ಕೃಷ್ಣ ಲೀಲೆಗಳ ಸಾರಾಂಶ – 51 – ಅರ್ಜುನ ಮತ್ತು ದುರ್ಯೋಧನರಿಗೆ ಸಹಾಯ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಪಾಂಡವ ದೂತ – ಭಾಗ ೨

ಕೃಷ್ಣನ ಮಹಿಮೆ ಮತ್ತು ಸಾಮರ್ಥ್ಯಗಳು ಜಗತ್ಪ್ರಸಿದ್ಧವಾಗಿದ್ದರಿಂದ, ಕುರುಕ್ಷೇತ್ರ ಯುದ್ಧ ಪ್ರಾರಂಭವಾಗುವ ಮೊದಲು, ಅರ್ಜುನ ಮತ್ತು ದುರ್ಯೋಧನರಿಬ್ಬರೂ ಕೃಷ್ಣನ ಸಹಾಯ ಕೋರಿ ಅವನ ಬಳಿಗೆ ಹೋದರು. ಕೃಷ್ಣನು ಅವರಿಗೆ ಹೇಗೆ ಸಹಾಯ ಮಾಡಿದನು ಎಂಬುದನ್ನು ನಾವೀಗ ಸವಿಯೋಣ.

ಒಮ್ಮೆ ಕೃಷ್ಣನು ವಿಶ್ರಾಂತಿ ಪಡೆಯುತ್ತಿದ್ದನು. ಆ ಸಮಯದಲ್ಲಿ ದುರ್ಯೋಧನನು ಅವನ ಶಯನಗೃಹವನ್ನು ಪ್ರವೇಶಿಸಿದನು. ಅವನು ನೇರವಾಗಿ ಕೃಷ್ಣನ ತಲೆಯ ಭಾಗಕ್ಕೆ ಹೋಗಿ ಅಲ್ಲಿ ನಿಂತನು. ತದನಂತರ, ಅರ್ಜುನನು ಒಳಬಂದು ನೇರವಾಗಿ ಕೃಷ್ಣನ ಪಾದಗಳ ಬಳಿಗೆ ಹೋಗಿ ನಿಂತನು. ಇಬ್ಬರೂ ಕೃಷ್ಣನು ಎಚ್ಚರಗೊಳ್ಳುವುದನ್ನೇ ಕಾಯುತ್ತಿದ್ದರು. ಕೃಷ್ಣನು ಕರುಣೆಯಿಂದ ಕಣ್ತೆರೆದು ನೋಡಿದಾಗ, ತನ್ನ  ಪಾದದ ಬಳಿ ನಿಂತಿದ್ದ ಅರ್ಜುನನನ್ನು ಮೊದಲು ಗಮನಿಸಿ, “ನಿನ್ನ ಭೇಟಿಯ ಉದ್ದೇಶವೇನು?” ಎಂದು ಕೇಳಿದನು. ಅರ್ಜುನನು ಉತ್ತರಿಸುವ ಮೊದಲೇ, ದುರ್ಯೋಧನನು ಮಧ್ಯಪ್ರವೇಶಿಸಿ, “ನಾನು ಅವನಿಗಿಂತ ಮೊದಲು ಇಲ್ಲಿಗೆ ಬಂದೆ” ಎಂದು ಹೇಳಿದನು. ಕೃಷ್ಣನು ಅವನನ್ನೂ ನೋಡಿ ಸ್ವಾಗತಿಸಿದನು.

