನ್ನ ಗುರುತು ಮತ್ತು ಜೀವನದ ಧ್ಯೇಯವನ್ನೇ ಕಳೆದುಕೊಳ್ಳುತ್ತದೆ – ಅದು ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದಾಗ:
    • ತನ್ನ ಮತ್ತು ಭಗವಾನನ ನಡುವೆ ಇರುವ ಸಂಬಂಧ
    • ಭಗವಾನನ ದಿವ್ಯ ಸ್ವಭಾವ
    • ಭಗವಂತನ ದಿವ್ಯ ಗುಣ
  • ಆತ್ಮವು ಎಲ್ಲದಕ್ಕೂ ಕೇಂದ್ರವಾಗಿರುವ ಪರಮಾತ್ಮನ ಸೇವಕ ಎಂದೆಂದಿಗೂ
  • ಇದರ ಅರ್ಥ ಆತ್ಮವು ಯಾವಾಗಲೂ ಭಗವಂತನನ್ನು ಸಂತೋಷ ಪಡಿಸಲೆಂದೇ ಇರುವುದು, ತನ್ನ ಸ್ವಂತ ಆಸೆಗಾಗಿ ಅಲ್ಲ, ಹೇಗೆ ಅಚಿತ್ ವಸ್ತುಗಳಾದ ಗಂಧದ ಕಟ್ಟಿಗೆ, ಹೂವುಗಳು ಮುಂತಾದುವುಗಳು ಬೇರೆಯವರನ್ನು (ಉಪಯೋಗಿಸುವವರನ್ನು) ಸಂತೋಷಪಡಿಸಲೆಂದೇ ಅಸ್ತಿತ್ವದಲ್ಲಿರುವ ಹಾಗೆ.
  • ಕೊನೆಯಲ್ಲಿ, ಆತ್ಮವು ಭಗವಂತನಿಂದ ಬೇರ್ಪಡಿಸಿ ಎಂದಿಗೂ ಇರಲಾರದು.

ಮೂರು ವಿಧವಾದ ಆತ್ಮಗಳಿವೆ:

ಹಲವಾರು ಆತ್ಮಗಳಿವೆ. ಅವುಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು.

  • ಬದ್ಧ ಆತ್ಮಗಳು
    • ಈ ಆತ್ಮಗಳು ಸಂಸಾರದಲ್ಲಿ ಅನಾದಿ ಕಾಲದಿಂದ ಬಂಧಿತ ಆತ್ಮಗಳು
    • ಈ ಆತ್ಮಗಳು ಅಜ್ಞಾನದಿಂದ ಸತತವಾಗಿ ಜನನ ಮರಣಗಳ ಚಕ್ರದಲ್ಲಿ ಸುತ್ತುತ್ತಾ ಇರುತ್ತವೆ, ಪಾಪ/ಪುಣ್ಯಗಳ ಫಲದಿಂದ.
    • ಈ ಎಲ್ಲಾ ಆತ್ಮಗಳು ತಮ್ಮ ನಿಜ ಸ್ವಭಾವವನ್ನು ತಿಳಿದುಕೊಂಡಿರುವುದಿಲ್ಲ.
    • ಈ ಆತ್ಮಗಳು ತಮ್ಮನ್ನು ತಾವು ಅರ್ಥ ಮಾಡಿಕೊಳ್ಳದೇ ದೇಹವನ್ನು, ಇಂದ್ರಿಯಗಳನ್ನು ಮುಂತಾದುವುಗಳನ್ನು ತಾವೇ ಎಂದು ತಿಳಿದುಕೊಂಡಿರುತ್ತಾರೆ.
    • ಈ ಆತ್ಮಗಳು ಇತರ ಬದ್ಧರಂತೆ ತಮ್ಮನ್ನು ತಾವು ಸಂಪೂರ್ಣ ಸ್ವತಂತ್ರವೆಂದು ತಿಳಿದು ಅದೇ ರೀತಿ ವ್ಯವಹರಿಸುತ್ತಾರೆ.

  • ಮುಕ್ತ ಆತ್ಮಗಳು:
    • ಈ ಆತ್ಮಗಳು ಒಂದು ಕಾಲದಲ್ಲಿ ಸಂಸಾರದಲ್ಲಿ (ಲೌಕಿಕದಲ್ಲಿ) ಇದ್ದು, ಆದರೆ ಈಗ ಪರಮಪದದಲ್ಲಿ (ಆಧ್ಯಾತ್ಮಿಕ ಲೋಕದಲ್ಲಿ) ಇರುತ್ತಾರೆ.
    • ಅವರುಗಳು ಪರಮಪದವನ್ನು ತಮ್ಮ ಸ್ವತಃ ಪ್ರಯತ್ನದಿಂದ (ಕರ್ಮ, ಜ್ಞಾನ, ಭಕ್ತಿ ಯೋಗದ ಮೂಲಕ) ಅಥವಾ ಕಾರಣವಿಲ್ಲದ ಭಗವಂತನ ಅಪಾರ ಕೃಪೆಯಿಂದ ಸೇರಿರುತ್ತಾರೆ.
    • ಸಂಸಾರದಿಂದ ವಿಮುಕ್ತಿ ಪಡೆದ ಮೇಲೆ, ಮುಕ್ತಾತ್ಮಗಳು ಸಾಮಾನ್ಯವಾಗಿ ಅರ್ಚಿರಾದಿ ಗತಿಯನ್ನು ಪಡೆಯುತ್ತಾರೆ. ಅವರು ವಿರಜಾ ನದಿಯಲ್ಲಿ ಮುಳುಗಿ ತಮ್ಮ ದೇಹವನ್ನು ಬಿಟ್ಟು, ದಿವ್ಯ ಆಧ್ಯಾತ್ಮಿಕ ದೇಹವನ್ನು ಪಡೆದು ಏಳುತ್ತಾರೆ.
    • ಅವರು ನಿತ್ಯಸೂರಿಗಳಿಂದ ಮತ್ತು ಇತರೆ ಮುಕ್ತಾತ್ಮಗಳಿಂದ ಸ್ವಾಗತಿಸಲ್ಪಡುತ್ತಾರೆ. ಶ್ರೀವೈಕುಂಠಮ್ ನನ್ನು ಸೇರಿ ಇತರರೊಂದಿಗೆ ಭಗವಂತನಿಗೆ ಶಾಶ್ವತವಾಗಿ ಸೇವೆ ಮಾಡುತ್ತಾರೆ.
ಆಳ್ವಾರರು ಶ್ರೀಮನಾರಾಯಣರ ಕಾರಣವಿಲ್ಲದ ಕೃಪೆಯಿಂದ ಪರಮಪದಕ್ಕೆ ಏರುತ್ತಿರುವುದು.
  • ನಿತ್ಯ ಆತ್ಮಗಳು:
    • ಈ ಆತ್ಮಗಳು ಸಂಸಾರದಲ್ಲಿ ಎಂದೂ ಬಂಧಿತರಾಗಿರುವುದಿಲ್ಲ.
    • ಅವರು ಭಗವಂತನನ್ನು ನಿರಂತರವಾಗಿ ಸೇವಿಸುತ್ತಿರುತ್ತಾರೆ, ಪರಮಪದದಲ್ಲಿ ಅಥವಾ ಭಗವಂತನು ಎಲ್ಲಿ ಇರುವನೋ ಅಲ್ಲಿ.
    • ಭಗವಂತನನ್ನು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕೆಲವು ನಿತ್ಯಸೂರಿಗಳು
      • ಆದಿಶೇಷನ್
      • ಗರುಡಾಳ್ವಾರ್
      • ವಿಷ್ವಕ್ಸೇನರ್ ಮುಂತಾದವರು
ಪರಮಪದದಲ್ಲಿ ಪರಮಪದನಾಥನು ನಿತ್ಯಸೂರಿಗಳಿಂದ ನಿರಂತರವಾಗಿ ಆರಾಧಿಸಲ್ಪಡುವನು.

ಅನಂತ ಆತ್ಮಗಳು

  • ನೀರು ಸಹಜವಾಗಿ ತಣ್ಣಗಿರುವಂತೆ, ಮತ್ತು ಅದನ್ನು ಒಂದು ಪಾತ್ರೆಯಲ್ಲಿಟ್ಟು ಬೆಂಕಿಯಿಂದ ಬಿಸಿ ಮಾಡಿದರೆ, ಬಿಸಿಯಾಗುವಂತೆ, ಬದ್ಧ ಆತ್ಮಗಳು ಲೌಕಿಕ ವಸ್ತುಗಳೊಂದಿಗೆ ಸಂಪರ್ಕ ಹೊಂದಿದರೆ ಕರ್ಮ ಮತ್ತು ಅಜ್ಞಾನವು ಆವರಿಸಿಕೊಳ್ಳುತ್ತದೆ.
  • ಲೌಕಿಕ ವಸ್ತುಗಳೊಂದಿಗಿನ ಸಂಪರ್ಕವನ್ನು(ಲಗತ್ತನ್ನು) ನಾವು ಕಡಿದುಕೊಂಡಾಗ , ಅಜ್ಞಾನ ಮುಂತಾದ ದೋಷಗಳು ದೂರವಾಗುತ್ತದೆ.
  • ಬದ್ಧ, ಮುಕ್ತ ಮತ್ತು ನಿತ್ಯ ಆತ್ಮಗಳು ಸಂಖ್ಯೆಯಲ್ಲಿ ಅಗಣಿತವಾಗಿದೆ.
  • ಕೆಲವರು ಒಂದೇ ಆತ್ಮದ ಪರಿಕಲ್ಪನೆ ಮಾಡಿಕೊಂಡು, ಅದನ್ನೇ ಬಹು ಆತ್ಮಗಳಾಗಿ ಗೊಂದಲಗೊಂಡು ಅಜ್ಞಾನದಿಂದ ಆವರಿಸಲ್ಪಟ್ಟು ಕಲ್ಪಿಸು ಕೊಳ್ಳುತ್ತಾರೆ. (ಶಾಸ್ತ್ರದಲ್ಲಿ ಹೇಳಿರುವ ಅದ್ವೈತ ತತ್ತ್ವವನ್ನು ಅನರ್ಥ ಮಾಡಿಕೊಂಡು) , ಆದರೆ ಇದು ಶಾಸ್ತ್ರದ ವಿರುದ್ಧವಾಗಿದೆ ಮತ್ತು ಸಹಜ ತರ್ಕದ ವಿರುದ್ಧವಾಗಿದೆ.
  • ಜಗತ್ತಿನಲ್ಲಿ ಒಂದೇ ಆತ್ಮವಿದ್ದಿದ್ದರೆ, ಒಬ್ಬರು ಸಂತೋಷದಲ್ಲಿದ್ದರೆ, ಮತ್ತೊಬ್ಬರು ದುಃಖದಲ್ಲಿರುವುದಿಲ್ಲ.
  • ಎರಡೂ ಒಂದಕ್ಕೊಂದು ವಿರುದ್ಧವಾಗಿದ್ದು, ಒಂದೇ ಮನುಷ್ಯನಲ್ಲಿ ಒಂದೇ ಸಮಯದಲ್ಲಿರಲು ಸಾಧ್ಯವಿಲ್ಲ.
  • ಮತ್ತು, ಶಾಸ್ತ್ರವು ಕೆಲವರು ಮುಕ್ತರಾಗಿದ್ದು, ಕೆಲವರು ಸಂಸಾರಿಗಳಾಗಿದ್ದು, ಕೆಲವರು ಆಚಾರ್‍ಯರಾಗಿದ್ದು, ಉಳಿದವರು ಶಿಷ್ಯರಾಗಿರಲು ಅಲ್ಲಿ ಬಹು ಸಂಖ್ಯೆಯಲ್ಲಿ ಆತ್ಮಗಳಿದ್ದರೆ ಮಾತ್ರ ಸಾಧ್ಯ.
  • ಶಾಸ್ತ್ರದಲ್ಲಿ ಹೇಳಿರುವ ಹಾಗೆ ಹಲವು ಆತ್ಮಗಳು ಅಸ್ತಿತ್ವದಲ್ಲಿರುವುದಕ್ಕೆ ಈ ತತ್ತ್ವವು ತದ್ವಿರುದ್ಧವಾಗಿದೆ.
  • ಮೋಕ್ಷದಲ್ಲೂ ಸಹ, ಅಲ್ಲಿ ಅಸಂಖ್ಯೇಯ ಆತ್ಮಗಳಿವೆ.
  • ಈಗ ನಮಗೆ ಒಂದು ಸಂದೇಹ ಬರಬಹುದು. ಪರಮಪದದಲ್ಲಿರುವ ಆತ್ಮಗಳಿಗೆ ಬೇರೆ ಬೇರೆಯಾದ ದರ್ಜೆ ಹೇಗೆ ಇರುತ್ತದೆ ಏಕೆಂದರೆ ಈ ಲೌಕಿಕ ಜಗತ್ತಿನಲ್ಲಿರುವಂತೆ ಅವರಿಗೆ ಕೋಪ, ಮತ್ಸರವಿರುವುದಿಲ್ಲವಷ್ಟೇ.
  • ಅನೇಕ ಕೊಡಗಳಲ್ಲಿ ಒಂದೇ ಅಳತೆಯ ಮತ್ತು ಒಂದೇ ತೂಕದ ವಸ್ತುವನ್ನು ಇಡುವಂತೆ, ಆದರೂ ಆ ಕೊಡಗಳು ಒಂದಕ್ಕೊಂದು ವಿಭಿನ್ನವಾಗಿರುವಂತೆ, ಪರಮಪದದಲ್ಲಿರುವ ಎಲ್ಲಾ ಆತ್ಮಗಳೂ ಪ್ರಮಾಣ ಬದ್ಧದಲ್ಲಿ ಮತ್ತು ಗುಣಮಟ್ಟದಲ್ಲಿ ಒಂದೇ ಆಗಿರುತ್ತದೆ ಆದರೆ ಅವು ಒಂದಕ್ಕೊಂದು ವಿಭಿನ್ನವಾಗಿರುತ್ತದೆ.
  • ಆದ್ದರಿಂದ ಇದು ಖಚಿತವಾಗಿ ಅರ್ಥವಾಗುತ್ತದೆ, ಏನೆಂದರೆ, ಈ ಲೌಕಿಕ ಜಗತ್ತಿನಲ್ಲಿಯೂ ಮತ್ತು ಆಧ್ಯಾತ್ಮಿಕ ಲೋಕದಲ್ಲೂ ಅನೇಕ ಆತ್ಮಗಳಿವೆ ಎಂದು.

ಧರ್ಮಿ ಜ್ಞಾನಮ್ ಮತ್ತು ಧರ್ಮ ಭೂತ ಜ್ಞಾನಮ್

  • ಎರಡು ವಿಧದ ಜ್ಞಾನದ ಬಗ್ಗೆ ತಿಳಿದುಕೊಳ್ಳೋಣ :
    • ಧರ್ಮಿ ಜ್ಞಾನಮ್ – ವಿವೇಕ
    • ಧರ್ಮ ಭೂತ ಜ್ಞಾನಮ್ – ಅರಿವು
  • ಆತ್ಮದ ನಿಜ ಸ್ವಭಾವ (ಬದ್ಧ , ಮುಕ್ತ ಮತ್ತು ನಿತ್ಯ ಎಂದು ಬೇರ್ಪಡಿಸದೇ)
    • ಶೇಷತ್ವಮ್ – ಭಗವಂತನಿಗೆ ನಂತರ ಇರುವುದು
    • ಜ್ಞಾತುತ್ವಮ್ – ಅರಿವಿನಿಂದ ಇರುವುದು
  • ಎರಡೂ ಅತ್ಯಂತ ಅವಶ್ಯಕವಾದ ಗುಣಗಳು
  • ಅರಿವಿನಿಂದ ಇರುವುದು ನಮ್ಮನ್ನು ಅಚಿತ್ (ವಸ್ತು) ನಿಂದ ಬೇರ್ಪಡಿಸುತ್ತದೆ.
  • ಸೇವಕನಾಗಿರುವುದು ನಮ್ಮನ್ನು ಭಗವಂತನಿಂದ ಬೇರೆಯಾಗಿಸುತ್ತದೆ.
  • ಆತ್ಮವು ತಾನೇ ಅರಿವಿನ ಉತ್ಪನ್ನವಾಗಿರುತ್ತದೆ, (ಧರ್ಮಿ ಜ್ಞಾನಮ್ – ಸ್ವರೂಪಮ್/ಸಹಜ ಸ್ವಭಾವಮ್), ಆತ್ಮಕ್ಕೆ ಅರಿವೂ ಇರುತ್ತದೆ. (ಧರ್ಮ ಭೂತ ಜ್ಞಾನಮ್ – ಗುಣಮ್ )
  • ವ್ಯತ್ಯಾಸವೇನೆಂದರೆ, – ಧರ್ಮಿ ಜ್ಞಾನಮ್ ಅನ್ನುವುದು ತಮ್ಮ ವಿವೇಕ – ಅದು ನಿರಂತರವಾಗಿ ತಮ್ಮ ಇರುವಿಕೆಯನ್ನು (ಅಸ್ತಿತ್ವವನ್ನು) ತಮಗೇ ಸೂಚಿಸುತ್ತದೆ. (ಅದು ಪರಮಾಣುವಿನಂತೆ ಸೂಕ್ಷ್ಮ – ಅದು ಬದಲಾಗುವುದಿಲ್ಲ ).
  • ಧರ್ಮ ಭೂತ ಜ್ಞಾನಮ್ ಎನ್ನುವುದು ಆತ್ಮವನ್ನು ಹೊರಗಿನ ವಸ್ತುಗಳೊಂದಿಗೆ ಜ್ಞಾನೋದಯಗೊಳಿಸುತ್ತದೆ, (ಎಲ್ಲಾ ಪರಿವರ್ತನೆಯಾಗುವ – ನಿರಂತರವಾಗಿ ಸಂಕುಚಿತ ಮತ್ತು ಜ್ಞಾನ ವಿಸ್ತಾರವಾಗುವುದರಿಂದ ಬದಲಾಗುತ್ತಲೇ ಇರುತ್ತದೆ.)
  • ನಿತ್ಯರಿಗೆ, ಅವರ ಜ್ಞಾನವು ಸಂಪೂರ್ಣವಾಗಿ ವಿಸ್ತಾರವಾಗಿರುತ್ತದೆ.
  • ಮುಕ್ತರಿಗೆ, ಒಂದು ಕಾಲದಲ್ಲಿ ಮಿತಿಯೊಳಗಿದ್ದ ಜ್ಞಾನವು ಈಗ ಸಂಪೂರ್ಣವಾಗಿ ವಿಸ್ತಾರಗೊಂಡಿರುತ್ತದೆ.
  • ಬದ್ಧರಿಗೆ, ಲೌಕಿಕದ ಜಗತ್ತಿನಲ್ಲಿ, ಜ್ಞಾನವು ಪರಿಮಿತಿಯೊಳಗಿರುತ್ತದೆ.
  • ಜ್ಞಾನವು ಆತ್ಮದ ಶಾಶ್ವತವಾದ ಗುಣವಾದರೂ, ಜ್ಞಾನದ ಕುಗ್ಗುವಿಕೆ ಮತ್ತು ಹಿಗ್ಗುವಿಕೆಯ ಕಾರಣವು ಜ್ಞಾನವು ಇಂದ್ರಿಯಗಳ ಮೂಲಕ ತಿಳಿಯ ಪಡುವುದೇ ಕಾರಣವಾಗಿದೆ.
  • ಇಂದ್ರಿಯಗಳು ಕೆಲ ಕಾಲ ಸಕ್ರಿಯವಾಗಿ ಮತ್ತು ಕೆಲ ಕಾಲ ನಿಷ್ಕ್ರಿಯವಾಗಿರುತ್ತದೆ.
  • ಆದ್ದರಿಂದ , ಧರ್ಮ ಭೂತ ಜ್ಞಾನವು ಸಂಕುಚನ ಮತ್ತು ವಿಸ್ತಾರವಾಗಬಹುದು. (ಕಡಿಮೆ ಮತ್ತು ಹೆಚ್ಚಾಗಬಹುದು).

ಮುಕ್ತಾಯ :

  • ಆತ್ಮದ ಸಹಜವಾದ ಆನಂದವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
  • ಆತ್ಮದ ಅರಿವು ವಿಸ್ತಾರವಾದಾಗ ಪರಮ ಸಂತೋಷಕ್ಕೆ ದಾರಿಯಾಗುತ್ತದೆ.
  • ವಿಷ ಅಥವಾ ಆಯುಧಗಳನ್ನು ನಾವು ಎದುರಿಸಿದಾಗ, (ನಮ್ಮ ದೇಹ, ಮನಸ್ಸಿಗೆ ಕೆಟ್ಟದ್ದಾದನ್ನು ಕಂಡಾಗ) ಅದು ದುಃಖಕ್ಕೆ ದಾರಿಯಾಗುತ್ತದೆ.
  • ಅದು ಆ ರೀತಿ ಏಕೆಂದರೆ
    • ನಾವು ನಮ್ಮ ಆತ್ಮವನ್ನು ದೇಹವೆಂದು ಗೊಂದಲಗೊಂಡಿದ್ದೇವೆ. – ನಾವು ಆಯುಧವು ನಮ್ಮ ದೇಹದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಅರ್ಥವಾದರೆ ನಮಗೆ ನೋವುಂಟಾಗುವುದಿಲ್ಲ.
    • ನಮ್ಮ ಸ್ವಂತ ಕರ್ಮವು ನಮ್ಮನ್ನು ಆತಂಕಗೊಳಿಸುತ್ತದೆ.
    • ಎಲ್ಲವೂ ಭಗವಂತನಿಂದ ನಡೆಸಲ್ಪಟ್ಟಿದೆ (ಆ ಆಯುಧಗಳೂ ಕೂಡಾ) ಎಂದು ನಮಗೆ ಪೂರ್ತಿಯಾಗಿ ಅರ್ಥವಾಗಿರುವುದಿಲ್ಲ. ಪ್ರಹ್ಲಾದಾಳ್ವಾರ್ ರಿಗೆ ಭಗವಂತನು ಎಲ್ಲಾ ಕಡೆಯೂ ಇರುವನು ಎಂದು ಸಂಪೂರ್ಣವಾಗಿ ತಿಳಿದಿತ್ತು ಮತ್ತು ಹಾವುಗಳಿಂದ , ಆನೆಯಿಂದ ಅಥವಾ ಬೆಂಕಿಯಿಂದ ಹಿಂಸಿಸಿದಾಗ ಅವರು ಭಯಪಡಲಿಲ್ಲ, ಮತ್ತು ಎದುರು ಮಾತಾಡಲಿಲ್ಲ. ಆದ್ದರಿಂದ ಅವರಿಗೆ ಈ ವಸ್ತುಗಳು ಏನೂ ಮಾಡಲಾಗಲಿಲ್ಲ.
  • ಎಲ್ಲವೂ ಭಗವಂತನ ಇಚ್ಛೆಯ ಮೂಲಕವೇ ನಡೆಯುವುದರಿಂದ, ಎಲ್ಲವೂ ಒಳ್ಳೆಯದೇ ಆಗುತ್ತದೆ.
  • ಕೆಟ್ಟದ್ದಾಗುವುದು ನಮ್ಮ ಸ್ವತಃ ಅರ್ಥಮಾಡಿಕೊಳ್ಳದಿರುವುದರಿಂದ ಅಥವಾ ಸುಳ್ಳು ಪರಿಕಲ್ಪನೆಯಿಂದ.
  • ಒಬ್ಬ ವ್ಯಕ್ತಿಗೆ ಒಂದು ಸಮಾಚಾರ ಒಳ್ಳೆಯದು ಎಂದರೆ, ಅದೇ ವ್ಯಕ್ತಿಗೆ, ಅದೇ ವಸ್ತುವು ಬೇರೆ ಸಮಯದಲ್ಲಿ ಕೆಟ್ಟದ್ದಾಗಿರಬಹುದು ಇಲ್ಲವೆಂದರೆ ಇನ್ನೊಂದು ಸಮಯದಲ್ಲಿ ಒಳ್ಳೆಯದಾಗಿರಬಹುದು.
  • ಉದಾಹರಣೆಗೆ, ಛಳಿಯ ಸಮಯದಲ್ಲಿ ಬಿಸಿ ನೀರು ಒಳ್ಳೆಯದು ಆದರೆ ಉಷ್ಣ ಸಮಯದಲ್ಲಲ್ಲ. ಆದ್ದರಿಂದ ಬಿಸಿ ನೀರು ಒಳ್ಳೆಯದೋ ಕೆಟ್ಟದ್ದೋ ಅಲ್ಲ – ಅದು ಅದನ್ನು ಬಳಸುವವರ ಮೇಲೆ ಅವಲಂಬಿತವಾಗಿದೆ ಮತ್ತು ಪರಿಸರದ ಮೇಲೆ ಅವಲಂಬಿತವಾಗಿದೆ – ಅದೂ ಸಹ ನಮ್ಮ ದೈಹಿಕ ಆಲೋಚನೆಗಳೇ.
  • ಒಂದು ಸಾರಿ ನಾವು ಎಲ್ಲಕ್ಕೂ ದೇವರೊಂದಿಗಿನ ಸಂಬಂಧವನ್ನು ಕಂಡುಕೊಂಡರೆ ನಾವು ಸಹಜವಾಗಿ ಆನಂದಮಯರಾಗುತ್ತೇವೆ.

ಇದು ದಿವ್ಯ ಗ್ರಂಥವಾದ ತತ್ತ್ವ ತ್ರಯಮ್‍ನ ‘ಚಿತ್ ‘ ಪ್ರಕರಣಕ್ಕೆ ಒಂದು ಒಳ್ಳೆಯ ಪರಿಚಯವನ್ನು ನೀಡುತ್ತದೆ, ಓದುಗರಿಗೆ ಈ ಗ್ರಂಥದ ಕಾಲಕ್ಷೇಪವನ್ನು ಆಚಾರ್‍ಯರ ಮೂಲಕ ಕೇಳಬೇಕಾಗಿ ವಿನಂತಿ. ಇದು ನಮ್ಮನ್ನು ಆತ್ಮ ಜ್ಞಾನೋದಯಕ್ಕೆ ಕೊಂಡೊಯ್ಯುತ್ತದೆ.

ಶ್ರೀಮತೇ ರಮ್ಯಜಾಮಾತ್ರು ಮುನೀಂದ್ರಾಯ ಮಹಾತ್ಮನೇ
ಶ್ರೀರಂಗವಾಸಿನೇ ಭೂಯಾತ್ ನಿತ್ಯಶ್ರೀ ನಿತ್ಯ ಮಂಗಳಮ್

ಮಂಗಳಾಶಾಸನ ಪರೈರ್ ಮದಾಚಾರ್‍ಯ ಪುರೋಗಮೈ
ಸರ್ವೈಶ್ಚ ಪೂರ್ವೈರ್ ಆಚಾರ್ಯೈ ಸತ್ಕೃತಾಯಾಸ್ತು ಮಂಗಳಮ್

ಮುಂದೆ ಬರುವ ಅಧ್ಯಾಯದಲ್ಲಿ  ಅಚಿತ್ ತತ್ತ್ವಮ್‍ನನ್ನು ನೋಡೋಣ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : https://granthams.koyil.org/2013/03/06/thathva-thrayam-chith-who-am-i/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

2 thoughts on “ತತ್ತ್ವ ತ್ರಯಮ್ – ಚಿತ್ – ನಾನು ಯಾರು?”

Leave a Comment