ಕೃಷ್ಣ ಲೀಲೆಗಳ ಸಾರಾಂಶ – 46 – ಸುಧಾಮನಿಗೆ ಕೃಷ್ಣನ ಅನುಗ್ರಹ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಸಾಲ್ವ ಮತ್ತು ದಂತವಕ್ರರ ವಧೆ

ಕೃಷ್ಣನು ಸಾಂದೀಪನಿ ಮುನಿಗಳ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಸುಧಾಮನು ಅವನ ಸಹಪಾಠಿಯಾಗಿದ್ದನು. ಇವನನ್ನು ಕುಚೇಲ ಎಂದೂ ಕರೆಯುತ್ತಾರೆ. ಕೃಷ್ಣ ಮತ್ತು ಸುಧಾಮ ಅತ್ಯಂತ ಆಪ್ತ ಮಿತ್ರರಾಗಿದ್ದರು. ಸುಧಾಮನು ತನ್ನ ಹೆಂಡತಿಯೊಂದಿಗೆ ಬಡತನದ ಜೀವನ ನಡೆಸುತ್ತಿದ್ದನು.

ಒಮ್ಮೆ ಅವನ ಹೆಂಡತಿ ಅವನೊಂದಿಗೆ, “ನಮಗೆ ಊಟಕ್ಕೂ ಕಷ್ಟವಾಗುತ್ತಿದೆ. ನಿಮ್ಮ ಮಿತ್ರ ಕೃಷ್ಣನು ದ್ವಾರಕಾಧೀಶನಾಗಿದ್ದಾನೆ. ನೀವು ಹೋಗಿ ಅವನಿಂದ ದಾನವಾಗಿ ಸ್ವಲ್ಪ ಸಂಪತ್ತನ್ನು ಪಡೆದುಕೊಂಡು ಬರಬಹುದು” ಎಂದಳು. ಆದರೆ ಸುಧಾಮನು, “ನಾವು ಬೇರೆಯವರ ಬಳಿ ಏಕೆ ಬೇಡಬೇಕು? ನಮ್ಮ ಬಳಿ ಇರುವುದರಲ್ಲೇ ನಾವು ಬದುಕಬಹುದು” ಎಂದು ಉತ್ತರಿಸಿದನು. ಆದರೆ ಅವಳು ಪದೇ ಪದೇ ಒತ್ತಾಯಿಸಿದ ಕಾರಣ, ಬೇರೆ ದಾರಿಯಿಲ್ಲದೆ, ಅವನು ಕೃಷ್ಣನನ್ನು ಭೇಟಿಯಾಗಲು ಹೊರಟನು. ಮಿತ್ರನನ್ನು ನೋಡಲು ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂದು ಬಗೆದು, ಅವನು ಸ್ವಲ್ಪ ಅವಲಕ್ಕಿಯನ್ನು ಸಂಗ್ರಹಿಸಿ, ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ತನ್ನೊಂದಿಗೆ ತೆಗೆದುಕೊಂಡು ಹೋದನು.

ಅವನು ದ್ವಾರಕೆಯನ್ನು ತಲುಪಿದಾಗ, ಕೃಷ್ಣನ ಅರಮನೆಗೆ ಹೋದನು. ಆ ಸಮಯದಲ್ಲಿ ರುಕ್ಮಿಣಿಯು ಕೃಷ್ಣನ ಸೇವೆ ಮಾಡುತ್ತಿದ್ದಳು. ಸುಧಾಮನ ಆಗಮನವನ್ನು ಕಂಡ ಕೃಷ್ಣನು, ಸಿಂಹಾಸನದಿಂದ ಇಳಿದು, ದ್ವಾರದತ್ತ ಓಡಿಬಂದು, ಅವನನ್ನು ಆಲಂಗಿಸಿ ಸ್ವಾಗತಿಸಿದನು. ನಂತರ, ಅವನು ಸುಧಾಮನನ್ನು ಕರೆತಂದು ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿ, ಅವನ ಪಾದಗಳನ್ನು ತೊಳೆದನು. ರುಕ್ಮಿಣಿಯು ಚಾಮರದಿಂದ ಅವನಿಗೆ ಗಾಳಿ ಬೀಸಿದಳು. ಅವರು ತಮ್ಮ ಗುರುಕುಲದ ದಿನಗಳಲ್ಲಿ ನಡೆದ ಘಟನೆಗಳನ್ನು ಕುರಿತು ಮಾತನಾಡಿದರು.

