ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಭೀಷ್ಮರ ಪತನದ ನಂತರ, ದ್ರೋಣರು ಕೌರವರ ಸೇನಾಧಿಪತಿಯಾದರು. ಯುದ್ಧವು ಭರದಿಂದ ಸಾಗುತ್ತಿತ್ತು. ಪ್ರತಿದಿನ ಅನೇಕ ಯೋಧರು ಮರಣಹೊಂದುತ್ತಿದ್ದರು.
ಭೀಮ ಮತ್ತು ಹಿಡಿಂಬೆಯ ಪುತ್ರನಾದ ಘಟೋತ್ಕಚನು ರಣರಂಗಕ್ಕೆ ಪ್ರವೇಶಿಸಿ ಕೌರವರ ಸೈನ್ಯಕ್ಕೆ ದೊಡ್ಡ ಆತಂಕವನ್ನು ಉಂಟುಮಾಡಿದನು. ಅಂತಿಮವಾಗಿ, ಅವನು ಕರ್ಣನಿಂದ ಹತನಾದನು.
ನಂತರ, ಅರ್ಜುನ ಮತ್ತು ಸುಭದ್ರೆಯ ಪುತ್ರನಾದ ಅಭಿಮನ್ಯುವು ಮಹಾನ್ ಪರಾಕ್ರಮದಿಂದ ಹೋರಾಡಿದನು. ಕೌರವರು ಅವನನ್ನು ಕೊಲ್ಲಲು ಒಂದು ದೊಡ್ಡ ಯೋಜನೆಯನ್ನು ರೂಪಿಸಿದರು. ದ್ರೋಣರ ನೇತೃತ್ವದಲ್ಲಿ ಅವರು ಚಕ್ರವ್ಯೂಹವನ್ನು ರಚಿಸಿದರು. ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಭೇದಿಸಿ ಒಳಗೆ ಹೋಗುವುದು ತಿಳಿದಿತ್ತು, ಆದರೆ ಅದರಿಂದ ಹೊರಬರುವುದು ಹೇಗೆಂದು ತಿಳಿದಿರಲಿಲ್ಲ. ಧರ್ಮರಾಯ (ಯುಧಿಷ್ಠಿರ) ಮತ್ತು ಇತರರು ಅವನನ್ನು ಹಿಂಬಾಲಿಸಿ ಬೆಂಬಲಿಸುವುದಾಗಿ ಭರವಸೆ ನೀಡಿ, ಒಳಗೆ ಹೋಗಲು ಪ್ರೋತ್ಸಾಹಿಸಿದರು. ಹೀಗಾಗಿ, ಅವನು ಚಕ್ರವ್ಯೂಹದೊಳಗೆ ಪ್ರವೇಶಿಸಿದನು. ಅವನನ್ನು ಈ ರೀತಿಯಾಗಿ ಒಳಗೆ ಕರೆತಂದು, ಅನೇಕ ಮಹಾರಥರು ಒಗ್ಗೂಡಿ ಅವನನ್ನು ಕೊಂದರು. ಅವನ ಸಹಾಯಕ್ಕೆ ಬರಲು ಪ್ರಯತ್ನಿಸಿದ ಧರ್ಮರಾಯ ಮುಂತಾದವರನ್ನು ಅನೇಕ ಸೈನಿಕರು ಒಗ್ಗೂಡಿ ತಡೆದರು. ಅಭಿಮನ್ಯುವನ್ನು ಕೊಲ್ಲುವಲ್ಲಿ ಜಯದ್ರಥನು ಪ್ರಮುಖ ಪಾತ್ರ ವಹಿಸಿದನು.
ಇದೆಲ್ಲವೂ ನಡೆಯುತ್ತಿದ್ದಾಗ, ಅರ್ಜುನ ಅಲ್ಲಿರಲಿಲ್ಲ. ಅವನು ಹಿಂದಿರುಗಿದಾಗ, ತನ್ನ ಮಗ ಅಭಿಮನ್ಯುವು ವೀರಾವೇಶದಿಂದ ಹೋರಾಡಿ, ಕೊನೆಯಲ್ಲಿ ಹೇಡಿತನದಿಂದ ಕೊಲ್ಲಲ್ಪಟ್ಟನೆಂದು ತಿಳಿಯಿತು. ಅವನು ತೀವ್ರ ದುಃಖ ಮತ್ತು ಕೋಪಕ್ಕೆ ಒಳಗಾದನು. ತನ್ನ ಮಗನ ಸಾವಿಗೆ ಮುಖ್ಯ ಕಾರಣನಾದ ಜಯದ್ರಥನನ್ನು ಮರುದಿನ ಸೂರ್ಯಾಸ್ತದ ಮೊದಲು ಕೊಲ್ಲುವುದಾಗಿ, ಇಲ್ಲದಿದ್ದರೆ ತಾನೇ ಪ್ರಾಣತ್ಯಾಗ ಮಾಡುವುದಾಗಿ ಅರ್ಜುನನು ಪ್ರತಿಜ್ಞೆ ಮಾಡಿದನು.
ಮರುದಿನ, ಯುದ್ಧದ ಆರಂಭದಿಂದಲೇ, ಅರ್ಜುನನು ಜಯದ್ರಥನ ಹತ್ತಿರ ಬರದಂತೆ ಕೌರವರು ನೋಡಿಕೊಂಡರು. ಸೂರ್ಯಾಸ್ತ ಹತ್ತಿರವಾಗುತ್ತಿತ್ತು. ಆ ಸಮಯದಲ್ಲಿ, ಕೃಷ್ಣನು ತನ್ನ ಸುದರ್ಶನ ಚಕ್ರವನ್ನು ಬಳಸಿ ಸೂರ್ಯನನ್ನು ಮರೆಮಾಡಿದನು. ಸೂರ್ಯ ಮುಳುಗಿದಂತೆ ಕಾಣಿಸುತಿತು. ದುರ್ಯೋಧನನು ಜಯದ್ರಥನನ್ನು ಹೊರಗೆ ಕರೆತಂದು ಅರ್ಜುನನನ್ನು, “ನೀನು ಯಾವಾಗ ಸಾಯುತ್ತೀಯ?” ಎಂದು ಕೇಳಿದನು. ಆ ಸಮಯದಲ್ಲಿ, ಕೃಷ್ಣನು ತನ್ನ ಚಕ್ರವನ್ನು ಹಿಂತೆಗೆದುಕೊಂಡನು ಮತ್ತು ಅರ್ಜುನನಿಗೆ, “ಈಗ ನೀನು ಬಾಣದಿಂದ ಜಯದ್ರಥನ ತಲೆಯನ್ನು ಕತ್ತರಿಸು ಮತ್ತು ಅದು ಹೋಗಿ ಅವನ ತಂದೆಯ ಕೈಯಲ್ಲಿ ಬೀಳುವಂತೆ ನೋಡ್ಕೋ” ಎಂದು ಆಜ್ಞಾಪಿಸಿದನು. ಅರ್ಜುನನು ಆಜ್ಞೆಯನ್ನು ಪಾಲಿಸಿದನು. ಜಯದ್ರಥನ ತಂದೆಯು ತನ್ನ ಕೈಗೆ ಅನಿರೀಕ್ಷಿತವಾಗಿ ಬಂದು ಬಿದ್ದ ತಲೆಯನ್ನು ಕೆಳಗೆ ಹಾಕುತ್ತಿದ್ದಂತೆ, ಅವನು (ತಂದೆ) ಮರಣಹೊಂದಿದನು.
ಈ ರೀತಿಯಾಗಿ, ಅಭಿಮನ್ಯುವಿನ ವಧೆಗೆ ಸೇಡು ತೀರಿಸಿಕೊಳ್ಳಲು ಕೃಷ್ಣನು ಅರ್ಜುನನಿಗೆ ವಿಶೇಷವಾಗಿ ಅನುಗ್ರಹಿಸಿದನು.
ಆಳ್ವಾರರು ತಮ್ಮ ಪಾಸುರಗಳಲ್ಲಿ ಭಗವಂತನು ಹಗಲನ್ನು ರಾತ್ರಿಯನ್ನಾಗಿ ಮಾಡಿದ ಘಟನೆಯನ್ನು ಅನುಭವಿಸಿ ಹಾಡಿದ್ದಾರೆ.
ಪೊಯ್ಗೈ ಆಳ್ವಾರ್ ತಮ್ಮ ಮುದಲ್ ತಿರುವಂದಾದಿಯಲ್ಲಿ ಹೀಗೆ ಹೇಳುತ್ತಾರೆ: “ಮುಯಂಗು ಅಮರುಳ್ ತೇರಾಳಿಯಾಲ್ ಮರೈತ್ತದು ಎನ್ ನೀ ತಿರುಮಾಲೇ ಪೋರಾಳಿಕ್ ಕೈಯಾಲ್ ಪ್ಪೊರುದು” (ಓ ಶ್ರೀಮನ್ನಾರಾಯಣನೇ! ಮಹಾಭಾರತ ಯುದ್ಧದಲ್ಲಿ ನಿನ್ನ ಕೈಯಲ್ಲಿದ್ದ ಚಕ್ರದಿಂದ ಸೂರ್ಯನನ್ನು ಏಕೆ ಮರೆಮಾಚಿದೆ?).
ತಿರುಮಳಿಸೈ ಆಳ್ವಾರ್ ತಮ್ಮ ನಾನ್ಮುಗನ್ ತಿರುವಂದಾದಿಯಲ್ಲಿ ಹೀಗೆ ಹೇಳುತ್ತಾರೆ: “ವೆಂಗದಿರೋನ್ ಮಾಯಪ್ಪೊಳಿಲ್ ಮರೈಯ ತೇರಾಳಿಯಾಲ್ ಮರೈತ್ತಾರಾಲ್” (ಭಗವಂತನು ಇಡೀ ಜಗತ್ತನ್ನು ಕತ್ತಲವಾಗಿಸಲು ತನ್ನ ಚಕ್ರದಿಂದ ಸೂರ್ಯನನ್ನು ಮರೆಮಾಡಿದನು).
ತಿರುಮಂಗೈ ಆಳ್ವಾರ್ ತಮ್ಮ ಪೆರಿಯ ತಿರುಮೊಳಿಯಲ್ಲಿ ಹೀಗೆ ಹೇಳುತ್ತಾರೆ: “ಪಾಳಿಯಾಲ್ ಮಿಕ್ಕ ಪಾರ್ಥನುಕ್ಕು ಅರುಳಿಪ್ ಪಗಲವನ್ ಒಳಿ ಕೆಡ ಪಗಲೇ ಆಳಿಯಾಲ್ ಅನ್ರು ಅಂಗು ಆಳಿಯೈ ಮರೈತ್ತಾನ್ ಅರಂಗಮಾ ನಗರ್ ಅಮರ್ಂದಾನೇ” (ಶ್ರೀರಂಗದಲ್ಲಿ ನೆಲೆಸಿರುವ ಶ್ರೀ ರಂಗನಾಥನು, ಹಗಲಿನಲ್ಲಿಯೇ ತನ್ನ ಚಕ್ರದಿಂದ ಸೂರ್ಯನನ್ನು ಮರೆಮಾಡಿ, ಮಹಾಬಲಶಾಲಿಯಾದ ಅರ್ಜುನನ ಮೇಲೆ ತನ್ನ ಕರುಣೆಯನ್ನು ತೋರಿದನು).
ಈ ಲೀಲೆಯ ಸಾರಾಂಶ:
- ಸುದರ್ಶನ ಚಕ್ರವು ಸೂರ್ಯನಿಗಿಂತ ಹೆಚ್ಚು ತೇಜಸ್ವಿಯಾಗಿದೆ. ಆದ್ದರಿಂದ, ಭಗವಂತನು ತನ್ನ ಚಕ್ರವನ್ನು ಬಳಸಿ ಎಲ್ಲರ ದೃಷ್ಟಿಯನ್ನು ಕತ್ತಲಾಗಿಸಿದನು ಮತ್ತು ಅದು ಸೂರ್ಯಾಸ್ತದಂತೆ ಕಾಣುವಂತೆ ಮಾಡಿದನು.
- ಜಯದ್ರಥನನ್ನು ಕೊಲ್ಲಬೇಕಿತ್ತು. ಆದರೆ ಜಯದ್ರಥನ ತಲೆಯನ್ನು ಯಾರು ಕೆಳಗೆ ಬೀಳಿಸುತ್ತಾರೋ ಅವರು ಸಾಯುತ್ತಾರೆ – ಅರ್ಜುನನು ಅದರಿಂದಲೂ ತಪ್ಪಿಸಿಕೊಳ್ಳಬೇಕಿತ್ತು. ಆದ್ದರಿಂದ, ಅರ್ಜುನನು ತಲೆಯನ್ನು ಕತ್ತರಿಸಿ ಅದು ಅವನ ತಂದೆಯ ಕೈಗೆ ಬೀಳುವಂತೆ ಭಗವಂತನು ತಂತ್ರದಿಂದ ಖಚಿತಪಡಿಸಿದನು.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/10/31/krishna-leela-55-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org