ಕೃಷ್ಣನು ಅವರ ಯೋಗಕ್ಷೇಮವನ್ನು ವಿಚಾರಿಸಿ, ಇಬ್ಬರಿಗೂ ಏನು ಬೇಕೆಂದು ಕೇಳಿದನು. ಯುದ್ಧದಲ್ಲಿ ತಮಗೆ ಕೃಷ್ಣನ ಸಹಾಯ ಬೇಕೆಂದು ಇಬ್ಬರೂ ಹೇಳಿದರು. ಆಗ ಕೃಷ್ಣನು, ತಾನು ಒಂದು ಕಡೆ ಇರುವುದಾಗಿಯೂ ಮತ್ತು ತನ್ನ ‘ನಾರಾಯಣ ಸೇನೆ’ ಇನ್ನೊಂದು ಕಡೆ ಇರುವುದಾಗಿಯೂ ಅವರಿಗೆ ತಿಳಿಸಿದನು. ತನಗೆ ನಾರಾಯಣ ಸೇನೆಯೇ ಬೇಕೆಂದು ದುರ್ಯೋಧನನು ತಕ್ಷಣವೇ ಕೇಳಿಕೊಂಡನು. ಆದರೆ ಅರ್ಜುನನು, ಕೃಷ್ಣನು ತನ್ನ ಕಡೆಯಿದ್ದರೆ ಸಾಕು, ಅದರಿಂದಲೇ ತನಗೆ ಸಂತೋಷ ಎಂದು ಹೇಳಿದನು. ಕೃಷ್ಣನು ಅವರ ಕೋರಿಕೆಗಳಿಗೆ ಒಪ್ಪಿ, ಸಹಾಯ ಮಾಡುವುದಾಗಿ ಮಾತುಕೊಟ್ಟನು.

ದುರ್ಯೋಧನನು ಅಲ್ಲಿಂದ ಹೊರಟು ತಕ್ಷಣವೇ ಭೀಷ್ಮ, ದ್ರೋಣ ಮುಂತಾದವರ ಸಭೆಗೆ ಹೋಗಿ, ತಾನು ಕೃಷ್ಣನಿಂದ ನಾರಾಯಣ ಸೇನೆಯನ್ನು ಪಡೆದುಕೊಂಡ ವಿಷಯವನ್ನು ತಿಳಿಸಿದನು. ಅವರು ದುರ್ಯೋಧನನಿಗೆ ಛೀಮಾರಿ ಹಾಕಿದರು, “ಹೋಗಿ, ಕೃಷ್ಣನು ಯುದ್ಧದಲ್ಲಿ ಆಯುಧವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿಸಿಕೋ” ಎಂದು ಹೇಳಿದರು. ದುರ್ಯೋಧನನು ಹೋಗಿ ಹಾಗೆಯೇ ಮಾಡಿದನು.

ನಮ್ಮಾಳ್ವಾರ್ ಅವರ ತಿರುವಾಯ್ಮೊಳಿ ಪಾಶುರ “ಕೊಲ್ಲಾ ಮಾಕ್ಕೋಲ್” ವ್ಯಾಖ್ಯಾನದಲ್ಲಿ, ನಂಪಿಳ್ಳೈ ಅವರು ಈ ಘಟನೆಯನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ. ಇನ್ನೂ ಕೆಲವು ಪಾಶುರಗಳ ವ್ಯಾಖ್ಯಾನಗಳಲ್ಲಿ, ಪೂರ್ವಾಚಾರ್ಯರು ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಈ ಲೀಲೆಯ ಸಾರಾಂಶ:

  • ಭಗವಂತನ ಬಗ್ಗೆ ಯಾರು ಅತ್ಯಂತ ಪ್ರೀತಿ ಮತ್ತು ಭಕ್ತಿಯನ್ನು ಹೊಂದಿರುತ್ತಾರೋ, ಅವರಿಗೆ ಅವನು ತನ್ನನ್ನೇ ಅರ್ಪಿಸಿಕೊಳ್ಳುತ್ತಾನೆ. ಆದರೆ ಯಾರು ಕಪಟ ಪ್ರೀತಿಯನ್ನು ತೋರಿಸುತ್ತಾರೋ, ಅವರಿಗೆ ಅವನು ಕೇವಲ ತೋರಿಕೆಯ ಸಹಾಯವನ್ನು ಮಾಡುತ್ತಾನೆ.
  • ಅವನ ಬಗ್ಗೆ ಪ್ರೀತಿಯಿಲ್ಲದವರು ಅವನನ್ನು ಸಮೀಪಿಸಿದರೂ ಸಹ, ಅವನು ಅವರನ್ನು ಮರುಳು ಮಾಡಿ, ನಿಷ್ಪ್ರಯೋಜಕವಾದ ಲಾಭಗಳನ್ನು ಪಡೆಯುವಂತೆ ಮಾಡಿ ಕಳುಹಿಸಿಬಿಡುತ್ತಾನೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/10/27/krishna-leela-51-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment