ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಪಾಂಡು ಮತ್ತು ವಿದುರರು ಧೃತರಾಷ್ಟ್ರನ ಕಿರಿಯ ಸಹೋದರರು. ವಿದುರನು ಶ್ರೀ ಕೃಷ್ಣನ ಪರಮ ಭಕ್ತನಾಗಿದ್ದನು. ನಮ್ಮ ಸಂಪ್ರದಾಯದಲ್ಲಿ ಅವನ ಭಕ್ತಿ ಎಷ್ಟು ಶ್ರೇಷ್ಠವೆಂದರೆ, ಅವನನ್ನು ‘ವಿದುರಾಳ್ವಾನ್’ ಎಂದು ಕರೆಯಲಾಗುತ್ತದೆ. ಕೃಷ್ಣನು ಪಾಂಡವ ದೂತನಾಗಿ ಹಸ್ತಿನಾಪುರಕ್ಕೆ ಬಂದಾಗ, ಅವನು ವಿದುರನ ಮೇಲೆ ವಿಶೇಷ ಕೃಪೆಯನ್ನು ತೋರಿದನು. ನಾವೀಗ ಆ ಸನ್ನಿವೇಶವನ್ನು ಆಸ್ವಾದಿಸೋಣ.
ಕೃಷ್ಣನು ಪಾಂಡವರಿಂದ ವಿದಾಯ ಹೇಳಿ ಧೃತರಾಷ್ಟ್ರನ ಹಸ್ತಿನಾಪುರವನ್ನು ತಲುಪಿದನು. ಇಲ್ಲಿಗೆ ಬಂದ ನಂತರ, ಅವನು ನೇರವಾಗಿ ವಿದುರನ ಅರಮನೆಗೆ (ತಿರುಮಾಳಿಗೆಗೆ) ಹೋದನು. ಕೃಷ್ಣನ ಆಗಮನವನ್ನು ನಿರೀಕ್ಷಿಸದ ವಿದುರನು, ಸ್ವತಃ ಸರ್ವೇಶ್ವರನೇ ತನ್ನನ್ನು ಹುಡುಕಿಕೊಂಡು ತನ್ನ ಮನೆಗೆ ಬಂದದ್ದನ್ನು ಕಂಡು ಭಕ್ತಿಪರವಶನಾಗಿ, ಆಶ್ಚರ್ಯಚಕಿತನಾಗಿ, ಏನು ಮಾಡಬೇಕೆಂದು ತಿಳಿಯದೆ ನಡುಗಿದನು.
ಅವನು ಕೃಷ್ಣನನ್ನು ಆಹ್ವಾನಿಸಿ ಆಸನವನ್ನು ಸಿದ್ಧಪಡಿಸಿದನು, ಮತ್ತು ನಂತರ ಅದನ್ನು ಸ್ವತಃ ಪರಿಶೀಲಿಸಿದನು. ಆಸನವನ್ನು ಅವನೇ ಹಾಕಿದ್ದರೂ, ಧೃತರಾಷ್ಟ್ರಾದಿಗಳೊಂದಿಗಿನ ಸಂಬಂಧದಿಂದಾಗಿ, ತಾನು ತಿಳಿಯದೆ ಕೃಷ್ಣನಿಗೆ ಹಾನಿ ಮಾಡಬಹುದೇನೋ ಎಂದು ಯೋಚಿಸಿ (ಶಂಕೆಪಟ್ಟು) ಅದನ್ನು ಪರೀಕ್ಷಿಸಿದನು.
ನಂತರ, ಕೃಷ್ಣನಿಗೆ ಏನಾದರೂ ಆಹಾರವನ್ನು ನೀಡಲು ಬಯಸಿದ ಅವನು, ಬಾಳೆಹಣ್ಣನ್ನು ತೆಗೆದುಕೊಂಡು, ಸಿಪ್ಪೆಯನ್ನು ಸುಲಿದು, ಹಣ್ಣನ್ನು ಕೆಳಗೆ ಹಾಕಿ ಸಿಪ್ಪೆಯನ್ನು ಕೃಷ್ಣನಿಗೆ ಕೊಟ್ಟನು. ಕೃಷ್ಣನು ಆ ಸಿಪ್ಪೆಯನ್ನೂ ಸಹ ಬಹಳ ಸಂತೋಷದಿಂದ ಸ್ವೀಕರಿಸಿದನು.
ಅದರ ನಂತರ, ಕೃಷ್ಣನು ತನ್ನ ಆಗಮನದ ಉದ್ದೇಶವನ್ನು ತಿಳಿಸಿದನು ಮತ್ತು ಮುಂದೆ ನಡೆಯಲಿರುವ ಯುದ್ಧದ ನಿಶ್ಚಿತತೆಯ ಬಗ್ಗೆ ಹಾಗೂ ವಿದುರನು ಅದರಲ್ಲಿ ಭಾಗವಹಿಸಬಾರದು ಎಂಬ ಆಲೋಚನೆಗಳನ್ನು ಕರುಣೆಯಿಂದ ಅವನ ಮನಸ್ಸಿನಲ್ಲಿ ಬಿತ್ತಿದನು.
ನಂತರ ಅವನು ಧೃತರಾಷ್ಟ್ರನ ರಾಜಸಭೆಗೆ ಹೋದನು. ಕೃಷ್ಣನ ಬರುವಿಕೆಯ ಬಗ್ಗೆ ದುರ್ಯೋಧನನಿಗೆ ತಿಳಿದಿದ್ದರಿಂದ, ಕೃಷ್ಣನು ಪ್ರವೇಶಿಸಿದಾಗ ಯಾರೂ ತಮ್ಮ ಆಸನಗಳಿಂದ ಏಳಬಾರದು ಎಂದು ಅವನು ಎಲ್ಲರಿಗೂ ಆಜ್ಞಾಪಿಸಿದನು. ಆದರೆ, ಕೃಷ್ಣನು ಒಳಬಂದಾಗ ಅವನ ಅರಿವಿಲ್ಲದೆಯೇ (ದುರ್ಯೋಧನನು) ಎದ್ದು ನಿಂತನು. ಅದನ್ನು ನೋಡಿ ಸಭೆಯಲ್ಲಿದ್ದ ಜನರೆಲ್ಲರೂ ಎದ್ದು ನಿಂತರು. ದುರ್ಯೋಧನನು ಅವರನ್ನು “ನೀವೆಲ್ಲರೂ ಏಕೆ ಎದ್ದು ನಿಂತಿರಿ?” ಎಂದು ಕೇಳಿದಾಗ, ಅವರು “ನೀವು ಎದ್ದು ನಿಂತಿದ್ದರಿಂದ ನಾವೂ ಎದ್ದೆವು” ಎಂದು ಹೇಳಿದರು. ಅವನು ಅವಮಾನದಿಂದ ತಲೆ ತಗ್ಗಿಸಿದನು.
ಆಗ ಅವನು ಕೋಪದಿಂದ ಕೃಷ್ಣನನ್ನು, “ಭೀಷ್ಮ, ದ್ರೋಣ ಮತ್ತು ನಾನು ಇರುವಾಗ, ನೀನು ಕೀಳಾದ ವಿದುರನ ಮನೆಗೆ ಏಕೆ ಹೋದೆ?” ಎಂದು ಕೇಳಿದನು. ಕೃಷ್ಣನು, “ನಾವು ಶತ್ರುಗಳ ಮನೆಯಲ್ಲಿ ಊಟ ಮಾಡಬಾರದು ಮತ್ತು ಶತ್ರುಗಳಿಗೆ ಉಣಬಡಿಸಬಾರದು” ಎಂದು ಉತ್ತರಿಸಿದನು.
ದುರ್ಯೋಧನನು “ಆದರೆ ನಾನು ನಿನ್ನ ಶತ್ರುವಲ್ಲ” ಎಂದನು. ಅದಕ್ಕೆ ಕೃಷ್ಣನು ಪ್ರತಿಕ್ರಿಯಿಸುತ್ತಾ, “ನೀನು ಪಾಂಡವರ ಬಗ್ಗೆ ದ್ವೇಷವನ್ನು ಹೊಂದಿರುವುದರಿಂದ, ನೀನು ನನಗೂ ಶತ್ರುವಾಗಿದ್ದೀಯೆ. ಅದಕ್ಕಾಗಿಯೇ ನಿನ್ನ ಅರಮನೆಗೆ ಬರುವ ಬದಲು, ನನ್ನ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ವಿದುರನ ಬಳಿಗೆ ಹೋದೆನು” ಎಂದು ಹೇಳಿದನು.
ಪೂರ್ವಾಚಾರ್ಯರು ತಮ್ಮ ವ್ಯಾಖ್ಯಾನಗಳಲ್ಲಿ ಮಂಗಳಾಶಾಸನದ ಬಗ್ಗೆ ಮಾತನಾಡುವಾಗ ವಿದುರನ ಈ ಉದಾತ್ತ ಗುಣಗಳನ್ನು ಸುಂದರವಾಗಿ ವಿವರಿಸಿದ್ದಾರೆ.
ಈ ಲೀಲೆಯ ಸಾರಾಂಶ:
- ಭಗವಂತನ ಭಕ್ತರು ಅವನ ಮೇಲಿನ ಅತಿಯಾದ ಭಕ್ತಿಯಿಂದ ದಿಗ್ಭ್ರಮೆಗೊಂಡಾಗ (ಮೈಮರೆತಾಗ), ಭಗವಂತನು ಅದನ್ನು ಆನಂದಿಸುತ್ತಾನೆ.
- ಯಾರೇ ಆಗಲಿ ಪ್ರೀತಿಯಿಂದ ತನಗೆ ಏನನ್ನಾದರೂ (ಪತ್ರಂ ಪುಷ್ಪಂ ಫಲಂ ತೋಯಂ) ಅರ್ಪಿಸಿದರೆ ಅದನ್ನು ತಾನು ಸ್ವೀಕರಿಸುವುದಾಗಿ ಭಗವಂತನು ಶ್ರೀಗೀತೆಯಲ್ಲಿ ಹೇಳಿದ್ದನ್ನು ವಿದುರನ ವಿಷಯದಲ್ಲಿ ಸಾಬೀತುಪಡಿಸಿದನು.
- ವಿದುರನನ್ನು ಪರಿಯಾಳ್ವಾರ್, ನಮ್ಮಾಳ್ವಾರ್ ಮತ್ತು ಪಿಳ್ಳೈ ಉರಂಗಾ ವಿಲ್ಲಿ ದಾಸರ ಸಾಲಿನಲ್ಲಿ ನಿಲ್ಲಿಸಿ, ಒಬ್ಬ ಶ್ರೇಷ್ಠ ‘ಮಂಗಳಾಶಾಸನಪರ’ (ಯಾವಾಗಲೂ ಭಗವಂತನಿಗೆ ಒಳಿತನ್ನೇ ಬಯಸುವವನು) ಎಂದು ಕೊಂಡಾಡಲಾಗಿದೆ.
- ವಿದುರನ ಶ್ರೇಷ್ಠತೆಯನ್ನು ಕಂಡು, ಕೃಷ್ಣನು ಯುಧಿಷ್ಠಿರನಿಗೆ ಶ್ರೇಷ್ಠ ಭಾಗವತರಿಗೆ ಮಾಡುವಂತಹ ‘ಬ್ರಹ್ಮಮೇಧ ಸಂಸ್ಕಾರ’ದ ರೂಪದಲ್ಲಿ ಅವನ ಅಂತಿಮ ವಿಧಿಗಳನ್ನು ನೆರವೇರಿಸುವಂತೆ ಆದೇಶಿಸಿದನು.
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ – https://granthams.koyil.org/2023/10/25/krishna-leela-49-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org