ನಂತರ ಕೃಷ್ಣನು ಸುಧಾಮನನ್ನು, “ನನಗಾಗಿ ಏನು ತಂದಿದ್ದೀಯ?” ಎಂದು ಕೇಳಿದನು. ಸುಧಾಮನು ಸಂಕೋಚದಿಂದ ಆ ಅವಲಕ್ಕಿಯ ಗಂಟನ್ನು ನೋಡುತ್ತಿದ್ದನು ಮತ್ತು ಕೃಷ್ಣನೂ ಅದನ್ನು ಗಮನಿಸಿದನು. ಅವನು ಅತ್ಯಂತ ಆಸೆಯಿಂದ ಅದನ್ನು ತೆಗೆದುಕೊಂಡು, ಒಂದು ಹಿಡಿ ಅವಲಕ್ಕಿಯನ್ನು ಬಾಯಿಗೆ ಹಾಕಿಕೊಂಡನು. ಅವನು ಎರಡನೇ ಹಿಡಿ ತೆಗೆದುಕೊಳ್ಳಲು ಹೋದಾಗ, ರುಕ್ಮಿಣಿಯು ಅವನನ್ನು ತಡೆದಳು. ಕೃಷ್ಣನು, “ನಿನ್ನ ಭೇಟಿಯ ಉದ್ದೇಶವೇನು?” ಎಂದು ಕೇಳಿದನು. ಸುಧಾಮನಿಗೆ ಕೃಷ್ಣನ ಬಳಿ ಏನನ್ನೂ ಕೇಳಲು ಇಷ್ಟವಿಲ್ಲದಿದ್ದರಿಂದ, “ನಾನು ನಿನ್ನನ್ನು ನೋಡಿ ಬಹಳ ದಿನಗಳಾಗಿದ್ದವು. ಹಾಗಾಗಿ ಕೇವಲ ನಿನ್ನನ್ನು ನೋಡಲು ಬಂದೆ” ಎಂದು ಹೇಳಿದನು. ಕೃಷ್ಣನು ತನ್ನ ದಿವ್ಯ ಹೃದಯದಲ್ಲಿ ತಕ್ಷಣವೇ, ಸುಧಾಮನ ಚಿಕ್ಕ ಗುಡಿಸಲು ದೊಡ್ಡ ಅರಮನೆಯಾಗಲಿ ಎಂದು ಸಂಕಲ್ಪಿಸಿದನು, ಮತ್ತು ಅದು ತಕ್ಷಣವೇ ನೆರವೇರಿತು.

ಸುಧಾಮನು ಕೃಷ್ಣನ ಬಳಿಯಿಂದ ಹೊರಟು ತನ್ನ ಊರಿಗೆ ಮರಳಿದನು. ಅಲ್ಲಿ ತನ್ನ ಚಿಕ್ಕ ಮನೆಯಿದ್ದ ಜಾಗದಲ್ಲಿ ಬೃಹತ್ ಅರಮನೆಯನ್ನು ಕಂಡನು. ಅವನ ಹೆಂಡತಿ ಹೊರಬಂದು ಅವನನ್ನು ಸ್ವಾಗತಿಸಿದಳು. ಅವಳು ಅತ್ಯುತ್ತಮ ವಸ್ತ್ರ ಮತ್ತು ಆಭರಣಗಳಿಂದ ಅಲಂಕೃತಳಾಗಿದ್ದಳು. ಇದೆಲ್ಲವೂ ಕೃಷ್ಣನ ಕೃಪೆ ಎಂದು ಸುಧಾಮನು ಅರಿತುಕೊಂಡನು. ಆದರೂ, ಅವನು ಮೊದಲಿನಂತೆಯೇ ವೈರಾಗ್ಯದ ಜೀವನವನ್ನು ನಡೆಸಿದನು.

ಈ ಲೀಲೆಯ ಸಾರಾಂಶ:

  • ಭಗವಂತನು ತನ್ನ ಭಕ್ತರ ಮೇಲೆ ಅಪಾರ ವಾತ್ಸಲ್ಯವನ್ನು ಹೊಂದಿರುತ್ತಾನೆ. ಭಕ್ತರು ತಮ್ಮನ್ನು ತಾವು ಕೀಳೆಂದು ಭಾವಿಸಿದರೂ, ಭಗವಂತನು ಅವರನ್ನು ಅತ್ಯಂತ ಶ್ರೇಷ್ಠರೆಂದು ಪರಿಗಣಿಸುತ್ತಾನೆ.
  • ನಾವು ಭಗವಂತನ ಬಳಿ ಹೋಗಿ ಏನನ್ನಾದರೂ ಕೇಳಿದರೆ, ನಾವು ಕೇಳಿದಷ್ಟೇ ನಮಗೆ ಸಿಗುತ್ತದೆ. ಆದರೆ ಅವನು ಸ್ವ-ಇಚ್ಛೆಯಿಂದ ಕೊಟ್ಟರೆ, ನಾವು ಕೇಳಿದ್ದಕ್ಕಿಂತ ಹೆಚ್ಚು ಕೊಡುತ್ತಾನೆ.
  • ಕೃಷ್ಣನು ಒಂದು ಹಿಡಿ ಅವಲಕ್ಕಿ ತಿಂದ ನಂತರ, ರುಕ್ಮಿಣಿ ಅವನನ್ನು ತಡೆದಳು. ಇದಕ್ಕೆ ಕಾರಣವೇನೆಂದರೆ, “ಒಂದು ಹಿಡಿ ಅವಲಕ್ಕಿಗೇ ಇಷ್ಟು ಐಶ್ವರ್ಯವನ್ನು ಕರುಣಿಸಿದರೆ, ಭಗವಂತನು ಇನ್ನೂ ಹೆಚ್ಚು ತಿಂದರೆ ಇನ್ನೆಷ್ಟು ಸಂಪತ್ತನ್ನು ನೀಡಬಹುದು? ಅಷ್ಟು ಅಗಾಧವಾದ ಸಂಪತ್ತನ್ನು ಸುಧಾಮನು ನಿರ್ವಹಿಸುವುದು ಹೇಗೆ?” ಎಂದು ಅವಳು ಯೋಚಿಸಿರಬಹುದು ಎಂದು ನಾವು ಭಾವಿಸಬಹುದು.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/22/krishna-leela-46-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment